ಮಂಡ್ಯದ ಮಗ, ಕಾವೇರಿ ರಕ್ಷಕ ಡಾ.ಜಿ ಮಾದೇಗೌಡ ಇನ್ನು ನೆನಪು ಮಾತ್ರ..!

ಮಂಡ್ಯದ ಹಿರಿಯ ಕಾಂಗ್ರೆಸ್​ ನಾಯಕ ಡಾ ಜಿ.ಮಾದೇಗೌಡ ಕೊನೆಯುಸಿರೆಳೆದಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಮಾಜಿ ಸಂಸದ ಡಾ ಜಿ. ಮಾದೇಗೌಡರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆ ಬಳಿಕ ಮಂಡ್ಯದ ಕೆ.ಎಂ ದೊಡ್ಡಿಯಲ್ಲಿರುವ ಭಾರತಿ ನರ್ಸಿಂಗ್​ ಹೋಂನಲ್ಲಿ ದಾಖಲು ಮಾಡಲಾಗಿತ್ತು. 93 ವರ್ಷಗಳ ಸಾರ್ಥಕ ಜೀವನ ನಡೆಸಿದ ಮಾದೇಗೌಡರು ಇಹಲೋಕ ತ್ಯಜಿಸಿ ಚಿರನಿದ್ರೆಗೆ ಜಾರಿದ್ದಾರೆ.

ಯಾರು ಈ ಡಾ ಜಿ. ಮಾದೇಗೌಡ..?

ಡಾ. ಜಿ ಮಾದೇಗೌಡ ಎಂದರೆ ಮೊದಲಿಗೆ ನೆನಪಾಗುವುದು ಕಾವೇರಿ ಹೋರಾಟಗಾರ. ಅದಕ್ಕೂ ಮೊದಲು ಡಾ ಜಿ. ಮಾದೇಗೌಡ ಸತತ 6 ಬಾರಿ ಅಂದರೆ 30 ವರ್ಷಗಳ ಕಾಲ ಶಾಸಕನಾಗಿ ಕಿರುಗಾವಲು, ಮಳವಳ್ಳಿ ಕ್ಷೇತ್ರದ ಜನರ ಸೇವೆ ಮಾಡಿದ್ದಾರೆ. ಆರ್​ ಗುಂಡೂರಾವ್​ ಮುಖ್ಯಮಂತ್ರಿ ಆಗಿದ್ದಾಗ ಅವರ ಸಂಪುಟದಲ್ಲಿ ಅರಣ್ಯ ಮತ್ತು ಗಣಿ ಸಚಿವರಾಗಿ ಜನಸೇವೆ ಮಾಡಿದ್ದಾರೆ. ಸಂಸದನಾಗಿ ಮಂಡ್ಯ ಜಿಲ್ಲೆಯ ಜನರ ಮನ ಮೆಚ್ಚಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಡಾ. ಜಿ ಮಾದೇಗೌಡರು ಕೇವಲ ಮಾರ್ಗದರ್ಶಕರಾಗಿ ಕೊನೆದ ದಿನಗಳನ್ನು ಕಳೆದರು.

ಮಾದೇಗೌಡರ ಹುಟ್ಟೂರು ಹಾಗೂ ಬಾಲ್ಯ

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಹೋಬಳಿಯ ಗುರುದೇವರಹಳ್ಳಿ ಎಂಬ ಪುಟ್ಟ ಗ್ರಾಮ. ಪುಟ್ಟೇಗೌಡ – ಕಾಳಮ್ಮ ದಂಪತಿಯ 6 ಜನ ಮಕ್ಕಳಲ್ಲಿ ಕೊನೆಯ ಮಗನಾಗಿ ಜುಲೈ 14, 1928 ರಂದು ಮಾದೇಗೌಡರ ಜನನ. ಹುಟ್ಟೂರಿನಲ್ಲಿ ಶಾಲಾ ಸೌಲಭ್ಯವಿಲ್ಲದ ಕಾರಣ, ತಾಯಿಯ ತವರು ಮನೆ ಮಂಡ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿದರು. ಬಳಿಕ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದು ಬೆಂಗಳೂರಿನಲ್ಲಿ ವಕೀಲ ಪದವಿ ಮುಗಿಸಿದ್ರು. ಆದ್ರೆ ವಕೀಲಗಿರಿ ಮಾಡಬೇಕಿದ್ದ ಡಾ ಜಿ.ಮಾದೇಗೌಡ ಜನಸೇವೆ ಮಾಡುವ ಮನಸ್ಸು ಮಾಡಿದ್ರು.

ರಾಜಕೀಯಕ್ಕೆ ಡಾ ಜಿ ಮಾದೇಗೌಡ..!

