ಪ್ರೇಮಿಗಳು ಸ್ವಲ್ಪ ದಿನದಲ್ಲೇ ಮಸ್ತಿ ಬಳಿಕ ಬದಲಾಗುವುದು ಯಾಕೆ..? ಕೊಲ್ಲುವುದೂ ಯಾಕೆ..?

ಬೆಂಗಳೂರು ಸೇರಿದಂತೆ ದೇಶದ ಎಲ್ಲಾ ಕಡೆಗಳಲ್ಲೂ ನಡೆಯುವ ಒಂದೇ ರೀತಿಯ ಘಟನೆ ಎಂದರೆ ಅದು ಪ್ರೀತಿ, ಪ್ರೇಮ, ಕೊನೆಗೆ ಕೊಲೆಯಲ್ಲಿ ಅಂತ್ಯ. ಇದಕ್ಕೆ ಕಾರಣ ನಾವು ಪಾಲಿಸಿಕೊಂಡು ಬರುತ್ತಿರುವ ಭಾವನಾತ್ಮಕ ಬದುಕು ಪ್ರಮುಖ ಕಾರಣ ಎನ್ನಬಹುದು. ಕಾಲೇಜು ಮೆಟ್ಟಿಲು ಹತ್ತಿದ ಸ್ನೇಹಿತರು ಪರಸ್ಪರ ಮೆಚ್ಚಿಕೊಂಡು ಕೈ ಕೈ ಹಿಡಿದು ಸುತ್ತಾಡುವುದು, ಮೈಗೆ ಮೈ ತಾಗಿಸಿಕೊಂಡು ಮನೋಲ್ಲಾಸ ಪಡೆಯುವುದು ಸರ್ವೇ ಸಾಮಾನ್ಯ. ಇಂದಿನ ಸಮಾಜದಲ್ಲಿ ಇದೆಲ್ಲವುಗಳಿಂದ ದೂರ ಇದ್ದೇನೆ ಎಂದರೆ ಅವರು ಸಮಾಜದಿಂದಲೇ ದೂರ ಉಳಿದಿದ್ದಾರೆ ಅಥವಾ ಸಮಾಜವೇ ಅವರನ್ನು ತಿರಸ್ಕಾರದಿಂದ ನೋಡುತ್ತಿದೆ ಎಂದು ಬಣ್ಣಿಸುವುದೇ ಹೆಚ್ಚು. ಆದರೆ ಆ ಪ್ರೀತಿ, ಪ್ರೇಮ ಎಂದು ಸುತ್ತಾಡುವ ಜನರೇ ಕೊಲೆಪಾತಕರಾಗಿ ಕಾನೂನು ಎದುರು ಕೈಕಟ್ಟಿ ನಿಲ್ಲುವುದು ಯಾಕೆ ಎನ್ನುವ ಪ್ರಶ್ನೆಗೆ ಮಾತ್ರ ಉತ್ತರ ಸಿಗುತ್ತಿಲ್ಲ.

ಕಾಲೇಜು ಪ್ರೇಮಿಗಳು ಲಿವಿಂಗ್​ ಟುಗೆದರ್​ ವಾಸ..!

