ಉಗ್ರರ ಕೈಗೆ ದೇಶ ಕೊಟ್ಟು ಓಡಿ ಹೋದ್ರಾ..? ಕೊಲೆಯಾದ್ರಾ ಅಫ್ಘಾನ್ ಅಧ್ಯಕ್ಷ..!?

ಭಾರತ ಸ್ವಾತಂತ್ರ್ಯ ದಿನಾಚರಣೆ ಮಾಡಿಕೊಂಡ ದಿನವೇ ಅತ್ತ ಅಫ್ಘಾನಿಸ್ತಾನ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ತಾಲಿಬಾನಿ ಉಗ್ರರ ಕೈಸೇರಿದೆ. ಸಾಕಷ್ಟು ದಿನಗಳ ಕಾರ್ಯಾಚರಣೆ ಬಳಿಕ ಆಗಸ್ಟ್​ 15ರಂದು ಅಂತಿಮವಾಗಿ ತಾಲಿಬಾನಿ ಉಗ್ರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ನಗರವನ್ನು ಮುತ್ತಿಗೆ ಹಾಕಿತ್ತು. ಅಫ್ಘಾನಿಸ್ತಾನದ ಬೇರೆ ಬೇರೆ ಭಾಗಗಳಲ್ಲಿ ದುಷ್ಕೃತ್ಯ ನಡೆಸಿದ್ದರಿಂದ ಸರ್ಕಾರ ಮೊದಲೇ ಶರಣಾಯ್ತು. ಕಾಬೂಲ್​ ಗಡಿಯಲ್ಲಿ ದಾಳಿಗೆ ಬಂದು ನಿಂತಿದ್ದ ತಾಲಿಬಾನಿಗಳಿಗೆ ಶರಣಾದ ಅಫ್ಘಾನಿಸ್ತಾನ ಸರ್ಕಾರ, ಯಾವುದೇ ದಾಳಿ ಇಲ್ಲದೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರದ ನಿರ್ಧಾರ ಪ್ರಕಟ ಮಾಡಿತ್ತು. ತಾಲಿಬಾನಿಗಳ ಮುಖ್ಯಸ್ಥ ಮುಲ್ಲಾ ಅಬ್ದುಲ್​ ಘನಿ ನೂತನ ಅಧ್ಯಕ್ಷನಾಗುವ ಸಾಧ್ಯತೆ ಇದೆ. ಸರ್ಕಾರದ ಅಧಿಕಾರ ಹಸ್ತಾಂತರ ಪ್ರಕ್ರಿಯೆಗಳು ಆರಂಭವಾಗಿದೆ.

ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ಅಶ್ರಫ್​ ಘನಿ ತಾಲಿಬಾನಿ ಉಗ್ರರನ್ನು ಎದುರಿಸಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದ ಬಳಿಕ ಅಫ್ಘಾನಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ಉಂಟಾಯ್ತು. ಹಲವು ದೇಶಗಳಿಂದ ಅಫ್ಘಾನಿಸ್ತಾನದಲ್ಲಿ ವಿವಿಧ ಕಾರಣಗಳಿಗಾಗಿ ನೆಲೆಗೊಂಡಿದ್ದ ಜನರು ಕಾಬೂಲ್​ ವಿಮಾನ ನಿಲ್ದಾಣದ ಕಡೆಗೆ ಹೆಜ್ಜೆ ಹಾಕಿದ್ರು. ಇದೇ ಸಮಯದಲ್ಲಿ ಅಫ್ಘಾನ್​ ಅಧ್ಯಕ್ಷ ಅಶ್ರಫ್​ ಘನಿ, ತನ್ನ ಪರಮಾಪ್ತರ ಜೊತೆಗೂಡಿ ದೇಶ ಬಿಟ್ಟು ಪರಾರಿಯಾದರು ಎನ್ನುವ ಸುದ್ದಿ ಹೊರ ಬಿದ್ದಿತ್ತು. ಅಮೆರಿಕ, ಭಾರತ ಸೇರಿದಂತೆ ಸಾಕಷ್ಟು ದೇಶಗಳು ತನ್ನ ರಾಯಭಾರ ಕಚೇರಿಯ ಸಿಬ್ಬಂದಿಗಳನ್ನು ಕರೆಸಿಕೊಳ್ಳುವ ಕೆಲಸ ಮಾಡಿದರು. 120 ಮಂದಿ ಭಾರತೀಯರನ್ನು ಹೊತ್ತ ಏರ್​ ಇಂಡಿಯಾ ಕೂಡ ದೆಹಲಿಗೆ ಬಂದಿಳಿಯಿತು.

ಕೃಪೆ: ಅಲ್​ ಝಜೀರ

ಅಫ್ಘಾನ್​ ಅಧ್ಯಕ್ಷ ಓಡಿಹೋದ್ರಾ..? ಕೊಲೆಯಾದ್ರಾ..?

