ಫೇಸ್ ಬುಕ್, ವಾಟ್ಸಾಪ್, ಇನ್ಸ್‌ಟಾ ಬಂದ್ ಆಗಿದ್ದು ಯಾಕೆ..?

ವಿಶ್ವದಾದ್ಯಂತ ಸೋಷಿಯಲ್ ಮೀಡಿಯಾಗಳು ಏಕಾಏಕಿ ಬಂದ್ ಆಗಿದ್ದವು. ವಾಟ್ಸಪ್, ಫೇಸ್‌ಬುಕ್, ಇನ್ಸ್‌ಸ್ಟಾಗ್ರಾಮ್ ಆ್ಯಪ್‌ಗಳು ಬಂದ್ ಆಗಿದ್ದವು. ಇದರಿಂದ ವಿಶ್ವದ ಮಿಲಿಯನ್ಸ್ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದರು. ರಾತ್ರಿ 9 ಗಂಟೆ 10 ನಿಮಿಷ ಆಸುಪಾಸಲ್ಲಿ ವಾಟ್ಸಪ್, ಫೇಸ್‌ಬುಕ್, ಇನ್ಸ್‌ಟಾಗ್ರಾಮ್ ಏಕಕಾಲಕ್ಕೆ ಸ್ತಬ್ಧವಾದವು. ಮಾರ್ಕ್ ಜುಕರ್‌ಬರ್ಗ್ ಸಂಸ್ಥೆಯ ಸಂಪೂರ್ಣ ಸರ್ವರ್‌ಗಳು ಸ್ಥಗಿತವಾಯಿತು. ವಿಶ್ವದ ಕೋಟ್ಯಂತರ ಜನರು ರಾತ್ರಿ ಮನೆ, ಕಚೇರಿಯಲ್ಲಿ ಸಾಮಾಜಿಕ ಜಾಲತಾಣ ಬಳಸುತ್ತಿದ್ದ ವೇಳೆ ಹೀಗೆ ಸ್ಥಗಿತವಾಗಿದ್ದು, ಗ್ರಾಹಕರ ಬೇಸರಕ್ಕೆ ಕಾರಣವಾಯ್ತು. ಈ ಬಗ್ಗೆ ಟ್ವಿಟರ್‌ನಲ್ಲಿ ಸಂಕಷ್ಟ ತೋಡಿಕೊಂಡರು. ಆ ಬಳಿಕ ಫೇಸ್‌ಬುಕ್, ವಾಟ್ಸಾಪ್, ಇನ್ಸ್‌ಟಾಗ್ರಾಮ್ ಸಂಸ್ಥೆಗಳ ಟ್ವಿಟರ್ ಅಕೌಂಟ್‌ಗಳೂ ಕೂಡ ಮಾತನಾಡಿದವು. ತಾಂತ್ರಿಕ ಸಮಸ್ಯೆ ಆಗಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡು, ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ ಮಾಡುವ ವಿಶ್ವಾಸ ವ್ಯಕ್ತಪಡಿಸಿದವು.

ವಿಶ್ವದ ಎದುರು ಕೈ ಜೋಡಿಸಿದ ಜುಕರ್‌ಬರ್ಗ್..!

ಮಾರ್ಕ್ ಜುಕರ್‌ಬರ್ಗ್ ಸಂಸ್ಥೆಗೆ ವಿಶ್ವಾದ್ಯಂತ ತನ್ನದೇ ಆದ ಘನತೆ ಗೌರವಗಳಿವೆ. ಆದರೆ ಈ ರೀತಿಯ ತಾಂತ್ರಿಕ ಸಮಸ್ಯೆಯಿಂದಾಗಿ ವಿಶ್ವದ ಎದುರು ಕೈ ಜೋಡಿಸಿ ನಿಲ್ಲುವಂತೆ ಆಯ್ತು. ಸಾಮಾಜಿಕ ಜಾಲತಾಣ ಬಳಕೆದಾರರ ಎದುರು ಕ್ಷಮೆ ಕೇಳಿರುವ ಮೂರೂ ಸಂಸ್ಥೆಗಳು ಮತ್ತೆ ಸಮಸ್ಯೆ ಮರುಕಳಿಸದಂತೆ ಎಚ್ಚರ ವಹಿಸುವ ವಿಶ್ವಾಸ ವ್ಯಕ್ತಪಡಿಸಿವೆ. ಆದರೆ ನಡುರಾತ್ರಿ ಆದರೂ ಸಮಸ್ಯೆ ಸರಿಪಡಿಸಲು ಸಾಧ್ಯವೇ ಆಗಲಿಲ್ಲ. ಮಧ್ಯರಾತ್ರಿ ಒಂದು ಗಂಟೆ ತನಕವೂ ದಿ ಪಬ್ಲಿಕ್ ಸ್ಪಾಟ್ ಕಣ್ಗಾವಲು ಇರಿಸಿದ್ದು, ವಾಟ್ಸ್ ಆ್ಯಪ್ ಸೇರಿದಂತೆ ಫೇಸ್‌ಬುಕ್, ಇನ್ಸ್‌ಟಾಗ್ರಾಮ್ ಕೆಲಸ ಆರಂಭ ಮಾಡಲಿಲ್ಲ.

