ಅಮಾಯಕರ ಬಾಳಲ್ಲಿ ಆಟ ಆಡಿದವರಿಗೆ ಶಿಕ್ಷೆಇಷ್ಟೆನಾ..?

ಭಾರತ ಸಂವಿಧಾನದ ಪ್ರಕಾರ ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯನ್ನು ನೀಡಲಾಗುತ್ತದೆ. ಸರ್ಕಾರಿ ಅಧಿಕಾರಿಗಳು ತಪ್ಪು ಮಾಡಿದಾಗಲೂ ಕೋರ್ಟ್​ ಶಿಕ್ಷೆ ನೀಡುತ್ತದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ವಿಶೇಷ ತಹಶೀಲ್ದಾರ್​ ಎಸ್.ಬಿ. ಕಾಂಬಳೆಗೆ ಕೋರ್ಟ್​ 3 ತಿಂಗಳು ಜೈಲು ಶಿಕ್ಷೆ ನೀಡಿತ್ತು. ಕಂದಾಯ ನಿರೀಕ್ಷಕರಿಗೆ ಅರ್ಜಿ ಸಲ್ಲಿಸದೆ ಇದ್ದರೂ ಹಕ್ಕು ಬದಲಾವಣೆ ಮಾಡಿದ್ದ ಆರೋಪ ಎದುರಾಗಿತ್ತು. ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಪಹಣಿಯಲ್ಲಿ ಹಕ್ಕು ಬದಲಾವಣೆ ಮಾಡಿದ್ದರು. ಅಣ್ಣಪ್ಪ ಹಣಮಂತ ಮಾಂಗ ಎಂಬುವವರು ದಾಖಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 3 ತಿಂಗಳ ಸಾದಾ ಸಜೆ ವಿಧಿಸಿ ಜುಲೈ 15ರಂದು ಆದೇಶ ನೀಡಿತ್ತು. ಆದರೆ ಪೊಲೀಸ್​ ಅಧಿಕಾರಿಗಳು ತಪ್ಪು ಮಾಡಿದರೆ ಕೇವಲ ಅಮಾನತು ಶಿಕ್ಷೆ ಸಾಕಾ ಎನ್ನುವ ಪ್ರಶ್ನೆ ಎದುರಾಗಿದೆ.

ಪೊಲೀಸರ ತಪ್ಪಿಗೆ ಅಮಾನತು ಸಾಕಾ..?

ಬೆಂಗಳೂರಿನ ಆರ್​ಎಂಸಿ ಯಾರ್ಡ್​ ಪೊಲೀಸರು ಅಮಾಯಕ ಹುಡುಗನನ್ನು ಅಪರಾಧಿ ಮಾಡಲು ಮುಂದಾಗಿದ್ದರು. ಈ ವಿಚಾರ ಬಯಲಾಗಿದ್ದು, ಆಂತರಿಕ ತನಿಖೆ ವೇಳೆ ಪೊಲೀಸರಿಗೇ ಸ್ಟಿಂಗ್​ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಇದೀಗ ಬೆಂಗಳೂರು ಪೊಲೀಸ್​ ಕಮಿಷನರ್​ ಇನ್ಸ್​ಪೆಕ್ಟರ್​ ಜಾಗೂ ಪಿಎಸ್​ಐ ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಆದರೆ ಪೊಲೀಸರು ಮಾಡಿದ ಘನಘೋರ ಅಪರಾಧಕ್ಕೆ ಕೇವಲ ಅಮಾನತು ಶಿಕ್ಷೆ ಸಾಕಾ ಎನ್ನುವ ಪ್ರಶ್ನೆ ಎದುರಾಗಿದೆ.

ಪೊಲೀಸರು ಮಾಡಿದ ತಪ್ಪೇನು..?

