ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸುರೇಶ್​ಗೌಡ ರಾಜೀನಾಮೆ..! ಮುಂದಿನ ಹಾದಿ ಗೊಂದಲ..?

ತುಮಕೂರು ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ಮಾಜಿ ಶಾಸಕ ಬಿ.ಸುರೇಶ್ ಗೌಡ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜಿನಾಮೆ‌‌ ನೀಡಿದ ಬಗ್ಗೆ ಸ್ವತಃ ತಮ್ಮ ಫೇಸ್​ಬುಕ್ ಪೇಜ್​ನಲ್ಲಿ ಬರೆದುಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನು ಇಂದು ರಾಜೀನಾಮೆ ನೀಡಿದ್ದೇನೆ. ಜಿಲ್ಲೆಯ ಜನರ ಸಹಕಾರಕ್ಕೆ ಧನ್ಯವಾದ ಎಂದಿದ್ದಾರೆ. ಗ್ರಾಮಾಂತರ ಕ್ಷೇತ್ರದ ಜನರಿಗೆ ಹೆಚ್ಚಿನ ಸಮಯ ಕೊಡುವುದಕ್ಕೆ ಸಾಧ್ಯವಾಗ್ತಿಲ್ಲ. ಹೀಗಾಗಿ ಕ್ಷೇತ್ರದ ಜನರ ಜೊತೆಯಲ್ಲಿ ಇರಬೇಕು ಎಂದು ನಿರ್ಧರಿಸಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ‌‌ ನೀಡಿದ್ದೇನೆ ಎಂದಿದ್ದಾರೆ. ಸುರೇಶ್ ಗೌಡ ಕಳೆದ ಒಂದೂವರೆ ವರ್ಷದ ಹಿಂದೆ ಅಷ್ಟೇ ತುಮಕೂರು ಜಿಲ್ಲಾ ಬಿಜೆಪಿ ಸ್ಥಾನ ಅಲಂಕರಿಸಿದ್ದರು.

ಸುರೇಶ್​ ಗೌಡ ರಾಜೀನಾಮೆಗೆ ಕಾರಣಗಳು..!?

ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿರುವ ಮಾಜಿ ಶಾಸಕ ಸುರೇಶ್​ ಗೌಡ, ಕ್ಷೇತ್ರದ ಜನರಿಗೆ ಸಮಯ ಕೊಡಲು ಸಾಧ್ಯವಾಗ್ತಿಲ್ಲ ಎನ್ನುವ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆದರೆ ಶಿರಾ ವಿಧಾನಸಭಾ ಚುನಾವಣೆ ವೇಳೆ ಮದಲೂರು ಕೆರೆಗೆ ನೀರು ಬಿಡುಸುವ ಬಗ್ಗೆ ಸುರೇಶ್​ಗೌಡರು ಜನರಿಗೆ ಭರವಸೆ ನೀಡಿದ್ದರು. ಆದರೆ ಇದೀಗ ನಾನಾ ಕಾರಣಗಳಿಂದ ಮದಲೂರು ಕೆರೆಗೆ ನೀರು ಬಿಡುವುದು ಸಾಧ್ಯವಾಗಿಲ್ಲ. ನೀರನ್ನು ಬಿಡುಗಡೆ ಮಾಡಲು ಸಚಿವ ಮಾಧುಸ್ವಾಮಿ ಅವರೇ ಪ್ರಮುಖ ಅಡ್ಡಿ ಎಂಬುದು ಸುರೇಶ್​ಗೌಡ ಅವರ ಪ್ರಮುಖ ಆರೋಪ. ಜೊತೆಗೆ ಸರ್ಕಾರದಲ್ಲಿ ಮಾಧುಸ್ವಾಮಿ ಅವರ ಪ್ರಭಾವ ಹೆಚ್ಚಾಗಿದ್ದು, ತುಮಕೂರಿನಲ್ಲಿ ಸುರೇಶ್​ಗೌಡ ಅವರನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಕಾರಣಕ್ಕೆ ಪಕ್ಷ ಬಿಡಲು ಮುಂದಾಗಿದ್ದಾರೆ ಎನ್ನಲಾಗ್ತಿದೆ.

Read this also;

ಸುರೇಶ್​ಗೌಡರ ಮುಂದಿನ ಪಕ್ಷ ಕಾಂಗ್ರೆಸ್​/ಜೆಡಿಎಸ್​..?

