ವಿಸ್ಟಾಡೋಮ್​ ಬೋಗಿಯ ರೈಲು ಪ್ರವಾಸ, ಇದು ‘ಸಂಚಾರಿ ಸ್ವರ್ಗ’..!

ಬಹುತೇಕ ಮಂದಿ ಸಾರ್ವಜನಿಕ ಸಾರಿಗೆಯಲ್ಲಿ ಪ್ರವಾಸ ಕೈಗೊಂಡಾಗ ಕಿಟಕಿ ಭಾಗದ ಸೀಟ್​ ಬುಕ್​ ಮಾಡುವುದು ಬಹುತೇಕ ಜನರ ರೂಢಿ. ಗಾಳಿ ಬೆಳಕು ಜೊತೆಗೆ ಹೊರಗಿನ ಪರಿಸರವನ್ನು ಯಾವುದೇ ಸಮಸ್ಯೆಯಿಲ್ಲದೆ ಆಸ್ವಾಧಿಸಬಹುದು ಎನ್ನುವ ಲೆಕ್ಕಚಾರದಲ್ಲಿ ಕಿಟಕಿ ಭಾಗದ ಸೀಟ್​ ಬುಕ್​ ಮಾಡುತ್ತಾರೆ. ಈ ರೀತಿಯ ಮನಸ್ಥಿತಿಯುಳ್ಳ ಜನರನ್ನು ಮನಸ್ಸಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಇಲಾಖೆ ರೈಲಿನಲ್ಲಿ ವಿಸ್ಟಾಡೋಮ್​ ಕೋಚ್​ ಪರಿಚಯಿಸಿದ್ದು, ಇಂದಿನಿಂದ ಹಳಿ ಮೇಲೆ ಬಂದಿದೆ.

ಎಲ್ಲಿಂದ ಎಲ್ಲಿಗೆ ಈ ರೈಲು ಸಂಚಾರ..!

ಎಲ್ಲಾ ರೈಲುಗಳಲ್ಲೂ ಈ ರೀತಿಯ ವಿಸ್ಟಾಡೋಮ್​ ಬೋಗಿಗಳನ್ನು ರೈಲ್ವೆ ಇಲಾಖೆ ಅಳವಡಿಸಿಲ್ಲ. ಬದಲಿಗೆ ರೈಲು ಚಲಿಸುವ ಮಾರ್ಗದಲ್ಲಿ ಪ್ರಯಾಣಿಕರು ಸವಿಯಬಹುದಾದ ಪ್ರಕೃತಿ ಸೌಂದರ್ಯ ಎತೆಚ್ಚವಾಗಿ ಇರುವ ಮಾರ್ಗದಲ್ಲಿ ಈ ರೀತಿಯ ವಿಸ್ಟಾಡೋಮ್​ ಕೋಚ್​ಗಳನ್ನು ಅಳವಡಿಸಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಕ್ರಮ ಕೈಗೊಂಡಿದೆ. ಇಂದಿನಿಂದ (ಜುಲೈ 11) ಮಂಗಳೂರು – ಬೆಂಗಳೂರಿನ ನಡುವೆ ವಿಸ್ಟಾಡೋಮ್ ಕೋಚ್ ಹೊಂದಿರುವ ರೈಲು ಸಂಚರಿಸಲು ಆರಂಭಿಸಿದೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಗಾಜಿನ ಛಾವಣಿ ಹೊಂದಿರುವ ಆಕರ್ಷಕ ವಿಸ್ಟಾಡೋಮ್‌ ಬೋಗಿ ಹೊಂದಿರುವ ರೈಲು ಆರಂಭವಾಗಿದ್ದು, ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ದಕ್ಷಿಣ ಕನ್ನಡ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಹಸಿರು ನಿಶಾನೆ ತೋರಿದ್ದಾರೆ. ಕೋಚ್‌ನಲ್ಲಿ ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಅಳವಡಿಸಲಾಗಿದೆ.

