ಸಂಸದೆ ಸುಮಲತಾ ಸುಳ್ಳಿನ ಹಿಂದೆ ಓಡುತ್ತಿರೋ ಉದ್ದೇಶವಾ ದರೂ ಏನು..?

ಮಂಡ್ಯ ಸಂಸದೆ ಸುಮಲತಾ ಕಳೆದೊಂದು ವಾರದಿಂದ ಅಬ್ಬರ ಸೃಷ್ಟಿಸಿದ್ದಾರೆ. ಎಲ್ಲಾ ಮಾಧ್ಯಮಗಳು ಸಂಸದೆ ಸುಮಲತಾ ಅವರ ಹಿಂದೆ ಬಿದ್ದಿದ್ದು ಕ್ಷಣ ಕ್ಷಣದ ಸುದ್ದಿಗಳು ಹಾಕುತ್ತಿದ್ದಾರೆ. ಆದ್ರೆ ಸುಮಲತಾ ಹೇಳುತ್ತಿರೋದು ಎಲ್ಲವೂ ಸತ್ಯವೇ ಎಂದು ಅವಲೋಕಿಸಿದರೆ ಖಂಡಿತ ಇಲ್ಲ, ಕೆಲವೊಂದು ಸುಳ್ಳುಗಳನ್ನು ಹೇಳಿ ಜನರನ್ನು ತನ್ನ ಕಡೆಗೆ ಸೆಳೆಯುವ ಕೆಲಸ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿ ಗೊಚರವಾಗುತ್ತಿದೆ. ಇದರಿಂದ ಸುಮಲತಾ ಅವರಿಗೆ ಏನು ಲಾಭ ಎನ್ನುವುದಕ್ಕಿಂತ, ಪ್ರಚಾರ ಸಿಗುತ್ತೆ ಎನ್ನುವ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆಯೇ..? ಎನ್ನುವ ಶಂಕೆ ಮೂಡುವಂತೆ ಮಾಡಿದೆ.

ಕೆಆರ್​ಎಸ್​ ಡ್ಯಾಂ ಬಿರುಕು..!

ಕೊರೊನಾ ಲಾಕ್​ಡೌನ್​ ಬಳಿಕ ಮಂಡ್ಯದ ದಿಶಾ ಸಭೆಯಲ್ಲಿ ಭಾಗಿಯಾಗಿದ್ದ ಸುಮಲತಾ ಅಂದು ಮಾಧ್ಯಮಗಳಿಗೆ ಒಂದು ಹೇಳಿಕೆ ನೀಡಿದ್ದರು. ಮಂಡ್ಯ ಜಿಲ್ಲೆಯ ಜೀವನಾಡಿ ಕನ್ನಂಬಾಡಿ ಕಟ್ಟೆ ಬಿರುಕು ಬಿಟ್ಟಿದೆ. ಎಲ್ಲಿ ಬಿರುಕು ಬಿಟ್ಟದೆ ಎನ್ನುವುದನ್ನು ತನಿಖೆ ಮಾಡಲು ಅಲ್ಲಿಗೆ ಹೋಗುವುದಕ್ಕೂ ನನ್ನನ್ನು ಬಿಡುತ್ತಿಲ್ಲ. ಎಲ್ಲದ್ದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಕೆಆರ್​ಎಸ್​ ಅಣೆಕಟ್ಟೆ ನಮ್ಮ ಜಿಲ್ಲೆಯ ಆಸ್ಮಿತೆ ಎಂಬಂತೆ ಮಾತನಾಡಿದ್ದರು. ಆದರೆ ಜುಲೈ 14ರಂದು ಮಂಡ್ಯ ಪ್ರವಾಸ ಕೈಗೊಂಡಿದ್ದ ಸಂಸದರು, ನಾನು ಬಿರುಕು ಬಿಟ್ಟಿದೆ ಎಂದು ಹೇಳಿಯೇ ಇಲ್ಲ, ಬಿರುಕು ಬಿಟ್ಟಿರುವ ಬಗ್ಗೆ ಹೇಳಿಕೆ ನೀಡಲು ನಾನ್ಯಾರು..? ಎಂದು ಪ್ರಶ್ನಿಸುವ ಮೂಲಕ ತನ್ನ ಹೇಳಿಕೆಯಿಂದ ತಾನೇ ಉಲ್ಟಾ ಹೊಡೆದಿದ್ದಾರೆ.

