ಯಾವ ಧರ್ಮ ಆದರೇನು..? ಮೂರು ದಿನದ ಬದುಕಿಗೆ..? ಅರಿಯದಿವ ಮೂರ್ಖರಲ್ಲ ತಮ್ಮದೇ ಸ್ವಾರ್ಥಕೆ..

ಕರ್ನಾಟಕ ಧಾರ್ಮಿಕ ಸಂರಕ್ಷಣಾ ವಿಧೇಯಕ 2021 ವಿಧಾನಸಭೆಯಲ್ಲಿ ಅಂಗೀಕಾರ ಆಗಿದೆ. ಇನ್ನೂ ಕೂಡ ವಿಧಾನಪರಿಷತ್‌ನಲ್ಲಿ ಅಂಗೀಕಾರ ಆಗಬೇಕಿದೆ. ಆದರೂ ಅಷ್ಟರೊಳಗೆ ಘರ್ ವಾಪಸಿ ಎನ್ನುವ ಕೂಗು ಶುರುವಾಗಿದೆ.‌ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಭಾರತದಲ್ಲಿ ಇರುವ ಎಲ್ಲರೂ ಹಿಂದೂಗಳು. ಅವರನ್ನು ಮತ್ತೆ ಹಿಂದೂ ಧರ್ಮಕ್ಕೆ ವಾಪಸ್ ಕರೆತರುವ ಕೆಲಸ ಮಾಡಬೇಕಿದೆ. ಅವರೆಲ್ಲರೂ ನಮ್ಮ ಅಣ್ಣ ತಮ್ಮಂದಿರು, ಹಿಂದಿನ ಕಾಲದಲ್ಲಿ ಆರ್ಥಿಕ, ಸಾಮಾಜಿಕ ಸೇರಿದಂತೆ ಹಲವಾರು ಕಾರಣಗಳಿಗೆ ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಅನುಯಾಯಿಗಳು ಆಗಿದ್ದಾರೆ. ಅವರನ್ನು ನಾವು ನಮ್ಮ ಹಿಂದೂ ಧರ್ಮಕ್ಕೆ ವಾಪಸ್ ಕರೆತರುವ ಕೆಲಸ ಮಾಡಬೇಕಿದೆ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ.

ಟಾರ್ಗೆಟ್ ಫಿಕ್ಸ್ ಮಾಡಿಕೊಂಡು ಘರ್ ವಾಪಸಿ ಮಾಡಬೇಕು..!!

ನಮ್ಮ ದೇಶದಲ್ಲಿರುವ ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಿರುವ ಜನರು ಮೂಲತಃ ಹಿಂದೂ ಧರ್ಮದವರು. ಆದರೆ ಆಸೆಗೋ, ಭಯದಲ್ಲೋ, ಒತ್ತಡದಲ್ಲೋ ಅಂದಿನ ಸಂಧರ್ಭದಲ್ಲಿ‌ ಬೇರೊಂದು ಧರ್ಮದ ಪ್ರಭಾವಕ್ಕೆ ಒಳಗಾಗಿದ್ದಾರೆ ಅಥವಾ ಬೇರೊಂದು ಧರ್ಮದ ಆದೇಶಕ್ಕೆ ಮಣಿದು ಆ ಧರ್ಮದ ಅನುಯಾಯಿಗಳು ಆಗಿರಬಹುದು. ಮೊಗಲರು, ಡಚ್ಚರು, ಬ್ರಿಟೀಷರನ್ನು ಈ ದೇಶದಿಂದ ಓಡಿಸಿದ್ದೇವೆ. ಆದರೆ ಅವರ ಬಳುವಳಿಯನ್ನು ನಾವಿನ್ನೂ ಇಲ್ಲೇ ಉಳಿಸಿಕೊಂಡಿದ್ದೇವೆ. ಹೀಗಾಗಿ ಸಂಪೂರ್ಣ ಜಯ ಸಾಧಿಸಿದಂತೆ ಆಗಿಲ್ಲ ಎಂದಿದ್ದರು. ಕೇವಲ ಭಾರತದಲ್ಲಿರುವ ಮುಸ್ಲಿಂ, ಕ್ರೈಸ್ತರು ಮಾತ್ರವಲ್ಲದೆ ಪಾಕಿಸ್ತಾನದ ಮುಸ್ಲಿಮರನ್ನೂ ಹಿಂದೂಗಳನ್ನಾಗಿ ಮಾಡಬೇಕು. ದೇವಸ್ಥಾನಗಳು ಹಾಗೂ ಮಠಗಳು ಒಂದು ಹಬ್ಬಕ್ಕೆ ಅಥವಾ ಒಂದು ವರ್ಷಕ್ಕೆ ಇಂತಿಷ್ಟು ಜನರನ್ನು ನಾವು ಘರ್​ ವಾಪಸಿ ಮೂಲಕ ಹಿಂದೂ ಧರ್ಮಕ್ಕೆ ಮರಳಿ ಕರೆ ತರುತ್ತೇವೆ ಎನ್ನುವ ಟಾರ್ಗೆಟ್​ ಫಿಕ್ಸ್​ ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದರು.

