Bangalore Karaga: ಹಿಂದೂಗಳಿಗೆ ಸಡ್ಡು ಹೊಡೆದ ದ್ರೌಪದಮ್ಮ ಕರಗ..! ಕೋಲಾರದಲ್ಲಿ ಧರ್ಮ ಗಲಭೆ..!

ರಾಜ್ಯದಲ್ಲಿ ಹಿಂದೂ ಮುಸಲ್ಮಾನ ಸಮುದಾಯಗಳ ನಡುವೆ ಸಾಮರಸ್ಯಕ್ಕೆ ಹುಳಿ ಹಿಂಡುವ ಕೆಲಸ ಆಗುತ್ತಿದೆ. ಇತ್ತೀಚಿಗೆ ನಡೆಯುತ್ತಿರುವ ಪ್ರಕರಣಗಳನ್ನು ಗಮನಿಸಿದಾಗ ಈ ವಿಚಾರ ಎಲ್ಲರಿಗೂ ತಿಳಿಯುವ ಸಂಗತಿ. ಇದೀಗ ಮುಸಲ್ಮಾನ ಸಮುದಾಯದ ಚಾಲಕರ ಓಡಿಸುವ ಕ್ಯಾಬ್​​ ಹತ್ತಬಾರದು ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಯಾಗಿದೆ. ಹಿಜಾಬ್​ಗೆ ಪ್ರತಿಯಾಗಿ ಕೇಸರಿ ಕಲಹ, ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಕ್ಕೆ ಅಡ್ಡಿ ಆಯ್ತು. ಆ ಬಳಿಕ ಹಲಾಲ್​ಗೆ ಎದುರಾಗಿ ಜಟ್ಕಾ ಕಟ್​​ ಮಾಂಸ, ಆಝಾನ್​​ ಕೂಗುವುದಕ್ಕೆ ಎದುರಾಗಿ ಭಜನೆ ಬಂತು. ಮುಸ್ಲಿಮರು ಮಾವು ಖರೀದಿ ಮಾಡಬಾರದು​ ಎನ್ನುವ ಆಗ್ರಹ ಕೇಳಿ ಬಂದಿತ್ತು. ಮುಸ್ಲಿಮರು ಕೆತ್ತಿದ ದೇವರ ಮೂರ್ತಿ ನಿಷೇಧ ಮಾಡಬೇಕು ಎನ್ನುವ ಮಾತುಗಳು ವಿವಾದ ಸ್ವರೂಪ ಪಡೆದಿದ್ದವು. ಆ ಬಳಿಕ ಬೆಂಗಳೂರಿನಲ್ಲಿ ನಡೆಯುವ ಐತಿಹಾಸಿಕ ಕರಗಕ್ಕೂ ಧರ್ಮ ಸಂಘರ್ಷ ಬೆಸೆದುಕೊಂಡಿದೆ. ಸಂಪ್ರದಾಯದಂತೆ ದ್ರೌಪದಮ್ಮನ ಕರಗ ಕಾಟನ್ ಪೇಟೆಯ ಮುಸ್ತಾನ್ ಸಾಬ್ ದರ್ಗಾಗೆ ಹೋಗುವುದು ವಾಡಿಕೆ. ಆದರೆ ಈ ಸಂಪ್ರದಾಯ ಮುಂದುವರಿಯಬಾರದು ಎನ್ನುವ ಆಗ್ರಹ ಕೇಳಿಬಂದಿದೆ. ಆದರೆ ಕರಗ ಸಮಿತಿ ಮಾತ್ರ ಯಾವುದೇ ಕಾರಣಕ್ಕೂ ಸಂಪ್ರದಾಯ ನಿಲ್ಲುವುದಿಲ್ಲ ಎನ್ನುವ ಸೂಚನೆ ನೀಡಿದ್ದಾರೆ.

ಧರ್ಮದ ಹೆಸರಲ್ಲಿ ಕಿತಾಪತಿ ಮಾಡಿದ್ರೆ ಖಾಕಿ ಶಾಕ್​..!

