ಭಾನುವಾರದ ಬಾಡೂಟ ಸ್ಮಶಾನದಲ್ಲಿ..! ಮೌಢ್ಯದ ವಿರುದ್ಧ ಜನಜಾಗೃತಿ, ಕನ್ನಡ ನಿರ್ಲಕ್ಷ್ಯ ವಿರೋಧಿಸಿ ಜಾಥಾ..!

ಕನ್ನಡಿಗರ ಮೇಲೆ ಎಂಇಎಸ್​ ಪುಂಡರು ದಬ್ಬಾಳಿಕೆ ಮಾಡ್ತಿದ್ದಾರೆ ಎನ್ನುವ ಕಾರಣಕ್ಕೆ ಡಿಸೆಂಬರ್​ 31ಕ್ಕೆ ಕರ್ನಾಟಕ ಬಂದ್​ ಕರೆ ಕೊಡಲಾಗಿದೆ. ಬಂದ್​ ಆಗುತ್ತೋ ಇಲ್ವೋ ಎನ್ನುವುದು ಇನ್ನೂ ಕೂಡ ಅನಿಶ್ಚಿತ. ಆದರೆ ನೆಲಮಂಗಲದಲ್ಲಿ ಯುವಶಕ್ತಿ ಬಳಗ ‘ಕಡ್ಡಾಯವಾಗಿ ಕನ್ನಡ ಬಳಸಿ, ಕನ್ನಡದಲ್ಲೇ ವ್ಯವಹರಿಸಿ’ ಎನ್ನುವ ಘೋಷವಾಕ್ಯದ ಜೊತೆಗೆ ಜನಜಾಗೃತಿ ಜಾಥಾ ಹಮ್ಮಿಕೊಂಡಿದ್ದಾರೆ. ಇಂದು ಬೆಳಗ್ಗೆ 8.30ಕ್ಕೆ ನೆಲಮಂಗಲದ ಲೋಹಿತ್​ ನಗರ (ಕಾಲೇಜು ಗ್ರೌಂಡ್​) ಮುಂಭಾಗದಿಂದ ಜಾಥಾ ಹೊರಡಲಿದ್ದು, ನೆಲಮಂಗಲ ಪಟ್ಟಣದ ಅಂಗಡಿಗಳಿಗೆ ಕರ ಪತ್ರ ಹಂಚಿಕೆ ಮಾಡಲಾಗುತ್ತದೆ. ಜೊತೆಗೆ ಯುವಶಕ್ತಿ ಬಳಗದ ಸ್ವಯಂಸೇವಕ ಯುವಕರು ನೆಲಮಂಗಲ ತಾಲೂಕಿನ ಎಲ್ಲಾ ಗ್ರಾಮಗಳಿಗೂ ತೆರಳಿ ಕರ ಪತ್ರ ಹಂಚಿಕೆ ಮಾಡುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆ ಬಳಿಕ ಸ್ಮಶಾನದಲ್ಲಿ ಭಾನುವಾರದ ಬಾಡೂಟ ವ್ಯವಸ್ಥೆ ಮಾಡಲಾಗಿದೆ.

‘ಭಾನುವಾರದ ಬಾಡೂಟ’ ಕಾರ್ಯಕ್ರಮದ ಉದ್ದೇಶ..!?

ನೆಲಮಂಗಲ ತಾಲೂಕು ಸೇರಿದಂತೆ ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ಸ್ಥಳೀಯ ಯುವಕ, ಯುವತಿಯರಿಗೆ ಕೆಲಸ ನೀಡದೆ, ಅನ್ಯ ರಾಜ್ಯದ ಯುವಕ, ಯುವತಿಯರನ್ನು ಕರೆತಂದು ಕೆಲಸ ಮಾಡಿಸಲಾಗ್ತಿದೆ. ಇನ್ನೂ ಬ್ಯಾಂಕಿಂಗ್​ ಸೇರಿದಂತೆ ಬಹುತೇಕ ಎಲ್ಲಾ ಪರೀಕ್ಷೆಗಳಲ್ಲೂ ಕನ್ನಡ ಭಾಷೆಯನ್ನು ನಿರ್ಲಕ್ಷ್ಯ ಮಾಡಲಾಗ್ತಿದೆ. ಉತ್ತರ ಭಾರತದಿಂದ ಬಂದಿರುವ ಬ್ಯಾಂಕ್​ ಉದ್ಯೋಗಿಗಳು ಸೇರಿದಂತೆ ಕಾರ್ಖಾನೆಗಳ ನೌಕರರು ಕನ್ನಡ ಕಲಿಯದೆ, ಹಿಂದಿ ಮಾತನಾಡುತ್ತ, ನಮ್ಮ ಮೇಲೆಯೇ ಹಿಂದಿ ಭಾಷೆಯನ್ನು ಹೇರಿಕೆ ಮಾಡುವ ಕ್ರೌರ್ಯ ಮೆರೆಯುತ್ತಿದ್ದಾರೆ. ಹೀಗಾಗಿ ವ್ಯಾಪಾರಸ್ಥರು ಸೇರಿದಂತೆ ಬಹುತೇಕರಿಗೆ ಕನ್ನಡದಲ್ಲಿ ಮಾತನಾಡಿ, ಕನ್ನಡದಲ್ಲೇ ವ್ಯವಹರಿಸಿ ಎಂದು ಜಾಗೃತಿ ಮೂಡಿಸುವ ಜೊತೆಗೆ ಸ್ಥಳೀಯರಿಗೆ ಕೆಲಸ ಸಿಗುವಂತೆ ಒತ್ತಡ ಹೇರುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಯುವಶಕ್ತಿ ತಂಡದ ಸದಸ್ಯರು. ಜೊತೆಗೆ ಭಾನುವಾರದ ಬಾಡೂಟ ಹಮ್ಮಿಕೊಂಡಿರುವುದಕ್ಕೂ ವಿಶೇಷ ಮತ್ತೊಂದು ಕಾರಣವಿದೆ.

