ನಟ ನಿಖಿಲ್ ಕುಮಾರಸ್ವಾಮಿಗೆ ಅಭಿಮಾನಿ ಆಗಿ ಸಣ್ಣದೊಂದು Suggestion..!!

ನಟ ನಿಖಿಲ್ ಕುಮಾರಸ್ವಾಮಿ, ಅಪ್ಪ ಮಾಜಿ ಮುಖ್ಯಮಂತ್ರಿ, ತಾತ ಮಾಜಿ ಪ್ರಧಾನ ಮಂತ್ರಿ ಆಗಿದ್ದರೂ ತನ್ನದೇ ಏನಾದರೂ ಪ್ರತ್ಯೇಕ ಗುರುತು ಮಾಡಬೇಕು ಎಂದು ಹಂಬಲಿಸುತ್ತಿರುವ ಮನಸ್ಸು. ಆದರೆ ಯಶಸ್ಸು ಕಾಣದೆ ಇದ್ದರೂ ಹೊಸತನಕ್ಕೆ ತೆರೆದುಕೊಳ್ಳುವ ತುಡಿತ ನಿಮ್ಮಲ್ಲಿ ಕಡಿಮೆ ಆಗಿಲ್ಲ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆದ ನಿಮ್ಮ ಸಿನಿಮಾ ರೈಡರ್ ಸಿನಿಮಾವನ್ನು ಕಾರಣಾಂತರದಿಂದ ನೋಡಲು ಆಗಿರಲಿಲ್ಲ. ಆದರೆ ನಿನ್ನೆಯಷ್ಟೇ ನಿಮ್ಮ ಸಿನಿಮಾವನ್ನು Zee5 ಕನ್ನಡದಲ್ಲಿ ನೋಡಿದೆ. ಕೂಡಲೇ ಈ ಪತ್ರ ಬರೆದೆ.

ಯಶಸ್ಸು ಸಿಗದೆ ಇರಲು ಕಾರಣ ನಿಮ್ಮ ತಪ್ಪು, ಇದೇ ಅಲ್ಲವೇ..?

ರೈಡರ್ ಸಿನಿಮಾ ಮಾಡಿದ್ದೀರಿ, ಬಾಲ್ಯದಲ್ಲೇ ಅಚಾನಕ್ ಆಗಿ ಸಿಗುವ ನಾಯಕ ನಟಿ, 15 ವರ್ಷಗಳು ಕಳೆದ ಮೇಲೆ ನಿಮಗೆ ಸಿಗುತ್ತಾಳೆ. ತಂದೆ ತಾಯಿ ವಿದೇಶದಲ್ಲಿ ಇದ್ದರೂ ನಾಯಕ ನಟನಿಗಾಗಿ ಭಾರತಕ್ಕೆ ವಾಪಸ್ ಆಗ್ತಾಳೆ. ಇತ್ತ ನಾಯಕ ನಟ ಪ್ರತಿ ವರ್ಷ ತನಗೆ ಚಿನ್ನು (ನಾಯಕ ನಟಿ) ಸಿಕ್ಕ ಆಶ್ರಮದ ಬಳಿ ಹುಟ್ಟು ಹಬ್ಬ ಆಚರಿಸ್ತಾನೆ. ಆದರೂ ಆಕೆಯನ್ನು ಪ್ರೇಮಿಯಾಗಿ ಭೇಟಿ ಆಗಿರಲಿಲ್ಲ. ಆದರೆ ಬೇರೆ ಕಾರಣಗಳಿಂದ ಸಾಕಷ್ಟು ಭಾರಿ‌ ಭೇಟಿ ಆಗಿದ್ದಿರಿ ಒಮ್ಮೆ ಜಗಳ ಕೂಡ ಮಾಡಿದ್ದಿರಿ. ಅಷ್ಟರಲ್ಲಿ‌ ಬಾಲ್ಯದಿಂದಲೂ ಕಾಪಾಡಿಕೊಂಡು ಬಂದಿದ್ದ ಚಿನ್ನು ಕಿವಿ ರಿಂಗ್ ಕಳೆದು ಹೋಗುತ್ತೆ. ಕೊನೆಗೆ ಆಕೆ ವಿಷ ಕುಡಿದು ಆಸ್ಪತ್ರೆ ಸೇರ್ತಾರೆ. ನೀವು ಅಪಘಾತವಾಗಿ ಆಸ್ಪತ್ರೆ ಸೇರ್ತೀರಿ. ಒಂದಾಗ್ತೀರಿ.‌ ಕಥೆ ಚೆನ್ನಾಗಿಯೇ ಇದೆ. ಆದರೆ ಈಗಾಗಲೇ ಈ ಚಿತ್ರ ಮೊದಲೇ ಬಂದಿದ್ದರೂ ಮತ್ತೆ ಯಾಕ್ ಮಾಡಿದ್ರಿ..?

ಮನಸೆಲ್ಲಾ ನೀನೆ ಚಿತ್ರದ ಸಾರಾಂಶವನ್ನೇ ಅದಲು ಬದಲು ಮಾಡಿದ್ರಾ..?

