‘ಸ್ವಾಮೀಜಿಗಳ ಸಮಾವೇಶ’ ಕಾಸಿಗಾಗಿ ಮಾಡಿದ ಆಶೀರ್ವಾದ..!?

ಕರ್ನಾಟಕದಲ್ಲಿ ಹಿಂದೆಂದು ನಡೆಯದ ಘಟನೆಗೆ ಬೆಂಗಳೂರಿನ ಅರಮನೆ ಮೈದಾನ ಸಾಕ್ಷಿಯಾಗಿತ್ತು. ಭಾನುವಾರ ಸಾವಿರ ಜನ ಮಠಾಧೀಶರಿಂದ ಮಹಾ ಸಮಾವೇಶ ನಡೆಯುತ್ತೆ ಎಂದು ಹೇಳಿಕೊಳ್ಳಲಾಗಿತ್ತು. ಆದರೆ 200 ಮಠಾಧೀಶರು ಮಾತ್ರ ಸಮಾವೇಶದಲ್ಲಿ ಭಾಗಿಯಾಗಿದ್ದರು. ನೀರಿಕ್ಷೆಯಂತೆ ಸ್ವಾಮೀಜಿಗಳು ಸಮಾವೇಶಕ್ಕೆ ಆಗಮಿಸಿರಲಿಲ್ಲ. ಹಾಕಿದ್ದ ಖುರ್ಚಿಗಳು ಖಾಲಿ ಖಾಲಿ ಇದ್ದವು. ಅನೇಕ‌ ಸ್ವಾಮೀಜಿಗಳು ಸಮಾವೇಶದಿಂದ ದೂರ ಉಳಿಯುವ ಮೂಲಕ ಈಗಾಗಲೇ ಹೋಗಿರುವ ಮರ್ಯಾದೆ ಉಳಿಸಿಕೊಳ್ಳುವ ಕೆಲಸ ಮಾಡಿದ್ದರು. ಸಿದ್ದಗಂಗಾ ಶ್ರೀಗಳು, ಶ್ರೀಶೈಲ ಶ್ರೀಗಳು, ಉಜ್ಜಯಿನಿ ಶ್ರೀ, ರಂಭಾಪುರಿ ಶ್ರೀ ಗೈರು ಹಾಜರಾಗಿದ್ದರು. ಆದರೂ ಸೇರಿದ್ದ ಸ್ವಾಮೀಜಿಗಳು ಯಡಿಯೂರಪ್ಪ ಪರವಾಗಿ ಮಾತನಾಡಿದರು. ಯಾವುದೇ ಕಾರಣಕ್ಕೂ ಯಡಿಯೂರಪ್ಪನನ್ನು ಕೆಳಕ್ಕಿಳಿಸಬಾರದು ಎಂದು ಎಚ್ಚರಿಕೆ ಸಂದೇಶ ಕೊಟ್ಟರು.

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಬಾರದು. ಅದರಲ್ಲೂ ಅಗೌರವದಿಂದ ಕೆಳಗಿಳಿಸಬಾರದು. ಸೈಕಲ್ ತುಳಿದು ಪಕ್ಷ ಸಂಘಟನೆ ಮಾಡಿದ್ದಾರೆ. ಯಡಿಯೂರಪ್ಪ ಅವರೇ ಅಧಿಕಾರ ಸಾಕು ಎಂದು ಹೇಳಬೇಕು. ಅಲ್ಲಿಯವರೆಗೆ ಅವರನ್ನು ಅಧಿಕಾರದಿಂದ ಇಳಿಸಬಾರದು ಎಂದು ಠರಾವು ಹೊರಡಿಸಿದರು. ಒಂದು ವೇಳೆ ಯಡಿಯೂರಪ್ಪನನ್ನು ಕೆಳಕ್ಕೆ ಇಳಿಸಿದರೆ ಆಮೇಲೆ ನಾವು ಮಾತಾಡುತ್ತೇವೆ ಎಂದು ಪಕ್ಷದ ಹೈಕಮಾಂಡ್​ಗೆ ಧಮ್ಕಿ ಹಾಕುವ ಕೆಲಸವನ್ನೂ ಮಾಡಿದ್ರು. ಆದರೆ ಬೆಳಗಾವಿ ಪ್ರವಾಸದಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಸ್ವಾಮೀಜಿಗಳ ಸಮಾವೇಶದ ಬಗ್ಗೆ ಯಾವುದೇ ಮಾತನಾಡದೆ ಮೌನಕ್ಕೆ ಶರಣಾದರು.

‘ಕಾಣಿಗೆ ಕವರ್​’ಗೆ ಸಮಾವೇಶದಲ್ಲಿ ಉತ್ತರ..!

ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಯಡಿಯೂರಪ್ಪಗೆ ಮಠಾಧೀಶರ ಸಮಾವೇಶ ಬೇಡ, ಆದರೆ ಇಡೀ ಸಮುದಾಯಕ್ಕೆ ಇದು ಬೇಕು ಎಂದು ವ್ಯಾಖ್ಯಾನ ಮಾಡಿದ್ರು. ಬಳಿಕ ಬಿ.ಎಸ್​ ಯಡಿಯೂರಪ್ಪ ಮನೆಗೆ ತೆರಳಿದ್ದಾಗ ಕವರ್​ನಲ್ಲಿ ಸ್ವಾಮೀಜಿಗಳಿಗೆ ಕೊಟ್ಟಿದ್ದೇನು..? ಎನ್ನುವ ಚರ್ಚೆ ನಡೆದಿತ್ತು. ಇದಕ್ಕೆ ಉತ್ತರಿಸಿದ್ದ ಪಂಚಮಸಾಲಿ ಪೀಠದ ಜಯಮೃತ್ಯುಂಜ ಸ್ವಾಮೀಜಿ, ಕವರರ್​ನಲ್ಲಿ ಏನಿತ್ತು ಎನ್ನುವುದು ಗೊತ್ತಿಲ್ಲ. ಪುರಾಣದ ಪುಸ್ತಕವಿತ್ತೋ..?ಏನಿತ್ತೋ ಗೊತ್ತಿಲ್ಲ. ಆದರೆ ಈ ಹಿಂದೆ ಯಡಿಯೂರಪ್ಪ ಅವರು ತುಮಕೂರಿನಲ್ಲಿ ಕವರ್​ನಲ್ಲಿ ಕೊಟ್ಟಿದ್ದ ಕಾಣಿಕೆಯನ್ನು ನಾನು ತಿರಸ್ಕರಿಸಿದ್ದೆ ಎನ್ನುವ ಮೂಲಕ ಹಣದ ಕವರ್​ ಎನ್ನುವುದನ್ನು ಪರೋಕ್ಷವಾಗಿ ಬಹಿರಂಗ ಮಾಡಿದ್ದರು. ಈ ಹೇಳಿಕೆಗೆ ಸಮಾವೇಶದಲ್ಲಿ ತಿರುಗೇಟು ನೀಡಿದ್ದು, ಜಯಮೃತ್ಯುಂಜಯ ಸ್ವಾಮೀಜಿಗೆ ಕಾಣಿಕೆ ಅವಶ್ಯಕತೆ ಇರಲಿಕ್ಕಿಲ್ಲ, ಹೀಗಾಗಿ ಅವರು ಕಾಣಿಕೆ ತಿರಸ್ಕರಿಸಿರಬಹುದು. ಆದರೆ ಮಠಾಧೀಶರು ಕಾಣಿಕೆ ತೆಗೆದುಕೊಳ್ಳುವುದು ತಪ್ಪಲ್ಲ, ಕಾಣಿಕೆ ತಿರಸ್ಕರಿಸುವುದು ಅಪರಾಧ ಎಂದು ಜಯಮೃತ್ಯುಂಜ ಸ್ವಾಮೀಜಿಗೆ ಕೌಂಟರ್​ ಕೊಟ್ಟಿದ್ದಾರೆ. ಯಡಿಯೂರಪ್ಪ ಮಾತ್ರ ಕಾಣಿಕೆ ಕೊಟ್ಟಿಲ್ಲ, ಎಲ್ಲರ ಮನೆಗೆ ಹೋದರೂ ಕಾಣಿಕೆ ಕೊಡುತ್ತಾರೆ. ಕಾಣಿಕೆ ಕೊಡುವುದು ಅವರ ಸಂಸ್ಕಾರ. ಕಾಣಿಕೆ ತೆಗೆದುಕೊಳ್ಳುವುದು ನಮ್ಮ ಹೆಮ್ಮೆ ಎನ್ನುವ ಮೂಲಕ ಯಡಿಯೂರಪ್ಪ ಮನೆಯಲ್ಲಿ ಕೊಟ್ಟಿದ್ದು ಕಾಣಿಕೆ ಕವರ್​ ಎನ್ನುವುದನ್ನು ಒಪ್ಪಿಕೊಂಡರು.