ಸ್ಮಶಾನದಲ್ಲಿ ಸಿದ್ಧತೆ

ಧಾರ್ಮಿಕ ಕಟ್ಟಳೆಗಳು ಮೌಢ್ಯತೆ ಪರಮಾವಧಿಗೆ ಸಮಾಜ..!

ಇತ್ತೀಚಿನ ದಿನಗಳಲ್ಲಿ ಎಲ್ಲಾ ರಂಗದಲ್ಲೂ ಮತಿಯ ಬೇಧ ಹೆಚ್ಚಾಗುತ್ತಿದೆ. ಹಿಂದೂಗಳು, ಮುಸಲ್ಮಾನರು, ಕ್ರೈಸ್ತರು ಎನ್ನುವ ಭಿನ್ನತೆ ತಲೆದೋರಿದೆ. ಜೊತೆಗೆ ಆಲೆಗಳಲ್ಲಿ ಅಪೌಷ್ಠಿಕತೆ ನಿವಾರಣೆಗಾಗಿ ಸರ್ಕಾರ ನೀಡುವ ಮೊಟ್ಟೆಯನ್ನು ವಿರೋಧಿಸಿ ಸ್ವತಃ ಸಮಾಜಕ್ಕೆ ಬುದ್ಧಿ ಹೇಳಬೇಕಿದ್ದ ಸ್ವಾಮೀಜಿಗಳೇ ವಿರೋಧಿಸುತ್ತಿದ್ದಾರೆ. ‘ಆಹಾರದ ಆಯ್ಕೆ ನಮ್ಮದು’ ಆಹಾರ ಕ್ರಮದ ಮೇಲೆ ಧರ್ಮದ ಚಾದರ ಹೊದಿಸಬೇಡಿ ಎಂದು ಸಂದೇಶ ರವಾನೆ ಮಾಡುವ ಉದ್ದೇಶದಿಂದ ಸ್ಮಶಾನದಲ್ಲಿ ಬಾಡೂಟ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಊಟದ ಜೊತೆಗೆ ನಮ್ಮ ಸಮಾಜ ಎತ್ತ ಕಡೆಗೆ ಆಗುತ್ತಿದೆ. ಯುವ ಜನಾಂಗ ಸುಳ್ಳು ಸುದ್ದಿಗಳಿಗೆ ಹೇಗೆ ಮಾರು ಹೋಗುತ್ತಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಹೇಗೆ ಸುದ್ದಿಯನ್ನು ತಿರುಚಿ ಜನರನ್ನು ನಂಬಿಸುವ ಕೆಲಸ ಆಗುತ್ತಿದೆ. ನಮ್ಮ ಸಂವಿಧಾನ ಕೊಟ್ಟಿರುವ ಮೌಲ್ಯಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ದಲಿತ ಕವಿ ಡಾ. ವಡ್ಡಗೆರೆ ನಾಗರಾಜಯ್ಯ ಹಾಗೂ ಡಾ. ಓ ನಾಗರಾಜು ಮಾತಾಡಲಿದ್ದಾರೆ.

Read This;

ಕರ್ನಾಟಕ ಬಂದ್​ ಮಾಡಿದ್ರೆ ಎಂಇಎಸ್​ಗೆ ನಷ್ಟವಿಲ್ಲ..!

ಕರ್ನಾಟಕ ಬಂದ್​ ಹೆಸರಿನಲ್ಲಿ ಅಂಗಡಿ ಮುಂಗಟ್ಟು ಮುಚ್ಚಿಸುವುದು, ಕಂಡ ಕಂಡ ಬಸ್​ಗಳಿಗೆ ಕಲ್ಲು ಹೊಡೆಯುವುದರಿಂದ ಎಂಇಎಸ್​ ಪುಂಡರಿಗೆ ಏನೂ ಪಾಠ ಕಲಿಸಲು ಸಾಧ್ಯವಿಲ್ಲ. ಆದರೆ ನಾವು ಈ ರೀತಿಯ ಜಾಥಾಗಳ ಮೂಲಕ ಜನರನ್ನು ಕನ್ನಡವನ್ನೇ ಮಾತನಾಡಿ ವ್ಯವಹಾರ ಮಾಡುವಂತೆ ಹುರಿದುಂಬಿಸುವುದು. ಹಾಗೂ ಕನ್ನಡದ ಯುವಕ, ಯುವತಿಯರಿಗೆ ಬ್ಯಾಂಕ್​ಗಳೂ ಸೇರಿದಂತೆ ಎಲ್ಲಾ ಸ್ಥಳೀಯ ಕಾರ್ಖಾನೆಗಳಲ್ಲಿ ಕೆಲಸ ಸಿಗುವಂತೆ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದೊಂದು ರೀತಿಯ ಉತ್ತರ ಮಾರ್ಗ ಎನ್ನಬಹುದು. ಮುಂದಿನ ದಿನಗಳಲ್ಲಿ ಯುವಶಕ್ತಿ ಬಳಗ ಮತ್ತಷ್ಟು ಜನಜಾಗೃತಿ ಮಾಡುವಂತಾಗಿಲಿ ಎನ್ನುವುದು The Public Spot ಆಶಯ.

Related Posts

Don't Miss it !