ಬೆಂಗಳೂರಿನ ಐತಿಹಾಸಿಕ ಕರಗ ಶುಕ್ರವಾರ ಮಧ್ಯರಾತ್ರಿ ರಥೋತ್ಸವದ ಮೂಲಕ ವಿದ್ಯುಕ್ತವಾಗಿ ಚಾಲನೆಯಾಗಿದೆ. ಇಂದಿನಿಂದ ಆರಂಭವಾಗುವ ಕರಗ ಏಪ್ರಿಲ್​ 18ರಂದು ನಡೆಯುವ ಹೂವಿನ ಕರಗದ ಮೂಲಕ ತೆರೆ ಬೀಳಲಿದೆ. 11 ದಿನಗಳ ಆಚರಣೆ ನಡುವೆ ಏಪ್ರಿಲ್​ 13 ರಂದು ಆರತಿ, ಏಪ್ರಿಲ್ 14 ರಂದು ಹಸಿ ಕರಗ ಹಾಗೂ 16 ರಂದು ಶಕ್ತ್ಯೋತ್ಸವ ಹಾಗೂ ಧರ್ಮರಾಯ ಸ್ವಾಮಿ ದೇವರ ಮಹಾರಥೋತ್ಸವ ನಡೆಯಲಿದೆ.‌ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ, ಶಾಸಕ ಉದಯ ಗರುಡಾಚಾರ್, ನಗರ ಜಿಲ್ಲಾಧಿಕಾರಿ ಮಂಜುನಾಥ್, ವಿಧಾನಪರಿಷತ್ ಸದಸ್ಯ ಪಿ.ಆರ್. ರಮೇಶ್, ಡಿಸಿಪಿ ಅನುಚೇತ್, ಮಸ್ತಾನ್ ಸಾಬ್ ದರ್ಗಾದ ಕಾರ್ಯದರ್ಶಿ ಮಹಮ್ಮದ್ ಹಿಜಾಯಿತುಲ್ಲಾ, ಕರಗ ಸಮಿತಿ ಸದಸ್ಯರು ಸಭೆ ಸೇರಿದ್ದರು. ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಕರಗ ಉತ್ಸವಕ್ಕೆ‌ ಪಾಲಿಕೆ ವತಿಯಿಂದ 50 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿದರು. ಕರಗ ಹಿನ್ನಲೆ ನಗರದಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಲ್ಲಾ ವ್ಯವಸ್ಥೆಗಳನ್ನ ಮಾಡಿಕೊಳ್ಳಲಾಗಿದೆ.‌ ಸಿಸಿಟಿವಿ, ವಾಹನ ನಿಲುಗಡೆ ವ್ಯವಸ್ಥೆ , ಬಂದೋಬಸ್ತ್​ ಮಾಡಲಾಗ್ತಿದೆ. ಐತಿಹಾಸಿಕ ಕರಗ ಆಚರಣೆ ಯಶಸ್ವಿಯಾಗಲು ಎಲ್ಲಾ ಕ್ರಮ‌ ಕೈಗೊಳ್ಳಲಾಗುತ್ತೆ ಎಂದಿದ್ದಾರೆ. ಕರಗ ಮೆರವಣಿಗೆ ಕಾಟನ್ ಪೇಟೆಯ ಮುಸ್ತಾನ್ ಸಾಬ್ ದರ್ಗಾಗೆ ಹೋಗಬಾರದು ಎಂಬ ಒತ್ತಾಯಕ್ಕೆ ಸ್ಪಷ್ಟನೆ ನೀಡಿರುವ ಸಮಿತಿ, ಸಾವಿರಾರು ವರ್ಷಗಳ ಇತಿಹಾಸ ಇರುವ ಕರಗ ಮಹೋತ್ಸವ ಮೊದಲಿನ ಹಾಗೆಯೇ ನಡೆಯುತ್ತದೆ.‌ 147 ವರ್ಷಗಳಿಂದ ಕರಗ ದರ್ಗಾಕ್ಕೆ ಹೊಗುತ್ತಿದೆ, ಈ ಬಾರಿಯೂ ಕರಗ ದರ್ಗಾ ಪ್ರವೇಶಿಸಲಿದೆ ಎಂದಿದ್ದಾರೆ.

ಕೋಲಾರದಲ್ಲಿ ಶೋಭಾ ಯಾತ್ರೆ ವೇಳೆ ಉದ್ವಿಗ್ನ..! ಲಾಠಿಚಾರ್ಜ್​..

