ಬೇರೆಯವರನ್ನು ಸಾಯಿಸಿ ಆತ್ಮಹತ್ಯೆ ನಾಟಕ ಮಾಡಿದ ಸರ್ವೇಯರ್..!

ಕರಾವಳಿ ಜನ ಬುದ್ಧಿವಂತರು ಅನ್ನೋದು ಸಾಮಾನ್ಯವಾಗಿ ಪ್ರಚಲಿತದಲ್ಲಿ ಇರುವ ಮಾತು. ಆದ್ರೆ ಇಲ್ಲೊಬ್ಬ ಆಸಾಮಿ ಆತ್ಮಹತ್ಯೆ ಮಾಡಿಕೊಂಡಂತೆ ನಟಿಸಿದ್ದಾನೆ. ನಟನೆ ಜೊತೆಗೆ ಪೊಲೀಸರಿಗೆ ಭರವಸೆ ಬರಲಿ ಎನ್ನುವ ಉದ್ದೇಶದಿಂದ ಪರಿಚಿತ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಕುಳ್ಳಿರಿಸಿ ಬೆಂಕಿ ಹಚ್ಚಿರುವ ಘಟನೆ ಶ್ರೀಕೃಷ್ಣನ ನಾಡು ಉಡುಪಿಯಲ್ಲಿ ನಡೆದಿದೆ. ಆರೋಪಿ ಚಾಪೆ ಕೆಳಗೆ ನುಗ್ಗಿದರೆ ಕರ್ನಾಟಕ ಪೊಲೀಸರು ರಂಗೋಲಿ ಕೆಳಗೆ ನುಗ್ಗಿದ್ದು, ಘಟನೆ ನಡೆದು 12 ಗಂಟೆಗಳು ಕಳೆಯುವ ಹೊತ್ತಿಗೆ ಆರೋಪಿ ಹಾಗು ಆತನಿಗೆ ಸಹಕಾರ ನೀಡಿದ ಸ್ನೇಹಿತರ ಪಡೆಯನ್ನು ಕಂಬಿ ಹಿಂದೆ ತಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು

ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ಯಾಕೆ ಗೊತ್ತಾ..?

ಅಮಾಯಕನನ್ನು ಕೊಲೆ ಮಾಡಿರುವ ಆರೋಪಿ ಸದಾನಂದ ಶೇರೇಗಾರ್ ಕಾರ್ಕಳ ಮೂಲದ ಸರ್ವೆಯರ್. ಕಾರ್ಕಳ ತಾಲೂಕಿನಲ್ಲಿ ಸರ್ವೆಯರ್ ಆಗಿ ಕೆಲಸ ಮಾಡುತ್ತಿದ್ದ ಸದಾನಂದ ಶೇರೇಗಾರ್ ವಿರುದ್ಧ, ಫೋರ್ಜರಿ ಕೇಸ್​​ ಒಂದು ದಾಖಲಾಗಿತ್ತು. ಫೋರ್ಜರಿ ಆರೋಪದಲ್ಲಿ ಸದಾನಂದ ಶೇರೇಗಾರ್ ಮೇಲೆ ಕೇಸ್​ ಆದ ಬಳಿಕ ಕೋರ್ಟ್​ನಿಂದ ಸಮನ್ಸ್ ನೀಡಲಾಗಿತ್ತು. ತನ್ನ ಮೇಲೆ ಆರೋಪ ಬಂದಾಗ ಅದರಿಂದ ತಪ್ಪಿಸಿಕೊಳ್ಳಲು ಯೋಜನೆ ಮಾಡಿದಾಗ, ತಾನು ಸತ್ತೇ ಹೋಗಿದ್ದೇನೆ ಎಂದು ಸಾಬೀತು ಮಾಡಲು ನಿರ್ಧಾರ ಮಾಡಿದ. ಅದಕ್ಕಾಗಿ ಯಾರನ್ನಾದರೂ ಕೊಲೆ ಮಾಡಿ, ತಾನೇ ಸತ್ತಿದ್ದೇನೆ ಎಂದು ನಂಬಿಸಲು ಸಂಚು ರೂಪಿಸಿದ್ದ. ಅದರಂತೆ ಸ್ನೇಹಿತರ ಮೂಲಕ ಪರಿಚಯಸ್ಥ ಆನಂದ ದೇವಾಡಿಗನಿಗೆ ಗಾಳ ಹಾಕಿ, ನಿದ್ರೆ ಮಾತ್ರೆ ಬೆರಸಿ ಮದ್ಯ ಕುಡಿಸಿ ಕಾರಿನಲ್ಲಿ ಕಳ್ಳಿರಿಸಿ ಬೆಂಕಿ ಹಚ್ಚಿದ್ದರು.

