ನಟಿ ಶ್ರುತಿಗೆ ಶಾಕ್​ ಕೊಟ್ಟ ಸಿಎಂ ಬಿ.ಎಸ್​ ಯಡಿಯೂರಪ್ಪ..! ಕಾರಣ ಸ್ಪಷ್ಟ..

ಸ್ಯಾಂಡಲ್​ವುಡ್​ ಕಣ್ಣೀರ ತಾರೆ ಶ್ರುತಿ ಇತ್ತೀಚಿಗೆ ದಿನಗಳಲ್ಲಿ ರಾಜಕಾರಣದಲ್ಲಿ ಮಗ್ನರಾಗಿದ್ದಾರೆ. ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಶ್ರುತಿ ಅವರನ್ನು ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆಯನ್ನಾಗಿ ಮಾಡಲಾಗಿತ್ತು. ಆದರೆ ದೆಹಲಿಯಿಂದ ವಾಪಸ್​ ಆದ ಒಂದೇ ದಿನಕ್ಕೆ ಶ್ರುತಿ ಅವರನ್ನು ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಸ್ಥಾನವನ್ನು ವಾಪಸ್​ ಪಡೆದಿದ್ದಾರೆ. ಶ್ರುತಿ ಅವರಿಂದ ವಾಪಸ್​ ಪಡೆದ ಆ ಸ್ಥಾನವನ್ನು ತನ್ನ ಪರಮಾಪ್ತರಲ್ಲಿ ಒಬ್ಬರಾದ ಸಿದ್ದಲಿಂಗ ಸ್ವಾಮಿ ಅವರಿಗೆ ಕೊಡಲಾಗಿದೆ. ಮುಖ್ಯಮಂತ್ರಿಗಳ ಈ ನಿರ್ಧಾರದ ಹಿಂದೆ ಮೂರು ಮಹತ್ವದ ಕಾರಣಗಳು ಇವೆ ಎನ್ನಲಾಗ್ತಿದೆ.

ಪ್ರವಾಸೋದ್ಯಮ ಸಚಿವರಿಗೆ ಕಡಿವಾಣ..!

ರಾಜ್ಯ ಪ್ರವಾಸೋದ್ಯಮ ಇಲಾಖೆ ಸಚಿವರಾಗಿ ಸಿ.ಪಿ ಯೋಗೇಶ್ವರ್​​ ಕೆಲಸ ಮಾಡುತ್ತಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಸೋತಿದ್ದರೂ ಸಚಿವರನ್ನಾಗಿ ಮಾಡಿ, ಪ್ರವಾಸೋದ್ಯಮ ಖಾತೆಯನ್ನು ಕೊಡಲಾಗಿದೆ. ಆದರೆ ಪ್ರವಾಸೋದ್ಯಮ ಸಚಿವರು ಮುಖ್ಯಮಂತ್ರಿಗಳ ಹಿಡಿತದಿಂದ ಹೊರಗಡೆ ಇದ್ದಾರೆ. ಮುಖ್ಯಮಂತ್ರಿಗಳ ವಿರುದ್ಧವೇ ಬಹಿರಂಗವಾಗಿ ಮಾತನಾಡಿದ್ದು ರಾಜ್ಯ ಸರ್ಕಾರಕ್ಕೆ ಸಾಕಷ್ಟು ಮುಜುಗರ ಉಂಟು ಮಾಡಿತ್ತು. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್​ ಸಿಂಗ್​ ರಾಜ್ಯಕ್ಕೆ ಬಂದು ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರೂ ನಾವಿನ್ನೂ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎನ್ನುವ ಮೂಲಕ ನಾಯಕತ್ವ ಬದಲಾವಣೆ ಆಗಿಯೇ ತೀರುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರು. ಇಷ್ಟೆಲ್ಲಾ ಮಾಡಿರುವ ಯೋಗೇಶ್ವರ್​ಗೆ ಅಡ್ಡಲಾಗಿ ಸಿದ್ದಲಿಂಗಸ್ವಾಮಿಯನ್ನು ನಿಲ್ಲಿಸಿಕೊಳ್ಳಲಾಗಿದೆ ಎನ್ನಬಹುದು.

ಶ್ರುತಿ ಸಿಎಂ ಬಣದಿಂದ ದೂರ ಉಳಿದಿದ್ದು..!

