ಕೊರೊನಾದಿಂದ ಸತ್ತವರಿಗೆ ಪರಿಹಾರ ಕೊಡಿ – ಸುಪ್ರೀಂಕೋರ್ಟ್​

ಕೊರೊನಾ ಸೋಂಕು ಒಂದು ರಾಷ್ಟ್ರೀಯ ವಿಪತ್ತು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಸೋಂಕು ನಿರ್ವಹಣೆಯನ್ನು ಯುದ್ಧದ ರೀತಿ ಎದುರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಆ ಬಳಿಕ NDRF ಫಂಡ್​ ಕೂಡ ಬಳಸಿಕೊಳ್ಳಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿದ ಮೇಲೆ ಸಾವನ್ನಪ್ಪಿದವರಿಗೆ ಪರಿಹಾರ ಕೊಡಬೇಕು ಎಂದು ಸುಪ್ರೀಂಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಕೊಡಬೇಕು ಎಂದು ಮನವಿ ಮಾಡಲಾಗಿತ್ತು. ಇದೀಗ ಪರಿಹಾರ ಕೊಡುವಂತೆ ಸುಪ್ರೀಂಕೋರ್ಟ್​ ತಾಕೀತು ಮಾಡಿದೆ.

ಸುಪ್ರೀಂಕೋರ್ಟ್​ ಕೊಟ್ಟ ಸೂಚನೆ ಏನು..?

ಕೋವಿಡ್​ 19 ಸೋಂಕಿನಿಂದ ಸಾವನ್ನಪ್ಪಿದವರಿಗೆ ಪರಿಹಾರ ಕೊಡುವಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಶೋಕ್​ ಭೂಷಣ್​ ನೇತೃತ್ವದ​ ತ್ರಿವಳಿ ಪೀಠ National Disaster Management Authority (NDMA)ಗೆ ಖಡಕ್​ ಸೂಚನೆ ಕೊಟ್ಟಿದೆ. ಮುಂದಿನ 6 ವಾರಗಳಲ್ಲಿ ಕೊವಿಡ್​ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ಕೊಡುವ ಬಗ್ಗೆ ನಿರ್ಧಾರಮಾಡಬೇಕು. ನಾವು ಇಂತಿಷ್ಟೇ ಪರಿಹಾರದ ಹಣ ಕೊಡಬೇಕು ಎಂದು ನಾವು ಕೇಂದ್ರ ಸರ್ಕಾರಕ್ಕೆ ಸೂಚನೆ ಕೊಡಲು ಸಾಧ್ಯವಿಲ್ಲ. ಆದರೆ ಪರಿಹಾರದ ಹಣ ಎಷ್ಟು ಕೊಡಲು ಸಾಧ್ಯ ಎಂಬುದನ್ನು ನೀವೇ ನಿರ್ಧಾರ ಮಾಡಿ ಎಂದು ಸೂಚನೆ ಕೊಟ್ಟಿದೆ.

ಕೇಂದ್ರ ಸರ್ಕಾರ ಕೋರ್ಟ್​ಗೆ ಏನು ಹೇಳಿತ್ತು..?

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೆಕ್ಷನ್​ 12ರ ಪ್ರಕಾರ ಪರಿಹಾರ ಕೊಡಲೇಬೇಕು ಎನ್ನುವ ನಿಯಮ ಏನಿಲ್ಲ. ನೈಸರ್ಗಿಕ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಪ್ರವಾಹ, ಭೂಕಂಪನ ಸೇರಿದಂತೆ ನೈಸರ್ಗಿಕವಾಗಿ ಘಟಿಸಿದ ಘಟನೆಯಲ್ಲಿ ಮೃತರಾದವರಿಗೆ ಮಾತ್ರ ಪರಿಹಾರ ಕೊಡಲಾಗುತ್ತದೆ. ಕೊರೊನಾ ಒಂದು ಕಾಯಿಲೆಯಾಗಿದ್ದು ಕಾಯಿಲೆಯಿಂದ ಮೃತರಾದವರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ. ಈ ರೀತಿ ಒಂದು ಕಾಯಿಲೆಯಿಂದ ಮೃತರಾದವರಿಗೆ ಪರಿಹಾರ ಕೊಟ್ಟರೆ ಮತ್ತೊಂದು ಕಾಯಿಲೆಗೂ ಪರಿಹಾರ ಕೊಡಬೇಕಾಗುತ್ತದೆ. ಇಲ್ಲದಿದ್ದರೆ ಅನ್ಯಾಯ ಮಾಡಿದಂತೆ ಆಗುತ್ತದೆ. ಅದೂ ಅಲ್ಲದೆ ಈಗಾಗಲೇ ರಾಜ್ಯಗಳೂ ಸೇರಿದಂತೆ ಕೇಂದ್ರ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿ ಇರುವ ಕಾರಣ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ಗೆ ಅಫಿಡವಿಟ್​ ಸಲ್ಲಿಕೆ ಮಾಡಿತ್ತು. ಆದ್ರೆ ಸುಪ್ರೀಂಕೋರ್ಟ್​ ಕೇಂದ್ರ ಸರ್ಕಾರದ ವಾದವನ್ನು ತಿರಸ್ಕಾರ ಮಾಡಿದ್ದು, ಕನಿಷ್ಠ ಪರಿಹಾರವನ್ನಾದರೂ ಕೊಡುವಂತೆ ಸೂಚನೆ ಕೊಟ್ಟಿದೆ.

