ಸಿದ್ದರಾಮಯ್ಯಗೆ 75ನೇ ಹುಟ್ಟುಹಬ್ಬ, 75 ಕೋಟಿ ವೆಚ್ಚದಲ್ಲಿ ಅದ್ಧೂರಿ ಕಾರ್ಯಕ್ರಮ..!

ಮಾಜಿ ಸಿಎಂ ಹಾಗು ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತನ್ನ ವಾಕ್​ ಚಾತುರ್ಯದಿಂದಲೇ ಜನಮಾನಸದಲ್ಲಿ ಖ್ಯಾತಿ ಪಡೆದಿರುವ ಜನನಾಯಕ. ಇಂದು ಆಗಸ್ಟ್​ 3, ಸಿದ್ದರಾಮಯ್ಯ 75ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ದಾವಣೆಗೆರೆಯಲ್ಲಿ ಬೃಹತ್​ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಬರೋಬ್ಬರಿ 75 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಸುಮಾರು 8 ಲಕ್ಷ ಜನರನ್ನು ಸೇರಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಉತ್ತರ ಕರ್ನಾಟಕ ಭಾಗದ ಪ್ರತಿಯೊಂದು ಕ್ಷೇತ್ರದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಇನ್ನೂ ಹಳೇ ಮೈಸೂರು ಭಾಗದಿಂದಲೂ ಜನರನ್ನು ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿದೆ. ಇದು ಸಿದ್ದರಾಮಯ್ಯ ಶಕ್ತಿ ಪ್ರದರ್ಶನದ ಭಾಗ ಎಂದೇ ವಿಶ್ಲೇಷಣೆ ಮಾಡಲಾಗ್ತಿದ್ದು, ಮುಂದಿನ ಮುಖ್ಯಮಂತ್ರಿ ಆಗುವುದಕ್ಕೆ ಸಿದ್ದರಾಮಯ್ಯ ಹಣಿಯಾದಂತೆ ಕಾಣ್ತಿದೆ. ಒಂದು ವೇಳೆ ಕಾಂಗ್ರೆಸ್​ ಪಕ್ಷವೇ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ನಾಯಕರನ್ನು ಹೈಕಮಾಂಡ್​ ಆಯ್ಕೆ ಮಾಡುವಂತಿಲ್ಲ. ಒಂದು ವೇಳೆ ಕಾಂಗ್ರೆಸ್​ ದುಸ್ಸಾಹಸಕ್ಕೆ ಕೈ ಹಾಕಿದರೆ ಕಾಂಗ್ರೆಸ್​ ಪಕ್ಷವೇ ಇರುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ಹೈಕಮಾಂಡ್​ಗೆ ಮುಟ್ಟಿಸುವ ಎಲ್ಲಾ ಪ್ರಯತ್ನಗಳು ನಡೆದಿದೆ.

ಉಜ್ವಲ ಭವಿಷ್ಯದ ಕನಸು ಕಂಡ ಕಾಂಗ್ರೆಸ್​ಗೆ ಈ ಸಭೆ ಮುಳುವು..!