ಕಾಣಿಕೆ ಕೊಡುವುದನ್ನು ಯಾರೂ ವಿವಾದ ಮಾಡಬಾರದು, ಇಲ್ಲಿರುವ ಎಲ್ಲಾ ಸ್ವಾಮೀಜಿಗಳು ಕಾಣಿಕೆ‌ ಪಡೆದಿದ್ದಾರೆ. ಕಾಣಿಕೆ ಪಡೆದು ಮಠದಲ್ಲಿ ದಾಸೋಹ ಮಾಡುತ್ತೇವೆ. ನಿಮ್ಮ ಹಾಗೆ ಬಿಯರ್, ಬ್ರ್ಯಾಂಡಿ ಕುಡಿಯಲು ಅಲ್ಲ. ನಿಮ್ಮ ಕೊಳಕು ಮನಸಿನ‌ ಮಾತು ಬಿಡಿ ಮೂರ್ಖರೇ.. ಈಗಲಾದರೂ ಮಠಾಧೀಶರನ್ನು ನಿಂದನೆ ಮಾಡಬೇಡಿ ಎಂದು ಆಕ್ರೋಶಭರಿತ ಮಾತುಗಳನ್ನಾಡಿದರು ದಿಂಗಾಲೇಶ್ವರ ಸ್ವಾಮೀಜಿ. ಇನ್ನೂ ಈ ಸಮಾವೇಶ ಯಾವುದೇ ಪಕ್ಷದ ಪರ ಅಲ್ಲ. ಯಾವ ಪಕ್ಷವನ್ನೂ ವಿರೋಧಿಸಲು ಅಲ್ಲ. ಹೈಕಮಾಂಡ್‌ ನಾಯಕರನ್ನು ವಿರೋಧ ಮಾಡುತ್ತಿಲ್ಲ, ಮಠಾಧೀಶರು ಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಯಡಿಯೂರಪ್ಪ ಮತ್ತು ಅವರ ಮಕ್ಕಳು ಇದನ್ನು ಆಯೋಜಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಎಲ್ಲಿಗೆ ಬಂದು ನಿಂತರು ಈ ಸ್ವಾಮೀಜಿಗಳು..!

ಕವರ್​ನಲ್ಲಿ ಇದ್ದಿದ್ದು ಕಾಣಿಕೆ ಎಂದು ಅಂದೇ ಹೇಳಿಕೆ ಕೊಟ್ಟಿದ್ದರೆ ಇಷ್ಟೆಲ್ಲಾ ರಂಪಾಟ ಆಗುತ್ತಿರಲಿಲ್ಲ. ಕವರ್​ ಪಡೆದುಕೊಂಡು ಹೋಗುವಾಗ ಬಿಎಸ್​ ಯಡಿಯೂರಪ್ಪಗೆ ಜೈಕಾರ ಹಾಕಿದ್ದು ಸ್ವಾಮೀಜಿಗಳೋ ಯಡಿಯೂರಪ್ಪನ ಅಭಿಮಾನಿಗಳೋ ಎನ್ನುವಂತೆ ಭಾಸವಾಗ್ತಿತ್ತು. ಕವರ್​ನಲ್ಲಿ ಕೊಟ್ಟಿದ್ದು ಕಾಣಿಕೆ ಎಂದು ಸಮಾವೇಶದಲ್ಲಿ ಹೇಳುತ್ತಿದ್ದರೋ ಸುಮ್ಮನಾಗುತ್ತಿದ್ದರೋ..!ಆದರೆ ಅದಕ್ಕೂ ಮುನ್ನ ಜಯಮೃತ್ಯುಂಜಯ ಸ್ವಾಮೀಜಿ ಕವರ್​ನಲ್ಲಿ ಇದ್ದಿದ್ದು ಏನು ಎನ್ನುವ ಗುಟ್ಟು ರಟ್ಟು ಮಾಡಿದ್ದರು. ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣ ಆಯ್ತು. ಆದರೆ ಸಮಾವೇಶ ಮಾಡಲು ಕಾಣಿಕೆ ಕೊಟ್ಟಿದ್ದಾರೆ ಎಂದು ಎಲ್ಲೂ ಹೇಳಿಲ್ಲ. ಆದರೂ ದಿಂಗಾಲೇಶ್ವರ ಸ್ವಾಮೀಜಿ ಯಡಿಯೂರಪ್ಪ ಸಮಾವೇಶ ಆಯೋಜನೆ ಮಾಡಿಲ್ಲ, ಅವರ ಮಕ್ಕಳೂ ಕೂಡ ಆಯೋಜನೆ ಮಾಡಿ ಮಠಾಧೀಶರ ಶಕ್ತಿಪ್ರರ್ಶನ ಮಾಡ್ತಿಲ್ಲ ಎನ್ನುವ ಮೂಲಕ ಜನರಲ್ಲಿ ಅನುಮಾನ ಮೂಡುವಂತೆ ಮಾಡಿದ್ದಾರೆ. ಸಮಾಜವನ್ನು ತಿದ್ದಬೇಕಿದ್ದ ಶ್ರೀಗಳು ಡೊಂಕು ಬಾಲದ ನಾಯಕರಂತೆ ಭಾಸವಾಗ್ತಿದೆ.

Related Posts

Don't Miss it !