ಯಡಿಯೂರಪ್ಪ ಬದಲಾವಣೆಗೆ ಟೈಂ ಫಿಕ್ಸ್​..! ಗೇಮ್​ ಮಾಡ್ತಾರಾ ಸಿಎಂ..!?

ದುಷ್ಟರ ಸಂಹಾರ ಆಗಿಯೇ ಆಗುತ್ತೆ – ಯತ್ನಾಳ್

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಮಾತನಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ಅರುಣ್​ ಸಿಂಗ್​ ಎಚ್ಚರಿಕೆ ಬಳಿಕವೂ ಕಠಿಣವಾಗಿ ಮಾತನಾಡಿದ್ದಾರೆ. ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ವಿಧಾನಸೌಧದಲ್ಲಿ ಮಾತನಾಡಿರುವ ಯತ್ನಾಳ್​, ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ್ದು, ಹಾಲಿ ಸಿಎಂ ಜೈಲಿಗೆ ಹೋದ ಉದಾಹರಣೆ ಇದೆ. ಈ ರೀತಿ ಆಗಬಾರದು ಎಂಬುವುದು ನಮ್ಮ ಆಶಯ. ನಮ್ಮ ಪಕ್ಷ ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬ ಆತ್ಮವಿಶ್ವಾಸ ಇದೆ. ಆ ಆತ್ಮವಿಶ್ವಾಸ ಫಲ ಕೊಡುತ್ತದೆ. ಮೋದಿಯಿಂದಲೇ ಭಾರತರ ಭವಿಷ್ಯ ನಿರ್ಮಾಣ ಆಗಲಿದ್ದು, ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದಿದ್ದಾರೆ. ದುಷ್ಪರಿಗೆ ಒಂದು ಕಾಲ ಇದ್ದೇ ಇರುತ್ತದೆ. ಕ್ಷಮಾಪಣೆ ಇರುತ್ತದೆ. ದುಷ್ಟರ ಸಂಹಾರ ಆಗುತ್ತೆ, ಆ ಸಮಯವೂ ಬರುತ್ತೆ. ಟಿಪ್ಪು ಸುಲ್ತಾನ್ ಮನೆ ಎಲ್ಲಿದೆ..? ಮೊಘಲರ ಮನೆ ಎಲ್ಲಿದೆ, ನಾಶವಾಗಿಲ್ವಾ..? ಹಾಗೆಯೇ ಇಲ್ಲೂ ದುಷ್ಟರ ಸಂಹಾರ ಆಗಲಿದೆ ಎನ್ನುವ ಮೂಲಕ ನಾಯಕತ್ವ ಬದಲಾವಣೆ ಪಕ್ಕಾ ಎನ್ನುವ ಸಂದೇಶ ನೀಡಿದ್ದಾರೆ.

ವಾರ್ನಿಂಗ್​ ಕೊಟ್ಟಿದ್ದ ಉಸ್ತುವಾರಿಗೆ ಕಿಕ್​..!

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆ ನೀಡಬಾರದು. ಒಂದು ವೇಳೆ ಬಿರಂಗವಾಗಿ ಮಾತನಾಡಿದರೆ ಶಿಸ್ತುಕ್ರಮದ ಎಚ್ಚರಿಕೆ ನೀಡಿದ್ದರು. ಆದರೆ ಬಸನಗೌಡ ಪಾಟೀಲ್​ ಯತ್ನಾಳ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧವೇ ಆಕ್ರೋಶ ಹೊರ ಹಾಕಿದ್ದಾರೆ. ಅರುಣ್ ಸಿಂಗ್ ಬಂದಾಗ ರಾಜಮರ್ಯಾದೆ ಕೊಡ್ತಾರೆ. ಯಾರಿಗೆ ಕುರ್ಚಿ ಉಳಿಸಿಕೊಳ್ಳಬೇಕೋ ಅವರು ಹಾರತುರಾಯಿ ಹಾಕಿ ಸನ್ಮಾನ ಮಾಡಿದ್ದಾರೆ. ನಾವ್ಯಾಕೆ ಮಾಡಬೇಕು..? ಅರುಣ್ ಸಿಂಗ್ ಬಂದು ‌ಹೋದ್ರೆ ಎಲ್ಲವು ಸರಿಯೋಯ್ತಾ..? ನಮ್ಮ ರಾಷ್ಟ್ರೀಯ ನಾಯಕರಿಗೂ ಸುದ್ದಿ ಮೂಲಗಳು ಇದೆ. ರಾಜ್ಯ,ರಾಷ್ಟ್ರದಲ್ಲಿ ಇಂಟಿಲೆಜೆನ್ಸ್ ಇದೆ, ಅವರಿಂದ ಎಲ್ಲವನ್ನೂ ತೆಗೆದುಕೊಳ್ತಾರೆ ಎನ್ನುವ ಮೂಲಕ ಅರುಣ್​ ಸಿಂಗ್​ ವರದಿಯೇ ಫೈನಲ್​ ಅಲ್ಲ ಎನ್ನುವುದನ್ನೂ ಬಹಿರಂಗ ಮಾಡಿದ್ದಾರೆ.