ಸುರೇಶ್​ ಗೌಡ ಈಗಾಗಲೇ ಎರಡು ಬಾರಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾಗಿ ಕೆಲಸ ಮಾಡಿದ್ದಾರೆ. ಈ ಬಾರಿ ಜೆಡಿಎಸ್​ ಪಕ್ಷದ ಗೌರಿಶಂಕರ್​ ವಿರುದ್ಧ ಸೋಲುಂಡಿದ್ದರು. ಇದೀಗ ಜೆಡಿಎಸ್​ ಪಕ್ಷಕ್ಕೆ ಸೇರ್ಪಡೆ ಆದರೆ ಯಾವುದೇ ಕಾರಣಕ್ಕೂ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಟಿಕೆಟ್​ ಸಿಗಲಾರದು. ಆದರೆ ಬೇರೆ ಕ್ಷೇತ್ರ ಆಯ್ದುಕೊಳ್ಳುವುದಿದ್ದರೆ ಮಾತ್ರ ಜೆಡಿಎಸ್​ ಸೇರುವ ಅವಕಾಶ ಇರಲಿದೆ. ಆದರೆ ಗೌರಿಶಂಕರ್​ ಹಾಗೂ ಸುರೇಶ್​ಗೌಡ ಒಂದೇ ಪಕ್ಷದಲ್ಲಿ ಕೆಲಸ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಯೂ ಮೂಡಲಿದೆ. ಆದರೆ ಕಾಂಗ್ರೆಸ್​ ಸೇರ್ಪಡೆ ಆಗುವ ಮೂಲಕ ಸುರೇಶ್​ ಗೌಡ, ಮುಂದಿನ ರಾಜಕೀಯ ಬದುಕು ಕಟ್ಟಿಕೊಳ್ಳಲು ಅಣಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದೀಗ ಕೇವಲ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದು, ಮುಂದಿನ ತಿರುವು ಹೇಗಿರಲಿದೆ ಕಾದು ನೋಡಬೇಕು.

Read this also;

ಬಿ.ಎಸ್​ ಯಡಿಯೂರಪ್ಪ ಮಾತು ಸತ್ಯವಾಯ್ತಾ..?

ಇತ್ತೀಚಿಗಷ್ಟೇ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ದಾವಣಗೆರೆಯಲ್ಲಿ ಒಂದು ಮಾತನ್ನು ಹೇಳಿದ್ರು. ಕಾಂಗ್ರೆಸ್​ ಈಗಾಗಲೇ ಬಿಜೆಪಿ ನಾಯಕರನ್ನು ಸಂಪರ್ಕ ಮಾಡುವ ಕೆಲಸ ಮಾಡುತ್ತಿದೆ. ಹಲವಾರು ನಾಯಕರನ್ನು ಕಾಂಗ್ರೆಸ್​ ಅಧ್ಯಕ್ಷರು ಸಂಪರ್ಕ ಮಾಡಿದ್ದಾರೆ. ವಿರೋಧ ಪಕ್ಷಗಳನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದೂ ಸೂಚಿಸಿದ್ರು. ಇದೀಗ ಮೊದಲ ವಿಕೆಟ್ ಎನ್ನುವಂತೆ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬಿ.ಸುರೇಶ್​ ಗೌಡ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್​ ಪಕ್ಷದಿಂದ ಟಿಕೆಟ್​ ಬಯಸಿ, ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಲು ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ನೀಡಿಲ್ಲ, ಮಾಧುಸ್ವಾಮಿ ಅಬ್ಬರ ಹೆಚ್ಚಾಗಿ ಕೇಳುವವರೇ ಇಲ್ಲದಂತಾಗಿದೆ. ಮೊದಲೂರು ಕೆರೆಗೆ ನೀರನ್ನೂ ಬಿಡಲಿಲ್ಲ ಎನ್ನುವ ಕಾರಣಗಳನ್ನೂ ಆಪ್ತರು ಹೇಳ್ತಿದ್ದಾರೆ. ಆದರೆ ಸುರೇಶ್​ಗೌಡ ಮಾತ್ರ ಗುಟ್ಟು ಬಿಡೋದಕ್ಕೆ ಸಿದ್ಧರಿಲ್ಲ. ಶೀಘ್ರವೇ ಎಲ್ಲವೂ ಬಯಲಾಗುವ ಕಾಲ ಸನ್ನಿಹಿತ ಆಗುತ್ತಿದೆ ಎನ್ನುವುದು ದಿಟ.

Related Posts

Don't Miss it !