ಹಿಂದೂ ಧರ್ಮದಲ್ಲಿ ಇರ್ತೇವೆ ಕ್ರಿಸ್ತನನ್ನು ಆರಾಧಿಸುತ್ತೇವೆ..! ಇದು ಮತಾಂತರದ ಭಾಗವೇ..?

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಬಂದ ಬಳಿಕ ಮತಾಂತರ ವಿಚಾರ ಭಾರೀ ಸದ್ದು ಮಾಡುತ್ತಿದೆ. ಧಾರವಾಡದಲ್ಲಿ ಒಂದು ಕುಟುಂಬ ಹಿಂದೂ ಧರ್ಮದಲ್ಲಿ ಇದ್ದುಕೊಂಡು ಯೇಸುವನ್ನು ಆರಾಧನೆ ಮಾಡ್ತಿದೆ. ಮಾಧ್ಯಮಗಳ ಜೊತೆಗೆ ಮಾತನಾಡಿ ನಮ್ಮ ಜಾತಿ ಹಿಂದೂ ಪಂಚಮಸಾಲಿ, ಆದರೆ ನಾವು ಆರಾಧಿಸುವುದು ಮಾತ್ರ ಯೇಸುವನ್ನು, ಮುಂದೆಯೂ ನಾವು ಏಸುವನ್ನೇ ಆರಾಧಿಸುತ್ತೇವೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಹುಬ್ಬಳ್ಳಿಯ ಭೈರಿದೇವರಕೊಪ್ಪ ಮತಾಂತರ ಪ್ರಕರಣದ ಬಂಧಿತ ಫಾಸ್ಟರ್ ಸೋಮು ಅವರಾದಿ ಸೋದರಿ ಗಂಗಮ್ಮ ಹುಲ್ಲೂರ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ. ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರೂ ಆಗಿರುವ ಗುರುರಾಜ್ ಹುಣಸೀಮರದ ಅವರ ಸಮ್ಮುಖದಲ್ಲೇ ಈ ರೀತಿಯ ಹೇಳಿಕೆ ಹೊರಬಿದ್ದಿದೆ.

ಪಂಚಮಸಾಲಿ ಲಿಂಗಾಯತರಾಗಿ ಏಸುವನ್ನು ಪೂಜಿಸ್ತೇವೆ..!

ನಾವು ಪಂಚಮಸಾಲಿ ಲಿಂಗಾಯತರು, ಲಿಂಗಾಯತರಾದರೂ ಯೇಸುವನ್ನೇ ಆರಾಧಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ನಮಗೆ ಬೇಕಾದ ದೇವರ ಆರಾಧಿಸುವ ಹಕ್ಕು ಇಲ್ವಾ..? ನಮ್ಮ ಪ್ರಾರ್ಥನಾ ಸಭೆಗೆ ಬನ್ನಿ ಅಂತಾ ಯಾರನ್ನೂ ನಾವು ಕರೆದಿಲ್ಲ, ಮನೆ ಮನೆಗೆ ಹೋಗಿ ಮತಾಂತರವನ್ನೂ ಮಾಡಿಲ್ಲ. ನಾವು ಈಗ ಮತ್ತು ಮುಂದೆ ಪಂಚಮಸಾಲಿ ಲಿಂಗಾಯತರಾಗಿಯೇ ಇರ್ತೀವಿ. ಆದರೆ ಆರಾಧಿಸುವ ದೇವರು ಮಾತ್ರ ಏಕೈಕ ಏಸು ಕ್ರಿಸ್ತ. ನಮ್ಮ ಜೀವನದಲ್ಲಿ ಬದಲಾವಣೆ ಮಾಡಿದ ಏಕೈಕ ದೇವರು ಏಸು ಕ್ರಿಸ್ತ ಎಂದಿದ್ದಾರೆ. ಹುಟ್ಟಿನ ಆಧಾರದ ಮೇಲೆ ಧರ್ಮವನ್ನು ನಂಬಿಕೊಳ್ಳಲಾಗುತ್ತದೆ. ಆ ಬಳಿಕ ತನಗೆ ಬೇಕಾದ ಧರ್ಮವನ್ನು ತಾನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವೂ ಪ್ರಜೆಗಳಿಗೆ ಇದೆ. ಆದರೆ ಹಿಂದೂ ಧರ್ಮದಲ್ಲೇ ಇರುತ್ತೇವೆ, ಏಸುವನ್ನು ಆರಾಧಿಸುತ್ತೇವೆ ಎನ್ನುವುದು ಹೊಸ ರೀತಿಯ ಸಂಧಿಗ್ದತೆಯನ್ನು ಸೃಷ್ಟಿಸಿದೆ.

