ಕರ್ನಾಟಕ ಹೈಕೋರ್ಟ್​ನಲ್ಲಿ ಹಿಜಾಬ್​ ತೀರ್ಪು..! ಆ ಬಳಿಕ ಆಗಬಹುದಾದ ಸಾಧ್ಯತೆಗಳಿವು..!?

ಕರ್ನಾಟಕದಲ್ಲಿ ಕಿಚ್ಚು ಹೊತ್ತಿಸಿದ್ದ ಹಿಜಬ್​ ವಿವಾದ ಕುರಿತ ತೀರ್ಪು ಹೈಕೋರ್ಟ್​ನಲ್ಲಿ ಹೊರಬೀಳಲಿದೆ. ಉಡುಪಿ ಸರ್ಕಾರಿ ಕಾಲೇಜಿನಲ್ಲಿ ಶುರುವಾಗಿದ್ದ ಹಿಜಬ್​ ವಿವಾದ ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶದಲ್ಲಿ ಚರ್ಚೆಯ ವಸ್ತುವಾಗಿತ್ತು. ಪಂಚರಾಜ್ಯ ಚುನಾವಣೆ ಪ್ರಚಾರದಲ್ಲೂ ಹಿಜಬ್​ ಕುರಿತ ಬಗ್ಗೆ ರಾಜಕಾರಣಿಗಳು ಪರ ವಿರೋಧ ಮಾತನಾಡಿದ್ದರು. ಮುಂದಿನ ವರ್ಷದಿಂದ ಮಧ್ಯಪ್ರದೇಶ, ಉತ್ತರಾಖಂಡ್​ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಸಮವಸ್ತ್ರ ಕಡ್ಡಾಯದ ಜೊತೆಗೆ ಹಿಜಬ್​ ನಿಷೇಧ ಮಾಡುವ ಬಗ್ಗೆ ಬಿಜೆಪಿ ನ ಆಯಕರು ಹೇಳಿಕೊಂಡಿದ್ದರು. ಇದೀಗ ಕರ್ನಾಟಕ ಹೈಕೋರ್ಟ್​ನ ತ್ರಿಸದಸ್ಯ ಪೀಠ ನೀಡುವ ತೀರ್ಪು ಭಾರೀ ಮಹತ್ವ ಪಡೆದುಕೊಂಡಿದ್ದು, ಇಡೀ ದೇಶದ ಕಣ್ಣು ಬೆಂಗಳೂರಿನತ್ತ ಹೊರಳಿದೆ. ಹೈಕೋರ್ಟ್​ ತೀರ್ಪಿನ ಹಿನ್ನೆಲೆಯಲ್ಲಿ 1 ವಾರ ಕಾಲ ಬೆಂಗಳೂರಿನಲ್ಲಿ 144 ಸೆಕ್ಷನ್​​ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಒಟ್ಟು 10 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಯಾವ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಲ್ಲಿ ರಜೆ ಘೋಷಣೆ..!

