ಹಣ, ಆಸ್ತಿಗಾಗಿಯೇ ಬಿತ್ತಾ ಚಂದ್ರಶೇಖರ ಗುರೂಜಿ ಹೆಣ..!? ಪೊಲೀಸರಿಗೆ ಅನುಮಾನ..!?

ಚಂದ್ರಶೇಖರ ಗುರೂಜಿಯನ್ನು ಆಪ್ತರೇ ಕೊಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕೊಲೆ ಮಾಡಿದ ಉದ್ದೇಶವನ್ನು ಪೊಲೀಸರು ಬೇಧಿಸಲು ಹರಸಾಹಸ ಮಾಡುತ್ತಿದ್ದು, ಕೊಂದವರೂ ಕೂಡ ಇನ್ನೂ ಕೂಡ ನಿಖರ ಕಾರಣವನ್ನು ಬಹಿರಂಗ ಮಾಡಿಲ್ಲ. ಆದರೆ ಪೊಲೀಸರಿಗೆ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಹಂತಕರು ಚಂದ್ರಶೇಖರ ಗುರೂಜಿ ಅವರ ಸಂಪೂರ್ಣ ಆಸ್ತಿಯನ್ನು ಸ್ವಾಹ ಮಾಡುವ ಉದ್ದೇಶದಿಂದಲೇ ಕೊಲೆ ಮಾಡಿದ್ದಾರೆ ಎನ್ನಲಾಗ್ತಿದೆ. ಆದಾಯ ತೆರಿಗೆ ಹೆಚ್ಚಾಗಿ ಕಟ್ಟಬೇಕಾಗುತ್ತದೆ ಎನ್ನುವ ಏಕೈಕ ಕಾರಣಕ್ಕೆ ತನ್ನದೇ ಆಸ್ತಿಯನ್ನು ಕೆಲವು ಸಮಯ ಆಪ್ತರಾಗಿದ್ದ ಮಹಾಂತೇಶ್​ ಹಾಗೂ ವನಜಾಕ್ಷಿ ಅವರ ಹೆಸರಿನಲ್ಲಿ ಮಾಡಿದ್ದರು ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಅಂಶ. ಆದರೆ ಇಷ್ಟು ಮಾತ್ರ ಅಲ್ಲ ಎನ್ನುತ್ತಿವೆ ಪೊಲೀಸ್​ ಮೂಲಗಳು.

ಬೆಂಗಳೂರು, ಮುಂಬೈ, ಹುಬ್ಬಳ್ಳಿಯಲ್ಲೂ ಆಪ್ತರ ಹೆಸರಲ್ಲಿ ಆಸ್ತಿ..!

ಸರಳವಾಸ್ತು ಚಂದ್ರಶೇಖರ ಗುರೂಜಿ ಬಾಗಲಕೋಟೆ ಮೂಲದವರಾಗಿದ್ದು, ಹುಬ್ಬಳ್ಳಿಯನ್ನು ತನ್ನ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡಿದ್ದರು. ಬೆಂಗಳೂರು ಹಾಗೂ ಮುಂಬೈನಲ್ಲೂ ಸಾಕಷ್ಟು ಆಸ್ತಿಗಳನ್ನು ಹೊಂದಿದ್ದ ಗುರೂಜಿ, ಹೆಚ್ಚುವರಿ ತೆರಿಗೆಯನ್ನು ಪಾವತಿ ಮಾಡಬೇಕಾಗುತ್ತದೆ ಎನ್ನುವ ಏಕೈಕ ಕಾರಣದಿಂದ ತನ್ನ ಪರಮಾಪ್ತನಾಗಿದ್ದ ಮಹಾಂತೇಶ್​ ಹೆಸರಲ್ಲೂ ಮಾಡಿದ್ದರು ಎನ್ನಲಾಗಿದೆ. ಯಾವಾಗ 2014ರಲ್ಲಿ ಮಹಾಂತೇಶ್​ ತನ್ನ ಬಳಗವನ್ನು ತೊರೆದು ಬೇರೆ ದಾರಿ ಹಿಡಿದನೋ ಆಗ ಆಸ್ತಿ ಮೇಲಿನ ಹಕ್ಕು ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಆಗ ಯೋಜನೆ ರೂಪಿಸಿದ್ದ ಗುರೂಜಿ, ತನ್ನ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದ ವನಜಾಕ್ಷಿಯ ಹೆಸರಲ್ಲೂ ಒಂದಷ್ಟು ಆಸ್ತಿ ಮಾಡಿಕೊಟ್ಟು, ಹಣದ ಭದ್ರತೆಗಾಗಿ ಮಹಾಂತೇಶ್​ಗೆ ಮದುವೆ ಮಾಡಿದ್ದರು ಎನ್ನಲಾಗಿದೆ. ಆ ನಂತರ ಇಬ್ಬರೂ ಅಂತರ ಕಾಯ್ದುಕೊಂಡರು ಎನ್ನುವ ಕಾರಣಕ್ಕೆ ಮಾತುಕತೆ ನಿಗದಿಯಾಗಿತ್ತು ಎನ್ನುವ ಮಾಹಿತಿ ಸಿಕ್ಕಿದೆ.

