ಪ್ರೀತಿಸಿದವನಿಗಾಗಿ ಪ್ರಿಯತಮನ ಹಿಂದೆಯೇ ಹೊರಟ ಗೆಳತಿ..!

ಪ್ರೀತಿ ಎನ್ನುವುದು ಕೇವಲ ದೇಹದ ವಾಂಛೆ ಎನ್ನುವುದನ್ನು ಎಲ್ಲರೂ ಹೇಳುತ್ತಾರೆ. ಬಹುತೇಕ ಮಂದಿ ಅದನ್ನೇ ಒಪ್ಪಿಕೊಳ್ತಾರೆ ಎನ್ನುವುದು ಸತ್ಯ. ಆದರೆ ಇಲ್ಲೊಂದು ಜೋಡಿ ಮಾತ್ರ ಪ್ರೀತಿಸಿದ ಕೆಲವೇ ದಿನಗಳಲ್ಲಿ ಒಬ್ಬರನ್ನೊಬರು ಬಿಟ್ಟು ಬದುಕಲಾದರಷ್ಟು ಹಚ್ಚಿಕೊಂಡಿದ್ದರು. ಆದರೆ ಆಕಸ್ಮಿಕವಾಗಿ ನಡೆದ ಘಟನೆ ಮತ್ತೊಂದು ದುರ್ಘಟನೆಗೆ ನಾಂದಿಯಾಗಿದೆ. ಯುವಕ ಸತ್ತನೆಂದು ತಿಳಿದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮುದ್ದಾದ ಜೋಡಿ ಅನಾಹುತವನ್ನು ಕಂಡ ಗ್ರಾಮಸ್ಥರು, ಸಂಬಂಧಿಕರು, ಸ್ನೇಹಿತರು ಪಡಬಾರದ ಸಂಕಟವನ್ನೇ ಅನುಭವಿಸುತ್ತಿದ್ದಾರೆ.

ಪುಟ್ಟ ವಯಸ್ಸು, ಬೆಟ್ಟದಂತಹ ಪ್ರೀತಿ ಮನಸ್ಸು..!

ತುಮಕೂರು ಜಿಲ್ಲೆ ಮಸ್ಕಲ್​ ಗ್ರಾಮದ 23 ವರ್ಷದ ಧನುಷ್​ ಹಾಗೂ ಅರೆಹಳ್ಳಿ ಗ್ರಾಮದ 22 ವರ್ಷದ ಸುಷ್ಮಾ, ಕಳೆದ 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚಿಗೆ ಎರಡೂ ಮನೆಯಲ್ಲೂ ಮಕ್ಕಳ ಪ್ರೀತಿ ಗೊತ್ತಾಗಿತ್ತು. ಮೊದಲಿಗೆ ವಿರೋಧಿಸಿದ ಪೋಷಕರು, ಮಕ್ಕಳು ಮನವರಿಕೆ ಮಾಡಿಕೊಟ್ಟ ಬಳಿಕ ಮದುವೆಗೆ ಒಪ್ಪಿಕೊಂಡಿದ್ದರು. ಎರಡೂ ಮನೆಯ ಕಡೆಯಿಂದಲೂ ಶಾಸ್ತ್ರೋಕ್ತವಾಗಿ ಮದುವೆ ಕಾರ್ಯಗಳು ಆರಂಭವಾಗಿತ್ತು. ಹಿಂದೂ ಸಂಪ್ರದಾಯದಂತೆ ಒಂದೊಂದು ಸಲ ಬಂದು ಹೋಗಿದ್ದರು. ಆದರೆ ಮದುವೆ ನಿಗದಿ ಮಾಡಲು ಊರಿನ ಜಾತ್ರಾ ಮಹೋತ್ಸವ ಮುಗಿಯಲಿ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಆದರೆ ಜಾತ್ರಾ ಮಹೋತ್ಸವಕ್ಕೆ ಸಂತೋಷದಿಂದ ಹೋಗುವಾಗಲೇ ದುರ್ಘಟನೆಯೊಂದು ನಡೆದುಹೋಯ್ತು.

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಯುವಕ ಧನುಷ್..!

