ಬೆಂಗಳೂರಿನ ಟ್ರಾಫಿಕ್​​ ಕಿರಿಕಿರಿ, ಕಿವಿ ಹಿಂಡಿದ ಪ್ರಧಾನಿ ಮೋದಿ..! ​ ಮಾಸ್ಟರ್​ ಸ್ಟ್ರೋಕ್​

ಬೆಂಗಳೂರಿನಲ್ಲಿ ಟ್ರಾಫಿಕ್​ ಕಿರಿಕಿರಿ ಇಲ್ಲದೆ ಸಂಚಾರ ಮಾಡುವ ಯಾವುದೇ ಪ್ರಯಾಣಿಕರು ಸಿಗಲಾರರು. ಪ್ರಧಾನಿ ನರೇಂದ್ರ ಮೋದಿ ಇತ್ತೀಚಿಗೆ ಬೆಂಗಳೂರಿಗೆ ಬಂದಿದ್ದರು. ಅವರಿಗೆ ಯಾವುದೇ ಟ್ರಾಫಿಕ್​​ ಕಿರಕಿರಿ ಆಗಿರಲಿಲ್ಲ. ಆದರೂ ಬೆಂಗಳೂರು ಟ್ರಾಫಿಕ್​​ ಸಮಸ್ಯೆ ಬಗ್ಗೆ ಕಿವಿ ಹಿಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಪ್ರಧಾನಿ ಮೋದಿ ಚಾಟಿ ಏಟಿಗೆ ಬೆಚ್ಚಿ ಬಿದ್ದಿರುವ ಬೆಂಗಳೂರಿನ ಹಿರಿಯ ಅಧಿಕಾರಿಗಳು ಇಂದು ಮಹತ್ವದ ಸಭೆ ನಡೆಸುತ್ತಿದ್ದಾರೆ. ಟ್ರಾಫಿಕ್​ ಕಿಕಿಕಿರಿ ತಪ್ಪಿಸುವುದು ಹೇಗೆ..? ಎನ್ನುವ ಬಗ್ಗೆ ಮಹತ್ವದ ಅಧ್ಯಯನ ನಡೆಸಲಿದ್ದು, ಸಾಕಷ್ಟು ಮಾರ್ಗೋಪಾಯಗಳಿಗಾಗಿ ಹಿರಿಯ ಅಧಿಕಾರಿಗಳು ಮಧ್ಯರಾತ್ರಿ ಬೆಂಗಳೂರಿನಲ್ಲಿ ಸಂಚಾರ ಮಾಡಿದ್ದಾರೆ. ಯಾವ ಸರ್ಕಲ್​ನಲ್ಲಿ ಎಷ್ಟು ಟ್ರಾಫಿಕ್​ ಜಾಮ್​ ಆಗ್ತಿದೆ ಅನ್ನೋ ಮಾಹಿತಿ ಕಲೆ ಹಾಕಿದ್ದಾರೆ.

DGP ನೇತೃತ್ವದಲ್ಲಿ ನಡೆಯಲಿದೆ ಮಹತ್ವದ ಸಭೆ..!

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದ್ದು, ಕೂಡಲೇ ಟ್ರಾಫಿಕ್​ ತಡೆಗೆ ಇರುವ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ಟ್ರಾಫಿಕ್​​ ಪೊಲೀಸರು ರಸ್ತೆಗಳಲ್ಲಿ ಅಡ್ಡಗಟ್ಟಿ ಫೈನ್​ ವಸೂಲಿ ಮಾಡುವಂತಿಲ್ಲ ಎಂದು ಡಿಜಿ & ಐಜಿಪಿ ಆದೇಶ ಮಾಡಿದ್ದರು. ಸಂಚಾರ ನಿಯಮ ಉಲ್ಲಂಘನೆ ಮಾಡದ ಹೊರತು ಅಡ್ಡ ಹಾಕುವಂತಿಲ್ಲ ಎಂದು ಸೂಚಿಸಿದ್ದರು. ಅದಾದ ಬಳಿಕವೂ ಅಲ್ಲಲ್ಲಿ ಟ್ರಾಫಿಕ್​ ಪೊಲೀಸರು ಎಂದಿನಂತೆ ದಂಡ ವಸೂಲಿ ಕೆಲಸ ಮಾಡುತ್ತಿದ್ದರು. ಇದೀಗ ಎಲ್ಲದಕ್ಕೂ ಕಠಿಣ ರೀತಿಯಲ್ಲಿ ಕಡಿವಾಣ ಹಾಕುವ ಉದ್ದೇಶಿಂದ ಡಿಜಿ & ಐಜಿಪಿ ಪ್ರವೀಣ್ ಸೂದ್ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಇಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ ಸಭೆಯಲ್ಲಿ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಡಿಜಿ & ಐಜಿಪಿ ಸೂದ್​ ಸಭೆಗೆ ಅಧಿಕಾರಿಗಳ ತಯಾರಿ..!

ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪ್ರಧಾನಿ ಸೂಚನೆ ಬೆನ್ನಲ್ಲೇ ನಗರ ಪೊಲೀಸ್ ಆಯುಕ್ತ ಪ್ರತಾಪ್​ ರೆಡ್ಡಿ ಸೇರಿದಂತೆ 8 ಅಧಿಕಾರಿಗಳಿಗೆ ಡಿಜಿ & ಐಜಿಪಿ ಬುಲಾವ್ ಕೊಟ್ಟಿದ್ದಾರೆ. ಇಂದಿನ ಸಭೆಯಲ್ಲಿ ಗುಪ್ತಚರ ಇಲಾಖೆ ADGP ಬಿ.ದಯಾನಂದ್, ಆಡಳಿತ ವಿಭಾಗ ಎಡಿಜಿಪಿ ಎಂ.ಎ.ಸಲೀಂ, KSRP ಎಡಿಜಿಪಿ ಆರ್.ಹಿತೇಂದ್ರ, ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ, ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಕುಲದೀಪ್ ಕುಮಾರ್ ಜೈನ್, ಉತ್ತರ ವಿಭಾಗದ ಸಂಚಾರ ಡಿಸಿಪಿ ಸವಿತಾ, ಪೂರ್ವ ವಿಭಾಗದ ಸಂಚಾರ ಡಿಸಿಪಿ ಕಲಾ ಕೃಷ್ಣಸ್ವಾಮಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಟ್ರಾಫಿಕ್​ ಪೊಲೀಸರು ರಸ್ತೆಯ ತಿರುವು ಹಾಗೂ ಸಿಗ್ನಲ್​ಗಳ ಬಳಿ ತಡೆದು ವಾಹನ ತಪಾಸಣೆ ನಡೆಸುವುದರ ಜೊತೆಗೆ ಬೇರೆ ಯಾವೆಲ್ಲಾ ಕಾರಣಗಳು ಟ್ರಾಫಿಕ್ ಸಮಸ್ಯೆ ಹೆಚ್ಚಳ ಆಗುವಂತೆ ಮಾಡಿದೆ ಎನ್ನುವ ಬಗ್ಗೆ ಕೂಲಂಕಷವಾಗಿ ಚರ್ಚೆ ನಡೆಸಲಿದ್ದಾರೆ. ಇದಕ್ಕಾಗಿ ರಾತ್ರಿ ಪೂರ್ತಿ ತಯಾರಿ ನಡೆದಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಹಿಂದೂ ಸಮುದಾಯದ ವ್ಯಕ್ತಿ ಹತ್ಯೆಗೆ ನಿಖರ ಕಾರಣ ಏನು..!?

ಸ್ಪಾಟ್​ ವಿಸಿಟ್​ ಜೊತೆಗೆ ಟ್ರಾಫಿಕ್​ ಸಮಸ್ಯೆಗಳ ಪಟ್ಟಿ ರೆಡಿ..!

