ಒಂದೇ ಒಂದು ಟ್ವೀಟ್​ನಲ್ಲಿ ಕುತೂಹಲ ಹುಟ್ಟಿಸಿದ ಡಾಟರ್​ ಆಫ್​ ಅನಂತ್​ ಕುಮಾರ್​..!

ಕರ್ನಾಟಕ ನೆನಪಿಸಿಕೊಳ್ಳಬೇಕಾದ ರಾಜಕಾರಣಿಗಳಲ್ಲಿ ದಿವಂಗತ ನಾಯಕ ಅನಂತ್​ ಕುಮಾರ್​ ಕೂಡ ಒಬ್ಬರು. ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಜೊತೆಗೂಡಿ ಬಿಜೆಪಿ ಪಕ್ಷವನ್ನು ಈ ಮಟ್ಟಕ್ಕೆ ತಂದು ನಿಲ್ಲಿಸುವಲ್ಲಿ ಅನಂತ್​ ಕುಮಾರ್​ ಪಾತ್ರ ಕೂಡ ದೊಡ್ಡದಿದೆ. ಆದರೆ ಅನಂತ್​ ಕುಮಾರ್​ ಅವರನ್ನು ಬಿಜೆಪಿ ನೆನಪಿನಿಂದ ಅಳಿಸುವ ಹಂತಕ್ಕೆ ಬಂದಿದೆ. ಈ ನಡುವೆ ಅನಂತ್​ ಕುಮಾರ್​ ಪುತ್ರಿ ವಿಜೇತ ಅನಂತ್​ ಕುಮಾರ್​ ಮಾಡಿರುವ ಟ್ವೀಟ್​ ಒಂದು ನಿನ್ನೆ ಸಂಜೆಯಿಂದ ಸಾಮಾಜಿಕ ಜಾಲ ತಾಣದಲ್ಲಿ ಕುತೂಹಲವನ್ನು ಹೊತ್ತು ಸುತ್ತಾಡುತ್ತಿದೆ. ದ್ವಂಧ್ವ ಅರ್ಥ ಬರುವಂತೆ ಟ್ವಿಟರ್​ ವಾಲ್​ನಲ್ಲಿ ಬರೆದುಕೊಂಡಿರುವ ಪದಗಳನ್ನು ನೆಟ್ಟಿಗರು ತಮಗೆ ಬೇಕಾದ ಹಾಗೆ ಅರ್ಥ ಮಾಡಿಕೊಂಡು ಉತ್ತರಿಸುತ್ತಿದ್ದಾರೆ.

ವಿಜೇತ ಬರೆದ ಟ್ವೀಟ್​ನಲ್ಲಿ ಏನಿದೆ..?

ವಿಜೇತ ಅನಂತ್​ ಕುಮಾರ್​ ಬರೆದಿರುವುದು ಇಷ್ಟೇ ಸರಳ ಪದಗಳು. ಕರ್ನಾಟಕದಲ್ಲಿ ರಾಜಕೀಯ ಯಾಕೆ ಇಷ್ಟೊಂದು ಆಸಕ್ತಿದಾಯಕ ಎಂದು ಪ್ರಶ್ನೆ ಹಾಕಿದ್ದಾರೆ. ಕೆಳಗಡೆ ತಾವೇ ಉತ್ತರ ನೀಡಿದ್ದು, ಜೆಡಿಎಸ್​ ಇನ್ನೂ ತುಂಬಾ ಶಕ್ತಿಯುತ ರಾಜಕೀಯ ಶಕ್ತಿಯಾಗಿ ಉಳಿದುಕೊಂಡಿದೆ ಎಂದು ಬರೆದಿದ್ದಾರೆ. ಈ ಟ್ವೀಟ್​ಗೆ ಸಾಕಷ್ಟು ಜೆಡಿಎಸ್​ ಅಭಿಮಾನಿಗಳು ಕಾರ್ಯಕರ್ತರು ಧನ್ಯವಾದ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಜೆಡಿಎಸ್​ ನಾಯಕ ಕುಮಾರಸ್ವಾಮಿಯನ್ನು ಮತ್ತೆ ಮುಖ್ಯಮಂತ್ರಿ ಮಾಡಲು ನೀವು ತಾಯಿ ಮಗಳು ಬೆಂಬಲ ನೀಡಿ ಜೆಡಿಎಸ್​ಗೆ ಬರುವುದಾದರೆ ಸ್ವಾಗತ ಎಂದಿದ್ದಾರೆ. ಇನ್ನೂ ಕೆಲವರು ಮಂಡ್ಯ, ಮೈಸೂರು, ರಾಮನಗರ, ಹಾಸನ ಬಿಟ್ಟರೆ ಜೆಡಿಎಸ್​ ಎಲ್ಲಿದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರೇ ಸೋತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಕೌಂಟರ್​ ಕೊಟ್ಟಿದ್ದು, ಜೆಡಿಎಸ್​ ಕಾಂಗ್ರೆಸ್​ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ಹಿನ್ನಡೆಯಾಯ್ತು, ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ರೆ ಈಗಲೂ ಸಾಕಷ್ಟು ಕಡೆ ಗೆಲ್ಲಲಿದೆ ಎಂದು ಕಿಚಾಯಿಸಿದ್ದಾರೆ.

ವಿಜೇತ ಅನಂತ್​ ಕುಮಾರ್​ ಮಾತಿನ ಅರ್ಥವೇನು..?

