ಬೆಳಗ್ಗೆ 11 ಗಂಟೆಗೆ ಸಚಿವರ ಸುದ್ದಿಗೋಷ್ಠಿ.. ರಾಜೀನಾಮೆ ಘೋಷಣೆ ಬಗ್ಗೆ ಟೆನ್ಷನ್​..!

ರಾಜ್ಯ ಸಚಿವ ಸಂಪುಟ ವಿಸ್ತರಣೆ ಆದ ಬಳಿಕವೂ ಸರ್ಕಾರಕ್ಕೆ ಸಂಕಷ್ಟಗಳ ಸರಮಾಲೆ ತಪ್ಪಲಿ6ಲ್ಲ. ನಾನು ಕೇಳಿದ ಖಾತೆ ಕೊಡಲಿಲ್ಲ ಎನ್ನುವ ಕಾರಣಕ್ಕೆ ಸರ್ಕಾರದ ವಿರುದ್ಧ ಗರಂ ಆಗಿದ್ದ ಸಚಿವರಿಬ್ಬರಲ್ಲಿ ಓರ್ವ ಸಚಿವ ಇಂದು ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಮಾತನಾಡಿದ್ದ ಸಚಿವ ಆನಂದ್​ ಸಿಂಗ್​, ನಾನು ಹಠವಾದಿ, ಅಂದುಕೊಂಡಿದ್ದನ್ನು ಮಾಡೋ ತನಕ ಬಿಡುವುದಿಲ್ಲ. ಪ್ರಮುಖ ಖಾತೆ ನನಗೆ ಕೊಡದೆ ಇರಲು ಕಾರಣವೇನು..? ಎಂಬುದನ್ನು ಹೇಳಬೇಕು. ನಾನೇನು ಭ್ರಷ್ಟಾಚಾರ ಮಾಡಿದ್ದೀನಾ..? ನಾನೇನು ಕಳಂಕಿತನೋ..? ಅಸಮರ್ಥನೋ..? ಎಂದು ಪ್ರಶ್ನೆ ಮಾಡಿದ್ದರು. ಆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಪ್ರಮುಖ ಖಾತೆ ಕೊಡಬೇಕು ಎನ್ನುವ ಮನವಿ ಮಾಡಿದ್ದರು. ಖಾತೆ ಬದಲಾಗುವ ಆಶಾಭಾವನೆಯಲ್ಲಿ ಇಲ್ಲೀವರೆಗೂ ಪರಿಸರ ಮತ್ತು ಪ್ರವಾಸೋದ್ಯಮ ಸಚಿವನಾಗಿ ಅಧಿಕಾರ ವಹಿಸಿಕೊಳ್ಳದೆ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು. ಇದೀಗ ಮುಖ್ಯಮಂತ್ರಿಗಳಿಗೆ ನೀಡಿದ್ದ ಗಡುವು ಮುಕ್ತಾಯವಾಗಿದ್ದು, ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಲಾಗಿದೆ.

ರಾಜೀನಾಮೆಗೂ ಮುನ್ನ ಸರ್ಕಾರಕ್ಕೆ ಬೆದರಿಕೆ ಸಂದೇಶ..!

ವಿಜಯನಗರ ಜಿಲ್ಲೆ ಹೊಸಪೇಟೆ ಶಾಸಕನಾಗಿರುವ ಸಚಿವ ಆನಂದ್​ ಸಿಂಗ್​, ಕಳೆದ 14 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದ ಶಾಸಕರ ಕಾರ್ಯಾಲಯ ಬಂದ್​ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೇಸರಿ ಬಣ್ಣದಲ್ಲಿ ಬರೆಸಿದ್ದ ಶಾಸಕರ ಕಾರ್ಯಾಲಯ ಎನ್ನುವ ನಾಮಫಲಕವನ್ನು ಕ್ರೇನ್​ ಮೂಲಕ ತೆರವು ಮಾಡಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ವೇಳೆ ಒಂದೆರಡು ದಿನ ಕಾಲಾವಕಾಶ ನೀಡುವಂತೆ ಕೇಳಿದ್ದರು ಎನ್ನಲಾಗಿದೆ. ಆದರೆ ಇದೀಗ 2 ದಿನಗಳ ಕಳೆದಿರುವ ಹಿನ್ನೆಲೆಯಲ್ಲಿ ಸಚಿವ ಆನಂದ್​ ಸಿಂಗ್​ ರಾಜೀನಾಮೆ ಸಂದೇಶ ರವಾನಿಸಿದ್ದಾರೆ. ಶಾಸಕರ ಕಾರ್ಯಾಲಯ ಬೋರ್ಡ್​ ತೆರವು ಮಾಡಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೋ ಅಥವಾ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಊಹಾಪೋಹಗಳು ಶುರುವಾಗಿವೆ. ಆದರೆ ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ಕರೆದು ಎಲ್ಲಾ ವಿಚಾರವನ್ನು ವಿವರಿಸುವುದಾಗಿ ಆನಂದ್​ ಸಿಂಗ್​ ಆಪ್ತ ವಲಯ ಮಾಹಿತಿ ನೀಡಿದೆ.

ಆನಂದ್​ ಸಿಂಗ್​, ಸಚಿವ

ಆನಂದ್​ ಸಿಂಗ್​ ರಾಜೀನಾಮೆ ಸರ್ಕಾರಕ್ಕೆ ಪೀಕಲಾಟ..!