ಬೆಂಗಳೂರಿನಲ್ಲಿ ಸ್ವಂತ ಬಟ್ಟೆ ಅಂಗಡಿ ತೆರೆದಿದ್ದ ಧನುಷ್​, ಊರಿನ ಜಾತ್ರೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ತುಮಕೂರು ಕಡೆಗೆ ಹೋಗುವಾಗ ನೆಲಮಂಗಲದ ಕುಲುವನಹಳ್ಳಿ ಬಳಿ ಅಪಘಾತದಿಂದ ಧನುಷ್​ ಸಾವನ್ನಪ್ಪಿದ್ದ. ಪ್ರಿಯತಮ ಅಪಘಾತದಲ್ಲಿ ಮೃತಪಟ್ಟ ಸುದ್ದಿಯನ್ನು ಕೇಳಿದ ಕೂಡಲೇ ಸುಷ್ಮಾ ಶಾಕ್​ಗೆ ಒಳಗಾಗಿದ್ದಳು. ದುಃಖದ ಮಡುವಿನಲ್ಲಿ ತೊಳಲಾಟ ನಡೆಸಿದ್ದ ಸುಷ್ಮಾ, ನಾನು ಕೂಡ ಬದುಕುವುದಿಲ್ಲ. ಅವನಿಲ್ಲದ ಜೀವನವನ್ನು ನಾನು ಊಹೆ ಮಾಡಿಕೊಳ್ಳಲಾರೆ ಎಂದು ನೇರವಾಗಿಯೇ ಪೋಷಕರ ಬಳಿ ಹೇಳಿಕೊಂಡಿದ್ದಳು. ಆದರೆ ಮಗಳನ್ನು ಸಂತೈಸಿ ಮನಸ್ಸನ್ನು ಹಗುರ ಮಾಡಲು ಯತ್ನಿಸಿದ್ದರು. ಆದರೂ ಪಟ್ಟು ಬಿಡದ ಸುಷ್ಮಾ ಸಾವಿನ ಮನೆ ಸೇರಿದ್ದಾಳೆ.

ಪ್ರೀತಿಯನ್ನು ಸಹಿಸಲಾರದ ಜವರಾಯ ಮುನಿಸಿಕೊಂಡನೇ..?

ಧನುಷ್​ ಹಾಗೂ ಸುಷ್ಮಾ ನಡುವೆ ಎರಡು ವರ್ಷದ ಪ್ರೀತಿ ತುಂಬಾ ಅಂದವಾಗಿತ್ತು. ಮನೆಯವರನ್ನೂ ಒಪ್ಪಿಸಿದ್ದ ಮುದ್ದು ಜೋಡಿ ಮದುವೆಯಾಗುವ ಕನಸನ್ನು ಕಟ್ಟಿಕೊಂಡಿತ್ತು. ಚಿಕ್ಕ ವಯಸ್ಸಿನಲ್ಲೇ ಪ್ರೀತಿಯ ಪಯಣವನ್ನು ಆರಂಭಿಸಲು ಮುಂದಾಗಿದ್ದ ಮುದ್ದಾದ ಜೋಡಿ ಕಂಡ ಜವರಾಯ ಇಬ್ಬರನ್ನು ವಿಭಿನ್ನವಾಗಿ ಕರೆದುಕೊಂಡಿದ್ದಾನೆ. ಎಂಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಸುಷ್ಮಾ, ಮನೆಯವರಿಗೆ ಸಾಯುವ ನಿರ್ಧಾರ ತಿಳಿಸಿ ವಿಷ ಸೇವಿಸಿದ್ದಳು. ಆದರೆ ಮಗಳು ನೊಂದು ಹೀಗೆ ಮಾತನಾಡುತ್ತಿದ್ದಾಳೆ ಎಂದುಕೊಂಡಿದ್ದ ಪೋಷಕರಿಗೆ ಯುವತಿ ಸುಷ್ಮಾ ರಕ್ತ ವಾಂತಿ ಮಾಡಿಕೊಂಡ ಬಳಿಕ ವಿಷ ಸೇವನೆ ಬಗ್ಗೆ ಗೊತ್ತಾಗಿತ್ತು. ಶನಿವಾರ ರಾತ್ರಿ ನಾಲ್ಕೈದು ಆಸ್ಪತ್ರೆಗಳಲ್ಲಿ ಸುತ್ತಾಡಿ ಚಿಕಿತ್ಸೆ ಕೊಡಿಸುವ ಯತ್ನ ಮಾಡಿದ್ರೂ ಚಿಕಿತ್ಸೆ ಫಲಿಸದೆ ಭಾನುವಾರ ಮುಂಜಾನೆ ವೇಳೆಗೆ ಸುಷ್ಮಾ ಸಾವನ್ನಪ್ಪಿದ್ದಳು.

Related Posts

Don't Miss it !