ಫೀಸ್​ ವಿಚಾರಕ್ಕೆ ನೋಟೀಸ್​ ಕೊಟ್ಟ ರಾಜ್ಯ ಹೈಕೋರ್ಟ್​..!

ಖಾಸಗಿ ಶಾಲಾ ಮಕ್ಕಳ ಫೀಸ್​ ವಿಚಾರ ಕಳೆದೆರಡು ವರ್ಷದಿಂದ ತಾರಕಕ್ಕೇರಿದೆ. ಉದ್ಯೋಗ, ವ್ಯಾಪಾರಾ ವಹಿವಾಟು ಉತ್ತಮವಾಗಿ ನಡೆಯುತ್ತಿದ್ದ ಸಮಯದಲ್ಲಿ ಮರು ಮಾತಿಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕೇಳಿದಷ್ಟು ಡೊನೇಷನ್​ ಕೊಟ್ಟು ಮಕ್ಕಳನ್ನು ದಾಖಲು ಮಾಡುತ್ತಿದ್ದ ಪೋಷಕರು ಈಗ ಫೀಸ್​ ಕಟ್ಟೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕೊರೊನಾ ಸೋಂಕಿನಿಂದ ಆಗಿರುವ ಲಾಕ್​ಡೌನ್​ ಎಫೆಕ್ಟ್​ ಎನ್ನಬಹುದು. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಫೀಸ್​ ವಿಚಾರದಲ್ಲಿ ಹಿಂದೆ ಸರಿಯೋ ನಿರ್ಧಾರ ಮಾಡಿಲ್ಲ. ಅದರಲ್ಲೂ CBSE, ICSE ಮಾತ್ರ ಸರ್ಕಾರದ ಆದೇಶಕ್ಕೂ ಕ್ಯಾರೇ ಎನ್ನುತ್ತಿಲ್ಲ. ಈ ಬಗ್ಗೆ ರಾಜ್ಯ ಹೈಕೋರ್ಟ್​ನಲ್ಲಿ ಪಿಐಎಲ್​ ಸಲ್ಲಿಕೆ ಮಾಡಲಾಗಿತ್ತು.

ಖಾಸಗಿ ಶಾಲಾ ಶುಲ್ಕ ಕುರಿತು ಹೈಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೀತು. ಎಲ್ಲಾ CBSE, ICSE ಶಾಲೆ ಸರ್ಕಾರದ ಆದೇಶ ಪಾಲಿಸಲಿ ಎಂದಿರುವ ಕೋರ್ಟ್​, CBSE, ICSE ಸ್ಕೂಲ್ ಅಸೋಸಿಯೇಷನ್​ಗೆ ನೋಟಿಸ್ ಜಾರಿ ಮಾಡಿದೆ. ಶೇಕಡ 30ರಷ್ಟು ಶುಲ್ಕ ಕಡಿತಕ್ಕೆ ರಾಜ್ಯ ಸರ್ಕಾರ ಆದೇಶ ಮಾಡಿತ್ತು. ಆದರೆ ಸರ್ಕಾರದ ಆದೇಶ ಪ್ರಶ್ನಿಸಿ CBSE, ICSE ಬೋರ್ಡ್​ ಸ್ಕೂಲ್​ಗಳು ಅರ್ಜಿ ಸಲ್ಲಿಕೆ ಮಾಡಿದ್ದವು. ರಾಜ್ಯ ಸರ್ಕಾರದ ಅಡಿಯಲ್ಲಿ ಬೋರ್ಡ್​ ಬರಲ್ಲ ಎಂದು ವಾದ ಮಂಡನೆ ಮಾಡಿದವು. ಇದನ್ನು ಪ್ರಶ್ನಿಸಿ ಹೈಕೋರ್ಟ್ ವಕೀಲ ಪಿಐಎಲ್ ಹಾಕಿದ್ದರು. CBSE, ICSE ಸೆಂಟ್ರಲ್ ಬೋರ್ಡ್​ ಶಾಲೆಗಳೇ ಇರಬಹುದು, ಆದರೆ ರಾಜ್ಯದ NOC ಪಡೆದು ಶಾಲೆ ನಡೆಸುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರದ ನಿಯಮ ಪಾಲಿಸಬೇಕು ಎಂದು ವಾದಿಸಿದ್ದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ವಕೀಲ ನಟರಾಜ್ ಶರ್ಮಾ ವಾದ ಮಂಡನೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು 2 ಬೋರ್ಡ್​ಗಳಿಗೆ ಹೈಕೋರ್ಟ್​ ನೋಟಿಸ್ ನೀಡಿದೆ. CBSE, ICSE ಬೋರ್ಡ್​ಗಳ ವಾದ ಏನಾಗಿರುತ್ತೆ ಎನ್ನುವುದರ ಮೇಲೆ ಫೀಸ್​ ಭವಿಷ್ಯವನ್ನು ಹೈಕೋರ್ಟ್​ ನಿರ್ಧಾರ ಮಾಡಲಿದೆ. ಈ ಮೂಲಕ ಪೋಷಕರಿಗೆ ಸಿಹಿ ಸುದ್ದಿ ಸಿಗುವ ವಿಶ್ವಾಸದಲ್ಲಿ ವಕೀಲ ನಟರಾಜ್​ ಶರ್ಮಾ ಇದ್ದಾರೆ.

