ದರ್ಶನ್​ ಗಲಾಟೆ ವಿಚಾರ ಇವತ್ತು ಎಲ್ಲೆಲ್ಲಿ ಏನೇನು ಆಯ್ತು..? ಕಂಪ್ಲೀಟ್​ ರಿಪೋರ್ಟ್​..

ದರ್ಶನ್​ ಗಲಾಟೆ ವಿಚಾರದಲ್ಲಿ ಇವತ್ತು ಸಾಕಷ್ಟು ಬೆಳವಣಿಗೆಗಳು ನಡೆದಿವೆ. ನಿನ್ನೆ ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ದ ನಟ ದರ್ಶನ್​ ಗಲಾಟೆ ವಿಚಾರವಾಗಿ ಸಂದೇಶ್ ಹೋಟೆಲ್​ಗೆ ಭೇಟಿ ನೀಡಿ ಸಂದೇಶ್​ ನಾಗರಾಜ್​ ಜೊತೆಗೆ ಚರ್ಚೆ ಮಾಡಿದ್ರು. ಆ ಬಳಿಕ ಇಂದು ದಲಿತ ವೆಲ್ ಫೇರ್ ಟ್ರಸ್ಟ್​ನ ಅಧ್ಯಕ್ಷ ಶಾಂತರಾಜು ದರ್ಶನ್​ ಬಂಧನಕ್ಕೆ ಒತ್ತಾಯ ಮಾಡಿದ್ರು. ಹಲ್ಲೆ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ದರ್ಶನ್ ನಾಯಕ ನಟನಲ್ಲ, ವಿಲನ್ ಎಂದು ಕಿಡಿಕಾರಿದ್ರು. ದರ್ಶನ್​ಗೆ ಡಾ. ರಾಜಕುಮಾರ್ ಮಾದರಿಯಾಗಬೇಕಿತ್ತು, ಆದರೆ ಇವರು ವೀರಪ್ಪನ್ ರೀತಿ ನಡವಳಿಕೆ ತೋರಿಸುತ್ತಿದ್ದಾರೆ. ಇವರ ದುವರ್ತನೆ ಇಡೀ ಚಿತ್ರರಂಗಕ್ಕೆ ಮಾಡಿರುವ ಅಪಮಾನ. ಕೂಡಲೇ ದರ್ಶನ್ ಬಂಧಿಸಿ ತನಿಖೆ ಮಾಡಿದ್ರೆ ಮಾತ್ರ ಸತ್ಯಾಂಶ ಹೊರಬರಲಿದೆ ಎಂದು ಒತ್ತಾಯ ಮಾಡಿದ್ರು.

ನನ್ನ ಮೇಲೆ ಹಲ್ಲೆ ಮಾಡಿಲ್ಲ, ಬೈಯ್ದಿದ್ದು ಮಾತ್ರ..!

ಹೋಟೆಲ್ ಸಿಬ್ಬಂದಿ ಗಂಗಾಧರ್​ ಮೇಲೆ ನಟ ದರ್ಶನ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿತ್ತು. ಆದ್ರೆ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ ಹೋಟೆಲ್ ಸಿಬ್ಬಂದಿ ಗಂಗಾಧರ್, ನಾನು ದಲಿತ ಸಮುದಾಯಕ್ಕೆ ಸೇರಿದವನಲ್ಲ. ನಾನು ನಾಯರ್ ಸಮುದಾಯಕ್ಕೆ ಸೇರಿದವನು. ದರ್ಶನ್ ನಮ್ಮ ಮೇಲೆ ಸಿಟ್ಟಾಗಿದ್ದು ನಿಜ. ನನ್ನ ಮೇಲೆ ಯಾವುದೇ ರೀತಿಯ ದೈಹಿಕ ಹಲ್ಲೆ ಮಾಡಿಲ್ಲ . ಹಲ್ಲೆಯಾಗಿದ್ದರೆ ನನ್ನ ಮುಖದಲ್ಲಿ ಗಾಯಗಳಿರಬೇಕಿತ್ತು. ಆದರೆ ಯಾವುದೇ ಗಾಯಗಳೂ ಇಲ್ಲ ಎಂದು ಮಾಸ್ಕ್ ತೆಗೆದು ಕ್ಯಾಮರಾಗಳಿಗೆ ಮುಖ ತೋರಿಸಿದರು. ಇನ್ನೂ ನನಗೆ ಮದುವೆಯಾಗಿಲ್ಲ ನಾನೂ ಈಗಲೂ ಬ್ಯಾಚ್ಯುಲರ್. ಹಾಗಾಗಿ ನನ್ನ ಹೆಂಡತಿ ಹೋಟೆಲ್ ಬಳಿ ಪೊರಕೆ ಹಿಡಿದು ಬಂದಿದ್ದಳು ಎಂಬುದು ಸುಳ್ಳು. ಬಹುಶಃ ಹೋಟೆಲ್ ಕ್ಲೀನ್ ಮಾಡುವ ಮಹಿಳೆಯನ್ನು ನೋಡಿ ಹಾಗೆ ಭಾವಿಸಿರಬಹುದು ಎಂದು ಸ್ಪಷ್ಟೀಕರಣ ನೀಡಿದ್ರು.