ಕೊಲೆಯಾದ ಆನಂದ ದೇವಾಡಿಗ

ಬೆಂಕಿ ಹಚ್ಚುವ ಮುನ್ನ ನಡೆದಿತ್ತು ನಿದ್ರಾ ಮಂಪರು..!

ಆನಂದ ದೇವಾಡಿಗ ಎಂಬ ವ್ಯಕ್ತಿಯನ್ನು ಶಿಲ್ಪ ಸಾಲಿಯಾನ್, ಸತೀಶ ದೇವಾಡಿಗ, ನಿತಿನ್ ದೇವಾಡಿಗ ಮೂಲಕ ಕರೆಸಿಕೊಂಡು ಕಂಠಪೂರ್ತಿ ಮದ್ಯ ಕುಡಿಸಿ, ಅದರ ಜೊತೆಗೆ ನಿದ್ರೆ ಮಾತ್ರೆ ಹಾಕಿ ಅಮಾಯಕ ವ್ಯಕ್ತಿ ನಿದ್ರೆಗೆ ಹೋಗುವಂತೆ ಮಾಡಲಾಗಿತ್ತು. ಆ ಬಳಿಕ ತನ್ನದೇ ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಲಾಗಿತ್ತು. ಕಾರಿನೊಳಗೆ ಅಪರಿಚಿತ ವ್ಯಕ್ತಿಯ ದೇಹ ಸುಟ್ಟು ಕರಕಲಾದ ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಬೈಂದೂರು ಠಾಣೆ ಪೊಲೀಸರು ಕೇವಲ 12 ಗಂಟೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಕೊಲೆಗೆ ಸಹಕರಿಸಿದ ಆರೋಪಿಗಳನ್ನೂ ಎಡೆಮುರಿ ಕಟ್ಟಿದ್ದಾರೆ. ತಾನು ಸತ್ತಿರುವುದಾಗಿ ಬಿಂಬಿಸಲು ಅಮಾಯಕನನ್ನು ಕೊಲೆಗೈದ ಆರೋಪಿ ಎಲ್ಲವನ್ನೂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಇದನ್ನು ಓದಿ:  ಮಾಜಿ ವಿಶ್ವಸುಂದರಿ ಜೊತೆ ಲಲಿತ್​ ಮೋದಿ ಮದುವೆ..! ಸ್ಪಷ್ಟನೆ ಏನು ಗೊತ್ತಾ..!?

ಸತ್ತವನು ಕಾರು ಮಾಲೀಕನಲ್ಲ ಅಂತಾ ಗೊತ್ತಾಗಿದ್ದು ಹೇಗೆ..?

