ಧರ್ಮಸ್ಥಳಕ್ಕೆ ಹೋದಾಗ ಗಡಾಯಿಕಲ್ಲು ಪ್ರವಾಸ ಮಿಸ್ ಆಗದೆ ಇರಲಿ..!

ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಮಂಜುನಾಥನು ನೆಲೆ ನಿಂತಿರುವುದು ಧರ್ಮಸ್ಥಳದಲ್ಲಿ. ಈ ಪುಣ್ಯಸ್ಥಳಕ್ಕೆ ಕರ್ನಾಟಕದ ಬಹುತೇಕ ಜನರು ಭೇಟಿ ನೀಡಿರುತ್ತಾರೆ ಧರ್ಮಸ್ಥಳಕ್ಕೆ ತೆರಳುವ ಮಾರ್ಗದಲ್ಲಿ ರಮಣೀಯವಾದ ಗಡಾಯಿಕಲ್ಲು ನಿಮ್ಮ ಕಣ್ಣಿಗೆ ಬಿದ್ದಿರಬಹುದು ಅಥವಾ ಗಮನಿಸದೆ ಇರಬಹುದು. ಗಡಾಯಿಕಲ್ಲಿನ ಬಗ್ಗೆ ಮಾಹಿತಿ ಇಲ್ಲದ ಕಾರಣ ನೋಡುವ ಮನಸ್ಸು ಮಾಡದೆ ವಾಪಸ್ ಬಂದಿರಬಹುದು. ಆದರೆ ಇನ್ಮುಂದೆ ಧರ್ಮಸ್ಥಳ ಹೋದಾಗ ಗಡಾಯಿಕಲ್ಲಿನ ಸೌಂದರ್ಯ ಸವಿಯೋದನ್ನು ಮಾತ್ರ ಮಿಸ್ ಮಾಡುವಂತಿಲ್ಲ. ಯಾಕಂದ್ರೆ ಗಡಾಯಿಕಲ್ಲು ವಿಶೇಷತೆ ಬಗ್ಗೆ ಕಣ್ಣಿಗೆ ಕಟ್ಟುವ ಚಿತ್ರಣ ಇಲ್ಲಿದೆ.

ಏನಿದು ಗಡಾಯಿಕಲ್ಲು ಪ್ರಕೃತಿ ಸೌಂದರ್ಯ..?

ದಕ್ಷಿಣ ಕನ್ನಡ ಜಿಲ್ಲೆಯ ಕುದುರೆಮುಖ ಅರಣ್ಯಪ್ರದೇಶ ವ್ಯಾಪ್ತಿಗೆ ಬರುವ ದಟ್ಟರಣ್ಯದ ನಡುವೆ ತನ್ನ ಚೆಲುವನ್ನು ಜಗತ್ತಿಗೆ ಸಾರಲು 1788 ಅಡಿ ಎತ್ತರಕ್ಕೆ ಬೆಳೆದು ನಿಂತಿರುವ ಏಕಶಿಲಾ ಪರ್ವತವೇ ಗಡಾಯಿಕಲ್ಲು. ಇಲ್ಲಿ ಯಾವುದೇ ದೇವಸ್ಥಾನವಿಲ್ಲ, ಪೂಜೆ ಪ್ರಸಾದ ಇರೋದಿಲ್ಲ. ಆದ್ರೆ ಮೋಡಗಳಿಗೆ ಮುತ್ತಿಕ್ಕುವ ಅವಕಾಶ ಖಂಡಿತ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ. ನೀವು ಪ್ರಕೃತಿ ಆರಾಧಕರಾಗಿದ್ದರೆ ಈ ಸೌಂದರ್ಯವನ್ನು ಅನುಭವಿಸದಿದ್ದರೆ ಕೊರತೆ ಎನಿಸುವುದು ಖಚಿತ.

ಗಡಾಯಿಕಲ್ಲು ಪ್ರವಾಸಕ್ಕೆ ಯಾವ ಕಾಲ ಸೂಕ್ತ..?