ಇದನ್ನೂ ಓದಿ: ಸಾಲು ಮರದ ತಿಮ್ಮಕ್ಕಗೆ ಇನ್ಮುಂದೆ ಸಂಪುಟ ಸಚಿವೆ ಸ್ಥಾನಮಾನ..!

ನೋಟ್​ ಬ್ಯಾನ್​ ಬಳಿಕ ಎದುರಾಗಿತ್ತು ಆರ್ಥಿಕ ಸಂಕಷ್ಟ..!

ಬೆಂಗಳೂರಿನಲ್ಲಿ ಸರಳ ವಾಸ್ತು ಅನ್ನೋ ಹೆಸರಿನಲ್ಲೇ ಟಿವಿ ಚಾನೆಲ್​ ಕೂಡ ಸ್ಥಾಪನೆ ಮಾಡಿದ್ದ ಚಂದ್ರಶೇಖರ ಗುರೂಜಿ ಬೃಹತ್​ ಕನಸು ಕಟ್ಟಿಕೊಂಡಿದ್ದರು. ಆದರೆ ಕೇಂದ್ರ ಸರ್ಕಾರ ಜಾರಿ ಮಾಡಿದ ನೋಟ್​ ಬ್ಯಾನ್​ ವೇಳೆ ಆರ್ಥಿಕ ಹೊಡೆತಕ್ಕೆ ಸಿಲುಕಿದ್ದ ಸಂಸ್ಥೆಯ ಟಿವಿ ಚಾನೆಲ್​ ಬಂದ್​ ಆಗಿತ್ತು. ಆ ನಂತರ ಬೇನಾಮಿ ಆಸ್ತಿಯನ್ನು ಮರಳಿ ಪಡೆಯುವುದಕ್ಕೆ ಮುಂದಾಗಿದ್ದ ಗುರೂಜಿಗೆ ಆಪ್ತರೇ ಉಲ್ಟಾ ಹೊಡೆದಿದ್ದರು ಎನ್ನಲಾಗಿದೆ. ಮಹಾಂತೇಶ್​ ಹಾಗೂ ವನಜಾಕ್ಷಿ ಹೆಸರಲ್ಲಿ ಆಸ್ತಿ ಮಾಡಿದ್ದ ಕಾರಣಕ್ಕೆ ತನ್ನದೇ ಅಪಾರ್ಟ್​ಮೆಂಟ್​ನಲ್ಲೇ ಒಂದು ಫ್ಲಾಟ್​ ನೀಡಿದ್ದ ಗುರೂಜಿ ಹೇಗಾದರೂ ಮಾಡಿಯಾದರೂ ಸರಿ ಹಣವನ್ನು ತನ್ನ ಸುಪರ್ದಿಗೆ ಪಡೆಯಬೇಕು ಅನ್ನೋ ಹಠಕ್ಕೆ ಬಿದ್ದಿದ್ದರು. ಇತ್ತೀಚಿಗೆ ಕಾನೂನು ಹೋರಾಟ ಶುರು ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದರು. ಕೊನೆಯದಾಗಿ ಮಾತುಕತೆ ಮಾಡೋಣ ಎಂದು ಕರೆಸಿಕೊಂಡಿದ್ದ ಗುರೂಜಿ ಕೊಲೆಯಾಗಿಬಿಟ್ಟರು.