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೊಲಗೇರಿಯ ದಾನೇಶ್ವರಿ ಹಾಗೂ ಬಾಗಲಕೋಟೆ ಜಿಲ್ಲೆ ಬಾದಾಮಿಯ ಶಿವಕುಮಾರ್​ ಇಬ್ಬರೂ BLDEA ಕಾಲೇಜಿನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದು, ಆ ನಂತರ ಪ್ರೇಮಿಗಳಾಗಿ ಬದಲಾಗಿದ್ದರು. ನಾಲ್ಕು ವರ್ಷದ ಪ್ರೀತಿ ಬೆಂಗಳೂರಿಗೆ ಕಾಲಿಟ್ಟ ಬಳಿಕ ಬಹುತೇಕ ಬದಲಾಗಿತ್ತು. ತನ್ನನ್ನೇ ಅರ್ಪಿಸಿಕೊಂಡಿದ್ದ ದಾನೇಶ್ವರಿ ಮದುವೆಯಾದರೆ ಶಿವಕುಮಾರ್​ ಜೊತೆಗೆ ಮಾತ್ರ ಎಂದು ತನ್ನ ತಂದೆಗೂ ಹೇಳಿದ್ದಳು. ಅದೇ ಕಾರಣಕ್ಕೆ ಬೆಂಗಳೂರಿಗೆ ಬಂದಿದ್ದ ದಾನೇಶ್ವರಿ, ಶಿವಕುಮಾರ್​ ಮನೆಗೆ ಹೋಗಿ ಭೇಟಿಯಾಗಿ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದರು. ಆದರೆ ನೀನು ಪರಿಶಿಷ್ಟ ಜಾತಿ, ನಾನು ಲಿಂಗಾಯತರ ಹುಡುಗ, ನಮ್ಮಿಬ್ಬರ ಮದುವೆಗೆ ನಮ್ಮ ಮನೆಯಲ್ಲಿ ಒಪ್ಪುವುದಿಲ್ಲ ಎಂದಿದ್ದ ಶಿವಕುಮಾರ್​, ಮದುವೆ ನಿರ್ಧಾರದಿಂದ ಹಿಂದೆ ಸರಿದಿದ್ದ. ಇದರಿಂದ ಕುಪಿತಗೊಂಡಿದ್ದ ದಾನೇಶ್ವರಿ ಶಿವಕುಮಾರ್​ ಕೆಲಸ ಮಾಡುವ ಕಚೇರಿ ಎದುರು ಬಂದಿದ್ದಳು.

ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಯುವತಿಗೆ ಬೆಂಕಿ..!

ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿ ಶಿವಕುಮಾರ್​ ಕೆಲಸ ಮಾಡುತ್ತಿದ್ದು, ಸ್ನೇಹಿತೆ ದಾನೇಶ್ವರಿ ಕಚೇರಿಗೆ ಬಂದಿದ್ದಳು. ಆಕೆಯನ್ನು ಪುಸಲಾಯಿಸಿ ಮಾತನಾಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಶಿವಕುಮಾರ್​, ಅಲ್ಲೇ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನುವುದು ಯುವತಿ ದಾನೇಶ್ವರಿ ಕುಟುಂಬಸ್ಥರ ಆರೋಪ. ಅಷ್ಟಕ್ಕೂ ಆತ ಬೆಂಕಿ ಹಚ್ಚಿಲ್ಲ ಎನ್ನುವುದೇ ಆಗಿದ್ದರೆ ಆಸ್ಪತ್ರೆಗೆ ಸೇರಿಸಿ ನಾಪತ್ತೆ ಆಗಿರುವುದು ಯಾಕೆ..? ಎಂದು ಯುವತಿ ಸಂಬಂಧಿಕರು ಪ್ರಶ್ನಿಸುತ್ತಾರೆ. ಆದರೆ ಪೊಲೀಸರು ಮಾತ್ರ ಇಲ್ಲೀವರೆಗೂ ಆರೋಪಿಯನ್ನು ವಶಕ್ಕೆ ಪಡೆಯುವ ಕೆಲಸ ಮಾಡಿಲ್ಲ. ಬದಲಿಗೆ ಯುವತಿ ಮನೆಯವರನ್ನೇ ಮತ್ತೆ ಮತ್ತೆ ವಿಚಾರಣೆ ಮಾಡುತ್ತಾ ಕಾಲ ದೂಡುತ್ತಿದ್ದಾರೆ ಎಂದು ಕಣ್ಣೀರು ಹಾಕುತ್ತಾರೆ ಹೆತ್ತವರು. ಮಾರ್ಚ್​ 15ರಂದು ಘಟನೆ ನಡೆದಿದೆ. ಆದರೆ ಮಾರ್ಚ್​ 17ರಂದು ದೂರು ದಾಖಲಾಗಿದೆ. ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದೇವೆ ಎಂದಿದ್ದಾರೆ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್​ ಜೋಷಿ. ಆದರೆ ಈ ಕೇಸ್​ ನಿಲ್ಲುವುದಿಲ್ಲ ಎಂದು ಪೊಲೀಸರೇ ಹೇಳುತ್ತಿದ್ದಾರೆ. ನಮಗೆ ನ್ಯಾಯ ಬೇಕು ಎನ್ನುತ್ತಿದ್ದಾರೆ ಯುವತಿ ದಾನೇಶ್ವರಿ ಅಪ್ಪ.

