ರಾಜಕಾರಣಿಗಳ ಬಣ್ಣದ ಮಾತಲ್ಲಿ ಮಾಧ್ಯಮಗಳ ಓಕುಳಿ ಆಟ..!

ಮಾಧ್ಯಮಗಳು ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುವ ದಿನಗಳು ಕಣ್ಮರೆ ಆಗುತ್ತಿವೆಯಾ..? ಎನ್ನುವ ಪ್ರಶ್ನೆ ಕಾಡುವಂತೆ ಮಾಡಿದೆ. ಕೆಲವೊಂದು ವಿಚಾರಗಳಲ್ಲಿ ಮಾಧ್ಯಮಗಳು ತೆಗೆದುಕೊಳ್ಳುತ್ತಿರುವ ನಿಲುವು ಭಾವನಾತ್ಮಕವಾಗಿ ಸರಿ ಕಾಣಿಸಿದರೂ, ಕಾನೂನಾತ್ಮಕವಾಗಿ ತಪ್ಪು ಎನ್ನುವುದು ಸಾಮಾನ್ಯರಿಗೂ ಗೊತ್ತಾಗುತ್ತಿದೆ. ಆದರೆ ಯಾವುದೋ ಒಂದು ಸಂಘಟನೆಯ ಸದಸ್ಯರ ರೀತಿ ಮಾಧ್ಯಮಗಳು ವರದಿ ಪ್ರಸಾರ ಮಾಡುತ್ತಿರುವುದು ಮಾಧ್ಯಮದ ಕಾರ್ಯವೈಖರಿಯನ್ನು ಪ್ರಶ್ನೆ ಮಾಡುವಂತಾಗಿದೆ. ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ವಿಚಾರದಲ್ಲಿ ಮಾಧ್ಯಮಗಳ ನಿಲುವು ಅಕ್ರಮಕ್ಕೆ ಸಾಥ್ ಕೊಟ್ಟಂತೆ ಆಗಿರುವುದು ಪತ್ರಕರ್ತರ ಯೋಚನಾ ಲಹರಿಯನ್ನು ಪ್ರಶ್ನಿಸುತ್ತಿದೆ.

ಅನಧಿಕೃತ ಧಾರ್ಮಿಕ ಕಟ್ಟಡ ತೆರವಿಗೆ ಸೂಚನೆ..!

ಸುಪ್ರೀಂಕೋರ್ಟ್ ನೀಡಿರುವ ಆದೇಶದ ಅನ್ವಯ ಸರ್ಕಾರದ ಅನುಮತಿ ಪಡೆಯದೆ ನಿರ್ಮಾಣ ಆಗಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಮಾಡುವಂತೆ ಮುಖ್ಯ ಕಾರ್ಯದರ್ಶಿ ಸೂಚನೆ ಕೊಟ್ಟಿದ್ದಾರೆ. ಅದರಲ್ಲಿ ಜಿಲ್ಲಾಡಳಿತ ಅನಧಿಕೃತ ಧಾರ್ಮಿಕ ಕಟ್ಟಡಗಳ ಗುರುತು ಮಾಡಬೇಕು. ಕಟ್ಟಡ ನೆಲಸಮ ಮಾಡಬೇಕಾ..? ಸ್ಥಳಾಂತರ ಮಾಡಬೇಕಾ..? ಐತಿಹಾಸಿಕ ಕಟ್ಟಡವಾಗಿದ್ದರೆ ಉಳಿಸಿಕೊಳ್ಳುವ ನಿರ್ಧಾರವನ್ನು ಮಾಡುವ ಬಗ್ಗೆ ತೀರ್ಮಾನ ಮಾಡಬೇಕು ಎನ್ನುವುದು ಸುಪ್ರೀಂಕೋರ್ಟ್​ ಆದೇಶದ ಸಾರಾಂಶ. ಈ ಆದೇಶದನ್ವಯ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜಿಲ್ಲಾಡಳಿತಕ್ಕೆ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅದರಂತೆ ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಶುರುವಾಗಿದೆ.

Read this also;

ಹಿಂದೂಗಳ ಕಟ್ಟಡ ಎಂದು ಪುಕಾರು..!