Read This;

ಆರ್​ಎಸ್​ಎಸ್​ನಲ್ಲಿ ಘರ್​ ವಾಪಸಿ ಬಗ್ಗೆ ಪ್ರಮಾಣ ಸ್ವೀಕಾರ..!

ಕರ್ನಾಟಕ ಧಾರ್ಮಿಕ ಸಂರಕ್ಷಣೆ ವಿಧೇಯಕ 2021ರ ಹಿಂದಿರುವ ಅಜೆಂಡಾ ಸಂಘ ಸಂಸ್ಥೆಯದ್ದು ಎನ್ನುವುದು ವಿರೋಧ ಪಕ್ಷಗಳ ಆರೋಪ. ಇದನ್ನು ಸ್ವತಃ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಒಪ್ಪಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಆರ್​ಎಸ್​ಎಸ್​ನ ಪರಮಪೂಜ್ಯ ಸರಸಂಚಾಲಕರು ಈ ಬಗ್ಗೆ ಪ್ರಮಾಣವನ್ನು ಮಾಡಿಸಿದ್ದು, ಎಲ್ಲರೂ ಒಬ್ಬೊಬ್ಬರನ್ನು ಘರ್​ ವಾಪಸಿ ಮಾಡಿಸುತ್ತೇವೆ ಎಂದು ಮಾತನ್ನು ಪಡೆದಿದ್ದಾರಂತೆ. ಹಿಂದೂ ರಾಷ್ಟ್ರದಲ್ಲಿ ಹಿಂದೂಗಳೇ ಆಡಳಿತ ನಡೆಸಬೇಕು. ಹಿಂದೂಗಳ ಕೈಯ್ಯಲ್ಲೇ ಅಧಿಕಾರ ಇರಬೇಕು. ಟಿಪ್ಪು ಸುಲ್ತಾನನ ಖಡ್ಗಕ್ಕೆ ಹೆದರಿ ಮುಸಲ್ಮಾನ ಧರ್ಮ ಸ್ವೀಕರಿಸಿರುವ ಅದೆಷ್ಟೋ ಕುಟುಂಬಗಳಿವೆ ಅವರನ್ನು ಮಾತೃ ಧರ್ಮವಾದ ಹಿಂದೂ ಧರ್ಮಕ್ಕೆ ವಾಪಸ್​ ಕರೆತರುವ ಕೆಲಸ ಮಾಡಬೇಕು ಎಂದು ವಿನಯದಿಂದ, ಗರ್ವದಿಂದ ತುಂಬಿದ್ದ ಸಭೆಯಲ್ಲಿ ಹೇಳುವ ಮೂಲಕ ಕರತಾಡತನ ಪಡೆದಿದ್ದರು. ಆದರೆ ಎಲ್ಲೆಡೆ ಆಕ್ರೋಶ ವ್ಯಕ್ತವಾದ ಬಳಿಕ ತನ್ನ ಹೇಳಿಕೆಯನ್ನು ವಾಪಸ್​ ಪಡೆದಿದ್ದಾರೆ. ಅದರಲ್ಲಿ ವಿಶೇಷ ಇಲ್ಲ ಎನಿಸುತ್ತದೆ. ತಾನು ಕೊಡಬೇಕಿದ್ದ ಸಂದೇಶ ಕೊಟ್ಟ ಬಳಿಕ ಹೇಳಿಕೆ ವಾಪಸ್​ ಪಡೆದರೆ ಆಗುವುದೇನಿದೆ..? ಅಲ್ಲವೇ..?

‘ಮತಾಂತರ ನಿಷೇಧ ಕಾಯ್ದೆ’ ದಂಗೆಗೆ ರಹದಾರಿ ಆಗುತ್ತಾ..?

