ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನ ಪರಿಷತ್‌ಗೆ ಆಗ್ತಿದೆ ಅಪಚಾರ..!

ರಾಜ್ಯ ವಿಧಾನ ಪರಿಷತ್​ನ 25 ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಚುನಾವಣೆ ನಿಗದಿಯಾಗಿದೆ. ನಾಮಪತ್ರ ಸಲ್ಲಿಕೆಗೆ ಅವಧಿ ಮುಕ್ತಾಯವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಿಂದ ತಲಾ 20 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನು ಜೆಡಿಎಸ್  ಪಕ್ಷದ ವತಿಯಿಂದ ಏಳು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಜನರ ಪಾತ್ರ ಇಲ್ಲದ ಕಾರಣಕ್ಕೆ ಅಭ್ಯರ್ಥಿಗಳು ಗೆಲ್ಲುವ ಅಥವಾ ಸೋಲುವ ಲೆಕ್ಕಾಚಾರ ಪಕ್ಷಗಳಿಗೆ ಈ ಮೊದಲೇ ತಿಳಿದಿರುತ್ತದೆ. ಒಂದು ವೇಳೆ ಎದುರಾಳಿ ಅಭ್ಯರ್ಥಿ ಕಾಂಚನಾ ಹರಿಸಿದರೆ ಫಲಿತಾಂಶ ಉಲ್ಟಾ ಪಲ್ಟಾ ಆಗುವ ಸಾಧ್ಯತೆ ಇರುತ್ತದೆ.

ಎಲ್ಲಾ ಕೇತ್ರಗಳಲ್ಲೂ ಸ್ಪರ್ಧೆ ಮಾಡ್ತಿಲ್ಲ ಯಾಕೆ..?

ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಬದಿಗಿಟ್ಟು ಸ್ಪರ್ಧೆ ಮಾಡಲಾಗುತ್ತದೆ. ಆದರೆ ಈ ಚುನಾವಣೆಯಲ್ಲಿ ಸಾರ್ವಜನಿಕರಿಗೆ ಮತ ಚಲಾಯಿಸುವ ಹಕ್ಕು ಇಲ್ಲ. ಕೇವಲ ಗ್ರಾಮ ಪಂಚಾಯತಿ ಸದಸ್ಯರು, ಪಾಲಿಕೆ ಸದಸ್ಯರು, ನಗರ ಸಭೆ, ಪುರಸಭೆ ಸದಸ್ಯರು ಮತ ಚಲಾವಣೆ ಮಾಡುವ ಹಕ್ಕು ಹೊಂದಿದ್ದಾರೆ. ಒಂದು ಕ್ಷೇತ್ರದಲ್ಲಿ ಎಷ್ಟು ಜನರು ಅರ್ಹ ಮತದಾರರು ಇದ್ದಾರೆ, ಅದರಲ್ಲಿ ತಮ್ಮ ಪಕ್ಷದ ಚಿನ್ಹೆ ಮೇಲೆ ಎಷ್ಟು ಮಂದಿ ಆಯ್ಕೆ ಆಗಿದ್ದಾರೆ..? ಉಳಿದ ಪಕ್ಷಗಳ ಬಾಲಾಬಲ ಹೇಗಿದೆ..? ಎನ್ನುವ ಲೆಕ್ಕಾಚಾರ ಮಾಡುವ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಬೇಕೋ ಬೇಡ್ವೋ ಅನ್ನೋ ಬಗ್ಗೆ ನಿರ್ಧಾರ ಮಾಡುತ್ತಾರೆ. ಈ ನಡುವೆ ಗ್ರಾಮ ಪಂಚಾಯತಿ ಸದಸ್ಯರನ್ನು ಸೆಳೆದು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬಹುದು ಎನ್ನುವ ಬಗ್ಗೆ ಖಚಿತವಾಗಿ ತಿಳಿದರೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತಾರೆ. ಅಥವಾ ಬೇರೆ ಪಕ್ಷದ ಸದಸ್ಯರ ಬೆಂಬಲ ಪಡೆದರೆ ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ ಎನ್ನುವ ಲೆಕ್ಕಾಚಾರದ ಆಧಾರದ ಮೇಲೂ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ.

ಗ್ರಾಮ ಪಂಚಾಯತಿ ಸದಸ್ಯರದ್ದೇ ಎಲ್ಲರಿಗೂ ಟೆನ್ಷನ್..!