ಬಿಜೆಪಿ ಸಂಸದ ಪ್ರತಾಪ್​ ಸಿಂಹ, ಶಾಸಕ ರೇಣುಕಾಚಾರ್ಯ ಸೇರಿದಂತೆ ಬಹುತೇಕ ರಾಜಕೀಯ ನಾಯಕರು ಹೇಳಿದಂತೆ ಕೇವಲ ಹಿಂದೂಗಳ ಪೂಜಾ ಸ್ಥಳವಾದ ದೇವಸ್ಥಾನಗಳನ್ನು ಮಾತ್ರ ತೆರವು ಮಾಡ್ತಿಲ್ಲ. ಚರ್ಚ್​, ಮಸೀದಿಗಳೂ ಜಿಲ್ಲಾಡಳಿತ ಮಾಡಿರುವ ಪಟ್ಟಿಯಲ್ಲಿವೆ. ಅದೇ ರೀತಿ ದೇವಸ್ಥಾನದ ಆಡಳಿತ ಮಂಡಳಿ ಜೊತೆ ಮಾತನಾಡಿ, ಬೇರೆ ಸ್ಥಳಾವಕಾಶದ ಬಗ್ಗೆ ಚರ್ಚೆ ನಡೆಸಿ ತೆರವು ಕಾರ್ಯಾಚರಣೆ ಮಾಡಬೇಕು ಎನ್ನುವುದು ಸರಿ. ಆದರೆ ರಾಜಕೀಯ ಕಾರಣಕ್ಕೆ ನಾಯಕರು ಬಣ್ಣ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮಗಳು ದೇವಸ್ಥಾನ ಉಳಿಸಿ ಎನ್ನುವ ಅಭಿಯಾನ ಮಾಡುತ್ತಿವೆ. ಅನಧಿಕೃತ ಎಂದು ನಿರ್ಧಾರ ಮಾಡಿದ ಬಳಿಕವೇ ತೆರವು ಕಾರ್ಯಾಚರಣೆ ಮಾಡುತ್ತಿರುವಾಗ ದೇವಸ್ಥಾನ ಉಳಿಸಿ ಎನ್ನುವುದು ಎಷ್ಟು ಸರಿ..? ಅದೆಷ್ಟೋ ಕಡೆ ಭೂಮಿ ಒತ್ತುವತಿ ಅಥವಾ ಭೂಕಬಳಿಕೆ ಮಾಡುವ ಉದ್ದೇಶದಿಂದಲೇ ದೇವಸ್ಥಾನ ನಿರ್ಮಾಣ ಮಾಡಲಾಗಿರುತ್ತದೆ. ಅಕ್ರಮಕ್ಕೆ ಮಾಧ್ಯಮಗಳು ಪುಷ್ಟಿ ಕೊಟ್ಟಂತೆ ಆಗುವುದಿಲ್ಲವೇ..?

ರಾಜಕೀಯ ನಾಯಕರ ಪಕ್ಕಾ ರಾಜಕೀಯ..!

ರಾಜಕೀಯ ನಾಯಕರಿಗೂ ಈ ಪ್ರಕರಣದ ಬಗ್ಗೆ ಸೂಕ್ತ ಅರಿವು ಇದೆ. ಇದೇ ಕಾರಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ, ನಂಜನಗೂಡು ದೇಗುಲ ತೆರವು ವಿಚಾರದಲ್ಲಿ ಏಕಾಏಕಿ‌ ತೆರವು ಮಾಡೋದು ಸರಿಯಲ್ಲ, ಜನರ ಮನವೊಲಿಸಿ ಬಳಿಕ ಕ್ರಮ ಕೈಗೊಳ್ಳಲಿ. ಕೋರ್ಟ್ ಆದೇಶ ಸರಿಯಾಗಿ ಪಾಲಿಸಬೇಕು ಎಂದಿದ್ದಾರೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ ಮಾತನಾಡಿ, ಸುಪ್ರೀಂಕೋರ್ಟ್​ ಆದೇಶ ಪಾಲನೆ ಬೇಡ ಎಂದು ಹೇಳುವುದಿಲ್ಲ. ಆದರೆ ದೇವಸ್ಥಾನ ಸಮಿತಿ ಜೊತೆ ಚರ್ಚಿಸಬೇಕು. ಪರ್ಯಾಯ ದೇವಸ್ಥಾನ ನಿರ್ಮಿಸಿ ತೆರವು ಮಾಡಲಿ ಎಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ, ಮೈಸೂರು ಪ್ರಕರಣದ ಬಗ್ಗೆ ಸಿಎಂ ಬಳಿ ಮಾತನಾಡಿದ್ದೇನೆ. ನಮಗೂ ಭಾವನೆಗಳಿವೆ, ಹಬ್ಬದ ದಿನ ಈ ಕೆಲಸ ಮಾಡಬಾರದಿತ್ತು ಎಂದಿದ್ದಾರೆ.

