ಕರ್ನಾಟಕ ನೂತನ ರಾಜ್ಯಪಾಲರ ಅಧಿಕಾರ ಸ್ವೀಕಾರ..! ಯಾರು ಈ ಥಾವರ್​ಚಂದ್​ ಗೆಹ್ಲೋಟ್​..?

ಕರ್ನಾಟಕ ರಾಜ್ಯದ ನೂತನ ರಾಜ್ಯಪಾಲರಾಗಿ ಥಾವರ್​ಚಂದ್​ ಗೆಹ್ಲೋಟ್​ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ರಾಷ್ಟ್ರಗೀತೆ ಮೂಲಕ ಪದಗ್ರಹಣ ಸಮಾರಂಭ ಆರಂಭವಾದ ಬಳಿಕ ನೂತನ ರಾಜ್ಯಪಾಲರಿಗೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎ ಎಸ್ ಓಕಾ ಪ್ರಮಾಣ ವಚನ ಭೋಧಿಸಿದರು. ನಾನು ಶ್ರದ್ಧಾಪೂರ್ವಕವಾಗಿ ಕರ್ನಾಟಕ ರಾಜ್ಯಪಾಲ ಹುದ್ದೆಯ ಜವಾಬ್ದಾರಿಗಳನ್ನು ನಿಭಾಯಿಸುತ್ತೇನೆಂದು ಭರವಸೆ ಕೊಡುತ್ತೇನೆ. ವಿಧಿಬದ್ಧ ನಿಯಮಗಳ ಪಾಲನೆ ಮೂಲಕ ಸಂವಿಧಾನದ ರಕ್ಷಣೆ ಮಾಡಲು ಬದ್ಧನಾಗಿರುತ್ತೇನೆ. ಕರ್ನಾಟಕ ರಾಜ್ಯದ ಜನರ ಸೇವೆ ಮತ್ತು ಕಲ್ಯಾಣ‌ ಕಾರ್ಯಗಳಲ್ಲಿ ನಿರತನಾಗಿರುತ್ತೇನೆ ಎಂದು ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನೂತನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರಾಜ್ಯದ 19ನೇ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡರು.

ರಾಜಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿಎಂ ಬಿ.ಎಸ್​ ಯಡಿಯೂರಪ್ಪ ಸೇರಿದಂತೆ ಬಹುತೇಕ ಸಚಿವ ಸಂಪುಟ ಬಹುತೇಕ ಸದಸ್ಯರು ಭಾಗಿಯಾಗಿ ನೂತನ ರಾಜ್ಯಪಾಲರಿಗೆ ಶುಭಾಶಯ ಕೋರಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಹಾಜರಿದ್ದರು. ನೂತನ ರಾಜ್ಯಪಾಲರಿಗೆ ನಿರ್ಗಮಿತ ರಾಜ್ಯಪಾಲ ವಜುಭಾಯ್​ ವಾಲಾ ಅಧಿಕಾರ ಹಸ್ತಾಂತರ ಮಾಡಿ ಶುಭ ಕೋರಿದರು. ಸಿದ್ದರಾಮಯ್ಯ ವಿ.ಆರ್​ ವಾಲಾಗೆ ಪುಷ್ಪಗುಚ್ಛ ನೀಡಿ ಶುಭ ಹಾರೈಸಿದ್ರು.

ಅಧಿಕಾರ ಸ್ವೀಕರಿಸಿದ ನೂತನ ರಾಜ್ಯಪಾಲ ಯಾರು..?

ಮಧ್ಯಪ್ರದೇಶ ಮೂಲದ ಥಾವರ್​ಚಂದ್​ ಗೆಹ್ಲೋಟ್​, ದಲಿತ ಕುಟುಂಬದಿಂದ ಬೆಳೆದು ಬಂದ ನಾಯಕ. ಮಧ್ಯಪ್ರದೇಶದ ಉಜ್ಜೈನಿಯ ರುಪಿತದಲ್ಲಿ 1948, ಮೇ 18ರಂದು ಜನಿಸಿದ್ದರು. ವಿಕ್ರಮ್​ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದ ಥಾವರ್​ಚಂದ್​ ಗೆಹ್ಲೋಟ್​, 1962ರಲ್ಲಿ ಜನಸಂಘದ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಬಿಜೆಪಿ ಪಕ್ಷದಲ್ಲಿ ಸಾಕಷ್ಟು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿರುವ ಥಾವರ್​ಚಂದ್​ ಗೆಹ್ಲೋಟ್​, ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಥಾವರ್​ಚಂದ್​ ಗೆಹ್ಲೋಟ್​ ರಾಜಕೀಯ ಹಿನ್ನೆಲೆ..!

ಥಾವರ್​ಚಂದ್ ಗೆಹ್ಲೋಟ್​ 4 ಬಾರಿ ಲೋಕಸಭೆಗೆ ಆಯ್ಕೆಯಾಗಿ ಸಂಸದರಾಗಿ ಕೆಲಸ ಮಾಡಿದ್ದಾರೆ. 1996 ರಿಂದ 2009ರ ತನಕ ಮಧ್ಯಪ್ರದೇಶದ ಶಾಜಾಪುರ ಕ್ಷೇತ್ರದಿಂದ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. 2009ರ ಚುನಾವಣೆಯಲ್ಲಿ ಸೋಲುಂಡ ಥಾವರ್​ಚಂದ್​​ ಗೆಹ್ಲೋಟ್​ ಅವರನ್ನು 2012ರಲ್ಲಿ ರಾಜ್ಯಸಭೆಗೆ ಬಿಜೆಪಿ ಆಯ್ಕೆ ಮಾಡಿತ್ತು. 2019ರಲ್ಲಿ ರಾಜ್ಯಸಭಾ ಆಡಳಿತ ಪಕ್ಷದ ನಾಯಕನಾಗಿ ಅಧಿಕಾರ ಸ್ವೀಕಾರ ಮಾಡಿದ ಗೆಹ್ಲೋಟ್​, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಜುಲೈ 6ರಂದು ಗೆಹ್ಲೋಟ್​ ಅವರನ್ನು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಕರ್ನಾಟಕ ರಾಜ್ಯಪಾಲರಾಗಿ ನೇಮಕ ಮಾಡಿದ ಬಳಿಕ ರಾಜೀನಾಮೆ ನೀಡಿ ಕರ್ನಾಟಕ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಥಾವರ್​ಚಂದ್​ ಗೆಹ್ಲೋಟ್​ – ಕರ್ನಾಟಕ ಸಂಬಂಧ..?

73 ವರ್ಷದ ಬಿಜೆಪಿ ಹಿರಿಯ ನಾಯಕರಾಗಿರುವ ಥಾವರ್​ಚಂದ್​ ಗೆಹ್ಲೋಟ್​, ರ್ನಾಟಕದ ಪಾಲಿಗೆ ಹೊಸಬರೇನು ಅಲ್ಲ. ಬಿಜೆಪಿ ಪಕ್ಷದ ಕಾರ್ಯದರ್ಶಿ ಆಗಿದ್ದಾಗ, 2006 ರಿಂದ 2014ರ ತನಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಕರ್ನಾಟಕ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಮಧ್ಯಪ್ರದೇಶದಲ್ಲಿ ಮೊದಲ ನಾಯಕ eನ್ನುವ ಹೆಗ್ಗಳಿಕೆ ಥಾವರ್​ಚಂದ್​ ಗೆಹ್ಲೋಟ್​ ಪಾಲಾಗಿದೆ.

Related Posts

Don't Miss it !