ಬೆಂಗಳೂರು ಸಂಚಾರ ದಟ್ಟಣೆ ಕುರಿತು ಡಿಜಿ & ಐಜಿಪಿ ಸಭೆ ಕರೆದಿರುವ ಬೆನ್ನಲ್ಲೇ ಬೆಂಗಳೂರಿನ ಪ್ರಮುಖ ಅಧಿಕಾರಿಗಳು ಸಿಟಿ ರೌಂಡ್ಸ್ ಮಾಡಿದ್ದಾರೆ. ರಾತ್ರಿ 10.30ಕ್ಕೆ ಶುರುವಾದ ಸಂಚಾರ, ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವ ಜಂಕ್ಷನ್​ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಆಯುಕ್ತ ರಾಕೇಶ್ ಸಿಂಗ್, ಸಂಚಾರಿ ಜಂಟಿ ಆಯುಕ್ತರ ಡಾ. ರವಿಕಾಂತೇ ಗೌಡ, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಬಿಡಿಎ ಆಯುಕ್ತ ರಾಜೇಶ್ ಗೌಡ, ಬಿಎಂಆರ್​ಸಿಎಲ್ ಎಂಡಿ ಅಂಜುಂ ಪರ್ವೇಜ್ ಭಾಗಿಯಾಗಿದ್ದರು. ತುಮಕೂರು ರಸ್ತೆಯ ಗೊರಗುಂಟೆಪಾಳ್ಯ, ಹೆಬ್ಬಾಳ, ಕೆ ಆರ್ ಪುರಂ, ಸಿಲ್ಕ್ ಬೋರ್ಡ್ ಸೇರಿದಂತೆ ಹಲವಾರು ಕಡೆ ಸಂಚರಿಸಿ ಟ್ರಾಫಿಕ್​ ಸಮಸ್ಯೆಗೆ ಕಾರಣ ಪಟ್ಟಿ ಮಾಡಲಾಗಿದೆ.

ಬಿಬಿಎಂಪಿ ಚುನಾವಣೆ ಮೇಲೆ ಅಧಿಕಾರದ ಅಭಿವೃದ್ಧಿ..!

ಬೆಂಗಳೂರಿನ ಸಮಸ್ಯೆಗಳ ಸರಮಾಲೆ ಜೊತೆಗೆ ಬಿಬಿಎಂಪಿ ಚುನಾವಣೆಗೆ ಹೋದರೆ ಬಿಜೆಪಿಗೆ ಸೋಲಾಗುವುದು ಕಟ್ಟಿಟ್ಟ ಬುತ್ತಿದೆ. ಇದೇ ಕಾರಣದಿಂದ ಬೆಂಗಳೂರಿಗೆ ಸಾಕಷ್ಟು ಯೋಜನೆಗಳನ್ನು ಕೊಟ್ಟು ಬಿಬಿಎಂಪಿ ಚುನಾವಣೆಯಲ್ಲಿ ವರ್ಚಾಂತ್ಯಕ್ಕೆ ಕೊಂಡೊಯ್ಯುವುದು ಬಿಜೆಪಿ ಯೋಜನೆ ಎನ್ನಲಾಗ್ತಿದೆ. ಅಷ್ಟು ಮಾತ್ರವಲ್ಲದೆ ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯೇ ಬಿಬಿಎಂಪಿಗೆ ಸೂಕ್ತ ಎನ್ನುವಂತೆ ಮಾಡಲು ಯೋಜನೆಗಳಿಗೆ ತ್ವರಿತಗತಿಯಲ್ಲಿ ಕಾಮಗಾರಿ ಶುರು ಮಾಡಲು ಸಂದೇಶ ಬಂದಿದೆ ಎನ್ನುವುದು ಆತಂರಿಕ ಮಾಹಿತಿ. ಬಿಬಿಎಂಪಿ ಚುನಾವಣೆ ಗೆದ್ದ ಬಳಿಕ, ಕರ್ನಾಟಕದ ಜನರು ಬಿಜೆಪಿ ಪರವಾಗಿದ್ದಾರೆ ಎನ್ನುವ ಸಂದೇಶದೊಂದಿಗೆ ರಾಜ್ಯ ವಿಧಾನಸಭಾ ಚುನಾವಣೆ ಎದುರಿಸುವುದು ಕೇಸರಿ ಪಡೆಯ ಲೆಕ್ಕಾಚಾರ. ರಾಜಕೀಯ ಏನೇ ಇರಲಿ, ಬೆಂಗಳೂರಿನ ಸಮಸ್ಯೆಗಳಿಗೆ ಆದಷ್ಟು ಬೇಗ ಮುಕ್ತಿ ಸಿಗಲಿ ಎನ್ನುವುದು ಜನಸಾಮಾನ್ಯರ ಆಶಯ.

Related Posts

Don't Miss it !