ಬೈಂದೂರು ಠಾಣಾ ವ್ಯಾಪ್ತಿಯ ಹೇನ್ಬೇರ್ ಎಂಬಲ್ಲಿ ಬುಧವಾರ ಬೆಳಗ್ಗೆ ಕಾರು ಪತ್ತೆಯಾಗಿತ್ತು. ಅದರೊಳಗೆ ಸುಟ್ಟು ಭಸ್ಮವಾದ ದೇಹವೊಂಡು ಸಿಕ್ಕಿತ್ತು. ಕೂಡಲೇ ಕಾರ್ಯೋನ್ಮುಖರಾದ ಪೊಲೀಸ್ ಪಡೆ, ಕಾರು ಯಾರದ್ದು ಎನ್ನುವುದನ್ನು ಪತ್ತೆ ಹಚ್ಚಿದ್ದರು. ಆ ಬಳಿಕ ಆ ವ್ಯಕ್ತಿ ಯಾರಿಗೆಲ್ಲಾ ಕರೆ ಮಾಡಿದ್ದಾರೆ. ಯಾರನ್ನು ಭೇಟಿ ಮಾಡಿದ್ದಾರೆ ಅನ್ನೋ ಬಗ್ಗೆ ತನಿಖೆ ಮಾಡಿದಾಗ ನಾಲ್ಕಾರು ಜನ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಿರುವುದು ಪತ್ತೆಯಾಗಿತ್ತು. ಆ ಬಳಿಕ ಘಟನಾ ಸ್ಥಳಕ್ಕೆ ಬಂದಿರುವುದು ಗೊತ್ತಾಯ್ತು. ಬರುವಾಗ ಟೋಲ್​ನಲ್ಲಿ ಕಾರು ಇಳಿದು ಮಹಿಳೆಯೊಬ್ಬರು ಟೋಲ್​ ಕಟ್ಟಿರುವುದು ಪತ್ತೆಯಾಗಿತ್ತು. ಆದರೆ ಸತ್ತಿದ್ದು ಮಾತ್ರ ಒಬ್ಬನೆ ಹೇಗೆ ಅನ್ನೋದು ಅನುಮಾನಕ್ಕೆ ಕಾರಣವಾಯ್ತು. ಜೊತೆಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವುದು ಪೊಲೀಸರ ಅನುಮಾನಕ್ಕೆ ಪುಷ್ಠಿ ನೀಡಿತ್ತು. ಆಗ ಪೊಲೀಸರ ನಿಜವಾದ ಶೋಧ ಕಾರ್ಯ ನಡೆದು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ತಂತ್ರಜ್ಞಾನದ ಚಕ್ರವ್ಯೂಹದಲ್ಲಿ ಮಾನವನ ಸಾಕ್ಷ್ಯ..!

ಆದರೆ ಸತ್ತ ವ್ಯಕ್ತಿಯ ಒಂದೇ ಒಂದು ತುಣುಕು ಸಿಕ್ಕರೂ ಸತ್ತವನು ಇದೇ ವ್ಯಕ್ತಿ ಎಂದು, ಡಿಎನ್​ಎ ಪರೀಕ್ಷೆ ಮೂಲಕ ವಿಧಿವಿಜ್ಞಾನ ತಂತ್ರಜ್ಞರು ಪತ್ತೆ ಮಾಡುತ್ತಾರೆ. ಇನ್ನು ಕಾರಿನಲ್ಲಿ ಸಿಕ್ಕ ಹೆಣವನ್ನು ಸರ್ವೇಯರ್​ ಹೆಣ ಎಂದು ಪೊಲೀಸರು ಭಾವಿಸುತ್ತಾರೆ ಎಂದು ಓರ್ವ ಅಮಾಯಕನ ಪ್ರಾಣವನ್ನೇ ತೆಗೆದವರನ್ನು ಮೂರ್ಖರು ಎನ್ನಬೇಕಿದೆ. ತಂತ್ರಜ್ಞಾನದ ಸುಳಿಯಲ್ಲಿ ಸಿಲುಕಿರುವ ಮಾನವ ಇದರಿಂದ ಬಿಡಿಸಿಕೊಳ್ಳಲಾರದಷ್ಟು ತೊಡರುಗಳಿಗೆ ಸಿಲುಕಿದ್ದಾರೆ. ಯಾರೇ ನಮ್ಮಿಂದ ದೂರ ಆದರೂ ತಂತ್ರಜ್ಞಾನ ನಮ್ಮನ್ನು ಹಿಂಬಾಲಿಸಿಕೊಂಡು ಸಾಕ್ಷ್ಯದ ರೂಪದಲ್ಲಿ ಬರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಇನ್ನು ವಯಸ್ಸಾದ ವ್ಯಕ್ತಿಗೆ ನಿದ್ರೆ ಮಾತ್ರೆ ಕೊಟ್ಟು ಸುಟ್ಟ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲಿ ಅನ್ನೋದು ಜನಾಗ್ರಹ ಆಗಿದೆ.

Related Posts

Don't Miss it !