ಹಗಲಿನಲ್ಲಿ ಪ್ರಕೃತಿಯ ರಮಣೀಯ ದೃಶ್ಯಗಳನ್ನು ವೀಕ್ಷಿಸಲು ಅನುಕೂಲವುಳ್ಳ ವಿಸ್ಟಾಡೋಮ್ ಕೋಚ್ ಹೊಂದಿರುವ ರೈಲು, ಪಶ್ಚಿಮ ಘಟ್ಟಗಳ ಮೂಲಕ ಸಂಚರಿಸಲಿದೆ. ಪ್ರಯಾಣದ ಸಂದರ್ಭದಲ್ಲಿ ಪ್ರಾಕೃತಿಕ ಸೊಬಗನ್ನು ಸವಿಯಲು ರಚಿಸಲಾಗಿರುವ ವಿಸ್ಟಾಡೋಮ್ ವಿಂಡೋಸ್ ಹೊಂದಿದ್ದು, ಪ್ರಯಾಣದ ಸಂದರ್ಭದಲ್ಲಿ ಪ್ರಕೃತಿಯ ದೃಶ್ಯಾವಳಿಗಳು ಬೆರಗುಗೊಳಿಸಲಿದೆ. ಒಂದು ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲಿ 44 ಆಸನದ ವ್ಯವಸ್ಥೆ ಹೊಂದಿವೆ. ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ 55 ಕಿಲೋ ಮೀಟರ್​ ಹಾದುಹೋಗುವ ಸಂಚಾರದಲ್ಲಿ ಪ್ರಕೃತಿ ಸೌಂದರ್ಯ ಸವಿಯಬಹುದು.

ಮಾರ್ಗಮಧ್ಯೆ ಏನೆಲ್ಲಾ ನೋಡಬಹುದು..?

ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯ ತಲುಪುವ ತನಕ ಅದ್ಬುತ ಪ್ರಕೃತಿ ಸೌಂದರ್ಯ ನಿಮ್ಮದಾಗಲಿದೆ. ಅಂಕು ಡೊಂಕು ಅಳಿಗಳ ಮೇಲೆ ರೈಲು ಹೋಗುತ್ತಿದ್ದರೆ ಕಾನನದ ನಡುವೆ ಹರಿಯುವ ನದಿ, ತೊರೆಗಳು, ಬೆಟ್ಟ ಗುಡ್ಡಗಳು, ಮೇಲ್ಸೇತುವೆಗಳು, ಸುರಂಗಗಳು ಕಣ್ಣೆದುರಿಗೆ ಬರಲಿವೆ. ಕುಕ್ಕೆ ಸುಬ್ರಹ್ಮಣ್ಯಕ್ಕೂ ಮುನ್ನ ಕಿಲೋ ಮೀಟರ್​ ಅಷ್ಟು ಬೃಹತ್​ ಸುರಂಗ ಹಾದು ಹೋಗುವುದೇ ಸೊಗಸು. ಈ ವಿಸ್ಟಾಡೋಮ್​ ರೈಲಿನಲ್ಲಿ ಸಂಚಾರ ಮಾಡಲು ಶತಾಬ್ದಿಯ ಎಕ್ಸಿಕ್ಯೂಟಿವ್​ ಕ್ಲಾಸ್​ ಚಾರ್ಜೆಸ್​ ಇರಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಬೆಂಗಳೂರು ಮಂಗಳೂರಿಗೆ ಹಗಲು ವೇಳೆಯಲ್ಲಿ ತೆರಳು ರೈಲು ಇದಾಗಿರುವ ಕಾರಣ ಒಂದು ರಾತ್ರಿ ಮಂಗಳೂರಿನಲ್ಲಿ ಉಳಿಯಲು ಹೋಗುವಂತೆ ಪ್ಲ್ಯಾನ್​ ಮಾಡಿಕೊಂಡರೆ ಒಳಿತು. ಇಲ್ಲವಾದರೆ ಈ ಕಡೆಯಿಂದ ವಿಸ್ಟಾಡೋಮ್​ ರೈಲಿನಲ್ಲಿ ಮಂಗಳೂರು ತಲುಪಿ, ಆ ಕಡೆಯಿಂದ ಸಾಮಾನ್ಯ ಬಸ್​ ಮೂಲಕ ಬೆಂಗಳೂರು ತಲುಪುವುದಾದರೆ ಒಂದೇ ದಿನದಲ್ಲಿ ವಿಸ್ಟಾಡೋಮ್​ ರೈಲು ಸಂಚಾರದ ಅನುಭವ ನಿಮ್ಮದಾಗಲಿದೆ.

Related Posts

Don't Miss it !