ಇದನ್ನೂ ಓದಿ:ಚಂದ್ರಶೇಖರ ಗುರೂಜಿ ಹತ್ಯೆ ಮಾಡಿದ್ದಕ್ಕೆ ಮೂರು ಕಾರಣಗಳೇನು ಗೊತ್ತಾ..?

ಸಾವನ್ನೇ ಸಮೀಪಕ್ಕೆ ಆಹ್ವಾನಿಸಿಕೊಂಡ ವಾಸ್ತು ಗುರು..!

ವಾಸ್ತು ಸರಿಯಿಲ್ಲದಿದ್ರೆ ಕೆಟ್ಟದಾಗುತ್ತದೆ, ಶ್ರೇಯಸ್ಸು ಸಿಗಬೇಕು ಅಂದರೆ ವಾಸ್ತು ಹೀಗಿರಬೇಕು. ಈ ರೀತಿ ಕುಳಿತರೆ ವಾಸ್ತು ಈ ರೀತಿಯ ಪರಿಣಾಮ ಬೀರುತ್ತದೆ ಎಂದು ಜನಸಾಮಾನ್ಯರಲ್ಲಿ ಹೇಳಿಕೊಡುತ್ತಿದ್ದ ವಾಸ್ತು ಗುರೂಜಿ, ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ 200 ಕೋಟಿಗು ಮಿಗಿಲಾದ ಆಸ್ತಿ ಸಂಪಾದನೆ ಮಾಡಿದ್ದಾರೆ ಎನ್ನಲಾಗ್ತಿದೆ. ಬೆಂಗಳೂರು ಹಾಗೂ ಮುಂಬೈನ ಮಾಪೆ ಪ್ರದೇಶದಲ್ಲೂ ನೂರಾರು ಕೋಟಿ ಬೆಲೆ ಬಾಳುವ ಐಶಾರಾಮಿ ಬಂಗಲೆ, ಕಚೇರಿ, ಕಟ್ಟಡ ಸೇರಿದಂತೆ ಹತ್ತಾರು ಆಸ್ತಿಗಳಿವೆ. ಈ ಎಲ್ಲಾ ಆಸ್ತಿಗಳನ್ನು ಬೇನಾಮಿ ವ್ಯಕ್ತಿಗಳೇ ಸ್ವಾಹಃ ಮಾಡಲಿದ್ದಾರೆ ಎನ್ನುವ ಕಾರಣಕ್ಕೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಿದ್ದರು. ಇದೇ ಕಾರಣಕ್ಕೆ ಮಾತನಾಡೋಣ ಬನ್ನಿ ಎಂದು ಹೋಟೆಲ್​ಗೆ ಕರೆದಿದ್ದರು. ಚಂದ್ರಶೇಖರ ಗುರೂಜಿ ಬದುಕಿದ್ದರೆ ಆಸ್ತಿ ಕೊಡುವಂತೆ ಕಿರಿಕಿರಿ ಇದ್ದಿದ್ದೇ. ಆದರೆ ಗುರೂಜಿಯನ್ನು ಮುಗಿಸಿದರೆ ಸ್ವಲ್ಪ ದಿನಗಳ ಕಾಲ ಜೈಲಿನಲ್ಲಿದ್ದು ವಾಪಸ್​ ಬರಬಹುದು. ಅಲ್ಲದೆ ಎಲ್ಲಾ ಆಸ್ತಿಯು ನಮ್ಮದೇ ಎನ್ನುವ ದುರಾಸೆಗೆ ಬಿದ್ದು ಪ್ರಾಣವನ್ನೇ ಬಲಿ ಪಡೆದಿದ್ದಾರೆ ಎನ್ನುವುದು ಸದ್ಯದ ಮಾಹಿತಿ. ಆದರೆ ಹಣದ ಆಸೆಗೆ ವಾಸ್ತು ಶಾಸ್ತ್ರಜ್ಞ ಹೆಣವಾಗಿದ್ದು ಮಾತ್ರ ದುರ್ದೈವ.

Related Posts

Don't Miss it !