ಇಂದು ಹೈಕೋರ್ಟ್​ ತೀರ್ಪು ಹೊರ ಬೀಳುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಸೂಕ್ಷ್ಮ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಆದೇಶ ಹೊರಡಿಸಿದ್ದು, ಜಿಲ್ಲಾದ್ಯಂತ ಶಾಲಾ -ಕಾಲೇಜಿನ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಮಾರ್ಚ್​ 21ರ ತನಕ ನಿಷೇಧಾಜ್ಞೆ ಮಾಡಿದ್ದಾರೆ. ಯಾವುದೇ ಅಪರಿಚಿತ ವ್ಯಕ್ತಿಗಳು ಶಾಲಾ ಕಾಲೇಜು ಆವರಣ ಪ್ರವೇಶಿಸಿದಂತೆ ಸೂಚನೆ ನೀಡಲಾಗಿದೆ. ಇನ್ನೂ ಕೋಲಾರ ಜಿಲ್ಲೆಯಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಲಾಗಿದೆ. ಸರ್ಕಾರಿ, ಅನುದಾನಿತ ಹಾಗು ಖಾಸಗಿ ಶಾಲಾ, ಕಾಲೇಜಿಗೆ ರಜೆ ನೀಡಲಾಗಿದೆ. ರಾಯಚೂರು ಜಿಲ್ಲೆಯಲ್ಲಿ 48 ಗಂಟೆಗಳ ಕಾಲ 144 ಸೆಕ್ಷನ್​ ಜಾರಿ ಮಾಡಲಾಗಿದೆ. ರಾಯಚೂರು, ಲಿಂಗಸೂಗೂರು, ಸಿಂಧನೂರು ನಗರ ಪ್ರದೇಶದಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದೆ. ಮೆರವಣಿಗೆ, ಸಂಭ್ರಮಾಚರಣೆ ಮತ್ತು ಹೋರಾಟಗಳಿಗೆ ಎರಡು ದಿನಗಳ ಕಾಲ ನಿಷೇಧ ಹೇರಲಾಗಿದೆ. ಇನ್ನೂ ಇತ್ತೀಚಿಗೆ ಹಿಂದೂ ಯುವಕನ ಹತ್ಯೆ ನಡೆದಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ 1 ರಿಂದ 10 ನೇ ತರಗತಿಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮವಹಿಸಲು ಆದೇಶದಲ್ಲಿ ತಿಳಿಸಲಾಗಿದೆ.

ಹೈಕೋರ್ಟ್​ ಸಾಂವಿಧಾನಿಕ ಪೀಠದ ಆದೇಶ ಏನ್​ ಆಗಬಹುದು..!?

ಹಿಜಬ್​​ ತೀರ್ಪು ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದು ವಿಸ್ತೃತ ಪೀಠಕ್ಕೆ ವರ್ಗಾವಣೆ ಆಗಿತ್ತು. ಇದೀಗ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ಯಾವುದೇ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗದಂತೆ, ಸಾಂವಿಧಾನಿಕ ಹಕ್ಕುಗಳಿಗೆ ಚ್ಯುತಿ ಬಾರದಂತೆ ನಿರ್ಧಾರ ಮಾಡುವ ಉದ್ದೇಶದಿಂದಲೇ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಲಾಗಿದೆ. ಇಲ್ಲಿವ ಆದೇಶ ಇಡೀ ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯ ಆಗುವ ಹಿನ್ನೆಲೆಯಲ್ಲಿ ಸಾಕಷ್ಟು ಅಂಶಗಳನ್ನು ಪರಿಗಣಿಸಿ ತೀರ್ಪು ನೀಡಲಿದ್ದಾರೆ. ಈಗಾಗಲೇ ಹಿರಿಯ ನ್ಯಾಯವಾದಿಗಳು ಹಲವು ದೇಶಗಳ, ಹಲವಾರು ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದ್ದಾರೆ. ಧಾರ್ಮಿಕ ಹಕ್ಕು ಜೊತೆಗೆ ಶಾಲಾ ಕಾಲೇಜುಗಳ ಸಮವಸ್ತ್ರ ಬಗ್ಗೆ ರಾಜ್ಯ ಸರ್ಕಾರ ಮಾಡಿರುವ ತೀರ್ಪು, ಕಾಲೇಜು ಅಭಿವೃದ್ಧಿ ಸಮಿತಿಗೆ ಸರ್ಕಾರ ಕೊಟ್ಟಿರುವ ಹಕ್ಕುಗಳನ್ನು ಗಮನದಲ್ಲಿ ಇಟ್ಟುಕೊಂಡು ತೀರ್ಪು ನೀಡಬೇಕಿದೆ. ತೀರ್ಪು ಏನೇ ಬಂದರೂ ವಿರೋಧಿಸಿದ್ದವರು ಸಂಭ್ರಮಾಚರಣೆ ಮಾಡುವ ಸಾಧ್ಯತೆ ಇರುವ ಕಾರಣ ಪೊಲೀಸ್​ ಇಲಾಖೆ ಕಟ್ಟೆಚ್ಚರ ವಹಿಸಿದೆ.