ಜೆಡಿಎಸ್​ ಒಂದು ಪ್ರಾದೇಶಿಕ ಪಕ್ಷವಾಗಿ ಸ್ವಲ್ಪ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೂ ಯಾರಿಗೂ ಬಹುಮತ ಬರುವುದಿಲ್ಲ. ಜೆಡಿಎಸ್​ ಜೊತೆಗೂಡಿ ಅಧಿಕಾರ ನಡೆಸಬೇಕು ಅಥವಾ ಜೆಡಿಎಸ್​ ಹೇಳಿದವರು ಮುಖ್ಯಮಂತ್ರಿ ಆಗಬೇಕು. ಇದು ಸತ್ಯ. ಮೂರ್ನಾಲ್ಕು ಜಿಲ್ಲೆಯಲ್ಲಿ ಇದ್ದರೂ ಮುಖ್ಯಮಂತ್ರಿ ಆಗುವುದು ಅಥವಾ ಮುಖ್ಯಮಂತ್ರಿ ಮಾಡುವ ಶಕ್ತಿ ಇರುವ ಕಾರಣ ಕರ್ನಾಟಕ ರಾಜಕೀಯ ಸಾಕಷ್ಟು ಆಸಕ್ತಿದಾಯಕ ಎಂದು ಟ್ವೀಟ್​ ಮಾಡಿರಬಹುದು. ಅಥವಾ ಬಿಜೆಪಿಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿನಿ ಅನಂತ್​ ಕುಮಾರ್​ ಅವರಿಗೆ ಟಿಕೆಟ್​ ಕೊಡ್ತೇವೆ ಎಂದು ಭರವಸೆ ನೀಡಿದ ಬಳಿಕ ತೇಜಸ್ವಿ ಸೂರ್ಯ ಅವರನ್ನು ಆಯ್ಕೆ ಮಾಡಲಾಗಿತ್ತು. ಆ ಬಳಿಕ ಅಷ್ಟೊಂದು ಪ್ರಾಮುಖ್ಯತೆ ಸಿಕ್ಕಿದಂತೆ ಕಾಣುತ್ತಿಲ್ಲ. ಹೀಗಾಗಿ ಜೆಡಿಎಸ್​ ಸೇರುವ ಆಯ್ಕೆ ಏನಾದರೂ ಮುಕ್ತವಾಗಿ ಇಟ್ಟಿದ್ದಾರೆಯೇ ಎನ್ನುವಂತಾಗಿದೆ. ಈ ನಡುವೆ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ಜೆಡಿಎಸ್​ ಸೇರುವುದಾದರೆ ಪ್ರೀತಿಯಿಂದ ಸ್ವಾಗತಿಸಿ ಗೌರವಯುತವಾಗಿ ನಡೆಸಿಕೊಳ್ತೇವೆ ಎನ್ನುವ ಮೂಲಕ ಬಹಿರಂಗ ಆಹ್ವಾನ ನೀಡಿದ್ದಾರೆ. ಇನ್ಮುಂದೆ ವಿಜೇತ ಅನಂತ್​ ಕುಮಾರ್​ ಹಾಗೂ ತೇಜಸ್ವಿನಿ ಅನಂತ್​ ಕುಮಾರ್​ ಹೇಗೆ ಪ್ರಿಕ್ರಿಯಿಸುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ.

ಬೆಂಗಳೂರು ದಕ್ಷಿಣದಲ್ಲಿ ಅನಂತ್​ ಕುಮಾರ್​ ಅಭಿಮಾನ..!

1996 ರಿಂದ 2014ರ ತನಕ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅನಂತ್​ ಕುಮಾರ್​ ಸೋಲಿಲ್ಲದ ಸರದಾರ ಎನ್ನುವಂತೆ ಗೆಲುವಿನ ನಾಗಾಲೋಟ ನಡೆಸಿದ್ದರು. ಇದರಲ್ಲಿ ದೇವೇಗೌಡರ ಕೃಪಾಕಟಾಕ್ಷವೂ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುಇವ ಸಂಗತಿ. ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರ ಜೊತೆ ಅನ್ಯೂನ್ಯವಾಗಿದ್ದ ಅನಂತ್​ ಕುಮಾರ್​, ಯಾವುದೇ ಸಮಸ್ಯೆ ಆಗದಂತೆ ತಂತ್ರಗಾರಿಕೆ ಮಾಡುತ್ತಿದ್ದರು. ಆದರೆ ಅನಂತ್​ ಕುಮಾರ್​ ಕ್ಷೇತ್ರವನ್ನು ತೇಜಸ್ವಿ ಸೂರ್ಯಗೆ ಕೊಡುವ ಮೂಲಕ ತೇಜಸ್ವಿನಿ ಅನಂತ್​ ಕುಮಾರ್​ಗೆ ಕ್ಷೇತ್ರ ಇಲ್ಲದಂತೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ್​ ಕುಮಾರ್​ ನಾಮಬಲದ ಜೊತೆಗೆ ದೇವೇಗೌಡರ ಹುಕ್ಕು ಇದ್ದರೆ ಲೋಕಸಭೆಗೆ ಹೋಗುವುದು ಅಷ್ಟೇನು ಕಷ್ಟ ಆಗಲಾರದು ಎಂದು ಅರಿತಿರುವ ವಿಜೇತ ಅನಂತ್​ ಕುಮಾರ್​ ಪಾನ್​ ನಡೆಸಿದ್ದಾರೆ. ಜೆಡಿಎಸ್​ನಿಂದ ಯಾವ ಉತ್ತರ ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ ಎನ್ನಬಹುದು.

Related Posts

Don't Miss it !