Read this;

ಮತಾಂತರ ನಿಷೇಧ ಕಾಯ್ದೆಗೆ ಸ್ವಾಮೀಜಿಗಳ ಒತ್ತಡ.!

ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಸ್ವಾಮೀಜಿಗಳ ತಂಡ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಒತ್ತಾಯ ಮಾಡಿದ್ದಾರೆ. ರಾಜ್ಯದಲ್ಲಿ ಶೀಘ್ರವೇ ಮತಾಂತರ ನಿಷೇಧ ಕಾಯ್ದೆ ಜಾರಿಯಾಗಬೇಕು. ಶಿಕ್ಷಣ, ಬಡತನವನ್ನು ಗುರಿಯಾಗಿಸಿ ಮತಾಂತರ ಮಾಡಲಾಗುತ್ತಿದೆ. ಐಟಿ-ಬಿಟಿ ವಲಯದಲ್ಲೂ ಮತಾಂತರ ಮಾಡಲಾಗುತ್ತಿದೆ. ಕೆಲಸದಲ್ಲಿ ಮುಂಬಡ್ತಿ ಮಾಡೋಕು ಮತಾಂತರವನ್ನು ಅಸ್ತ್ರವನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಮತಾಂತರ ನಿಷೇಧಕ್ಕೆ ರಾಜ್ಯದಲ್ಲಿ ಕಠಿಣ ನಿಯಮ ಜಾರಿಯಾಗಬೇಕು ಎಂದು ಒತ್ತಾಯಿಸಲಾಗಿದೆ. ಸರ್ಕಾರ ಶೀಘ್ರದಲ್ಲೇ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಾಗುತ್ತದೆ. ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಮಾಣಿಲ ಶ್ರೀ, ವಜ್ರದೇಹಿ ಶ್ರೀ, ಒಡಿಯೂರು ಶ್ರೀ, ಒಂ ಶಕ್ತಿ ಮಠದ ಸ್ವಾಮೀಜಿ ಹೇಳಿದ್ದಾರೆ.

ಮತಾಂತರದ ಬಗ್ಗೆ ಸದನದಲ್ಲಿ ಮಾತನಾಡಿ, ಈಗ ಕ್ಷಮಾಪಣೆ..!

ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್​, ವಿಧಾನಸಭಾ ಅಧಿವೇಶನದಲ್ಲಿ ಮತಾಂತರದ ಬಗ್ಗೆ ಪ್ರಸ್ತಾಪ ಮಾಡಿದ್ದರು. ನನ್ನ ತಾಯಿಯನ್ನೇ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿದ್ದಾರೆ, ನನ್ನ ತಾಯಿಯನ್ನು ಹಿಂದೂ ಧರ್ಮಕ್ಕೆ ಬರುವಂತೆ ಒತ್ತಾಯಿಸಿದ್ರೆ ಸಾಯುವುದಾಗಿ ಹೇಳ್ತಾರೆ ಎಂದು ಸುಧೀರ್ಘ ಚರ್ಚೆ ಹುಟ್ಟು ಹಾಕಿದ್ದರು. ಈ ಬಗ್ಗೆ ಮಾತನಾಡಿದ ಆರ್ಚ್ ಬಿಷಪ್ ರೆವರೆಂಡ್ ಪೀಟರ್ ಮಚಾಡೋ ಒತ್ತಾಯದ ಮತಾಂತರ ನಾವೂ ಕೂಡ ಒಪ್ಪುವುದಿಲ್ಲ, ಗೂಳಿಹಟ್ಟಿ ಶೇಖರ್​ ಹೇಳಿದ್ದನ್ನು ನಾನೂ ಖಂಡಿಸುತ್ತೇನೆ. ಆದರೆ ಯಾವುದೇ ವ್ಯಕ್ತಿ ಚರ್ಚೆಗೆ ಬಂದು ಚಪ್ಪಾಳೆ ಹೊಡೆದು, ಫೋಟೋ ತೆಗೆಸಿಕೊಂಡರೆ ಅದು ಮತಾಂತರವಲ್ಲ ಎಂದಿದ್ದರು. ಇನ್ನೂ ತನಗೆ ಇಷ್ಟಬಂದ ಧರ್ಮವನ್ನು ಆರಾಧಿಸಲು ಸಂವಿಧಾನದಲ್ಲಿ ಅವಕಾಶವಿದೆ ಎಂದಿದ್ದರು. ಆ ಬಳಿಕ ಮಾತನಾಡಿರುವ ಶಾಸಕ ಗೂಳಿಹಟ್ಟಿ ಶೇಖರ್, ನಾವೂ ಕ್ರೈಸ್ತ ಸಮಾಜ ಹಾಗೂ ಮಿಶಿನರಿ ಪರವಾಗಿದ್ದೇವೆ. ನನ್ನ ಮಾತಿನಿಂದ ನೋವಾಗಿದ್ರೆ ಬಹಿರಂಗವಾಗು ಕ್ಷಮೆ ಕೇಳ್ತೀನಿ. ಆದ್ರೆ ಯಾರು ಬಲವಂತವಾಗಿ ಮತಾಂತರ ಮಾಡ್ತಾರೋ, ಅವರ ವಿರುದ್ಧ ನಮ್ಮ ಸಮರ ನಡೆಯಲಿದೆ ಎಂದಿದ್ದಾರೆ.