ಖಾಸಗಿ ಶಾಲೆಗಳಿಂದ ಶುಲ್ಕಕ್ಕೆ ಕಿರುಕುಳ‌ ನೀಡುತ್ತಿರುವ ವಿಚಾರದಲ್ಲಿ ಹೈಕೋರ್ಟ್​ ಅಸಮಾಧಾನ ಹೊರಹಾಕಿದೆ. ಆನ್‌ಲೈನ್ ಶಿಕ್ಷಣ ನೀಡಲು ನಿರಾಕರಿಸಿದ ಶಾಲೆಗಳ ವಿರುದ್ದ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಆನ್​ಲೈನ್ ಐಡಿ ಬ್ಲಾಕ್ ಮಾಡಿದ ಶಾಲೆಗಳ ವಿರುದ್ಧ ದೂರು ಸಲ್ಲಿಸಲು ಅವಕಾಶ ಇದೆ ಎಂದು ಹೇಳಿದೆ. ಹೈಕೋರ್ಟ್​ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಗೂ ಅವಕಾಶ ಇದೆ. ಪೋಷಕರ ಅಹವಾಲು ಕೇಳಿ ಸ್ಪಂದಿಸಲು ಹೈಕೋರ್ಟ್ ಸೂಚಿಸಿದೆ. ಹಲವು ಖಾಸಗಿ ಶಾಲೆಗಳು ಕಳೆದ ವರ್ಷ ನೀಡಿದ್ದ ಆದೇಶ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ರಾಜಕಾರಣಿಗಳ ಶಿಕ್ಷಣ ಸಂಸ್ಥೆಗಳು..!

ಫೀಸ್​ ಗೊಂದಲದ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮಾಜಿ ಶಿಕ್ಷಣ ಸಚಿವ ಹಾಗೂ ಹಾಲಿ ವಿಧಾನಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ, ಶಿಕ್ಷಣ ಇಲಾಖೆಯಲ್ಲಿದ್ದಷ್ಟು ಬೇಜವಾಬ್ದಾರಿ ಅಧಿಕಾರಿಗಳು ಬೇರೆಲ್ಲೂ ಇಲ್ಲ ಎನ್ನುವ ಮೂಲಕ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ಇಷ್ಟು ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಖಾಸಗಿ ಶಾಲೆಗಳ ಫೀಸ್ ವಿಚಾರ ದೊಡ್ಡ ಕಗ್ಗಂಟಾಗಿ ಮಾರ್ಪಟ್ಟಿದೆ. ಶೇಕಡ 80 ರಿಂದ 90 ರಷ್ಟು ಶಾಲೆಗಳು ರಾಜಕಾರಣಿಗಳು ಅಥವಾ ಅಧಿಕಾರಿಗಳು, ಪ್ರಭಾವಿಗಳಿಗೆ ಸೇರಿವೆ. ಸಚಿವ ಅಥವಾ ಶಾಸಕನಾಗಿ ಇದ್ದರೆ ಈ ಬಗ್ಗೆ ಮಾತನಾಡುತ್ತಿದ್ದೆ. ಆದ್ರೆ ಸಭಾಪತಿ ಸ್ಥಾನದಲ್ಲಿ ಕೂರಿಸಿರೋದ್ರಿಂದ ಏನು ಮಾತನಾಡಲು ಸಾಧ್ಯವಾಗ್ತಿಲ್ಲ ಎಂದು ಟೀಕಿಸಿದ್ದಾರೆ. ಶೈಕ್ಷಣಿಕ ವರ್ಷ ಆರಂಭ ಗೊಂಡಿರುವುದರಿಂದ ಫೀಸ್ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿತ್ತು. ಎ. ಬಿ. ಸಿ. ಡಿ ಎಂದು ಶಾಲೆಗಳನ್ನು ವರ್ಗೀಕರಿಸಬೇಕಿತ್ತು. ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದು ಎಚ್ಚರಿಸಿದ್ದಾರೆ.

Related Posts

Don't Miss it !