ತೀರ್ಪು ಏನೇ ಬರಲಿ ಸುಪ್ರೀಂಕೋರ್ಟ್​ಗೆ ಹೋಗುವುದು ಶತಸಿದ್ಧ..!

ಹೈಕೋರ್ಟ್​ನಲ್ಲಿ ಹಿಜಬ್​ ಬೇಕು ಅಥವಾ ಹಿಜಬ್​ ಶಾಲಾ ಕಾಲೇಜುಗಳಲ್ಲಿ ಧರಿಸಲು ಅವಕಾಶ ಇಲ್ಲ ಎಂದು ತೀರ್ಪು ಬಂದರೆ, ನಿಶ್ಚಿತವಾಗಿ ಹಿಜಬ್​ ಕೇಸ್​ ಸುಪ್ರೀಂಕೋರ್ಟ್​ ಮೆಟ್ಟಿಲು ಹತ್ತುವುದು ಶತಸಿದ್ಧ. ಒಂದು ವೇಳೆ ಹಿಜಬ್​ ಬೇಕು ಅಥವಾ ಬೇಡ ಎನ್ನುವ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕಾನೂನು ರೂಪಿಸಲಿ. ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರದ ಆದೇಶ ಜಾರಿಗೆ ಬರಲಿ ಎಂದು ಸರ್ಕಾರದ ನಿರ್ಧಾರಕ್ಕೆ ಬಿಟ್ಟುಕೊಟ್ಟರೆ ಹಿಜಬ್​ ವಿಚಾರ ಮತ್ತೊಮ್ಮೆ ರಾಜಕೀಯ ನಾಯಕರ ಅಂಗಳಕ್ಕೆ ಬಂದು ತಲುಪಲಿದೆ. ಒಂದು ವೇಳೆ ಸರ್ಕಾರದ ಮುಂದೆ ಅರ್ಜಿ ಬಂದರೆ ರಾಜಕೀಯ ಕಾರಣಕ್ಕಾಗಿ ಮತ್ತಷ್ಟು ರಂಗು ಪಡೆದುಕೊಳ್ಳುವ ಸಾಧ್ಯತೆಯಿದೆ. ಇನ್ನೂ ಒಂದು ವೇಳೆ ಕೇಂದ್ರ ಸರ್ಕಾರವೇ ಹಿಜಬ್​ ವಿವಾದವನ್ನು ಬಗೆಹರಿಸುವ ಸಲುವಾಗಿ ಸೂಕ್ತ ಕಾನೂನು ಜಾರಿ ಮಾಡುವುದಕ್ಕೂ ಹೈಕೋರ್ಟ್​ ಸೂಚನೆ ಕೊಡುವ ಸಾಧ್ಯತೆಯಿದೆ. ಎಲ್ಲವೂ ಸಂವಿಧಾನದ ವ್ಯಾಪ್ತಿಯಲ್ಲೇ ನಿರ್ಧಾರವಾಗಲಿದ್ದು, ಯಾರಿಗೂ ಲಾಭ ನಷ್ಟ ಎನ್ನುವ ಮಾತಿಲ್ಲದೆ, ಸಂವಿಧಾನದ ಯಾವೆಲ್ಲಾ ಅಂಶಗಳನ್ನು ಪರಿಗಣಿಸಲಾಗಿದೆ ಎಂಬುದನ್ನು ತನ್ನ ತೀರ್ಪಿನಲ್ಲಿ ಹೈಕೋರ್ಟ್​ ಸ್ಪಷ್ಟವಾಗಿ ಹೇಳಲಿದೆ.

Related Posts

Don't Miss it !