ಸಚಿವ ಆನಂದ್​ ಸಿಂಗ್​ ಖಾತೆ ಬಗ್ಗೆ ಅಸಮಾಧಾನಗೊಂಡು ರಾಜೀನಾಮೆ ನೀಡುವ ಸುಳಿವು ಕೊಟ್ಟಿದ್ದಾರೆ. ಆನಂದ್​ ಸಿಂಗ್​ ರಾಜೀನಾಮೆಯಿಂದ ಸರ್ಕಾರಕ್ಕೆ ಯಾವುದೇ ಸಮಸ್ಯೆ ಆಗಲಾರದು. ಆದರೂ ರಾಜೀನಾಮೆ ನೀಡುವುದರಿಂದ ಸರ್ಕಾರಕ್ಕೆ ಮುಜುಗರ ಆಗುವುದು ಶತಸಿದ್ಧ. ಇನ್ನೂ ವಿರೋಧಿ ಪಾಳಯ ಕೂಡ ರಾಜೀನಾಮೆ ಬೆದರಿಕೆ ಅಥವಾ ರಾಜೀನಾಮೆ ನೀಡಿ ಸರ್ಕಾರವನ್ನು ಸಂಕಷ್ಟ ಸಿಲುಕಿಸುವ ಯತ್ನ ಮಾಡಬಹುದು. ಇದೇ ಕಾರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ರಾತ್ರಿ 10 ಗಂಟೆಗೆ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆದರೆ ಮೊಬೈಲ್​ ಸ್ವಿಚ್​ ಆಫ್​ ಮಾಡಿಕೊಂಡಿರುವ ಆನಂದ್​ ಸಿಂಗ್​ ಸಂಪರ್ಕಿಸಲು ಸಿಎಂ ಹರಸಾಹಸ ಮಾಡಿದ್ದಾರೆ. ಸುದ್ದಿಗೋಷ್ಟಿ ನಡೆಸದೆ ಬೆಂಗಳೂರಿಗೆ ಬಂದು ಭೇಟಿ ಮಾಡುವಂತೆ ಸಂದೇಶ ಕೊಡಲಾಗಿದೆ ಎನ್ನಲಾಗಿದೆ. ಆದರೆ ಆಪ್ತರ ಮೂಲಕ ಸರ್ಕಾರ ಬೆದರಿಸುವ ಕೆಲಸ ಮಾಡಿರುವ ಆನಂದ್​ ಸಿಂಗ್​ ಖಾತೆ ಬದಲಾಗುತ್ತಾ..? ಅಥವಾ ಆನಂದ್​ ಸಿಂಗ್​ ಅವರನ್ನು ಸಮಾಧಾನ ಮಾಡುವಲ್ಲಿ ಸಿಎಂ ಯಶಸ್ಸು ಕಾಣ್ತಾರಾ ಎನ್ನುವ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.

ಬೆಂಬಲಿಗರ ಮೂಲಕ ಸಚಿವರ ಮನದಾಳದ ಮಾತು..!

ವಿಜಯನಗರ ಜಿಲ್ಲೆ ಹೊಸಪೇಟೆ ಕ್ಷೇತ್ರದ ಶಾಸಕನಾಗಿರುವ ಆನಂದ್​ ಸಿಂಗ್​ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಇಲ್ಲೀವರೆಗೂ ಮಾಧ್ಯಮಗಳ ಎದುರು ಮುಖಾಮುಖಿಯಾಗಿ ಮಾತನಾಡಿಲ್ಲ. ಆದರೆ ಶಾಸಕರ ಕಾರ್ಯಾಲಯದ ಬೋರ್ಡ್​ ತೆರವು ಮಾಡಿಸಿದ ಬಳಿಕ ರಾಜೀನಾಮೆ ವಿಚಾರವಾಗಿ ಸಾಕಷ್ಟು ರೆಕ್ಕೆಪುಕ್ಕ ಹುಟ್ಟಿಕೊಂಡಿವೆ. ಈ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕುಟುಂಬ ಸಮೇತ ಭೇಟಿ ಮಾಡಿದ್ದಾಗಲೇ ರಾಜೀನಾಮೆ ಪತ್ರ ಕೊಟ್ಟಿದ್ದಾರೆ ಎನ್ನಲಾಗಿದೆ. ಈ ನಡುವೆ ಆನಂದ್​ ಸಿಂಗ್​ ಅವರಿಗೆ ಸೂಕ್ತ ಖಾತೆ ನೀಡದೆ ಇದ್ದರೆ ಈ ಸರ್ಕಾರದ ಪತನ ವಿಜಯನಗರದಿಂದಲೇ ಶುರುವಾಗಲಿದೆ ಎಂದು ಪೋಸ್ಟ್​ ಹಾಕಿದ್ದಾರೆ. ವಲಸಿಗ ಸಚಿವರ ಮೂಲಕ ಸಂಧಾನದ ಪ್ರಯತ್ನ ನಡೆದಿದೆ. ಇಂದು ಬೆಳಗ್ಗೆ 11 ಗಂಟೆಗೆ ಆನಂದ್​ ಸಿಂಗ್​ ಸುದ್ದಿಗೋಷ್ಠಿ ನಡೆಯಲು ಬಿಟ್ಟರೆ ಸರ್ಕಾರಕ್ಕೆ ಮುಜುಗರ ಕಟ್ಟಿಟ್ಟ ಬುತ್ತಿ. ಸುದ್ದಿಗೋಷ್ಠಿಯೇ ನಡೆಯದಂತೆ ಮಾಡಲು ರಾಜ್ಯ ಸರ್ಕಾರ ಮಾಡುತ್ತಿರುವ ಯತ್ನ ಫಲ ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕು.

Related Posts

Don't Miss it !