ಕಲ್ಲು ಕ್ವಾರೆ ಬಳಿ ಕಾರು ಸ್ಟೋಟ, ಓರ್ವ ಸಾವು..! ಸರ್ಕಾರಕ್ಕೆ ಬೇಕು ಇನ್ನೆಷ್ಟು ಬಲಿ ..?

ಶಿವಮೊಗ್ಗ, ಚಿಕ್ಕಬಳ್ಳಾಪುರ, ಹಾಸನ ಹೀಗೆ ಎರಡ್ಮೂರು ತಿಂಗಳಿಗೆ ಒಮ್ಮೆ ಸ್ಫೋಟಕಗಳ ಸ್ಫೋಟ ಆಗುತ್ತಲೇ ಇದೆ. ಸರ್ಕಾರ ಮಾತ್ರ ಜಾಣ ನಿದ್ರೆಗೆ ಜಾರಿದಂತಿದೆ. ಇದೀಗ ರಾಮನಗರದಲ್ಲೂ ಸ್ಫೋಟಕ ತುಂಬಿದ ಕಾರು ಸ್ಫೋಟವಾಗಿದೆ. ಸ್ವಿಫ್ಟ್ ಕಾರಿನಲ್ಲಿ ಜಿಲೆಟಿನ್ ಕಡ್ಡಿಗಳನ್ನು ಸಾಗಿಸುವಾಗ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ರಾಮನಗರ ಜಿಲ್ಲೆ ಕನಕಪುರದ ಮರಳೆಗವಿ ಮಠದ ಬಳಿಕ ಘಟನೆ ಜರುಗಿದೆ. ಕಲ್ಲಿನ ಕ್ವಾರೆಯೊಂದಕ್ಕೆ ಜಿಲೆಟಿನ್ ವಸ್ತುಗಳನ್ನು ಸಾಗಿಸುವಾಗ ದುರ್ಘಟನೆ ಸಂಭವಿಸಿದೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಮಹೇಶ್ ಎಂದು ಗುರುತಿಸಲಾಗಿದೆ. ಸ್ಫೋಟದ ರಭಸಕ್ಕೆ ಮಹೇಶ್​ ದೇಹ ಛಿದ್ರ ಛಿದ್ರವಾಗಿದೆ.

ಹಾರ್ಡ್​ವೇರ್​ ಅಂಗಡಿ ಮಾಲೀಕ ಮಹೇಶ್​..!

ಕನಕಪುರ ತಾಲೂಕು ದೊಡ್ಡ ಆಲಹಳ್ಳಿ ನಿವಾಸಿಯಾಗಿದ್ದ ಮಹೇಶ್​ ಕನಕಪುರದಲ್ಲಿ ಹಾರ್ಡ್​ವೇರ್​ ಅಂಗಡಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಕನಕಪುರ ನಗರದ ಹಾರ್ಡ್​ವೇರ್ ಅಂಗಡಿಯಿಂದಲೇ ತೆರಳಿದ್ದ ಮಹೇಶ್​ ಸಾವನ್ನಪ್ಪಿದ್ದಾರೆ. ಶಕ್ತಿ ಮೈನಿಂಗ್ಸ್ ಎಂಬ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ಸಂಸ್ಥೆಗೆ ಸಿಡಿ ಮದ್ದುಗಳನ್ನು ಕಾರಿನಲ್ಲಿ ಸಾಗಿಸುವಾಗ ಕಾರು ಸಿಡಿದಿದೆ ಎನ್ನಲಾಗ್ತಿದೆ. KA51 – P 3384 ಕಾರಿನಲ್ಲಿ ಸಿಡಿ ಮದ್ದುಗಳನ್ನು ಸಾಗಿಸಲಾಗ್ತಿತ್ತು ಎನ್ನಲಾಗಿದೆ. ಮರೇಳೆ ಗವಿ ಮಠದ ಶಿವರುದ್ರಪ್ಪ ಮಹಾಸ್ವಾಮಿಗಳು ಕಲ್ಲು ಗಣಿಗಾರಿಕೆಯ ಮಾಲೀಕರು ಎನ್ನಲಾಗಿದೆ. ಸಾತನೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ರಾಮನಗರ ಎಸ್​ಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ಮಹೇಶ್​

ಇದನ್ನೂ ಓದಿ;

ಸ್ಫೋಟಕದ ಬಗ್ಗೆ ಇನ್ನೂ ಖಚಿತತೆ ಇಲ್ಲ..!

ಜಿಲೆಟಿನ್ ಸ್ಪೋಟವಾದ ಸ್ಥಳಕ್ಕೆ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಭೇಟಿ, ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ರಾಮನಗರ ಎಎಸ್​ಪಿ ಗಿರೀಶ್ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತವರಣ ಸೃಷ್ಟಿಯಾಗಿದೆ. ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಮಾತನಾಡಿ, ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ವಸ್ತುವಿಂದ ಈ ಘಟನೆ ನಡೆದಿದೆ ಎಂದು ಗೊತ್ತಾಗುತ್ತಿದೆ. ಆದರೆ FSL ವರದಿ ಬಂದ ನಂತರ ಈ ಪ್ರಕರಣದ ಸ್ಪಷ್ಟ ಮಾಹಿತಿ ಸಿಗಲಿದೆ ಎಂದಿದ್ದಾರೆ. ಇನ್ನೂ ಕಾರ್​ನಲ್ಲಿ ಕೆಲ ಟೂಲ್ಸ್​ಗಳನ್ನ ಸಪ್ಲೈ ಮಾಡ್ತಿದ್ದರು ಎನ್ನಲಾಗ್ತಿದೆ ತನಿಖೆ ನಡೆಸಿದ ನಂತರ ಸ್ಪಷ್ಟ ಮಾಹಿತಿ ಸಿಗಲಿದೆ ಎಂದಿದ್ದಾರೆ.