ವರ್ಷದ ಯಾವುದೇ ಕಾಲದಲ್ಲಾದರೂ ಗಡಾಯಿಕಲ್ಲು ನೋಡಬಹುದು. ಆದರೆ ಚಾರಣಕ್ಕೆ ಹೇಳಿ ಮಾಡಿಸಿದ ಸಮಯ ಎಂದರೆ ಡಿಸೆಂಬರ್, ಜನವರಿ, ಫೆಬ್ರವರಿ ಈ ಕಾಲದಲ್ಲಿ ಗಡಾಯಿಕಲ್ಲು ಸೌಂದರ್ಯ ಸವಿಯುವುದು ಉತ್ತಮ. ಯಾಕಂದ್ರೆ ಸಾಮಾನ್ಯವಾಗಿ ಮಳೆಗಾಲ ಮುಕ್ತಾಯವಾಗಿ ಚಳಿಗಾಲ ಹಾಗೂ ಬೇಸಿಗೆಯಲ್ಲಿ ಉತ್ತಮ ವಾತಾವರಣ ನಿಮ್ಮದಾಗಿರುತ್ತದೆ. ಮಳೆಗಾಲದಲ್ಲಿ ಜಿಗಣೆಗಳ ಕಾಟದ ಜೊತೆಗೆ ಪರ್ವತ ಏರುವಾಗ ಜಾರುವ ಸಾಧ್ಯತೆ ಇರುವ ಕಾರಣ ಸೂಕ್ತ ಸಮಯವಲ್ಲ ಎನ್ನಬಹುದು.

ಗಡಾಯಿಕಲ್ಲಿಗೆ ಹೋಗುವ ಮಾರ್ಗ ಯಾವುದು..?

ಧರ್ಮಸ್ಥಳದಿಂದ ಉಜಿರೆ, ಬೆಳ್ತಂಗಡಿ ಮಾರ್ಗವಾಗಿ 16 ಕಿಲೋಮೀಟರ್ ದೂರ ಪ್ರಯಾಣ ಮಾಡಿದರೆ ಗಡಾಯಿಕಲ್ಲು ಎಂಟ್ರಿ ಪಾಯಿಂಟ್ ಸಿಗುತ್ತದೆ. ಬೆಂಗಳೂರಿನಿಂದ 312 ಕಿ.ಮೀ. ಮಂಗಳೂರಿನಿಂದ 64 ಕಿ.‌ಮೀ. ದೂರವಿದೆ. ಪುತ್ತೂರಿನ ಕಬಕ ರೈಲು ನಿಲ್ದಾಣ 44 ಕಿ.ಮೀ. ದೂರದಲ್ಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 70 ಕಿ.ಮೀ ದೂರದಲ್ಲಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ರ ತನಕ ಮಾತ್ರ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಆ ಬಳಿಕ ಚಾರಣಕ್ಕೆ‌ ಅವಕಾಶ ಇರುವುದಿಲ್ಲ. ಚಾರಣ ಹೋಗುವ ಮುನ್ನ ಬೇಕಾದ ನೀರು, ಒಣ ಆಹಾರ ಪದಾರ್ಥ, ಹಣ್ಣು ಸಂಗ್ರಹ ಮಾಡಿಕೊಳ್ಳುವುದು ಉತ್ತಮ. ಪ್ರಥಮ ಚಿಕಿತ್ಸೆಗೆ‌ ಬೇಕಾದ ಎಲ್ಲಾ ಅಗತ್ಯ ಸಲಕರಣೆಗಳು ನಿಮ್ಮ ಜೊತೆಗಿದ್ದರೆ ಒಳ್ಳೆಯದು. ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗದೆ‌ ಸೌಂದರ್ಯ ಸವಿಯುವುದು ಪ್ರಕೃತಿಗಾಗಿ ಕಡ್ಡಾಯ.

ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಎಂಎಸ್ಸಿ ಓದುವ ಸಲುವಾಗಿ ಧೀಮಹಿ ಹಾಸ್ಟೆಲ್‌ನಲ್ಲಿ ತಂಗುವ ಅವಕಾಶ ಸಿಕ್ಕಿತ್ತು. ಗಡಾಯಿಕಲ್ಲು ಬಗ್ಗೆ ಸಾಕಷ್ಟು ಸ್ನೇಹಿತರು ನನ್ನ ಗಮನ ಸೆಳೆದಿದ್ದರು. ಎರಡು ವರ್ಷ ಪೂರ್ಣ ಆಗುವ ವೇಳೆಗೆ ಗಡಾಯಿಕಲ್ಲು ನೋಡಿಯೇ ತೀರಬೇಕು‌ ಅನ್ನೋ ಆಸೆಯೂ ಇತ್ತು. ಅದು 2020 ರ ಸಂಕ್ರಾಂತಿಯ ದಿನದಂದು ಪೂರ್ಣವಾಯ್ತು. ನಾನು ನನ್ನ ಸ್ನೇಹಿತರ ಬಳಗದಲ್ಲಿ ಸರಿಸುಮಾರು 25 ಜನರ ತಂಡ ಗಡಾಯಿಕಲ್ಲಿನ ಸೌಂದರ್ಯ ಸವಿದು ವಾಪಸ್ ಆದೆವು. ನಾವು ಪ್ರಯಾಣಕ್ಕೆ ಸರ್ಕಾರಿ ಬಸ್ ಅವಲಂಬಿಸಿದ್ದರಿಂದ ಪ್ರಯಾಣ ತ್ರಾಸದಾಯವಾದರೂ ಮಜವಾಗಿತ್ತು. ಆದರೆ ಸ್ವಂತ ವಾಹನ ಇದ್ದವರು ಸೂರ್ಯನ ರಶ್ಮಿ ಹೊಮ್ಮುವ ಕಾಲದಲ್ಲೇ ಬೆಟ್ಟ ಏರಬಹುದು. ಜೊತೆಗೆ ಸೂರ್ಯಸ್ತ ಸಮಯವನ್ನೂ ಕಣ್ತುಂಬಿಕೊಳ್ಳುವ ಜೊತೆಗೆ ಮತ್ತಷ್ಟು ಮಸ್ತಿ ಮಾಡಬಹುದು ಎನಿಸಿತು.

ಗಡಾಯಿಕಲ್ಲು ನನ್ನನ್ನು ಸೂಜಿಗಲ್ಲಿನಂತೆ ಸೆಳೆಯುವುದಕ್ಕೆ ಮತ್ತೊಂದು ಕಾರಣವೂ ಇದೆ. ಗಡಾಯಿಕಲ್ಲು ಪರ್ವತವನ್ನು ನರಸಿಂಹ ಗಡ ಎನ್ನುವ ಹೆಸರಿನಿಂದಲೂ ಕರೆಯುತ್ತಾರೆ. ಜೊತೆಗೆ ಜಮಲಾಬಾದ್ ಕೋಟೆ ಎಂದು ಕರೆಯುವುದು ಉಂಟು. ಈ ಹೆಸರಿನ ಹಿಂದಿನ ಇತಿಹಾಸವನ್ನು ಹುಡುಕಿದಾಗ ಸಿಕ್ಕಿದ್ದು ಮೈಸೂರು ರಾಜ್ಯವನು ಆಳಿದ ಟಿಪ್ಪು ಸುಲ್ತಾನ್. ಟಿಪ್ಪು ಸುಲ್ತಾನ್ ತಾಯಿ ಹೆಸರು ಜಮಲಾಬಿ. ಮೈಸೂರು ಸಂಸ್ಥಾನದ ಆಡಳಿತ ಚುಕ್ಕಾಣಿ ಹಿಡಿದಿದ್ದ ಟಿಪ್ಪು ಸುಲ್ತಾನ್ ಗಡಾಯಿಕಲ್ಲು ಪರ್ವತದಲ್ಲಿ‌ ಗ್ರಾನೈಟ್ ಕಲ್ಲು ಹೇರಳವಾಗಿ ಇರುವ ಕಾರಣ ಕೋಟೆ ನಿರ್ಮಾಣ ಸುಲಭವೆಂದು 1784 ರಲ್ಲಿ ತನ್ನ ತಾಯಿಯ ನೆನಪಿಗಾಗಿ ಕೋಟೆ ನಿರ್ಮಿಸಲು ಎನ್ನಲಾಗಿದೆ. ಈ ಸುಂದರ ಕೋಟೆಯನ್ನು ಫ್ರೆಂಚ್ ತಂತ್ರಜ್ಞರ ಸಹಾಯದಿಂದ ನಿರ್ಮಿಸಿದ್ದರಿಂದ ಮುಸ್ಲಿಂ ಹಾಗೂ ಫ್ರೆಂಚ್ ವಾಸ್ತುಶಿಲ್ಪದಂತೆ ಕಾಣುತ್ತದೆ. ಈ ಕೋಟೆಗೆ ತಾಯಿ‌ ಜಮಲಾಬಿ ಹೆಸರನ್ನೇ ಇಟ್ಟಿದ್ದರಿಂದ ಜಮಲಾಬಾದ್ ಕೋಟೆ ಎಂದು ಕರೆಯಲಾಗುತ್ತದೆ. 4ನೇ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತು ಸಾವನ್ನಪ್ಪಿದ ಬಳಿಕ‌ ಈ ಕೋಟೆ ಬ್ರಿಟೀಷರ ವಶಕ್ಕೆ ಹೋಗಿತ್ತು ಎನ್ನಲಾಗಿದೆ. ಈ ಇತಿಹಾಸ ತಿಳಿದ ಬಳಿಕ ಮತ್ತಷ್ಟು ಕುತೂಹಲ ಹೆಚ್ಚಾಗಿ ನೋಡುವ ಮನಸ್ಸು ನೂರ್ಮಡಿ ಆಗಿತ್ತು.