ಕಾಂಗ್ರೆಸ್​ನಲ್ಲಿ ಒಂದು ಸಂಪ್ರದಾಯವಿತ್ತು. ಅಧ್ಯಕ್ಷರಾಗಿ ಯಾರು ಪಕ್ಷವನ್ನು ಮುನ್ನಡೆಸುತ್ತಾರೆ, ಅಧಿಕಾರಕ್ಕೆ ತರುತ್ತಾರೆ ಅವರೇ ಮುಖ್ಯಮಂತ್ರಿ ಆಗುವ ಲೆಕ್ಕಾಚಾರ ಇತ್ತು. ಆದರೆ 2013ರಲ್ಲಿ ಅಧ್ಯಕ್ಷರಾಗಿದ್ದ ಡಾ ಜಿ ಪರಮೇಶ್ವರ್​​ ಕಾಂಗ್ರೆಸ್​ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರೂ ಸ್ವತಃ ತಾವೇ ಸೋತು ಸುಣ್ಣವಾಗಿದ್ದರು. ಆ ಸಮಯದಲ್ಲಿ ಪರಿಷತ್​ಗೆ ಆಯ್ಕೆ ಮಾಡಿ ಮುಖ್ಯಮಂತ್ರಿ ಮಾಡುವ ಕೆಲಸವನ್ನು ಕಾಂಗ್ರೆಸ್​​ ಮಾಡಲಿಲ್ಲ. ನೇರವಾಗಿ ಸಿದ್ದರಾಮಯ್ಯ ಅವರಿಗೆ ಅವಕಾಶ ಒದಗಿ ಬಂದಿತ್ತು. ಇದೀಗ ಕಾಂಗ್ರೆಸ್​ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್​​ ಗೆಲುವು ಸಾಧಿಸಿ ಮುಖ್ಯಮಂತ್ರಿ ಆಗುವ ಕನಸು ಕಂಡಿದಿದ್ದಾರೆ. ಆದರೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಅವರನ್ನು ಹಿಂದಿಕ್ಕಿ, ಕಾಂಗ್ರೆಸ್​ನಲ್ಲಿ ನಾನೇ ಅಗ್ರಗಣ್ಯ ನಾಯಕ, ನನ್ನನ್ನು ಹೊರತುಪಡಿಸಿದ್ರೆ ಬೇರೆ ಯಾರೂ ಇಲ್ಲ ಎಂಬುದನ್ನು ಬಿಂಬಿಸಲು ಈ ಸಮಾವೇಶ ಆಯೋಜನೆ ಮಾಡಿದ್ದಾರೆ. ಕಾಂಗ್ರೆಸ್​ ಪಕ್ಷದ ನಾಯಕರೇ ಆಯೋಜನೆ ಮಾಡಿದರೂ ಕಾಂಗ್ರೆಸ್​ ಪಕ್ಷದ ಅಧಿಕೃತ ಕಾರ್ಯಕ್ರಮವಲ್ಲ. ಅಭಿಮಾನಿಗಳು ನಡೆಸುತ್ತಿರುವ ಹುಟ್ಟುಹಬ್ಬ. ಇದಕ್ಕೆ ಸಾಕ್ಷಿ ಕಾಂಗ್ರೆಸ್​ ಪಕ್ಷದ ಪ್ರಶ್ನಾತೀತ ನಾಯಕ ರಾಹುಲ್​ ಗಾಂಧಿ. ಉತ್ತರ ಕರ್ನಾಟಕದಲ್ಲಿ ನಾನು ಪ್ಗರಭಾವಿ ಎನ್ನುವುದನ್ನು ಸಿದ್ದರಾಮಯ್ಯ ಸಾಬೀತು ಮಾಡುತ್ತಿದ್ದಾರೆ. ಇದೀಗ ಡಿ.ಕೆ ಶಿವಕುಮಾರ್​ ನಡೆ ಹೇಗಿರುತ್ತೆ ಅನ್ನೋದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ ಆಗಿದೆ.

ಇದನ್ನು ಓದಿ: Rain effect: ಸಿಎಂ ಸಾರ್ ಕೂಗಿ ಕರೆದರೂ ಯಾರೂ ರಕ್ಷಣೆಗೆ ಬರಲಿಲ್ಲ, ನಾವು ಮತಕ್ಕೆ ಮಾತ್ರ ಸೀಮಿತವೇ..?

ಸೋತು ಗೆಲ್ಲುವ ಲೆಕ್ಕಾಚಾರದಲ್ಲಿ ಡಿ.ಕೆ ಶಿವಕುಮಾರ್​..!

ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ 75ನೇ ವರ್ಷದ ಸಂಭ್ರಮಾಚರಣೆಯಿಂದ ಸಾಕಷ್ಟು ಅಂತರ ಕಾಯ್ದುಕೊಂಡೇ ಬಂದಿದ್ದ ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ ಶಿವಕುಮಾರ್​. ಅದು ಪಕ್ಷದ ಕಾರ್ಯಕ್ರಮವಲ್ಲ. ಸಿದ್ದರಾಮಯ್ಯ ಅವರ ಅಭಿಮಾನಿಗಳು ಮಾಡುತ್ತಿರೋ ಹುಟ್ಟುಹಬ್ಬ. ಅದರಲ್ಲಿ ಪಕ್ಷದ ನಾಯಕರು ಭಾಗಿಯಾಗ್ತಾರೆ, ನಾನೂ ಹೋಗ್ತೇನೆ. ಆದರೆ ಪಕ್ಷದ ಕಾರ್ಯಕ್ರಮವಲ್ಲ ಎಂದಿದ್ದರು. ಆದರೆ ಸಿದ್ದರಾಮಯ್ಯ ರಾಹುಲ್​ ಗಾಂಧಿ ಅವರನ್ನೇ ಆಹ್ವಾನಿಸಿ, ಕಾರ್ಯಕ್ರಮಕ್ಕೆ ಕರೆದುಕೊಂಡು ಬರುವ ಮೂಲಕ ಪಕ್ಷದ ಅಧಿಕೃತ ಕಾರ್ಯಕ್ರಮವಲ್ಲ ಎಂದರೂ ಕಾಂಗ್ರೆಸ್​ ಪಕ್ಷದ ಚಿಹ್ನೆಯನ್ನೇ ಬಳಸಿಕೊಂಡು 75 ಕೋಟಿ ವೆಚ್ಚದಲ್ಲಿ ಕಾರ್ಯಕ್ರ ಮಾಡಲಾಗ್ತಿದೆ. 75 ಅಡಿ ಎತ್ತರದ ಕಟೌಟ್​ ನಿರ್ಮಾಣ ಮಾಡಲಾಗಿದೆ. ಇಡೀ ಉತ್ತರ ಕರ್ನಾಟಕ ಭಾಗವನ್ನು ಸಿದ್ದರಾಮಯ್ಯ ತನ್ನ ಮುಷ್ಟಿಯಲ್ಲಿ ಹಿಡಿದಿರುವಂತೆ ಭಾಸವಾಗ್ತಿದೆ. ಆದರೆ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ, ಯಾವುದೇ ಗೊಂದಲಗಳಿಗೆ ಆಸ್ಪದ ಕೊಡಬೇಡಿ ಎಂದು ರಾಹುಲ್​ ಗಾಂಧಿ ಮೂಲಕ ಕಾಂಗ್ರೆಸ್​ ನಾಯಕರ ಸಭೆಯಲ್ಲಿ ಹೇಳಿಸಿರುವ ಡಿ.ಕೆ ಶಿವಕುಮಾರ್​ ಸೋತು ಗೆಲ್ಲುವ ಲೆಕ್ಕಾಚಾರ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಯೋಜನೆ ರೂಪಿಸಿದ್ದಾರೆ.