ಮಾಲೀಕ ಸಂದೇಶ್​ ಸ್ವಾಮಿ ಜೊತೆಗೆ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಗಂಗಾಧರ್​

ಕಾರ್ಮಿಕ ಸಂಘಟನೆ ಸದಸ್ಯರ ಭೇಟಿ..!

ಸಂದೇಶ್ ಪ್ರಿನ್ಸ್ ಹೋಟೆಲ್​ಗೆ ಕಾರ್ಮಿಕ ಸಂಘಟನೆ ಸದಸ್ಯರು ಭೇಟಿ ನೀಡಿದ್ರು. ಕರ್ನಾಟಕ ರಾಜ್ಯ ಹೋಟೆಲ್ ಕಾರ್ಮಿಕರ ಸಂಘಟನೆ ಸದಸ್ಯರು ಸಿಬ್ಬಂದ ಮೇಲೆ ನಡೆದಿರುವ ಹಲ್ಲೆ ವಿಚಾರವಾಗಿ ಮಾಹಿತಿ ಕಲೆ ಹಾಕಿದ್ರು. ಕರ್ನಾಟಕ ರಾಜ್ಯ ಹೋಟೆಲ್ ಕಾರ್ಮಿಕರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಮಾಹಿತಿ ಪಡೆದುಕೊಳ್ಳಲಾಯ್ತು. ಆ ಬಳಿಕ ಮಾತನಾಡಿದ ರಾಜ್ಯಾಧ್ಯಕ್ಷೆ ಪ್ರಿಯ ರಮೇಶ್, ನಟ ದರ್ಶನ್​ ಬೈದ್ರು ಅಷ್ಟೇ ಎಂದಿದ್ದಾರೆ ಗಂಗಾಧರ್​, ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಇಂದ್ರಜಿತ್​ ಸುದ್ದಿಗೋಷ್ಠಿ..!

ದರ್ಶನ್​ ಹಲ್ಲೆ ವಿಚಾರವಾಗಿ ಮಾಹಿತಿ ನೀಡಲು ಇಂದ್ರಜಿತ್​ ಲಂಕೇಶ್​ ಸುದ್ದಿಗೋಷ್ಠಿ ನಡೆಸಿದ್ರು.ಮುಂಚೆಯಿಂದಲೂ ನನ್ನ ಟ್ರ್ಯಾಕ್ ರೆಕಾರ್ಡ್ ನೋಡಿದ್ದೀರಿ, ಸಾಮಾಜಿಕ ಕಾಳಜಿಯಿಂದ ಮುಂದೆ ಬರೋದು ನಾನು. ನನ್ನ ಮಾತಿಗೆ ನಾನು ಬದ್ದ. ಬಡವರು, ಅಲ್ಲಿನ ವೇಟರ್​ಗಳಿಗೆ ನ್ಯಾಯ ಕೊಡಿಸಲು ಬಂದಿದ್ದೇನೆ. ಯಾರು ನೋವು ತಿಂದಿದ್ದಾರೆ ಅವರ ಬಳಿ ಕ್ಷಮೆ ಕೇಳಿ. ನ್ಯಾಯ ಒದಗಿಸಿ ಕೊಡಿ. ಇದಕ್ಕಿಂತ ಬೇರೆ ನನಗೆ ಏನೂ ಬೇಕಿಲ್ಲ ಎಂದಿದ್ದಾರೆ. ಈಗಾಗಲೇ ಆಡಿಯೋ ಒಂದು ಹೊರಗಡೆ ಬಂದಿದೆ. ಅದರಲ್ಲಿ ಹೊಟೇಲ್ ಮಾಲೀಕ ತಪ್ಪು ಒಪ್ಪಿಕೊಂಡಿದ್ದಾರೆ. ಈಗ ತೋಜೋವಧೆ ಆಗುವ ಮುಂಚೆ ಕ್ಷಮೆ ಕೇಳಿ ಎಂದು ಆಗ್ರಹ ಮಾಡಿದ್ದಾರೆ.

ಕುಮಾರಸ್ವಾಮಿ ಜೊತೆಗಿನ ಫೋಟೋ ವೈರಲ್​..!

ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ ಹಾಗೂ ಇಂದ್ರಜಿತ್​ ಲಂಕೇಶ್​ ಕುಳಿತಿರುವ ಫೋಟೋ ಒಂದು ವೈರಲ್​ ಆಗಿತ್ತು. ಆ ವಿಚಾರವಾಗಿ ಮಾತನಾಡಿದ ಇಂದ್ರಜಿತ್​ ಲಂಕೇಶ್​, ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರನ್ನು ಇಲ್ಲಿ ತರಬೇಡಿ, ನಾನು ಕುಮಾರಸ್ವಾಮಿಯವರನ್ನ ಹಲವು ಬಾರಿ ಇಂಟರ್ ವ್ಯೂ ಮಾಡಿದ್ದೇನೆ. ಇಲ್ಲಿ ಬಡವರ ಪರವಾಗಿ ನಾನು ಬಂದಿದ್ದೇನೆ. ಮೇರು ನಟ ಹೇಗಿರಬೇಕು ಅನ್ನೋದನ್ನ ಡಾ. ರಾಜ್ ಕುಮಾರ್ ನೋಡಿ ಕಲಿಯಬೇಕು. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಪೋಟೊ ಹಾಕಿ ಏನೇನೋ ಹೇಳಬೇಡಿ ಎಂದಿದ್ದಾರೆ. ಇನ್ನೂ ಗೋಪಾಲ ರಾಜ್ ಇರಬಹುದು, ಗಂಗಾಧರ್ ಇರಬಹುದು ಅವರು ಬಡವರು. ಸಮಾಜದಲ್ಲಿ ಇದನ್ನ ಎದುರಿಸಲು ಅಗಲ್ಲ. ಲೀಗಲ್ ಆಗಿ ಯಾವ ರೀತಿ ಮುಂದುವರಿಸಬೇಕು ಅನ್ನೋದ್ರ ಬಗ್ಗೆ ನಮ್ಮ ಲಾಯರ್ ಶ್ಯಾಮ್​ ಸುಂದರ್​ ಜೊತೆ ಮಾತಾಡಿದ್ದೇನೆ ಎಂದಿದ್ದಾರೆ.

ತನಿಖೆ ಮುಗಿಸಿದ ಬಳಿಕ ಮತ್ತೆ ಬಂದ ಪೊಲೀಸ್​..!

ಹಲ್ಲೆಗೆ ಒಳಗಾಗಿದ್ದಾರೆ ಎನ್ನಲಾದ ಗಂಗಾಧರ್​ ವಿಚಾರಣೆ ನಡೆಸಿದ ಪೊಲೀಸ್ರು ಹೋಟೆಲ್​ನಿಂದ ಹೊರನಡೆದಿದ್ದರು. ಅಷ್ಟರಲ್ಲಿ ಬೆಂಗಳೂರಿನಲ್ಲಿ ಇಂದ್ರಜಿತ್​ ಲಂಕೇಶ್​ ಒಂದು ಆಡಿಯೋ ರಿಲೀಸ್​ ಮಾಡಿದ್ರು. ಅದರಲ್ಲಿ ಸಂದೇಶ್​ ನಾಗರಾಜ್​ ಪುತ್ರ ಹಾಗೂ ಇಂದ್ರಜಿತ್​ ಮಾತನಾಡಿರುವ ಸಂಭಾಷಣೆ ಇತ್ತು. ಇದರಲ್ಲಿ ಹಲ್ಲೆ ಮಾಡಿರುವ ಬಗ್ಗೆ ಸಂದೇಶ್​ ಸ್ವಾಮಿ ಒಪ್ಪಿಕೊಂಡಿದ್ರು. ಈ ವಿಚಾರ ತಿಳಿಯುತ್ತಿದ್ದ ಹಾಗೆ ಪೊಲೀಸ್​ ಟೀಂ ಮತ್ತೆ ವಿಚಾರಣೆಗೆ ಬಂತು. ದೇವರಾಜ ಎಸಿಪಿ ಶಶಿಧರ್, ನಜರ್ ಬಾದ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ದೇವರಾಜ ಠಾಣೆ ಸಬ್ ಇನ್ಸ್‌ಪೆಕ್ಟರ್ ಸೇರಿ 7 ಜನರ ತಂಡ ಸೇರಿ ವಿಚಾರಣೆ ನಡೆಸಿದ್ರು.

ದರ್ಶನ್​ ಅಭಿಮಾನಿಗಳ ಪ್ರತಿಭಟನೆ

ಮೈಸೂರಿನಲ್ಲಿ ದರ್ಶನ್​ ಅಭಿಮಾನಿಗಳ ಪ್ರತಿಭಟನೆ..!

ಮೈಸೂರಿನ ಸ್ನೇಹಿತನ ಮನೆಯಲ್ಲಿದ್ದ ನಟ ದರ್ಶನ್​ ಮಾಧ್ಯಮಗಳ ಜೊತೆ ಮಾತನಾಡದೆ ಮೌನಕ್ಕೆ ಶರಣಾದರು. ಇಷ್ಟೆಲ್ಲಾ ಬೆಳವಣಿಗೆಗಳು ಆಗುತ್ತಿದ್ದಂತೆ ನಟ ದರ್ಶನ್​ ಅಭಿಮಾನಿಗಳು ಮೈಸೂರು ನ್ಯಾಯಾಲಯದ ಬಳಿ ಪ್ರತಿಭಟನೆ ಮಾಡಿದ್ರು. ಮೈಸೂರು ನಗರ ಪಾಲಿಕೆ ಸದಸ್ಯ ಲೋಕೇಶ್ ಪಿಯಾ ಇಂದ್ರಜಿತ್ ಲಂಕೇಶ್ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ರು. ಇಂದ್ರಜಿತ್ ಲಂಕೇಶ್ ವಿರುದ್ಧ ಘೋಷಣೆ ಕೂಗಿದ್ರು.

Related Posts

Don't Miss it !