ಪ್ರೀತಿ, ಪ್ರೇಮಯಲ್ಲಿ ದ್ವೇಷ ಹುಟ್ಟುವುದು ಯಾಕೆ..?

ಮನುಷ್ಯನಿಗೆ ಏನು ಸಿಗುತ್ತದೆಯೋ ಅದರ ಮೇಲಿನ ವ್ಯಾಮೋಹ ಕಡಿಮೆ ಆಗುವುದು ಮಾನವನ ಸೈಕಾಲಜಿ. ಒಂದು ವೇಳೆ ಸಿಗದಿದ್ದಾಗ ಅದಕ್ಕಾಗಿ ಶ್ರಮ ಪಡುತ್ತಾನೆ. ಸಿಕ್ಕಿದ ಮೇಲೆ ನಿರ್ಲಕ್ಷ್ಯ ಮಾಡುತ್ತಾನೆ. ಅದೇ ರೀತಿ ಪ್ರೀತಿ, ಪ್ರೇಮ ಎನ್ನುವ ಯುವಕ ಯುವತಿಯರು ದೇಹಸುಖಕ್ಕಾಗಿ ಹಂಬಲಿಸುತ್ತಾರೆ. ನಾಲ್ಕೈದು ವರ್ಷಗಳಲ್ಲಿ ಸಾಕಷ್ಟು ಬಾರಿ ದೇಹ ಸುಖ ಪಡೆದ ಬಳಿಕ ಮಾನವನ ಸಹಜ ಗುಣ ಎನ್ನುವಂತೆ ಆಸಕ್ತಿ ಕಡಿಮೆ ಆಗಿರುತ್ತದೆ. ಇದೇ ಕಾರಣದಿಂದ ಪ್ರೇಮ ಪ್ರಕರಣಗಳು ಸರ್ವೇ ಸಾಮಾನ್ಯವಾಗಿ ಮುರಿದು ಬೀಳುತ್ತವೆ. ಒಂದು ವೇಳೆ ನಾನು ನಿನ್ನನ್ನೇ ಮದುವೆ ಆಗುತ್ತೇನೆ ಎಂದು ಹಠ ಹಿಡಿದಾಗ ಈ ರೀತಿಯ ಪ್ರಕರಣಗಳು ಸಂಭವಿಸುತ್ತವೆ ಎನ್ನುತ್ತಾರೆ ಮನೋ ವೈದ್ಯರು. ವಿದೇಶಗಳಲ್ಲಿ ಪ್ರೀತಿ, ಪ್ರೇಮ ಎನ್ನುವ ಪದ್ಧತಿಗಿಂತಲೂ ಯುವಕ ಯುವತಿ ತಾರುಣ್ಯಕ್ಕೆ ಬಂದ ಬಳಿಕ ಸುತ್ತಾಡುವುದು, ದೇಹ ಸುಖ ಪಡೆಯುವುದು ಸಾಮಾನ್ಯ. ತಾವು ಜೀವನದಲ್ಲಿ ಒಂದು ಹಂತ ತಲುಪಿದ ಬಳಿಕ ಮದುವೆ ಆಗುತ್ತಾರೆ. ಆದರೆ ಪ್ರೀತಿಸಿದವನನ್ನೇ ಮದುವೆ ಆಗುವ ಪದ್ದತಿ ಅಲ್ಲಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಪ್ರೀತಿ ಪ್ರೇಮಕ್ಕೆ ಬೆಲೆ ಇದೆ. ಅನಾಹುತಗಳೂ ಕೂಡ ಹೆಚ್ಚು ಎನ್ನಬಹುದು.

Related Posts

Don't Miss it !