ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ.. ಹವಾಮಾನ ಇಲಾಖೆ ಎಚ್ಚರಿಕೆ..

ರಾಜ್ಯದಲ್ಲಿ ವರುಣ ಅಬ್ಬರಿಸುತ್ತಲೇ ಇದ್ದಾನೆ. ಬುಧವಾರ ಸಂಜೆ ಸುರಿದ ಭಾರೀ ಮಳೆಗೆ ಮೈಸೂರು ಮಂಡ್ಯ ಭಾಗದ ಜನರು ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ. ಮೈಸೂರು ದಸರಾದ ದೀಪಲಂಕಾರ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಜನರಿಗೆ ಮಳೆ ಚಳಿಜ್ವರ ತರಿಸಿದೆ. ವಾಹನಗಳು ರಸ್ತೆಯಲ್ಲೇ ತೇಲಿ ಹೋಗುವ ದೃಶ್ಯ ಸಾಮಾನ್ಯವಾಗಿತ್ತು. ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಬೆಟ್ಟದ ಮೇಲಿನಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಭೂಕುಸಿತ ಉಂಟಾಗಿದೆ. ಪ್ರವಾಸಿಗರು ಹಾಗೂ ಭಕ್ತರು ಆ ರಸ್ತೆಯಲ್ಲಿ ಸಂಚರಿಸದಂತೆ ಮೈಸೂರು ಪೊಲೀಸ್ ಕಮಿಷನರ್‌ ಡಾ.ಚಂದ್ರಗುಪ್ತರಿಂದ ಸೂಚಿಸಿದ್ದಾರೆ. ಈಗಾಗಲೇ ನಂದಿ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನ ಪೊಲೀಸರು ಬಂದ್ ಮಾಡಿದ್ದಾರೆ. ಮಾಜಿ ಸಚಿವ ಹಾಗೂ ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ.ಟಿ ದೇವೇಗೌಡ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಕೆರೆಗಳು ತುಂಬಿ ಭರ್ತಿ, ಮನೆಗಳಿಗೂ ನೀರು..!

ಮಂಡ್ಯದಲ್ಲಿ ಸುರಿದ ಧಾರಾಕಾರ ಮಳೆಗೆ ಬೀಡಿ ಕಾಲೋನಿಯ 400ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ರಾತ್ರಿ ಪೂರ್ತಿ ಜನತೆ ನಿದ್ರೆ ಇಲ್ಲದೇ ನೀರು ಹೊರಕ್ಕೆ ಹಾಕುವ ಕೆಲಸ ಮಾಡಿದ್ದಾರೆ. ಮನೆಯೊಳಕ್ಕೆ ನೀರು ನುಗ್ಗಿದ್ದರಿಂದ ಮಕ್ಕಳು ರಾತ್ರಿಯನ್ನು ರಸ್ತೆಯಲ್ಲೇ ಕಳೆಯುವಂತಾಗಿತ್ತು. ಸೂಕ್ತ ರೀತಿಯಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಗೆ ನುಗ್ಗಿದೆ ಎಂದು ಸ್ಥಳೀಯರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ರು. ಇನ್ನೂ ಜಿಲ್ಲೆಯ ಶ್ರೀರಂಗಪಟ್ಟಣ ಭಾಗದಲ್ಲಿ ಹಳ್ಳ-ಕೊಳ್ಳಗಳು ಉಕ್ಕಿ ಹರಿದ ಪರಿಣಾಮ ಚಂದಗಿರಿಕೊಪ್ಪಲು ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಾಶವಾಗಿದೆ. ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಭಾಗದ ಬಹುತೇಕ ಕೆರಗಳು ತುಂಬಿ ಹರಿಯುತ್ತಿರುವುದು ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಇದೀಗ ಮತ್ತೆ ಮಳೆ ಸುರಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಅಧಿಕಾರಿಗಳು ನೀಡಿದ್ದು, ರಾಜ್ಯದ ಜನತೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.