ಮತಾಂತರ ನಿಷೇಧ ಕಾಯ್ದೆಯಲ್ಲಿ ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಆಗುವಾಗ ಸಾಕಷ್ಟು ಕಟ್ಟುನಿಟ್ಟಿನ ಕಾನೂನು ಪ್ರಕ್ರಿಯೆಗಳನ್ನು ಪೂರೈಸಬೇಕಿದೆ. ಆದರೆ ನಾನು ಹಿಂದೂ ಧರ್ಮಕ್ಕೆ ವಾಪಸ್​ ಆಗುತ್ತಿದ್ದೇನೆ ಎಂದರೆ ಸಾಕಷ್ಟು ಸರಳ ರೀತಿಯಲ್ಲಿ ಹಿಂದೂ ಧರ್ಮಕ್ಕೆ ಬರಬಹುದು. ಇದು ಘರ್​ ವಾಪಸಿ ಮೂಲಕ ಆಗುತ್ತದೆ. ಆದರೆ ಯಾವ ಧರ್ಮವೇ ಆಗಲಿ ಹಿಂಸೆಯನ್ನು ಪ್ರಚೋದನೆ ಮಾಡುವುದಿಲ್ಲ. ತನ್ನ ಧರ್ಮದಲ್ಲಿ ತಾನೇ ಶ್ರೇಷ್ಠ ಎಂದು ಹೇಳಿಕೊಂಡರೂ ಮತ್ತೊಂದು ಧರ್ಮವನ್ನು ಪ್ರೀತಿಸು ಎಂದೇ ಹೇಳಲಾಗುತ್ತದೆ. ತನ್ನ ಧರ್ಮವನ್ನು ಪ್ರಚಾರ ಮಾಡಬಹುದು. ತನಗೆ ಬೇರೊಂದು ಧರ್ಮದ ಮೇಲೆ ಆಸೆ ಉಂಟಾದರೆ ತಾನು ಆ ಧರ್ಮವನ್ನು ಆಚರಣೆ ಮಾಡುವ ಧಾರ್ಮಿಕ ಸ್ವಾತಂತ್ರ್ಯವನ್ನು ಸಂವಿಧಾನದಲ್ಲಿ ನೀಡಲಾಗಿದೆ. ಆದರೆ ಸಂವಿಧಾನವನ್ನೂ ತಿದ್ದುಪಡಿ ಮಾಡದೆ ಮತಾಂತರ ನಿಷೇಧ ಕಾಯ್ದೆ ಹೆಸರಿನಲ್ಲಿ ಅಡ್ಡ ಗೆರೆ ಹಾಕಿಕೊಂಡು ಹಿಂಸಾಚಾರ ಶುರುವಾಗುತ್ತಾ..? ಹಿಂದೂ ಧರ್ಮಕ್ಕೆ ಬರಬೇಕು, ಇಲ್ಲದಿದ್ದರೆ ನಿನಗೆ ಉಳಿಗಾಲವಿಲ್ಲ ಎನ್ನುವ ನೈತಿಕ ಪೊಲೀಸ್​ಗಿರಿ ಆಗುತ್ತಾ..? ಸಮಾಜದ ಸ್ವಾಸ್ಥ್ಯ ಈ ಮೂಲಕ ಹಾಳಾಗುತ್ತಾ..? ಅಧಿಕಾರ ನಡೆಸುವ ರಾಜಕಾರಣಿಗಳು ಮತ ಲೆಕ್ಕಾಚಾರದಲ್ಲಿ ಪ್ರೋತ್ಸಾಹಿಸುತ್ತಾರಾ..? ಎನ್ನುವ ಆತಂಕಗಳು ಶುರುವಾಗುವಂತೆ ಮಾಡಿದೆ. ಆದರೆ ಬದುಕುವುದು ಕೆಲವೇ ದಿನಗಳು ಮಾತ್ರ. ಅಷ್ಟರಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಇಷ್ಟೆಲ್ಲಾ ರಾದ್ಧಾಂತ ಬೇಕಾ..? ಎನ್ನುವುದು ಮನಸ್ಸಿನ ಭಾವನೆ. ನೀವೇನಂತೀರಿ..? ಕಮೆಂಟ್​ ಮಾಡಿ..

Alos This;

Related Posts

Don't Miss it !