2002 ರಲ್ಲಿ ಪ್ರಭುದೇವ ತಮ್ಮ ನಾಗೇಂದ್ರ ಪ್ರಸಾದ್ ಮನಸೆಲ್ಲಾ ನೀನೆ ಎನ್ನುವ ಸಿನಿಮಾ ಮಾಡಿದ್ರು. ಆ ಚಿತ್ರದಲ್ಲಿ ರೈಲ್ವೆ ಸ್ಟೇಷನ್‌ನಲ್ಲಿ ಇಡ್ಲಿ ಮಾರುವ ಹುಡುಗನನ್ನು ಕರ್ಕೊಂಡು ಹೋಗಿದ್ರು. ಆದ್ರೆ ಇಲ್ಲಿ ಆಶ್ರಮದಿಂದ ನಿಮ್ಮ ಕರೆದೊಯ್ದು ಸಾಕಿದ್ದಾರೆ. ಅಲ್ಲಿ ಗಡಿಯಾರ ಸ್ನೇಹದ ಕೊಂಡಿಯಾಗಿತ್ತು. ನಿಮ್ಮ ರೈಡರ್‌ನಲ್ಲಿ ಕಿವಿಯ ರಿಂಗ್ ಇದೆ. ಅದರಲ್ಲೂ ಪ್ರತಿವರ್ಷ ಹುಟ್ಟುಹಬ್ಬದ ದಿನ ಮೀಟ್ ಆಗುವ ನಿರ್ಧಾರ ಮಾಡಿದ್ದರು, ನಿಮ್ಮ ಚಿತ್ರದಲ್ಲೂ ಆಕೆ ಅದೇ ಭರವಸೆ ನೀಡಿದ್ದಾಳೆ. ಆ ಮನಸೆಲ್ಲಾ ನೀನೆ ಚಿತ್ರದಲ್ಲೂ ತನ್ನ ತಂಗಿಗಾಗಿ ಪ್ರೀತಿ ಬಲಿ ಕೊಡಲು ಮುಂದಾಗಿದ್ದ ನಟ, ನೀವೂ ಕೂಡ ಹಾಗೆ ಮಾಡಿದ್ದೀರಿ. ಕೊನೆಗೆ ಎಲ್ಲಾ ಸಂಕಷ್ಟವನ್ನೂ ಮೀರಿ ಕ್ಲೈಮ್ಯಾಕ್ಸ್‌ನಲ್ಲಿ ಜೋಡಿ ಎರಡೂ ಸಿನಿಮಾದಲ್ಲೂ ಒಂದಾಗುತ್ತೆ. ಇದರಲ್ಲಿ‌ ಏನಾದರೂ‌ ಬದಲಾವಣೆ ಇದೆಯಾ..?

ನಿಮ್ಮ ಫ್ಯಾಷನ್ ಜೊತೆಗೆ ಚಿತ್ರಕಥೆ ಆಯ್ಕೆಯೂ ವಿಭಿನ್ನ ಆಗಿರಲಿ..!

ರಾಜಕೀಯ ಹಾಗೂ ಚಿತ್ರರಂಗ ಎರಡರಲ್ಲೂ‌ ನೆಲೆ ಕಂಡುಕೊಳ್ಳಲು ಹವಣಿಸುತ್ತಿರುವ ನಿಮಗೆ ಅಭಿಮಾನಿಯಾಗಿ ಇಷ್ಟೇ ನನ್ನ ಮನವಿ. ನಿಮಗೆ ಸಿನಿಮಾದಲ್ಲೇ ಯಶಸ್ಸು ಸಿಗಲಿ. ಅಲ್ಲೇ ನಾಯಕ ನಟನಾಗಿ ಕನ್ನಡಿಗರ ಮನಸ್ಸು ಗೆಲ್ಲಿ. ಆದರೆ‌ ಚಿತ್ರಕಥೆ ಆಯ್ಕೆ ಮಾಡುವಾಗ ಸ್ವಲ್ಪ ಎಚ್ಚರವಹಿಸಿ. ಇಲ್ಲದಿದ್ದರೆ ನಿಮ್ಮ ಬಳಿ ಹಣ ಇದೆ ಎನ್ನುವ ಕಾರಣಕ್ಕೆ ಯಾವುದೋ ಸ್ಟೋರಿಯನ್ನೇ ಅದಲು ಬದಲು‌ ಮಾಡಿ ಚಿತ್ರ ಮಾಡಿದರೆ ಜನರು ನೋಡುವುದಾದರೂ ಯಾಕೆ..? ನೀವು ಒಂದು ಕಡೆ ಹೇಳಿಕೊಂಡಿದ್ದೀರಿ, ಸಿನಿಮಾದಲ್ಲಿ ಉಳಿಯಬೇಕು, ಜನರ ಪ್ರೀತಿ ಗೆಲ್ಲಬೇಕು ಎಂದು. ಆಗಿದ್ದ ಮೇಲೆ ಸಿನಿಮಾ ಗೆಲ್ಲಬೇಕು ಎಂದರೆ ಕಥೆ ಉತ್ತಮವಾಗಿ ಇರಬೇಕು. ಸಿನಿಮಾಗೆ ಬೇಕಾದ ಹಾಗೆ ನಾಯಕ ನಟ ಹಮ್ಮು ಬಿಮ್ಮು ಬಿಟ್ಟು ನಟಿಸುವ ಛಲ ಇರಬೇಕು. ಡಾ ರಾಜ್‌ಕುಮಾರ್ ಮಾಡಿದ್ದೂ ಇದನ್ನೇ ಅಲ್ಲವೇ..?

ಇಂತಿ

ನಿಮ್ಮ ಅಭಿಮಾನಿ
(ಮುಂದೆ ಸಿಗೋಣ)

Related Posts

Don't Miss it !