Read this also;

ನಂಜನಗೂಡಿನಲ್ಲಿ ದೇಗುಲ ತೆರವು ವಿಚಾರದಲ್ಲಿ ಅಧಿಕಾರಿಗಳು ಮೊದಲು ಚರ್ಚೆ ಮಾಡಬೇಕಿತ್ತು. ಧಾರ್ಮಿಕ ಮುಖಂಡರ ಜೊತೆ ಚರ್ಚಿಸಿ ತೆರವು ಮಾಡಬೇಕಿತ್ತು ಎಂದು ಜೆಡಿಎಸ್​ ಶಾಸಕ ಸಾರಾ ಮಹೇಶ್ ಹೇಳಿದ್ದಾರೆ. ಸದಾ ಕಾಲ ನೇರ ನುಡಿಯಿಂದಲೇ ಖ್ಯಾತಿ ಪಡೆದಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಸದನದಲ್ಲಿ ಸರ್ಕಾರವನ್ನು ಈ ಬಗ್ಗೆ ಪ್ರಶ್ನಿಸ್ತೇವೆ. ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸುಪ್ರೀಂಕೋರ್ಟ್ ಆದೇಶ ಇದೆ. ಸುಪ್ರೀಂಕೋರ್ಟ್​ ಆದೇಶವನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಸದನದಲ್ಲಿ ಚರ್ಚೆ ಮಾಡಲು ಅವಕಾಶವಿದೆ, ಪ್ರಸ್ತಾಪಿಸುತ್ತೇನೆ ಎಂದಿದ್ದಾರೆ. ಇನ್ನೂ ಪ್ರಖರ ಹಿಂದುತ್ವ ನಾಯಕ ಎನ್ನುವ ಪಟ್ಟ ಪಡೆದಿರುವ ಬಸನಗೌಡ ಪಾಟೀಲ್​ ಯತ್ನಾಳ್​ ಮಾತ್ರ ಹಿಂದೂ ದೇವಾಲಯಗಳ ತೆರವು ವಿಚಾರದಲ್ಲಿ ಅಧಿಕಾರಿಗಳು ಉದ್ಧಟತನ ತೋರಿಸಿದರೆ ಕ್ರಮ ಎಂದಿದ್ದಾರೆ.

ತೆರವು ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುವುದಾದರೆ ಸುಪ್ರೀಂಕೋರ್ಟ್​ನಲ್ಲೇ ಈ ಬಗ್ಗೆ ಸರ್ಕಾರ ವಕಾಲತ್ತು ಹಾಕಬೇಕಿತ್ತು. ಆದರೆ ಸುಪ್ರೀಂಕೋರ್ಟ್​ನಲ್ಲಿ ಸುಮ್ಮನಿದ್ದು, ಈಗ ತೆರವು ಕಾರ್ಯಾಚರಣೆ ಶುರು ಮಾಡಿದೆ. ಬಿಜೆಪಿ ನಾಯಕರು ಕೇವಲ ಹಿಂದೂಗಳ ಪೂಜಾ ಮಂದಿರ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಮಾತನಾಡುತ್ತಿದ್ದಾರೆ. ಉಳಿದ ನಾಯಕರು ಸುಪ್ರೀಂ ಆದೇಶದ ಪಾಲನೆಯಲ್ಲಿ ಅಧಿಕಾರಿಗಳ ಆತುರದ ಕ್ರಮದ ಬಗ್ಗೆ ಹೇಳುತ್ತಿದ್ದಾರೆ. ಆದರೆ ಮಾಧ್ಯಮಗಳು ಮಾತ್ರ ಅನಧಿಕೃತ ಧಾರ್ಮಿಕ ಕಟ್ಟಡ ಎಂದು ಸ್ಪಷ್ಟವಾಗಿ ಹೇಳುತ್ತಲೇ ದೇವಸ್ಥಾನ ಉಳಿಸಿ ಎಂದು ಅಭಿಯಾನ ಮಾಡುತ್ತಿರುವುದು ಪತ್ರಕರ್ತರ ಮಂಡೆ ಸಮ ಇಲ್ಲವುದಕ್ಕೆ ಕೈಗನ್ನಡಿಯಾಗಿದೆ.

Related Posts

Don't Miss it !