ಕೋಲಾರದ ಮುಳಬಾಗಿಲುವಿನಲ್ಲಿ ಶ್ರೀರಾಮ ಶೋಭಾಯಾತ್ರೆ ನಡೆಯುವ ಸಮಯದಲ್ಲಿ ಕಲ್ಲು ತೂರಾಟ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಶೋಭಾಯಾತ್ರೆ ಮುಗಿಸಿ ವಾಪಸ್​ ಆವನಿ ಕಡೆಗೆ ಹೊರಟಿದ್ದವರ ಮೇಲೆ ಕಲ್ಲು ತೂರಾಟ ಆಗಿದೆ ಎನ್ಮಲಾಗಿದೆ. ಈ ವೇಳೆ ಬೈಕ್​ಗೆ ಬೆಂಕಿಯಿಟ್ಟು, ಕೆಲವು ಕಿಡಿಗೇಡಿಗಳು ಪೆಟ್ರೋಲ್​​ ಬಂಕ್​ಗೆ ನುಗ್ಗಿದ ಘಟನೆಯೂ ನಡೆದಿದೆ. ಕರೆಂಟ್ ಇಲ್ಲದ ಕಾರಣಕ್ಕೆ ಕತ್ತಲಿದ್ದ ಕಾರಣ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಕಲ್ಲು ತೂರಾಟ ನಡೆಸಿದಾಗ ಮತ್ತೊಂದು ಕಡೆಯಿಂದ ತೆಂಗಿನ ಚಿಪ್ಪು ಎಸೆದಿದ್ದಾರೆ. ಈ ವೇಳೆ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿಚಾರ್ಜ್​ ಮಾಡಿದ್ದಾರೆ. ಮುಳಬಾಗಿಲು ಜಹಾಂಗೀರ್ ಮೊಹಲ್ಲಾ ಬಳಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಕೋಲಾರ ಎಸ್​ಪಿ ಡಿ ದೇವರಾಜ್​, ಶೋಭಾಯಾತ್ರೆ ವೇಳೆ ವಿದ್ಯುತ್ ನಿಲುಗಡೆ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇನ್ನೂ ಕಾರುಗಳನ್ನು ಜಖಂ ಮಾಡಿದ ಬಗ್ಗೆಯೂ ತನಿಖೆ ಶುರುವಾಗುತ್ತಿದೆ.

ಧರ್ಮ ಧರ್ಮಗಳ ನಡುವೆ ಸಾಮರಸ್ಯ ಭವಿಷ್ಯಕ್ಕೆ ಅಗತ್ಯ..!

ಧರ್ಮ ಧರ್ಮಗಳ ನಡುವೆ ಸಾಮರಸ್ಯ ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಹಿಂದೂ ಮುಸಲ್ಮಾನರನ್ನು ಬೇರ್ಪಡಿಸಿ ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಈ ನಡುವೆ ಕೋಲಾರದಲ್ಲಿ ಶೋಭಾ ಯಾತ್ರೆ ವೇಳೆ ಕಲ್ಲು ತೂರಾಟ ನಡೆದಿರುವ ಸಾಮರಸ್ಯ ಹದಗೆಟ್ಟಿರುವ ಪ್ರತೀಕ ಎನ್ನಬಹುದು. ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಮುಂದೊಂದು ದಿನ ರಂಜಾನ್​ ಆಚರಣೆ ವೇಳೆಯಲ್ಲೋ, ಬೇರೆ ಯಾವುದೋ ಮೆರವಣಿಗೆ ವೇಳೆ ಮುಸಲ್ಮಾನರ ಯಾತ್ರೆ ಮೇಲೂ ಕಲ್ಲು ಬೀಳುವುದು ಶತಸಿದ್ಧ. ಈ ರೀತಿಯ ಘಟನೆಗಳು ಆಗಬಾರದು ಎನ್ನುವುದಾದರೆ ಎರಡೂ ಸಮುದಾಯಗಳ ನಡುವೆ ಸಾಮರಸ್ಯ ಏರ್ಪಡಬೇಕಿದೆ. ಇದೀಗ ಬೆಂಗಳೂರಿನ ಧರ್ಮರಾಯಸ್ವಾಮಿ ದೇಗುಲದಲ್ಲಿ ನಡೆಯುತ್ತಿರುವ ರೀತಿಯಲ್ಲಿ ಎರಡೂ ಸಮುದಾಯದ ಮುಖಂಡರು ಸಾಮರಸ್ಯದಿಂದ ಆಚರಣೆಗಳನ್ನು ಮಾಡಬೇಕು. ತಮ್ಮ ತಮ್ಮ ನಂಬಿಕೆಯನ್ನು ಆಚರಣೆ ಮಾಡುವುದಕ್ಕೆ ಯಾವುದೇ ಅಡ್ಡಿ ಆತಂಕ ಇರಬಾರದು. ಒಂದು ವೇಳೆ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ದೊಡ್ಡ ಅನಾಹುತ ರಾಜ್ಯದಲ್ಲಿ ನಡೆಯುವ ದಿನಗಳು ದೂರವಿಲ್ಲ ಎನ್ನುವುದನ್ನು ಎಲ್ಲರೂ ನೆನಪಿನಲ್ಲಿಡಬೇಕಿದೆ.

Related Posts

Don't Miss it !