ಬಾಲ ಕೃಷ್ಣ ಭೂಮಿ ನುಂಗಿದ್ದ.. ಈತ ಬಾಲ ಕೃಷ್ಣನನ್ನೇ ನುಂಗಿಬಿಟ್ಟ..! ಯಾಕೆ..?

ಶ್ರೀಕೃಷ್ಣ ದ್ವಾಪರಯುಗದಲ್ಲಿ ಇಡೀ ಭೂಮಂಡಲವನ್ನೇ ತನ್ನ ಬಾಯಿಯಲ್ಲಿದೆ ಎಂದಿದ್ದ ಬಾಲಕ ಕೃಷ್ಣ, ತನ್ನ ತಾಯಿ ಯಶೋಧೆಗೆ ತೋರಿಸಿದ್ದನು ಎನ್ನುವುದು ಮಹಾಭಾರತದ ಉಪಕಥೆಯಲ್ಲಿ ಒಂದು ಭಾಗ. ಶ್ರೀಕೃಷ್ಣನು ಮಣ್ಣನ್ನು ತಿನ್ನುವಾಗ ತಾಯಿ ಯಶೋಧೆ ಗಮನಿಸಿ ಬಾಯನ್ನು ತೆರೆಯುವಂತೆ ಆಗ್ರಹ ಮಾಡುತ್ತಾರೆ. ಆಗ ನಾನು ಮಣ್ಣನ್ನು ತಿಂದಿಲ್ಲ ಎಂದು ವಾದಿಸುವ ಪುಟ್ಟ ಪೋರ ಕೃಷ್ಣನು ಬಾಯನ್ನು ತೆರೆಯದೆ ಹಠ ಮಾಡುತ್ತಾನೆ. ಅಂತಿಮವಾಗಿ ತನ್ನ ತಾಯಿಯನ್ನು ಸಮಾಧಾನ ಮಾಡುವ ಜೊತೆಗೆ ತನ್ನ ಶಕ್ತಿ ಏನೆಂದು ತಾಯಿ ಯಶೋಧೆಗೆ ಅರ್ಥ ಮಾಡಿಸುವ ಸಲುವಾಗಿ ಭೂಮಂಡಲವನ್ನೇ ತೋರಿಸುತ್ತಾರೆ. ತಾನೂ ಸೇರಿದಂತೆ ತಾನು ವಾಸ ಮಾಡುವ ಮನೆಯೂ ಶ್ರೀಕೃಷ್ಣ ಪರಮಾತ್ಮನ ಬಾಯಲ್ಲಿ ಕಂಡ ಬಳಿಕ ಶ್ರೀಕೃಷ್ಣ ಸಾಮಾನ್ಯ ಮನಷ್ಯನಲ್ಲ, ಆತ ಅಸಮಾನ್ಯ, ಜಗತ್ತು ಉದ್ದರಿಸಲು ಬಂದಿರುವ ಸಾಕ್ಷಾತ್​ ಶ್ರೀವಿಷ್ಣುವಿನ ರೂಪ ಎನ್ನುವುದು ಮನವರಿಕೆ ಆಗುತ್ತದೆ. ಆದರೆ ಇದೀಗ ಆ ಶ್ರೀಕೃಷ್ಣ ಪರಮಾತ್ಮನನ್ನೇ ನುಂಗಿರುವ ಘಟನೆ ಕಲಿಯುಗದಲ್ಲಿ ನಡೆದಿದೆ.

ಗಂಟಲಿನಲ್ಲಿ ಅಡ್ಡಡ್ಡ ಮಲಗಿದ್ದ ಶ್ರೀಕೃಷ್ಣನ ವಿಗ್ರಹ..!