ಹೊರಗಡೆ ಹೊಗಳ್ತಾರೆ, ಒಳಗಡೆ ತೆಗಳ್ತಾರೆ..!

ಸಚಿವ ಸಿ.ಪಿ ಯೋಗೇಶ್ವರ್ ದೆಹಲಿಗೆ ಹೋಗಿ ಏನೆಲ್ಲಾ ಉತ್ತರ ಪತ್ರಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಕಾಗದದ ಉತ್ತರವೋ..! ಬೇರೆ ಉತ್ತರವೋ..! ತಿಳಿದಿಲ್ಲ. ಆದರೆ ದೆಹಲಿಯಲ್ಲಿ ಕೆಲವರ ಉತ್ತರ ಪತ್ರಿಕೆ ರೆಡಿ ಆಗ್ತಿದೆ. ಪೇಪರ್​ನಲ್ಲಿ ಉತ್ತರ ರೆಡಿ ಆಗ್ತಿದೆಯೋ ಇಲ್ಲ ಸಿಡಿಯಲ್ಲಿ ರೆಡಿ ಆಗ್ತಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ದುಷ್ಟರ ಸಂಹಾರ ಆಗಬೇಕು ಅಷ್ಟೆ ಎಂದಿದ್ದಾರೆ. ಕೆಲವರು ಯಡಿಯೂರಪ್ಪನವರೇ ನಮ್ಮ ನಾಯಕ ಅಂತ ಹೊರಗಡೆ ಹೇಳ್ತಾರೆ. ಒಳಗಡೆ ಹೋಗಿ ಯಾವಾಗ ಬೇಕಾದರೂ ಸಿಎಂ ಬದಲಾವಣೆ ಮಾಡಿ ಅಂತಾರೆ ಎನ್ನುವ ಮೂಲಕ ಸಿಎಂ ಆಪ್ತರೆಂದು ಗುರುತಿಸಿಕೊಂಡವರೇ ಸಿಎಂ ಬದಲಾವಣೆ ವರದಿಗೆ ಹುಕ್ಕುಂ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮುಂದಿನ 8 ದಿನದಲ್ಲಿ ಕಾದಿದ್ಯಾ ಶಾಕ್​..?