ನಟಿ ಶ್ರುತಿ ಮೊದಲು ಸಿಎಂ ಬಿಎಸ್​ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದರು. ಸಿಎಂ ಭಾಗಿಯಾಗುವ ಬಹುತೇಕ ಕಾರ್ಯಕ್ರಮದಲ್ಲಿ ಶ್ರುತಿ ಅವರು ಭಾಗಿಯಾಗುತ್ತಿದ್ದರು. ಆದರೆ ಇತ್ತೀಚಿಗೆ ಸಿಎಂ ಅವರ ಜೊತೆ ಗುರುತಿಸಿಕೊಳ್ಳದ ಶ್ರುತಿ ಅಂತರ ಕಾಯ್ದುಕೊಂಡಿದ್ದರು. ಕಳೆದ 15 ದಿನಗಳ ಹಿಂದೆ ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೂತಿ ಪಾಲ್ಗೊಂಡಿದ್ದರು. ಅಲ್ಲಿ ಯೋಗೇಶ್ವರ್​ ಹಾಗೂ ಯತ್ನಾಳ್​ ನಡೆಸಿದ ರಹಸ್ಯ ಮಾತುಕತೆ ವೇಳೆಯಲ್ಲಿ ಶ್ರಯತಿ ಕೂಡ ಇದ್ದರು. ಪ್ರವಾಸೋದ್ಯಮ ನಿಗಮದ ಅಧ್ಯಕ್ಷೆ ಪ್ರವಾಸೋದ್ಯಮ ಕಾರ್ಯಕ್ರಮಕ್ಕಾಗಿ ಹೋಗಿದ್ದರು ಎನ್ನುವ ವಾದ ಇರಬಹುದು. ಆದರೂ ಸಿಎಂ ವಿರುದ್ಧ ಮಸಲತ್ತು ಮಾಡುತ್ತಿರುವ ನಾಯಕರ ಜೊತೆ ಕಾಣಿಸಿಕೊಂಡಿದ್ದು ಸಿಎಂ ಕಣ್ಣು ಕೆಂಪೇರಿಸಿದೆ.

ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಯುವ ಭೀತಿ..?

ದೆಹಲಿಯಿಂದ ವಾಪಸ್​ ಆದ ಬಳಿಕ ಸಿಎಂ ಬಿಎಸ್​ ಯಡಿಯೂರಪ್ಪ ಸಿಎಂ ಕುರ್ಚಿ ಬಿಟ್ಟು ಇಳಿಯುತ್ತಾರೆ ಎನ್ನುವ ಗುಸುಗುಸು ಕೇಳಿ ಬಂದಿದೆ. ಕಾಪು ಸಿದ್ದಲಿಂಗಸ್ವಾಮಿ ಅವರನ್ನು ಶಾಸಕರನ್ನಾಗಿ ಮಾಡಲು ಯತ್ನಿಸಿದ್ದ ಬಿ.ಎಸ್​ ಯಡಿಯೂರಪ್ಪಗೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿತ್ತು. ಮೈಸೂರಿನ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಲು ವೇದಿಕೆ ಸಜ್ಜಾಗುತ್ತಿದೆ. ವರುಣಾ ಕ್ಷೇತ್ರದವರೇ ಆದ ಕಾಪು ಸಿದ್ದಲಿಂಗಸ್ವಾಮಿ ಅವರಿಗೆ ಅಧಿಕಾರ ಕೊಟ್ಟರೆ ಮುಂದಿನ ದಿನಗಳಲ್ಲಿ ಕಾಪು ಸಿದ್ದಲಿಂಗಸ್ವಾಮಿ ಬೆಂಬಲ ಸಿಗಲಿದೆ ಎನ್ನುವ ಕಾರಣಕ್ಕೆ ಅಧಿಕಾರ ಕೊಡಲಾಗಿದೆ ಎನ್ನುವ ಮಾಹಿತಿಯೂ ಇದೆ. ಒಟ್ಟಾರೆ ಈ ಮೂರು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಶ್ರುತಿ ಸ್ಥಾನವನ್ನು ಕಸಿದು ಪರಮಾಪ್ತ ಕಾಪು ಸಿದ್ದಲಿಂಗಸ್ವಾಮಿ ಅವರಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಲಾಗಿದೆ.

Related Posts

Don't Miss it !