‘ಕೇಂದ್ರದ ತಪ್ಪನ್ನು ಈಗಲಾದರೂ ತಿದ್ದಿಕೊಳ್ಳಲಿ’

ಸುಪ್ರೀಂಕೋರ್ಟ್​ ತೀರ್ಪಿನ ಬಳಿಕ ಮಾತನಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೇಂದ್ರ ಸರ್ಕಾರವನ್ನು ಕುಟುಕಿದ್ದಾರೆ. ಸುಪ್ರೀಂಕೋರ್ಟ್​ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಉತ್ತಮ ಅವಕಾಶವನ್ನು ಕೊಟ್ಟಿದೆ. ಈಗ ಕೇಂದ್ರ ಸರ್ಕಾರ ಕೋವಿಡ್​ 19 ಸೋಂಕಿನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರ ಹಣವನ್ನು ಡೆಪಾಸಿಟ್​ ಮಾಡಲಿ ಎಂದು ಒತ್ತಾಯ ಮಾಡಿದ್ದಾರೆ. ಸೂಕ್ತ ದಿಕ್ಕಿನಲ್ಲಿ ಸೂಕ್ತ ನಿರ್ದೇಶನ ಎಂದು ಸುಪ್ರೀಂಕೋರ್ಟ್​ ಆದೇಶವನ್ನು ಬಣ್ಣಿಸಿ ಟ್ವೀಟ್​ ಮಾಡಿದ್ದಾರೆ. ಎಷ್ಟು ಪರಿಹಾರ ಕೊಡುತ್ತೆ..? ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ಧಾರ ಮಾಡಲಿದೆ.

ಕೇಂದ್ರ ತನ್ನ ಜವಾಬ್ದಾರಿಯಿಂದ ಎಸ್ಕೇಪ್​ ಆಗುತ್ತಾ..?

ಕೊರೊನಾ ಲಸಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಇದೇ ರೀತಿ ಮನಸ್ಥಿತಿ ಪ್ರದರ್ಶನ ಮಾಡಿತ್ತು. ರಾಜ್ಯ ಸರ್ಕಾರಗಳೇ ತನ್ನ ರಾಜ್ಯದ ಜನತೆಗೆ ಲಸಿಕೆ ಖರೀದಿ ಮಾಡಿ ಹಂಚಿಕೆ ಮಾಡಬೇಕು ಎನ್ನುವ ಮಾತನ್ನು ಹೇಳಿತ್ತು. ಇದಕ್ಕೆ ಪೂರಕವಾದ ಕಾನೂನು ಒಂದನ್ನೂ ತೋರಿಸಿತ್ತು. ಆ ಬಳಿಕ ಸುಪ್ರೀಂಕೋರ್ಟ್​ 36 ಸಾವಿರ ಕೋಟಿ ಅನುದಾನ ತೆಗೆದು ಇಟ್ಟಿದ್ದ ಹಣ ಏನಾಯ್ತು..? ಆಡಿಟ್​ ಮಾಡಿ ವರದಿ ಸಲ್ಲಿಸಿ ಎಂದ ಕೂಡಲೇ ಎಚ್ಚೆತ್ತುಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಎಲ್ಲಾ ಪ್ರಜೆಗಳಿಗೂ ಉಚಿತ ಲಸಿಕೆ ಕೊಡುವುದಾಗಿ ಘೋಷಣೆ ಮಾಡಿತ್ತು. ಇದೀಗ ಮತ್ತೆ ಸುಪ್ರೀಂಕೋರ್ಟ್​ ಹೇಳಿದ ಬಳಿಕ ಪರಿಹಾರ ಕೊಡುವಂತಾಗಿದೆ ಎನ್ನುವುದು ಗಮನಿಸಬೇಕಾದ ವಿಚಾರ. ಆದರೆ ಪರಿಹಾರವನ್ನು ಕೇಂದ್ರ ಸರ್ಕಾರ ನಿಗದಿ ಮಾಡಿ ರಾಜ್ಯಗಳು ವಿತರಣೆ ಮಾಡಬೇಕು ಎನ್ನುವ ಸೂಚನೆಯನ್ನು ಪ್ರಧಾನಿ ಕೊಡ್ತಾರಾ ಎನ್ನುವ ಅನುಮಾನ ಕಾಡ್ತಿದೆ.

Related Posts

Don't Miss it !