ಅಫ್ಘಾನಿಸ್ತಾನದ ಅಧ್ಯಕ್ಷರಾಗಿದ್ದ ಅಶ್ರಫ್​ ಘನಿ ದೇಶ ಬಿಟ್ಟು ತಜಕೀಸ್ಥಾನಕ್ಕೆ ಓಡಿ ಹೋದರು ಎಂದು ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮಗಳು ವರದಿ ಪ್ರಸಾರ ಮಾಡಿವೆ. ಆದರೆ ಅಲ್​ ಝಜೀರ ಸುದ್ದಿ ವಾಹಿನಿ ಅಧ್ಯಕ್ಷರ ಅರಮನೆಯೊಳಗೆ ತಾಲಿಬಾನಿಗಳ ಗುಂಪೊಂದು ನುಗ್ಗಿರುವ ತುಣುಕೊಂದನ್ನು ಪ್ರಸಾರ ಮಾಡಿದೆ. ಇನ್ನೂ ಅಫ್ಘಾನ್​ ಅಧ್ಯಕ್ಷರ ಬಗ್ಗೆ ಅಲ್ಲಿನ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿಲ್ಲ. ಭದ್ರತಾ ದೃಷ್ಟಿಯಿಂದ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ ಎಂದು ಹೇಲಲಾಗ್ತಿದೆ. ಆದರೆ ಅಂತಿಮವಾಗಿ ಅಶ್ರಫ್​ ಘನಿ ಏನಾದ್ರು..? ತಾಲಿಬಾನಿ ಉಗ್ರರ ಕೈಗೆ ಸಿಕ್ಕು ಹತರಾದ್ರಾ ಎನ್ನುವ ವಿಚಾರದ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಈಗಾಗಲೇ ತಾಲಿಬಾನಿ ಉಗ್ರರು ಅಫ್ಘಾನಿಸ್ತಾನದಿಂದ ವಾಣಿಜ್ಯ ವಿಮಾನಗಳನ್ನು ರದ್ದು ಮಾಡಿದ್ದಾರೆ. ಡ್ರೆಸ್​ ಕೋಡ್​ ಕೂಡ ಸೂಚಿಸಿದ್ದಾರೆ. ಇನ್ನೂ 2001ರ ಮೊದಲು ಸರ್ಕಾರಿ ವ್ಯವಸ್ಥೆ ಹೇಗಿತ್ತು ಅದೇ ರೀತಿ ಇರಬೇಕು ಎಂದು ಆದೇಶ ಹೊರಡಿಸಲಾಗಿದೆ.

ಕೃಪೆ: ಅಲ್​ ಝಜೀರ

2001ರಲ್ಲಿ ಅಮೆರಿಕದ ಮೇಲೆ ತಾಲಿಬಾನಿ ಉಗ್ರರು ದಾಳಿ ನಡೆಸಿದ್ದರು. ಇದರಿಂದ ಕುಪಿತಗೊಂಡಿದ್ದ ಅಮೆರಿಕ ಅಫ್ಘಾನಿಸ್ತಾನದಲ್ಲಿ ಉಗ್ರರ ಧಮನ ಮಾಡುವ ಉದ್ದೇಶದಿಂದ ಸೇನೆಯನ್ನು ರವಾನಿಸಿತ್ತು. ಸತತ 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಸೇನೆಯನ್ನಿರಿಸಿದ್ದ ಅಮೆರಿಕ ಇತ್ತೀಚಿಗೆ ತನ್ನ ದೇಶಕ್ಕೆ ವಾಪಸ್​ ಕರೆಸಿಕೊಂಡಿತ್ತು. ಅಮೆರಿಕ ಸೇನೆ ಜಾಗ ಖಾಲಿ ಮಾಡುತ್ತಿದ್ದ ಹಾಗೆ ಆಕ್ಟೀವ್​ ಆದ ಉಗ್ರರು ಒಂದೊಂದೇ ಪ್ರಾಂತ್ಯವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಸಾಗಿದ್ರು. ಅಂತಿಮವಾಗಿ ಅಫ್ಘಾನಿಸ್ತಾನದ ರಾಜಧಾನಿಯಾಗಿದ್ದ ಕಾಬೂಲ್​ ನಗರವನ್ನು ವಶಕ್ಕೆ ಪಡೆಯುವ ಮೂಲಕ ಪಾರುಪತ್ಯ ಮೆರೆದಿದ್ದಾರೆ. ಉಳಿದ ರಾಷ್ಟ್ರಗಳು ಉಗ್ರರ ಜೊತೆಗೆ ವ್ಯವಹಾರ ನಿರ್ಬಂಧಿಸಿದರೆ ಮುಂದೆ ಏನೆಲ್ಲಾ ಆಗಲಿದೆ ಎನ್ನುವುದನ್ನು ಊಹೆ ಮಾಡಿಕೊಳ್ಳಬೇಕಿದೆ.

ಕೃಪೆ: ಅಲ್​ ಝಜೀರ

Related Posts

Don't Miss it !