ಬೆಳಗಾವಿ ಜಿಲ್ಲೆಯ 45 ವರ್ಷದ ವ್ಯಕ್ತಿ ಮನೆಯಲ್ಲಿ ದಿನನಿತ್ಯವೂ ಶ್ರೀಕೃಷ್ಣನ ಪೂಜೆ ಮಾಡುತ್ತಿದ್ದರು. ಪೂಜೆ ಮಾಡಿದ ಬಳಿಕ ತೀರ್ಥವನ್ನು ಸೇವಿಸುವ ಅಭ್ಯಾಸ ಮಾಡಿಕೊಂಡಿದ್ದರು. ತೀರ್ಥ ಸೇವನೆ ಮಾಡುವಾಗ ಲೋಹದ ಕೃಷ್ಣನ ಮೂರ್ತಿ ನುಂಗಿದ್ದರಿಂದ ಆ ವ್ಯಕ್ತಿಯ ಗಂಟಲು ನೋವು ಬಂದು ಊತ ಉಂಟಾಗಿತ್ತು. ಆ ಬಳಿಕ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದಾಗ ವೈದ್ಯರು ಎಕ್ಸ್​ರೇ ಮಾಡಿಸಲು ಸೂಚನೆ ಕೊಟ್ಟಿದ್ದರು. ವೈದ್ಯರ ಸಲಹೆಯಂತೆ ಎಕ್ಸರೇ ಮಾಡಿಸಿದಾಗ ಕೃಷ್ಣನ ಮೂರ್ತಿ ಗಂಟಲಿನಲ್ಲಿ ಇರುವುದು ಪತ್ತೆಯಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆ ಮೂಲಕ ಗಂಟಲಿನಲ್ಲಿದ್ದ ಲೋಹದ ಮೂರ್ತಿ ಹೊರತೆಗೆಯಲಾಗಿದೆ. ಇಎನ್‌ಟಿ ವಿಭಾಗದ ವೈದ್ಯೆ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಡಗುಡ್ಡಮಠ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ವಿಗ್ರಹ ಹೊರಕ್ಕೆ ತೆಗೆಯಲಾಗಿದೆ.

ಲೋಹದ ವಿಗ್ರಹವನ್ನು ಬೇಕೆಂದೇ ನುಂಗಿರುವ ಶಂಕೆ..!

5 ರೂಪಾಯಿ ಸೇರಿದಂತೆ ಸಣ್ಣಪುಟ್ಟ ಕಾಯಿನ್​ಗಳನ್ನು ಮಕ್ಕಳು ಆಟವಾಡುತ್ತಾ ಬಾಯಿ ಒಳಕ್ಕೆ ಹಾಕಿಕೊಳ್ಳುವುದು ಸರ್ವೇ ಸಾಮಾನ್ಯ. ಅಪ್ಪಿ ತಪ್ಪಿ ನುಂಗಿದರೆ ವೈದ್ಯರು ಆಪರೇಷನ್​ ಮಾಡಿ ಹೊರಕ್ಕೆ ತೆಗೆಯುತ್ತಾರೆ. ಆದರೆ ಈತ 45 ವರ್ಷದ ಮಧ್ಯ ವಯಸ್ಕನಾಗಿದ್ದು, ತೀರ್ಥ ಸೇವನೆ ವೇಳೆ ಗೊತ್ತಿಲ್ಲದೆ ಲೋಹದ ವಿಗ್ರಹ ನುಂಗುವುದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ ವೈದ್ಯರು. ತೀರ್ಥದ ಒಳಗೆ ಸಣ್ಣದೊಂದು ಕಡ್ಡಿ ಇದ್ದರೂ ಸಹ ಗಂಟಲಿಗೆ ಹೋಗದಂತೆ ಬಾಯಿ ತಡೆಯುತ್ತದೆ. ಆದರೆ ಈತ ಪೂಜೆ ಮಾಡುವ ನೆಪದಲ್ಲಿ ತನ್ನ ದೇಹದಲ್ಲಿ ಶ್ರೀಕೃಷ್ಣನ ವಿಗ್ರಹ ಪತ್ತೆಯಾಗಿದೆ ಎಂದು ನಾಟಕವಾಡಲು ಈ ರೀತಿ ಮಾಡಿರಬಹುದಾ..? ಎನ್ನುವ ಶಂಕೆ ವ್ಯಕ್ತವಾಗ್ತಿದೆ. ಆದರೂ ಲೋಹದ ವಿಗ್ರಹ ನುಂಗಿದ ಬಳಿಕ ಬೇಗ ವೈದ್ಯರನ್ನು ಸಂಪರ್ಕ ಮಾಡಿದ್ದರಿಂದ ವೈದ್ಯರು ಶೀಘ್ರದಲ್ಲೇ ವಿಗ್ರಹ ಹೊರತೆಗೆದಿದ್ದಾರೆ.

Related Posts

Don't Miss it !