ಹೈಕಮಾಂಡ್​ಗೆ ಬೇಕಿಲ್ಲ, ರಾಜ್ಯ ನಾಯಕರಿಗೆ ಬಿಡೋಕೆ ಆಗ್ತಿಲ್ಲ..!

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಮುಖ್ಯಮಂತ್ರಿ ಸ್ಥಾನವನ್ನು ಪರಮಾಪ್ತನಿಗೆ ಕೊಡಿಸುವ ಮೂಲಕ ರಾಜಕೀಯ ಶಕ್ತಿ ಉಳಿಸಿಕೊಳ್ಳುವ ಕೆಲಸ ಮಾಡಿದ್ರು. ಆದ್ರೆ ಇದೀಗ ಬಿಜೆಪಿ ಹೈಕಮಾಂಡ್​ ಸಚಿವ ಸಂಪುಟ ವಿಸ್ತರಣೆ ಮೂಲಕ ಪ್ರಭುತ್ವ ಸ್ಥಾಪನೆ ಕೆಲಸ ಶುರು ಮಾಡಿತ್ತು. ರಾಜೀನಾಮೆ ವೇಳೆ ಯಡಿಯೂರಪ್ಪ ಘೋಷಣೆ ಮಾಡಿದ್ದ ರಾಜ್ಯ ಪ್ರವಾಸ ಕೂಡ ಅನಿಶ್ಚಿತತೆಯಿಂದ ಕೂಡಿದೆ. ಶಿವಮೊಗ್ಗದ ಸ್ವಕ್ಷೇತ್ರ ಶಿಕಾರಿಪುರಕ್ಕೆ ಹೋಗಿ ವಾಪಸ್​ ಆದ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಭೇಟಿ ಮಾಡಿದ್ದಾರೆ. ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ.

ಅಮಿತ್​ ಷಾ ಕೆಣಕಿದ್ರು ಬಿಜೆಪಿ ನಾಯಕತ್ವ..!

ಕಳೆದ ವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್​ ಷಾ, ಹುಬ್ಬಳ್ಳಿ ಹಾಗೂ ದಾವಣಗೆರೆಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಬಿ.ಎಸ್​ ಯಡಿಯೂರಪ್ಪ ಆಡಳಿತವನ್ನು ಕೊಂಡಾಡಿದ್ದ ಅಮಿತ್​ ಷಾ ಮುಂದಿನ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಎದುರಿಸಲಾಗುವುದು ಎಂದಿರುವು ಬಿಜೆಪಿ ಪಕ್ಷದಲ್ಲಿ ವಿಭಜನಾ ರೂಪ ಪಡೆದಿದೆ. ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಪರವಾಗಿ ಮಾತನಾಡಿದರೆ ಹೈಕಮಾಂಡ್​ ಕೆಂಗಣ್ಣು ಬೀರುವ ಸಾಧ್ಯತೆ ಇದೆ. ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಮಾತನಾಡಿದರೆ ಕ್ಷೇತ್ರದಲ್ಲಿ ಬಿ.ಎಸ್​ ಯಡಿಯೂರಪ್ಪ ನಾಯಕತ್ವಕ್ಕೆ ಬಂದಿರುವ ಮತಗಳ ಕೈಕೊಡುವ ಸಾಧ್ಯತೆಗಳೂ ಇವೆ. ಇದೇ ಕಾರಣಕ್ಕಾಗಿ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

Read This also;

ಚುನಾವಣೆ ಈಗೇನು ಬಂದಿಲ್ಲ, ನೋಡೋಣ..!

ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್​, ಮುಂದಿನ ಚುನಾವಣೆಗೆ ಬಸವರಾಜ ಬೊಮ್ಮಾಯಿ ನೇತೃತ್ವ ಎಂದು ಪಕ್ಷ ನಿರ್ಧಾರ ಮಾಡಿದ್ರೆ, ಪಕ್ಷದ ನಿರ್ಧಾರದಂತೆ ನಾವು ಮುಂದುವರಿಯುತ್ತೇವೆ ಎಂದಿದ್ದರು. ಆದ್ರೆ ಚುನಾವಣೆ ಇನ್ನೂ ಬಹಳ ದೂರ ಇದೆ. 2023ರಲ್ಲಿ ಚುನಾವಣೆ ನಡೆಯಲಿದೆ. ಇವತ್ತೇ ಚುನಾವಣೆ ಬಂದಿಲ್ಲ. ಹೀಗಾಗಿ ಚುನಾವಣೆ ಬಂದಾಗ ಏನೇನಾಗುತ್ತೆ ಎನ್ನುವುದನ್ನು ನಾವು ಕಾದು ನೋಡಬೇಕು ಎಂದು ಬಸವರಾಜ ಬೊಮ್ಮಾಯಿ ನೇತೃತ್ವದ ಬಗ್ಗೆ ಮೂಗು ಮುರಿಯುವ ಯತ್ನ ಮಾಡಿದ್ರು. ಬಸವರಾಜ ಬೊಮ್ಮಾಯಿ ಕುರಿತು ಅಮಿತ್ ಶಾ ಸರ್ಟಿಫಿಕೇಟ್ ಕೊಟ್ಟಿರೋದು ಒಳ್ಳೆಯದೇ ಆಯ್ತಲ್ಲಾ ಎಂದು ವ್ಯಂಗ್ಯದ ದನಿಯಲ್ಲಿ ಹೇಳಿದ್ದರು.