ಅಕ್ರಮ ಗಣಿ ಹಿಂದೆ ಓಡಿದರು..!

ಕೃಷ್ಣಸಾಗರ ಅಣೆಕಟ್ಟೆಯಲ್ಲಿ ಯಾವುದೇ ಬಿರುಕು ಬಿಟ್ಟಿಲ್ಲ ಎಂದು ಕೆಆರ್​ಎಸ್​ನ ಮುಖ್ಯ ಎಂಜಿನಿಯರ್​ ಸ್ಪಷ್ಟನೆ ಕೊಡುತ್ತಿದ್ದಂತೆ ಡ್ಯಾಂ ಬಿರುಕು ವಿಚಾರ ಕೈಬಿಟ್ಟ ಸಂಸದರು, ಅಕ್ರಮ ಗಣಿಗಾರಿಕೆ ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಬಹುದೊಡ್ಡ ಸಮಸ್ಯೆ ಆಗಲಿದೆ ಎಂದು ತನ್ನ ಹೋರಾಟದ ಪಥ ಬದಲಿಸಿದರು. ಗಣಿ ಮಾಲೀಕರು ಕೂಡ ಟ್ರಯಲ್​ ಬ್ಲಾಸ್ಟ್​ ಮಾಡಿ ಕನ್ನಂಬಾಡಿ ಕಟ್ಟೆಗೆ ತೊಂದರೆ ಇದೆ ಎನ್ನುವುದಾದರೆ ನಾವು ಜಾಗ ಖಾಲಿ ಮಾಡುತ್ತೇವೆ ಎಂದಿದ್ದಾರೆ. ಆದರೂ ಪಟ್ಟು ಬಿಡದ ಸುಮಲತಾ ಟ್ರಯಲ್​ ಬ್ಲಾಸ್ಟ್ ಬಗ್ಗೆ ಮಾತನಾಡದೆ ಗಣಿಗಾರಿಕೆ ಬಂದ್​ ಮಾಡಿ ಎನ್ನುತ್ತಾ ಓಡಾಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು. ಇದು ನನ್ನ ಹೋರಾಟ ಎಂದು ಎನ್ನುತ್ತಿದ್ದಾರೆ.

ಸುಮಲತಾ ಮಾತಿನಲ್ಲಿ ರಾಜಕೀಯ ರಂಗು..!