ಸಮಾಜವಾದಿ ನಾಯಕನಿಗೆ ಬೇಕಿತ್ತಾ ಅದ್ದೂರಿ ಹುಟ್ಟುಹಬ್ಬ..!?

ಸಿದ್ದರಾಮಯ್ಯ ಅಭಿಮಾನಿಗಳು 75ನೇ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ಸಾವಿರಾರು ವಾಹನಗಳ ಮೂಲಕ ದಾವಣಗೆರೆ ಕಡೆಗೆ ದೌಡಾಯಿಸುತ್ತಿದ್ದಾರೆ. ಬಗೆಬಗೆಯ ಆಹಾರ, ಸಿಹಿ ತಿನಿಸು ಹಂಚುವ ಕೆಲಸವೂ ಭರದಿಂದ ಸಾಗಿದೆ. ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎನ್ನುವ ಹಾಡು ಕೂಡ ಬಿಡುಗಡೆ ಆಗಿದೆ. ಆದರೆ ನಾನು ಲೋಹಿಯಾ ವಾದಿ, ಜಯಪ್ರಕಾಶ್​ ನಾರಾಯನ ಹೋರಾಟದಿಂದ ಪ್ರೇರಿತನಾಗಿ ರಾಜಕೀಯಕ್ಕೆ ಬಂದೆ, ನನಗೆ ಯಾವುದೇ ಆಸೆ ಆಕಾಂಕ್ಷೆ ಇಲ್ಲ. ನಾನು ಸಿಂಪಲ್​ ಎನ್ನುವ ಸಿದ್ದರಾಮಯ್ಯಗೆ 75 ಕೋಟಿ ವೆಚ್ಚದಲ್ಲಿ ಹುಟ್ಟುಹಬ್ಬ ಬೇಕಿತ್ತಾ..? ಎನ್ನುವುದು ಹಲವರ ಪ್ರಶ್ನೆ. ಓರ್ವ ಸಾಮಾನ್ಯ ವ್ಯಕ್ತಿಯಾಗಿ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ಸರ್ವಸ್ವತಂತ್ರರು. ಅವರನ್ನು ಪ್ರಶ್ನೆ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ ನಾನು ಸರಳ ಜೀವನ ರೂಢಿಸಿಕೊಂಡಿದ್ದೇನೆ ಎನ್ನುವ ಸಿದ್ದರಾಮಯ್ಯ ಈ ಹಿಂದೆ 40 ಲಕ್ಷ ಮೌಲ್ಯದ ಹ್ಯೂಬ್ಲಾಟ್​ ವಾಚ್​ ಕಟ್ಟಿಕೊಂಡು ಶೋಕಿ ಮಾಡಿ ವಿವಾದಕ್ಕೆ ಸಿಲುಕಿದ್ದ ವಿರೋಧ ಪಕ್ಷದ ನಾಯಕ, ಸರಳತೆಯ ಹೆಸರಿಗೆ ಮಸಿ ಬಳಿದಂತಾಗಿದೆ. ಕಾಂಗ್ರೆಸ್​ ಪಕ್ಷದ ವತಿಯಿಂದ 100 ಕೋಟಿ ವೆಚ್ಚದ ಕಾರ್ಯಕ್ರಮವಾಗಿದ್ದರೂ ಯಾವುದೇ ಸಮಸ್ಯೆ ಇರಲಿಲ್ಲ. ಪಕ್ಷದ ಸಂಘಟನೆ ಎನ್ನಬಹುದಿತ್ತು. ಆದರೆ ಓರ್ವ ವ್ಯಕ್ತಿಯ ಹುಟ್ಟುಹಬ್ಬಕ್ಕೆ 75 ಕೋಟಿ ವೆಚ್ಚ..!! ಅಬ್ಬಬ್ಬಾ.. ಎನ್ನುತ್ತಿದೆ ವಿರೋಧಿ ಪಾಳಯ..

Related Posts

Don't Miss it !