ಬೆಳ್ತಂಗಡಿಯಿಂದ 8 ಕಿ.ಮೀ. ದೂರ ಇರುವ ಈ ಗಡಾಯಿಕಲ್ಲು ಕಡಿದಾದ ಮೆಟ್ಟಿಲುಗಳನ್ನು ಹೊಂದಿದೆ. ಸ್ವಲ್ಪ ದೂರ ಅರಣ್ಯದ ನಡುವೆ ಸಾಗಿದರೆ ಇನ್ನುಳಿದ ಭಾಗವನ್ನು ಸುಂದರ ಹುಲ್ಲುಗಾವಲಿನ ನಡುವೆ ಸಾಗಿದ ಅನುಭವ ಆಗುತ್ತದೆ. ಬೆಟ್ಟದ ದಾರಿ ಕಡಿದಾಗಿರುವ ಕಾರಣ ಅಪಾಯಕ್ಕೆ ಆಹ್ವಾನ ಕೊಡದೆ ಸಾಗುವುದೆ ರೋಮಾಂಚಕಾರಿ ಸಂಗತಿ. ಬೆಟ್ಟ ಏರುವಾಗ ಏದುಸಿರುವ ಬಂದರೂ ಬೆಟ್ಟದ ತುದಿ ತಲುಪಿದಾಗ ಬೀಸುವ ತಂಗಾಳಿ ಮಂದಹಾಸ ಮೂಡಿಸುವಲ್ಲಿ ಯಶಸ್ವಿ ಆಗುತ್ತದೆ. ಗಡಾಯಿಕಲ್ಲು ಶಿಖರವನ್ನೇರಿ ಸುತ್ತಮುತ್ತಲಿನ ಪ್ರದೇಶವನ್ನು ಕಣ್ತುಂಬಿಕೊಳ್ಳಬಹುದು. ಕೋಟೆ , ಕೋಟೆಯೊಳಗೆ ಮಳೆ ನೀರು ಸಂಗ್ರಹದ ಕೆರೆಯೊಂದಿದೆ. ಅದನ್ನು ಬಿಟ್ಟರೆ ಬೇರೆ ಮಾನವ ಸಂಪರ್ಕದಿಂದ ದೂರವಿದ್ದು ಪ್ರವಾಸಿಗರನ್ನು ಮಾತ್ರ ಕೈಬೀಸಿ ಕರೆಯುತ್ತಿದೆ.

ಯಶ್ಮಿ ಮತ್ತು‌ ತಂಡ

ಯಶ್ಮಿ, ಉಪ್ಪುಂದ

Related Posts

Don't Miss it !