ಜುಲೈ 14 ರಂದು ಆರ್​ಎಂಸಿ ಠಾಣೆ ಇನ್ಸ್​ಪೆಕ್ಟರ್ ಪಾರ್ವತಮ್ಮ ತಮ್ಮ ಠಾಣೆಯ ಸಬ್ಇನ್ಸ್​ಪೆಕ್ಟರ್ ಆಂಜನಪ್ಪ, ಕೆಲವೊಂದು ಕೇಸ್​ನ ಶಂಕೆ ಮೇರೆಗೆ ಶಿವರಾಜ್ ಹಾಗೂ ನಾಗೇಂದ್ರ ಎಂಬುವರನ್ನು ವಶಕ್ಕೆ ಪಡೆದಿದ್ದರು. ನಾಗೇಂದ್ರ ಮೇಲೆ ಪೆಟ್ಟಿ ಕೇಸ್ ಫಿಟ್​ ಮಾಡಿ ಕಳುಹಿಸಿದ್ರು. ಶಿವರಾಜ್​ಗೆ ಗಾಂಜಾ ಸೇದಿದ್ದಿಯಾ ಎಂದು ಚಿತ್ರಹಿಂಸೆ ನೀಡಿದ್ದರು. ಆತ ಒಪ್ಪಿಕೊಳ್ಳದೆ ಇದ್ದಾಗ, ಬಲವಂತವಾಗಿ ಸಿಗರೇಟ್​ನಲ್ಲಿ ಗಾಂಜಾ ತುಂಬಿಸಿ ಸೇದಿಸಿದ್ದರು. ಪೊಲೀಸ್​ ಟಾರ್ಚರ್​ನಿಂದ ನೊಂದ ಯುವಕ ಶಿವರಾಜ್​​ ಜುಲೈ 17ರಂದು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವಿಚಾರ ಬಯಲಾದ ಬಳಿಕ ಪೊಲೀಸರು ಆಂತರಿಕ ತನಿಖೆ ನಡೆಸಿದ್ದರು. ಆರೋಪ ಸಾಬೀತಾಗಿದ್ದು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಪೊಲೀಸರ ತಪ್ಪಿಗೆ ಶಿಕ್ಷೆ ಇಲ್ಲವೇ..?

ಪೊಲೀಸರು ಓರ್ವ ವ್ಯಕ್ತಿಯನ್ನ ಕೇಸ್​ನಲ್ಲಿ ಫಿಟ್​ ಮಾಡುವ ಉದ್ದೇಶದಿಂದ ಗಾಂಜಾ ತುಂಬಿದ ಸಿಗರೇಟ್​ ಸೇದಿಸುವುದು, ಬಳಿಕ ಆತನ ಮೇಲೆಯೇ ದೂರು ದಾಖಲು ಮಾಡುವುದು, ಇದಕ್ಕೆ ಕೇವಲ ಅಮಾನತು ಶಿಕ್ಷೆ ಅಷ್ಟೇನಾ..? ಕಾನೂನು ಪಾಲನೆ ಮಾಡುವ ಆರಕ್ಷಕರೇ ಕಾನೂನು ಮೀರಿದರೆ ಕಾನೂನು ಪ್ರಕಾರ ಬೇರೆ ಯಾವುದೇ ಶಿಕ್ಷೆ ಇಲ್ಲವೇ ಎನ್ನುವ ಪ್ರಶ್ನೆ ಸಾಕಷ್ಟು ಜನರ ಮನಸ್ಸಲ್ಲಿ ಕಾಡುವ ಪ್ರಶ್ನೆಯಾಗಿದೆ. ಸಾಕಷ್ಟು ಪ್ರಕರಣದಲ್ಲಿ ನಿರಪರಾಧಿಯನ್ನೇ ಅರೆಸ್ಟ್​ ಮಾಡಿ ಸಾಕಷ್ಟು ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಬಳಿಕ ನಿರಪರಾಧಿಯಾಗಿಯೂ ಹೊರಕ್ಕೆ ಬರುತ್ತಾರೆ. ಒಟ್ಟಾರೆ ಪೊಲೀಸರ ತಪ್ಪಿಗೆ ಅಮಾನತು ಅಷ್ಟೆನಾ ಶಿಕ್ಷೆ ಎನ್ನುವಂತಹ ಪ್ರಶ್ನೆ ಉದ್ಬವ ಆಗಲಿದೆ.

Related Posts

Don't Miss it !