Read this;

4 ದಿನಗಳು ಧೋ ಎಂದು ಸುರಿಯಲಿದೆ ಮಳೆ..!

ಚಿಕ್ಕಮಗಳೂರು, ಹಾಸನ ಭಾಗದಲ್ಲೂ ಭಾರೀ ಮಳೆಯಾಗುತ್ತಿದ್ದು, ಬಂಗಾಳಕೊಲ್ಲಿಯಲ್ಲಿ ಹಿಂಗಾರು ಮಾರುತಗಳ ಮೇಲ್ಮೈ ಸುಳಿಗಾಳಿ ಪರಿಣಾಮ ಮಳೆ ಹೆಚ್ಚಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಲ್ಲಿ ಭಾರೀ ಮಳೆ ಆಗುವ ಸಾಧ್ಯತೆಯಿದೆ. ಇನ್ನು 4 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಸುರಿಯಲಿದೆ. ಅಕ್ಟೋಬರ್​​ 22ರಿಂದ 24ರವರೆಗೆ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭಾರೀ ಮಳೆ ಸಾಧ್ಯತೆ ಇದೆ ಎನ್ನಲಾಗಿದೆ. ಮಳೆಯ ಜೊತೆಗೆ ಸಿಡಿಲು ಗುಡುಗು ಅಬ್ಬರ ಜೋರಾಗಿರಲಿದೆ. ಜಿಲ್ಲಾಡಳಿತ ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.

Also read;

ಕಾಫಿ ಹಣ್ಣು ಉದುರುವ ಭೀತಿಯಲ್ಲಿ ರೈತರು..!

ಉತ್ತರ ಒಳನಾಡಿನಲ್ಲಿ ಅಕ್ಟೋಬರ್​ 22ರವರೆಗೆ ಒಣಹವೆ ಮುಂದುವರಿಯಲಿದೆ. ಅಕ್ಟೋಬರ್​ 23, 24ರಿಂದ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಯಲ್ಲಿ ಜೋರು ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ರಾಜ್ಯದ ಬಹುತೇಕ ಕಡೆ ಭಾರೀ ಮಳೆ ಸುರಿಯುತ್ತಿದ್ದು, ಇನ್ನುಷ್ಟು ಹೆಚ್ಚಾಗಲಿದೆ. ಕೋಲಾರದಲ್ಲಿ ಈಗಾಗಲೇ ಭಾರೀ ಮಳೆಯಿಂದ ರಾಗಿ ಹೊಲಗಳಲ್ಲಿ ನೀರು ನಿಂತಿದ್ದು, ಬೆಳೆ ನಾಶ ಆಗುವ ಭೀತಿ ಹೆಚ್ಚಾಗಿದೆ. ಚಿಕ್ಕಮಗಳೂರಿನಲ್ಲಿ ಭಾರಿ ಮಳೆಗೆ ಮಧುವನ ಲೇಔಟ್​ನಲ್ಲಿ ಮುಕ್ತ ವಿಶ್ವವಿದ್ಯಾನಿಲಯದ ಮುಂಭಾಗದ ಸೇತುವೆ ಕೊಚ್ಚಿ ಹೋಗಿದೆ. ಪರೀಕ್ಷೆ ಬರೆಯಲು ಬಂದಿದ್ದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ರಿಂದ ಅಗ್ನಿಶಾಮಕ ಸಿಬ್ಬಂದಿಯಿಂದ ವಿದ್ಯಾರ್ಥಿಗಳ ರಕ್ಷಣೆ ಮಾಡಿದ್ದಾರೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟ್, ಕೊಟ್ಟಿಗೆಹಾರ, ಬಣಕಲ್, ಬಾಳೂರಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಶೀತ ಹೆಚ್ಚಾಗಿ ಕಾಫಿ ಉದುರುತ್ತಿರುವುದು ರೈತರ ಕಂಗಳು ಒದ್ದೆಯಾಗುವಂತೆ ಮಾಡಿದೆ.

Related Posts

Don't Miss it !