ಮುಂದಾಳತ್ವ ಚರ್ಚೆಯ ವಿಷಯವೇ ಅಲ್ಲ..!

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂಬ ಅಮಿತ್​ ಷಾ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟಿದ್ದ ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗುವುದು ತಪ್ಪೇನಲ್ಲ. ಆದರೆ ಅದು ಚರ್ಚೆಯ ವಿಷಯವೇ ಅಲ್ಲ. ಅವರಿಗೆ ಇನ್ನೂ 18 ತಿಂಗಳ ಅಧಿಕಾರ ಇದೆ. ಸಾಮನ್ಯವಾಗಿ ಯಾರು ಸಿಎಂ ಇರ್ತಾರೋ ಅವರ ನೇತೃತ್ವದಲ್ಲಿ ಚುನಾವಣೆ ಹೋಗುವುದು ಸಹಜ. ಅಮಿತ್ ಶಾ ಬಹಳ ಸೋಚ್ ಸಮಜಕರ್ ಆಗಿಯೇ ಹೇಳಿದ್ದಾರೆ. ಅಮಿತ್ ಶಾ ಹೇಳಿದ ಮೇಲೆ ಅದು ಚರ್ಚೆಯ ವಿಷಯ ಅಲ್ಲ ಎಂದಿದ್ದರು. ಪಕ್ಷದಲ್ಲಿ ಹಿರಿಯರನ್ನ ಕಡೆಗಣಿಸಿದ‌ ವಿಚಾರದ ಬಗ್ಗೆ ಮಾತನಾಡಿ ಜಗದೀಶ್ ಶೆಟ್ಟರ್, ಬಿ.ಎಸ್ ಯಡಿಯೂರಪ್ಪರನ್ನು ಕಡೆಗಣಿಸುತ್ತಿಲ್ಲ ಎಂದಿದ್ದರು.

ಅಮಿತ್​ ಷಾ ಮಾತಿಗೆ ತಲೆಯಾಡಿಸಿದ ಮಿನಿಸ್ಟರ್ಸ್​​..!

ಅಮಿತ್​ ಷಾ ಬಿಜೆಪಿಯಲ್ಲಿ ಏಕಚಕ್ರಧಿಪತಿ ರೀತಿ ಆಗಿದ್ದಾರೆ ಎನ್ನುವುದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಷಿ ಮಾತಿನಲ್ಲೇ ತಿಳಿದು ಬರುತ್ತದೆ. ಅಮಿತ್​ ಷಾ ಹೇಳಿದ ಮೇಲೆ ಮುಗೀತು ಎಂದಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ ನಡ್ಡಾ ಇದ್ದಾರೆ. ಆದರೆ ಅಮಿತ್​ ಷಾ ಹೇಳಿಕೆಯೇ ಫೈನಲ್​ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೇ ಕಾರಣದಿಂದ ಅಮಿತ್​ ಷಾ ಮಾತಿಗೆ ಬಹುತೇಕ ಎಲ್ಲಾ ಸಚಿವರು ಉಘೇ ಎಂದಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ನಡೆಯಲಿದ್ದು, ಬಿ.ಎಸ್​ ಯಡಿಯೂರಪ್ಪ ಅವರ ಮಾರ್ಗದರ್ಶನ ಇರುತ್ತೆ ಎಂದಿದ್ದಾರೆ. B.S ಯಡಿಯೂರಪ್ಪ ಶ್ರೀಕೃಷ್ಣನಾದ್ರೆ ಬಸವರಾಜ ಬೊಮ್ಮಾಯಿ ಅರ್ಜುನನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗ್ತಿದೆ. ಆದ್ರೆ ಹೈಕಮಾಂಡ್​ ಬಿ.ಎಸ್​ ಯಡಿಯುರಪ್ಪ ಅವರನ್ನು ಪಕ್ಷದ ಚಟುವಟಿಕೆಯಿಂದ ದೂರ ಇಡುವ ಪ್ರಯತ್ನ ಮಾಡಿದ್ರೂ ರಾಜ್ಯದ ನಾಯಕರಿಗೆ ಯಡಿಯೂರಪ್ಪ ಬೇಕಾಗಿದೆ. ಎಲ್ಲವನ್ನೂ ಮೌನವಾಗಿ ನೋಡುತ್ತಿರುವ ಬಿ.ಎಸ್​ ಯಡಿಯೂರಪ್ಪ ತನ್ನದೇ ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದಾರೆ ಎನ್ನಬಹುದು.

Related Posts

Don't Miss it !