ಲಿಂಗಾಯತರು – ಬ್ರಾಹ್ಮಣರ ನಡುವೆ ಸಿಎಂ ಸ್ಥಾನಕ್ಕೆ ಪೈಪೋಟಿ..!

ಮುಖ್ಯಮಂತ್ರಿ ಸ್ಥಾನ ಬದಲಾವಣೆ ಖಚಿತ ಆಗ್ತಿದ್ದ ಹಾಗೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಪೈಪೋಟಿ ಶುರುವಾಗಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಬಿ.ಎಸ್​ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವುದು ಬಹುತೇಕ ಖಚಿತವಾಗಿದೆ. ಅದೇ ಸಮುದಾಯಕ್ಕೆ ಸೇರಿದ ಪಂಚಮಸಾಲಿ ಸಮುದಾಯದ ನಾಯಕರಾದ ಬಸನಗೌಡ ಪಾಟೀಲ್​ ಯತ್ನಾಳ್​, ಮುರುಗೇಶ್​ ನಿರಾಣಿ, ಅರವಿಂದ್​ ಬೆಲ್ಲದ್​​ರನ್ನು ಸಿಎಂ ಮಾಡಿ ಎನ್ನುವ ಕೂಗು ಕೇಳಿಬರುತ್ತಿದೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹೆಸರೂ ಕೂಡ ಸಿಎಂ ರೇಸ್​​ನ ಚಾಲ್ತಿಯಲ್ಲಿದೆ.

ಸಿಎಂ ಸ್ಥಾನದ ಬಗ್ಗೆ ನಿರಾಣಿ ಹೇಳಿದ್ದೇನು..?

ಕಲಬುರಗಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಚಿವ ಮುರುಗೇಶ್ ನಿರಾಣಿ, ನಾನು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ, ವರಿಷ್ಠರು ನೀಡುವ ಜವಾಬ್ದಾರಿಯನ್ನ ನಿಭಾಯಿಸುವೆ. ಯಾರಿಗೆ ಯಾವಾಗ ಜವಾಬ್ದಾರಿ ಕೊಡಬೇಕು ಅನ್ನೂದು ಹೈಕಮಾಂಡ್​ಗೆ ಗೊತ್ತಿದೆ. ಎಲ್ಲರ ಜೊತೆ ಸಮಾಲೋಚನೆ ಮಾಡಿ ತೀರ್ಮಾನ ತೆಗೆದುಕೊಳ್ತಾರೆ. ಹೈಕಮಾಂಡ್ ಇರುವವರನ್ನೆ ಬೇಕಾದ್ರೆ ಮುಂದುವರಿಸಲಿ, ಬೇರೆಯವರನ್ನಾದ್ರು ಆಯ್ಕೆ ಮಾಡಲಿ. ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ದರಾಗಿರ್ತಿವಿ. ಸಿಎಂ ಮತ್ತು ರಾಷ್ಟೀಯ ನಾಯಕರ ಮಾತುಕತೆ ಏನಾಗುತ್ತೆ ಅನ್ನೋದರ ಮೇಲೆ ಅವಲಂಬಿತವಾಗಿರುತ್ತೆ ಎಂದು ತಿಳಿಸಿದ್ದಾರೆ. ಆದರೆ ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಹೆಸರನ್ನು ಹೇಳದೆ ಪರೋಕ್ಷವಾಗಿ ಇರುವವರನ್ನೇ ಬೇಕಾದ್ರೆ ಮುಂದುವರಿಸಲಿ ಎಂದಿದ್ದಾರೆ.

ಜೋಷಿ ಭೇಟಿ ಮಾಡಿದ ಬೊಮ್ಮಾಯಿ..!

ಲಿಂಗಾಯತ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ಎನ್ನುವ ಬೆನ್ನಲ್ಲೇ ಹೊಸ ಬೆಳವಣಿಗೆ ನಡೆದಿದೆ. ಹುಬ್ಬಳ್ಳಿಯ ಪ್ರಹ್ಲಾದ್ ಜೋಷಿ ನಿವಾಸಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಹತ್ವದ ಚರ್ಚೆ ನಡೆಸಿದ್ದಾರೆ. ದಿಢೀರ್ ಭೇಟಿ ಕುತೂಹಲ ಕೆರಳಿಸಿದೆ. ಹುಬ್ಬಳ್ಳಿಯ ಮಧುರಾ ಎಸ್ಟೇಟ್​ನಲ್ಲಿರುವ ಪ್ರಹ್ಲಾದ್ ಜೋಷಿ ನಿವಾಸದಲ್ಲಿ ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿ ಹೊರಬಂದ ಗೃಹ ಸಚಿವ ಬೊಮ್ಮಾಯಿ, ತುಂಬಾ ದಿನಗಳ ನಂತರ ಜೋಷಿಯವರನ್ನ ಭೇಟಿಯಾಗುತ್ತಿದ್ದೇನೆ. ಜೋಷಿಯವರು ಕರೆ ಮಾಡಿ, ಭೇಟಿಯಾಗುವಂತೆ ಸೂಚಿಸಿದ್ದರು. ಆದರೆ ಮಾತುಕತೆ ಬಗ್ಗೆ ಗೌಪ್ಯತೆ ಕಾಯ್ದುಕೊಂಡ ಬೊಮ್ಮಾಯಿ ಮಳೆ ಹಾನಿ ಬಗ್ಗೆ ಚರ್ಚಿಸಲು ಜೋಷಿಯವರನ್ನು ಭೇಟಿ ಮಾಡಿದ್ದೆ, ನಾಯಕತ್ವ ಬದಲಾವಣೆ ಚರ್ಚೆ ಜೋಷಿ ಮತ್ತು ನನ್ನ ನಡುವೆ ಅಪ್ರಸ್ತುತ ಎಂದಿದ್ದಾರೆ.

ಮುರುಗೇಶ್​ ನಿರಾಣಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಈ ನಡುವೆ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಕೂಡ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಬೊಮ್ಮಾಯಿ ಮೂಲಕ ಶಕ್ತಿ ಸಂದೇಶ ಕಳುಹಿಸಿದ್ದಾರೆ. ಬೊಮ್ಮಾಯಿ ಸಿಎಂ ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕನಾಗಿದ್ದು ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿಕೊಂಡು ಮಹತ್ವದ ಸಂದೇಶ ರವಾನೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಬಿ.ಎಸ್​ ಯಡಿಯೂರಪ್ಪ ಅವರಿಗೂ ಲಿಂಗಾಯತ ಸಮುದಾಯದ ನಾಯಕ ಮುಖ್ಯಮಂತ್ರಿ ಆಗುವುದು ಬೇಕಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ. ಇದೇ ಕಾರಣದಿಂದ ಮೊನ್ನೆ ಮಾತನಾಡಿರುವ ಸಿಎಂ ಬಿ.ಎಸ್​ ಯಡಿಯೂರಪ್ಪ, ನಾನು ಯಾವುದೇ ಸಮುದಾಯದ ನಾಯಕರನ್ನು ಸಿಎಂ ಮಾಡಿ ಎಂದು ಹೇಳುವುದಿಲ್ಲ ಎನ್ನುವ ಮೂಲಕ ಲಿಂಗಾಯತ ಸಮುದಾಯಕ್ಕೇ ಕೊಡಬೇಕು ಎನ್ನುವ ಆಗ್ರಹ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದರು.

Related Posts

Don't Miss it !