ಸ್ಫೋಟದ ತೀವ್ರತೆಗೆ ಛಿದ್ರವಾದ ಕೈ

ಇದನ್ನೂ ಓದಿ;

ಸರ್ಕಾರದ ನಿರ್ಲಕ್ಷ್ಯ ನಿರಂತರ ಸ್ಫೋಟ

ರಾಜ್ಯದಲ್ಲಿ ಗಣಿಗಾರಿಕೆಯನ್ನುವುದು ಬ್ರಹ್ಮಾಂಡವನ್ನೇ ಆವರಿಸಿಕೊಂಡಂತಿದೆ. ಸರ್ಕಾರ ಗಣಿಗಾರಿಕೆಯನ್ನು ಎಗ್ಗಿಲ್ಲದೆ ನಡೆಯಲು ಅನುಮತಿ ಕೊಡುವ ಮೂಲಕ ಆದಾಯ ಮಾಡಿಕೊಳ್ಳುವ ಸಣ್ಣತನ ಪ್ರದರ್ಶನ ಮಾಡುತ್ತಿದೆ. ಗಣಿ ಅಧಿಕಾರಿಗಳು ಚಿಲ್ಲರೆ ಕಾಸಿಗೆ ಕೈ ಒಡ್ಡುತ್ತ ಭೂಮಿಯನ್ನು ಸೀಳಿ ಕಲ್ಲು ತೆಗೆಯುವ ಕೆಲಸಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ. ಸ್ಫೋಟಕಗಳ ಸಂಗ್ರಹ ಹಾಗೂ ಸಾಗಾಟಕ್ಕೆ ಸೂಕ್ತ ಕಾನೂನು ಅಥವಾ ವಿತರಣಾ ವ್ಯವಸ್ಥೆ ಮೇಲೆ ನಿಗಾ ಇಡದೆ ಇರುವುದು ಈ ರೀತಿಯ ನಿತಂತರ ಸ್ಫೋಟಕ್ಕೆ ಕಾರಣವಾಗುತ್ತಿದೆ. ಸ್ಫೋಟಕ ವಸ್ತುಗಳು ಇಷ್ಟೊಂದು ಸರಳವಾಗಿ ಜನರ ಕೈಗೆ ಸಿಗುವಂತಾದರೆ ಮುಂದಿನ ದಿನಗಳಲ್ಲಿ ಸ್ಫೋಟ ನಗರ ಪ್ರದೇಶಗಳಲ್ಲೂ ಸರ್ವೇ ಸಾಮಾನ್ಯ ಎನ್ನುವಂತಾದರೂ ಅಚ್ಚರಿಯಿಲ್ಲ.

ಶಿವರುದ್ರಪ್ಪ ಮಹಾಸ್ವಾಮಿಗಳು, ಕಲ್ಲು ಕ್ವಾರೆ ಮಾಲೀಕರು

ಸರ್ವನಾಶದ ಕಡೆಗೆ ಜಗತ್ತು ಪ್ರಯಾಣ..!

ಪಂಚೇಂದ್ರಿಯಗಳನ್ನು ನಿಗ್ರಹಿಸಿದವರು ಸ್ವಾಮೀಜಿಗಳು ಆಗುತ್ತಾರೆ ಎನ್ನಲಾಗ್ತಿತ್ತು. ಅವರು ಸಮಾಜದ ತಪ್ಪು ಒಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು. ಆದರೆ ಸಮಾಜಕ್ಕೆ ಬುದ್ಧಿ ಹೇಳಬೇಕಿದ್ದ ಸ್ವಾಮೀಜಿ ಅವರದ್ದೇ ಈ ಕಲ್ಲು ಕ್ವಾರೆ ಎನ್ನಲಾಗಿದೆ. ಆದರೆ ಕಳೆದ 10 ವರ್ಷಗಳ ಈಚೆಗೆ ಕಲ್ಲು ಕ್ವಾರೆಯನ್ನು ಗುತ್ತಿಗೆಗೆ ನೀಡಿದ್ದರು ಎನ್ನುವ ಮಾಹಿತಿಯೂ ಇದೆ. ಕಲ್ಲು ಗಣಿಗಾರಿಕೆಯಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ. ಎಗ್ಗಿಲ್ಲದೆ ನಡೆಯುವ ಗಣಿಗಾರಿಕೆಯಿಂದ ಭೂಮಿಯಲ್ಲಿ ಅಸಮತೋಲನ ಉಂಟಾಗುತ್ತದೆ. ಇದೆಲ್ಲದರ ಬಗ್ಗೆ ತಿಳಿದು ಕಲ್ಲು ಗಣಿಕಾರಿಕೆ ವಿರುದ್ಧ ಹೋರಾಟ ಮಾಡಬೇಕಿದ್ದ ಸ್ವಾಮೀಜಿ ಹಣ ಮಾಡಲು ಮುಂದಾಗಿರುವುದು ಸಮಾಜದ ನಾಶಕ್ಕೆ ಬುನಾದಿ ಹಾಕಿದಂತಿದೆ. ಇನ್ನಾದರೂ ಸ್ಫೋಟವಾದ ಬಳಿಕ ಪ್ರಕರಣ ದಾಖಲಿಸಿ ಮುಚ್ಚಿ ಹಾಕುವ ಪೊಲೀಸ್​ ಇಲಾಖೆ, ಕಠಿಣ ಕಾನೂನು ಕ್ರಮಕ್ಕೆ ದಿಟ್ಟ ಹೆಜ್ಜೆ ಇಡಬೇಕಿದೆ.

Related Posts

Don't Miss it !