ಶ್ರೀರಂಗಪಟ್ಟದಲ್ಲಿ ಜೆಡಿಎಸ್​ ಶಾಸಕ ರವೀಂದ್ರ ಶ್ರೀಕಂಠಯ್ಯ ಇರುವ ಕಾರಣಕ್ಕೆ ಸುಮಲತಾ ಡ್ಯಾಂ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಸುಮಲತಾ ಹೇಳಿಕೆಗೆ ರಾಜಕೀಯವಾಗಿ ಕೌಂಟರ್​ಗಳು ಬಂದಿದ್ದವು. ಕಾಂಗ್ರೆಸ್​ ಮುಖಂಡ ರಮೇಶ್​ ಬಂಡಿಸಿದ್ದೇಗೌಡ ಬೆಂಬಲಿಗರ ಬೆಂಬಲ ಸುಮಲತಾ ಹೇಳಿಕೆ ಹಿಂದಿದೆ ಎನ್ನುವುದು ಸಾರ್ವಜನಿಕರ ಮಾತು. ಇನ್ನೂ ಬೇಬಿಬೆಟ್ಟದಲ್ಲಿ ಗಣಿಗಾರಿಕೆ ಮಾಡುತ್ತಿರುವರಲ್ಲಿ ಮೇಲುಕೋಟೆ ಕ್ಷೇತ್ರದ ಜೆಡಿಎಸ್​ ಶಾಸಕ ಪುಟ್ಟರಾಜು ಬೆಂಬಲಿಗರಿದ್ದಾರೆ ಎನ್ನುವ ಕಾರಣಕ್ಕೆ ಗಣಿಗಾರಿಕೆ ವಿಚಾರ ಜೋರಾಗಿದೆ. ಅದೂ ಅಲ್ಲದೆ ಪುಟ್ಟರಾಜುಗೆ ರಾಜಕೀಯ ಎದುರಾಳಿ ಎಂದರೆ ರೈತಸಂಘದ ದರ್ಶನ್​ ಪುಟ್ಟಣ್ಣಯ್ಯ, ಅದೇ ಕಾರಣಕ್ಕಾಗಿ ರೈತ ಸಂಘ ಕೂಡ ಸುಮಲತಾ ಜೊತೆ ರಾಜಕೀಯಕ್ಕಾಗಿಯೇ ಕೈ ಜೋಡಿಸಿದೆ ಎನ್ನುತ್ತಾರೆ ಸ್ಥಳೀಯರು.

ಮನ್ಮುಲ್​ ಹೋರಾಟಕ್ಕೆ ಜಿಗಿದ ಸುಮಲತಾ..!

ನಾವು ಮಾತನಾಡಿದಷ್ಟೂ ಸಂಸದೆ ಸುಮಲತಾಗೆ ಪ್ರಚಾರ ಹೆಚ್ಚಾಗುತ್ತೆ ಎನ್ನುವ ಕಾರಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರು ಮಾತನಾಡುವುದನ್ನೇ ನಿಲ್ಲಿಸಿದರು. ಆಗ ಸುಮಲತಾ ಮನ್ಮುಲ್​ ಹೋರಾಟಕ್ಕೆ ಬಂದು ಜಂಪ್​ ಮಾಡಿದ್ದಾರೆ. ಒಂದೇ ವಾರದಲ್ಲಿ ಕೆಆರ್​ಎಸ್​ ಡ್ಯಾಂ ಬಿರುಕು, ಅಕ್ರಮ ಗಣಿಗಾರಿಕೆ ಬಗ್ಗೆ ವಾಕ್ಸಮರ ಮಾಡಿ ಎಲ್ಲರೂ ಸುಮ್ಮನಾದರೂ ಎನ್ನುತ್ತಿರುವಾಗ ಮನ್ಮುಲ್​ ಹೋರಾಟಕ್ಕೆ ಬಂದಿದ್ದಾರೆ. ಮಂಡ್ಯ ಜನರ ಭಾವನೆಗಳನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸಂಸದೆ ಪ್ರಚಾರದ ಮನಸ್ಥಿಯಿಂದ ಹೊರಬರಬೇಕಿದೆ. ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸಬೇಕಿದೆ. ಅಂಬರೀಶ್​ ಮುಖ ನೋಡಿ ಈ ಬಾರಿ ಅಧಿಕಾರ ನೀಡಿದ್ದಾರೆ. ಅಭಿವೃದ್ಧಿ ಮಾಡಿದರೆ ಮುಂದಿನ ಬಾರಿ ಮತ. ಹೀಗೆ ಸುಳ್ಳು ಮಾತುಗಳನ್ನೇ ಹೇಳಿಕೊಂಡು ಓಡಾಡಿದರೆ ಮತಗಳೆಲ್ಲಾ ಕೋತ ಎನ್ನುವುದನ್ನು ಸ್ವತಃ ಸಂಸದರು ತಿಳಿಯಬೇಕಿದೆ.

Related Posts

Don't Miss it !