ಗ್ರಾಮ ಪಂಚಾಯತಿ ಸದಸ್ಯರು ರಾಜಕೀಯ ಪಕ್ಷಗಳ ಬೆಂಬಲಿಗರು ಆಗಿರ್ತಾರೆ. ಆದರೆ ರಾಜಕೀಯ ಪಕ್ಷದ ಚಿನ್ಹೆ ಮೇಲೆ ಆಯ್ಕೆ ಆಗಿರುವುದಿಲ್ಲ. ಈಗ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ಮಾಡುವ ಸಂಧರ್ಭದಲ್ಲಿ ತಮ್ಮ ಪಕ್ಷ ನಿಷ್ಠೆಯನ್ನು ಕಾಸು ಕೊಟ್ಟವರ ಕಡೆಗೆ ತೋರಿಸಿದರೂ ಅಚ್ಚರಿಯೇನಿಲ್ಲ.  ಅದರಲ್ಲೂ ಯಾವುದೇ ಪಕ್ಷದ ನಾಯಕರ ಹಂಗಿಗೂ ಬೀಳದೆ ಗ್ರಾಮ ಪಂಚಾಯತಿ ಸದಸ್ಯನಾಗಿದ್ದರೆ ಈ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಂದಲೂ ಉತ್ತಮ ಆಫರ್ ಸಿಗುವುದು ಖಚಿತ. ಮೊದಲ ಪ್ರಾಶಸ್ತ್ಯದ ಮತ ಹಾಗೂ ಎರಡನೇ ಪ್ರಾಶಸ್ತ್ಯದ ಮತ ಎಂದು ಎರಡು ಮತಗಳನ್ನು ನೀಡುವ ಅವಕಾಶವಿದೆ. ಹೀಗಾಗಿ ಪಕ್ಷದ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಎರಡನೇ ಮತವನ್ನು ಬೇರೆಯವರಿಗೆ ಹಾಕುವ ಅವಕಾಶವಿದೆ. ಎರಡನೇ ಪ್ರಾಶಸ್ತ್ಯ ಮತಗಳನ್ನು ಪಡೆದವರು ಆಯ್ಕೆಯಾಗುವ ಅವಕಾಶವಿದೆ.

ಕೋಟಿ ಕುಭೇರ, ಯುವಕರಿಗೆ ಟಿಕೆಟ್ ಕೊಟ್ಟಿದ್ದೇ ಅಚ್ಚರಿ..!

ಈ ಬಾರಿ  25 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ ವಿಧಾನ ಪರಿಷತ್ ಹಿರಿಯ ಮನೆ ಎನ್ನುವುದು ಈ ಹಿಂದಿನಿಂದಲೂ‌ ನಡೆದುಕೊಂಡು ಬಂದಿರುವ ಪದ್ಧತಿ. ವಿಧಾನಸಭೆಯಲ್ಲಿ ಶಾಸಕರಾಗಿ ಆಯ್ಕೆಯಾಗಿ ಬಂದವರು ಏನಾದರೂ ತಪ್ಪು ನಿರ್ಣಯ ತೆಗೆದುಕೊಂಡಾಗ ಹಿರಿಯರ ಮನೆ ಎಂಬ ವಿಧಾನ ಪರಿಷತ್‌ನಲ್ಲಿ ಗಮನ ಸೆಳೆಯುವ ಚರ್ಚೆಗಳ ಮೂಲಕ ವಿಧಾನಸಭೆಯಲ್ಲಿ ಮಾಡಿರುವ ತಪ್ಪನ್ನು ತಿದ್ದುವುದು ಪರಿಷತ್‌ನ ಮುಖ್ಯ ಉದ್ದೇಶ. ಆದರೆ ಇದೀಗ ಶಾಸಕರಾಗಿ ಆಯ್ಕೆ ಆಗಲು ಅರ್ಹರಲ್ಲದವರು, ರಾಜಕಾರಣಿಗಳ ಮಕ್ಕಳು, ರಾಜಕೀಯ ನಾಯಕರ ಸಂಬಂಧಿಕರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಕೆಟ್ಟ ಪರಿಪಾಠ ಶುರು ಮಾಡಲಾಗಿದೆ. ಇನ್ನೂ ಕೋಟಿ ಕೋಟಿ ಹಣವಿದ್ದವರನ್ನು ಪರಿಷತ್‌ಗೆ ಆಯ್ಕೆ ಮಾಡುವುದಕ್ಕೆ ಮುಂದಾಗಿರುವುದು ದುರಂತವೇ ಸರಿ.

Related Posts

Don't Miss it !