Also Read;

ಮತಾಂತರ ಎಂಬ ಗುಮ್ಮಕ್ಕೆ ಕಾನೂನು ಸಾಧ್ಯವೇ..?

ಮತಾಂತರ ಮಾಡುವ ಜನರು ಶಿಕ್ಷಣ, ಆರೋಗ್ಯದ ವಿಚಾರದಲ್ಲಿ ಆಮೀಷ ತೋರಿಸುತ್ತಿದ್ದಾರೆ ಎಂದು ಸ್ವತಃ ಸ್ವಾಮೀಜಿಗಳು ದೂರಿದ್ದಾರೆ. ನಮ್ಮ ಸಂಬಂಧಿಕ ನಮ್ಮ ಮನೆಗೆ ಬಾರದೆ ಬೇರೊಬ್ಬರವಮನೆ ಹೋಗುತ್ತಿದ್ದಾನೆ ಎಂದರೆ ಆತ ಹೋಗುವುದನ್ನು ತಡೆಯಲು ಸಾಧ್ಯವೇ..? ಅದಕ್ಕೆ ಬದಲು ನಮ್ಮ ಮನೆಯಲ್ಲಿ ಆತನಿಗೆ ಪ್ರೀತಿ ತೋರಿಸಿಲ್ಲ, ಆತನನ್ನು ನಾವು ಗೌರವಿಸಿಲ್ಲ ಎನ್ನುವುದು ತಿಳಿಯಬೇಕಾದ ಸಂಗತಿ. ನಮ್ಮ ಮನೆಯಲ್ಲಿ ಸಹಾಯ ಮಾಡೋದಿಲ್ಲ, ಗೌರವ, ಪ್ರೀತಿಯನ್ನು ತೋರುವುದಿಲ್ಲ, ಆದರೂ ನಮ್ಮ ಮನೆ ಬಿಟ್ಟು ಬೇರೆ ಲಡೆ ಹೋಗಬಾರದು ಎನ್ನುವುದು ಮೂರ್ಖತನ ಆಗುತ್ತದೆ. ಬೇರೆ ಧರ್ಮಗಳಿಗೆ ಹೋದ ಬಳಿಕ ಸಣ್ಣ ಪುಟ್ಟ ಸಹಾಯ ಮಾಡಿರಬಹುದು, ಆದರೇ ಧರ್ಮ ಬಿಟ್ಟು ಧರ್ಮಕ್ಕೆ ಹೋದ ತಕ್ಷಣ ಮಹಾನ್ ಬದಲಾವಣೆ ಏನೂ ಆಗುವುದಿಲ್ಲ. ಆದರೆ ಬದಲಾವಣೆ ಆಗುತ್ತೆ ಎನ್ನುವ ಮಾನಸಿಕ ಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತದೆ ಅಷ್ಟೆ. ಇದನ್ನು ತಡೆಯಲು ಕಾನೂನು ಮೂಲಕ ಅಸಾಧ್ಯ. ನಮ್ಮ ಧರ್ಮದಲ್ಲಿ ಆಗುತ್ತಿರುವ ಅನ್ಯಾಯ, ಧರ್ಮದ ಹೆಸರಲ್ಲಿ ನಡೆಯುತ್ತಿರುವ ರಾಜಕೀಯ, ದಬ್ಬಾಳಿಕೆಗಳನ್ನು ಕೊನೆಗಾಣಿಸಬೇಕಿದೆ. ಸ್ವಾಮೀಜಿಗಳು ರಾಜಕೀಯ ಪಕ್ಷಗಳ ಏಜೆಂಟ್ವೆ ಆಗದೆ, ಅವರಂತೆ ಧರ್ಮ ಪ್ರಚಾರ ಮಾಡಬೇಕಿದೆ.

Related Posts

Don't Miss it !