ಓದಿನಿಂದಲೇ ಸ್ವಾತಂತ್ರ್ಯ ಹೋರಾಟವನ್ನು ನೋಡಿಕೊಂಡು ಬೆಳೆದಿದ್ದ ಡಾ ಜಿ ಮಾದೇಗೌಡ, 10 ವರ್ಷದ ಬಾಲಕನಾಗಿದ್ದಾಗಲೇ ಮಹಾತ್ಮ ಗಾಂಧಿ ಶಿವಪುರ ಧ್ವಜ ಸತ್ಯಾಗ್ರಹ ನಡೆಸಿದ್ದನ್ನು ಕಂಡಿದ್ದರು. ಆ ಬಳಿಕ ವಿದ್ಯಾರ್ಥಿ ನಾಯಕನಾಗಿ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದ ಜಿ ಮಾದೇಗೌಡರನ್ನು ಗುರುತಿಸಿದ ಮಂಡ್ಯದ ಜನಪ್ರಿಯ ನಾಯಕ ಕೆ.ವಿ. ಶಂಕರಗೌಡರು, 1959ರಲ್ಲಿ ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಸೂಚಿಸಿದರು. ಎಚ್.ಕೆ. ವೀರಣ್ಣಗೌಡರ ಮಾರ್ಗದರ್ಶನದಲ್ಲಿ ಜನಸೇವೆ ಮಾಡುತ್ತಿದ್ದ ಮಾದೇಗೌಡರಿಗೆ ಸ್ವತಃ ಹೆಚ್​.ವಿ ವೀರಣ್ಣಗೌಡ ತಮ್ಮ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟರು. 1962ರಿಂದ 1989ರ ತನಕ ಸತತವಾಗಿ ಶಾಸಕನಾಗಿ ಸೇವೆ. 1991ರ ಲೋಕಸಭಾ ಉಪಚುನಾವಣೆಯಲ್ಲಿ ಸಂಸದನಾಗಿ ಆಯ್ಕೆ. 1993ರ ಲೋಕಸಭಾ ಚುನಾವಣೆಯಲ್ಲೂ ಸಂಸದನಾಗಿ ಮರು ಆಯ್ಕೆ ಆಗಿದ್ದರು.

ಕಾವೇರಿ ಹೋರಾಟದಲ್ಲಿ ಗೌಡರ ಗುರುತು..!

ಸುಪ್ರೀಂಕೋರ್ಟ್​ ಕಾವೇರಿ ನದಿ ತೀರ್ಪಿನ ವಿರುದ್ಧ ಹೋರಾಟ ಶುರು ಮಾಡಿದ ಮಾದೇಗೌಡರು, 55 ದಿನಗಳ ಕಾಲ ರೈತರ ಜೊತೆ ಅಹಿಂಸಾತ್ಮಕ ಪ್ರತಿಭಟನೆ ನಡೆಸಿದ್ರು. ಕಾಂಗ್ರೆಸ್​ ನಾಯಕನಾಗಿ ಬೆಳೆದರೂ ಮಂಡ್ಯ ಜಿಲ್ಲೆಯ ಜೀವನಾಡಿ ಕಾವೇರಿಗಾಗಿ ಕಾಂಗ್ರೆಸ್​ ಪಕ್ಷದ ವಿರುದ್ಧವೇ ತೊಡೆತಟ್ಟಿ ನಿಂತರು. ಅಂದಿನ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಪಾದಯಾತ್ರೆ ಮೂಲಕ ಪ್ರತಿಭಟನಾ ಸ್ಥಳಕ್ಕೆ ಬಂದು ತಮಿಳುನಾಡಿಗೆ ನೀರು ಬಿಡಲ್ಲ ಎಂದು ಭರವಸೆ ನೀಡಿದರು. ಆ ಬಳಿಕ ಮರುದಿನ ರಾತ್ರೋರಾತ್ರಿ ನೀರು ಬಿಟ್ಟರು. ಇದರಿಂದ ಕುಪಿತರಾದ ಮಾದೇಗೌಡ್ರು, ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಿದ್ರು. ಕರ್ಫ್ಯೂ ಜಾರಿ ಮಾಡಲಾಯ್ತು. ಹಲವಾರು ರೈತ ನಾಯಕರ ಬಂಧನವಾಯ್ತು. ಮಾದೇಗೌಡರ ಬಂಧನವೂ ಆಯ್ತು. ಜಾಮೀನು ನೀಡಲು ಬಂದಿದ್ದ ವಕೀಲರು ಹಿಂದಕ್ಕೆ ಕಳುಹಿಸಿದ ಮಾದೇಗೌಡರು, ನಾನೂ ರೈತರ ಜೊತೆ ಜೈಲಿನಲ್ಲೇ ಇರ್ತೇನೆ ಎಂದಿದ್ದರು.

ಜನನಾಯಕ ಕೆ.ವಿ. ಶಂಕರಗೌಡರ ನಂತರ ಮಂಡ್ಯ ಜಿಲ್ಲೆಯನ್ನು ಆರ್ಥಿಕವಾಗಿ ಸಮಗ್ರ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯಲು ಜಿ ಮಾದೇಗೌಡರ ಸೇವೆಯೂ ಅಪಾರ. ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ಕೊನೆ ಉಸಿರಿನ ತನಕವೂ ಮಾದೇಗೌಡರು ಸೇವೆ ಸಲ್ಲಿಸಿದ್ದರು. ಜೀವಮಾನ ಸಾಧನೆ ಗುರುತಿಸಿನ ಮೈಸೂರು ವಿಶ್ವವಿದ್ಯಾನಿಲಯ 2012ರಲ್ಲಿ ಮಾದೇಗೌಡರಿಗೆ ಗೌರವ ಡಾಕ್ಟರೇಟ್​ ಪದವಿ ನೀಡಿ ಗೌರವಿಸಿತ್ತು. 93 ವರ್ಷಗಳ ಸಾರ್ಥಕ ಬದುಕನ್ನು ಯುವ ಪೀಳಿಗೆಗೆ ಮಾದರಿಯಾಗಿಟ್ಟು ತಮ್ಮ ಪಯಣ ಮುಗಿಸಿದ್ದಾರೆ ಹಿರಿಯ ಕಾಂಗ್ರೆಸ್ಸಿಗ ಡಾ ಜಿ. ಮಾದೇಗೌಡ.

Related Posts

Don't Miss it !