ಸಿಎಂ ಯಡಿಯೂರಪ್ಪಗೆ ಜುಲೈ 8ರಂದು ನಿರ್ಣಾಯಕ ದಿನ ಎನ್ನಲಾಗ್ತಿದೆ. ನಾಯಕತ್ವ ಬದಲಾವಣೆ ಚರ್ಚೆ ವೇಳೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ಥಾನಕ್ಕೆ ಮುಳುವಾಗುತ್ತಾ ಎನ್ನುವ ಶಂಕೆ ಮೂಡಿಸಿದೆ. ಸಿಎಂ ಕುಟುಂಬದವರ ಭ್ರಷ್ಟಾಚಾರ ಪ್ರಕರಣ, ಅಧಿಕಾರ ದುರುಪಯೋಗದಿಂದ ಅಕ್ರಮ ಹಣ ಗಳಿಸಿದ ಕೇಸಿನ ಆದೇಶ ಹೊರ ಬೀಳಲಿದೆ. ಡೆವೆಲಪರ್ ಚಂದ್ರಕಾಂತ್ ರಾಮಲಿಂಗಂ ಅವರಿಂದ ಯಡಿಯೂರಪ್ಪ ಮೊಮ್ಮಗ ಹಣ ಪಡೆದ ಪ್ರಕರಣ ಇದಾಗಿದ್ದು, ವಿಚಾರಣೆ ನಡೆಸಿದ ರಾಜ್ಯ ಸಿಟಿ ಸಿವಿಲ್ ಅಂಡ್ ಸೆಷನ್ ಕೋರ್ಟ್​ನಲ್ಲಿ ದೂರುದಾರ ಟಿ.ಜೆ. ಅಬ್ರಾಹಂ ವಾದ ಮಂಡನೆ ಮಾಡಿದ್ದಾರೆ. ಜುಲೈ 8ರಂದು ಸಿಟಿ ಸಿವಿಲ್ ಅಂಡ್ ಸೆಷನ್ ಕೋರ್ಟ್​ನಲ್ಲಿ ಅಬ್ರಾಹಂ ದೂರನ್ನು ವಜಾಗೊಳಿಸದಿದ್ದರೆ ಯಡಿಯೂರಪ್ಪಗೆ ಆಪತ್ತು ಎನ್ನಲಾಗ್ತಿದೆ. ತನಿಖೆ ನಡೆಸುವಂತೆ ಆದೇಶ ನೀಡಿದರೆ ಯಡಿಯೂರಪ್ಪಗೆ ಅಪಾಯ ಗ್ಯಾರಂಟಿ ಎನ್ನಲಾಗ್ತಿದೆ. ಸದ್ಯ FIR ಇಲ್ಲ ಎನ್ನುವ ಕಾರಣಕ್ಕೆ ಜಾರಿ ನಿರ್ದೇಶನಾಲಯದಲ್ಲಿ ನೆನೆಗುದಿಗೆ ಬಿದ್ದಿರುವ ಕೇಸಿಗೆ ಮರುಜೀವ ಬರಲಿದೆ.

ರಾಜ್ಯ ಪ್ರವಾಸದ ಮಾರ್ಗ ಹುಡುಕಿದ ಸಿಎಂ..!

ನಾಯಕತ್ವ ಬದಲಾವಣೆ ಕೂಗಿನ ನಡುವೆ ಸಿಎಂ ಬಿಎಸ್​ ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ. ಈ ಮೂಲಕ ನಾನು ಅಶಕ್ತನಲ್ಲ ಎನ್ನುವ ಸಂದೇಶವನ್ನು ಹೈಕಮಾಂಡ್​ ನಾಯಕರಿಗೆ ಮುಟ್ಟಿಸುವುದು ಹಾಗೂ ಈಗಾಗಲೇ ಸಿಎಂ ವಿರುದ್ಧ ಕಿಡಿಕಾರಿರುವ ಶಾಸಕರ ಕ್ಷೇತ್ರಗಳಿಗೂ ಭೇಟಿ ನೀಡಿ ಮಾತುಕತೆ ಮೂಲಕ ಮನವೊಲಿಕೆ ಮಾಡುವ ಕೆಲಸವೂ ನಡೆಯಲಿದೆ ಎನ್ನಲಾಗಿದೆ. ಈ ಎರಡೂ ಕೆಲಸ ಮಾಡುವ ಮೂಲಕ ಬಿಜೆಪಿ ಹೈಕಮಾಂಡ್​ ನಾಯಕರ ಮನ ಮುಟ್ಟುವ ಕೆಲಸಕ್ಕೆ ಕೈ ಹಾಕಿದ್ದಾರೆ. ಆದರೆ ಸಿಎಂ ಪ್ರವಾಸದ ವೇಳೆ ಅಂತರ ಕಾಯ್ದುಕೊಂಡು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರಿಗೇ ಮುಖಭಂಗ ಮಾಡ್ತಾರಾ..? ಎನ್ನುವುದನ್ನೂ ಕಾದು ನೋಡಬೇಕಿದೆ.

Related Posts

Don't Miss it !