ಮಾಧ್ಯಮಗಳಿಗೆ ವಾಟ್ಸಾಪ್ ಹೊಡೆತ..!

ಭಾರತೀಯ ಕಾಲಮಾನ ರಾತ್ರಿ 9 ಗಂಟೆ ಮೀರಿದ್ದರಿಂದ ಜನಸಾಮಾನ್ಯರಿಗೆ ಇದರಿಂದ ಸಾಕಷ್ಟು ಸಮಸ್ಯೆ ಆಗಲಿಲ್ಲ. ಆದರೆ ಮಾಧ್ಯಮಗಳು ಕ್ಷಣಕ್ಷಣದ ಸುದ್ದಿ ರವಾನೆ ಮಾಡಲು ವಾಟ್ಸಾಪ್ ಬಳಕೆ ಮಾಡುವುದು ಸಾಮಾನ್ಯ. ಅದರಲ್ಲೂ ದೃಶ್ಯ ಮಾಧ್ಯಮಗಳು ವಾಟ್ಸ್ ಆ್ಯಪ್ ಮೇಲೆ ಹೆಚ್ಚು ಅವಲಂಭಿತ ಆಗಿರುವ ಕಾರಣ ಸಾಲಷ್ಟು ಸಮಸ್ಯೆ ಎದುರಿಸುವ ಪರಿಸ್ಥಿತಿ ಉಂಟಾಯ್ತು. ದೂರದಲ್ಲಿ ಎಲ್ಲೋ ನಡೆದ ಘಟನೆಯನ್ನು ಕ್ಷಣ ಮಾತ್ರದಲ್ಲಿ ಟಿವಿ ಪರದೆ ಮೇಲೆ ತರುವಲ್ಲಿ ವಾಟ್ಸಾಪ್ ಬಳಸುತ್ತಿದ್ದವರು ಕೈ ಕೈ ಹಿಸುಕಿಕೊಳ್ಳುವಂತೆ ಆಗಿದ್ದು ಮಾತ್ರ ಸುಳ್ಳಲ್ಲ. ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕ ಮಾಧ್ಯಮಗಳಿಗೆ ಯಾವುದೇ ಸಮಸ್ಯೆ ಆಗಲಿಲ್ಲ.

ಕಳೆದ ಜುಲೈನಲ್ಲಿ ಒಮ್ಮೆ ಇದೇ ರೀತಿಯ ಸಮಸ್ಯೆ..!

ಕಳೆದ ಜುಲೈನಲ್ಲೂ ಇದೇ ರೀತಿ ಸಮಸ್ಯೆ ಎದುರಾಗಿತ್ತು. ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ತಾಂತರಿಕ ದೋಷ ಉಂಟಾಗಿರಲಿಲ್ಲ. ಆದರೆ ಇದೀಗ ಆಗಿರುವ ತಾಂತ್ರಿಕ ಸಮಸ್ಯೆಯಿಂದ ಜಾಗತಿಕ ಮಟ್ಟದಲ್ಲಿ ಫೇಸ್‌ಬುಕ್ ಸಂಸ್ಥೆಗೆ ಮುಖಭಂಗ ಆದಂತಾಗಿದೆ. ಮೂರೂ ಸಂಸ್ಥೆಗಳು ಜನರ ಬಳಿ ಕ್ಷಮೆ ಕೇಳಲು ಟ್ವಿಟರ್ ಬಳಸಿದ್ದರಿಂದ ಸಾಕಷ್ಟು ಜೋಕ್‌ಗಳು ಕೂಡ ಹೊರಬಂದವು. ಭಾರತದಲ್ಲಿ ರಾತ್ರಿ ಆಗಿದ್ದರಿಂದ ಪರಿಣಾಮ ಅಷ್ಟೊಂದು ಭೀಕರ ಆಗಿರಲಿಲ್ಲ. ಆದರೆ ಉಳಿದ ದೇಶಗಳಲ್ಲಿ ಹೆಚ್ಚಿನ ಸಮಸ್ಯೆಗಳು ಆಗಿರಬಹುದು.

Related Posts

Don't Miss it !