ಬಿಜೆಪಿ ನಾಯಕರದ್ದು ಅಧಿಕಾರದ ಮದವೋ..? ಗೆದ್ದೇ ಗೆಲ್ಲುವ ಹುಂಬತನವೋ..?

ದೇಶದಲ್ಲಿ ಜನರು ಸಾಕಷ್ಟು ಸಂಕಷ್ಟಗಳಿಗೆ ಒಳಗಾಗಿದ್ದಾರೆ. ಅದಕ್ಕೆ ಕೊರೊನಾ ಸೋಂಕು ಕೂಡ ಕಾರಣ ಆಗಿದೆ. ಇದರ ಜೊತೆಗೆ ಪೆಟ್ರೋಲ್​, ಡೀಸೆಲ್​ ದರ ಹೆಚ್ಚಾಗಿರುವ ಕಾರಣ ಅತ್ಯವಶ್ಯಕ ವಸ್ತುಗಳ ಬೆಲೆ ಗಗನಮುಖಿ ಆಗಿದೆ. ಜನರ ಜೀವನ ಮಟ್ಟ ಮಾತ್ರ ಸುಧಾರಿಸಿಲ್ಲ, ಕೋವಿಡ್​ ಕಾರಣದಿಂದ ಕೆಲಸವಿಲ್ಲದೆ, ಜೀವನ ನಡೆಸುವುದೇ ಕಷ್ಟ ಎನ್ನುವಂತಾಗಿದೆ. ಪೆಟ್ರೋಲ್​, ಡೀಸೆಲ್​ ದರ ಏರಿಕೆ ಖಂಡಿಸಿ ಕಾಂಗ್ರೆಸ್​ ಸೈಕಲ್​ ಜಾಥಾ ಮಾಡಿತ್ತು. ಈ ಬಗ್ಗೆ ದಾವಣಗೆರೆ ಬಿಜೆಪಿ ಸಂಸದ ಜಿ.ಎಂ ಸಿದ್ದೇಶ್ವರ್​ ಅವರನ್ನು ಪ್ರತಿಕ್ರಿಯೆ ಕೇಳಿದ್ದಕ್ಕೆ ಉಡಾಫೆ ಉತ್ತರ ಕೊಟ್ಟಿದ್ದಾರೆ.

ಸೈಕಲ್​ನಲ್ಲಿ ಸಂಚಾರ ಮಾಡಿ, ಆರೋಗ್ಯ ಬರುತ್ತೆ..!

ದಾವಣಗೆರೆಯಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ವಿಚಾರದ ಬಗ್ಗೆ ಮಾತನಾಡಿದ ಸಂಸದ ಜಿ.ಎಂ ಸಿದ್ದೇಶ್ವರ್ ಮಾತನಾಡಿದ್ದು, ಪೆಟ್ರೋಲ್​ , ಡೀಸೆಲ್​ ರೇಟ್ ಹೆಚ್ಚಾದ್ರೆ ಸೈಕಲ್​ನಲ್ಲಿ ಓಡಾಡಿ. ಸೈಕಲ್​ನಲ್ಲಿ ಓಡಾಡಿದ್ರೆ ದೇಹಕ್ಕೆ ವ್ಯಾಯಾಮ ಆಗುತ್ತೆ. ಸೈಕಲ್​ ಬಳಸಿದ್ರೆ ಒಳ್ಳೆ ವ್ಯಾಯಾಮ ಸಿಗುತ್ತೆ ಎಂದಿದ್ದಾರೆ. ಒಳ್ಳೆಯ ವ್ಯಾಯಾಮ ಆದರೆ ರೋಗ ಬರಲ್ಲ ಎಂದಿದ್ದಾರೆ. ಹೊರ ದೇಶಗಳಲ್ಲೂ ತೈಲ ಬೆಲೆ ಏರುತ್ತಿದೆ. ಬೆಲೆ ಇಳಿಕೆಗೆ ಮೋದಿ ಸರ್ವಪ್ರಯತ್ನ ಮಾಡ್ತಾರೆ. ಕೊರೊನಾ ಹೋದ್ಮೇಲೆ ಬೆಲೆ ಇಳಿಯುತ್ತೆ ಎಂದು ಸಮಜಾಯಿಸಿ ನೀಡಿದ್ದಾರೆ.

ಸಂಸದರ ಹೇಳಿಕೆಗೆ ಜನಾಕ್ರೋಶ..!

ಪೆಟ್ರೋಲ್ ಬೆಲೆ ಹೆಚ್ಚಾದರೆ ಜನರು ಸೈಕಲ್​ನಲ್ಲಿ ಓಡಾಡಲಿ, ವ್ಯಾಯಾಮ ಆಗುತ್ತೆ ಎಂಬ ಬಿಜೆಪಿ ಸಂಸದ ಸಿದ್ದೇಶ್ವರ್​​ ಹೇಳಿಕೆಗೆ ಜನಾಕ್ರೋಶ ವ್ಯಕ್ತವಾಗಿದೆ. ಇಂಥವರೆಲ್ಲಾ ನಮ್ಮ ಜನಪ್ರತಿನಿಧಿಗಳು ಎಂದು ಜನ ಕಿಡಿಕಾರುತ್ತಿದ್ದಾರೆ. ಆರೋಗ್ಯದ ಕಾಳಜಿ ಇರುವ ಸಂಸದ ಸಿದ್ದೇಶ್ವರ್​ ಮೊದಲು ಕಾರು, ಬೈಕು ಓಡಿಸುವುದು ಬಿಟ್ಟು ಸೈಕಲ್​ನಲ್ಲಿ ಓಡಾಡಲಿ. ಬೆಂಜ್​ ಕಾರಲ್ಲಿ ಓಡಾಡುವುದು ಬಿಡಲಿ ಎಂದು ಆಕ್ರೋಶ ಹೊರಹಾಕಿದ್ದಾರೆ. ನಮಗೆ ಬೈಕ್ ಇಲ್ಲದೆ ನಮ್ಮ ಕೆಲಸ ನಡಿಯೋದಿಲ್ಲ. 10 ರಿಂದ 15 ಕಿಲೋ ಮೀಟರ್​ ದೂರಕ್ಕೆ ಸೈಕಲ್ ತುಳಿದು ಪ್ರಯಾಣ ಮಾಡಲು ಸಾಧ್ಯವೇ..? ತಲೆಯೊಳಗೆ ಮೆದುಳಿರುವ ಜನರು ಹೀಗೆ ಮಾತನಾಡುವುದಿಲ್ಲ ಎಂದು ಖಂಡಿಸಿದ್ದಾರೆ.

ಬಿಜೆಪಿ ನಾಯಕರ ಉಡಾಫೆ ಹೊಸದಲ್ಲ..!

ಸಾರ್ವಜನಿಕರನ್ನು ಕೀಳಾಗಿ ಕಾಣುವುದು, ವ್ಯಂಗ್ಯವಾಗಿ ಮಾತನಾಡುವುದು ಬಿಜೆಪಿ ನಾಯಕರಿಗೆ ಹೊಸದೇನು ಅಲ್ಲ. ಈ ಹಿಂದೆ ಸಚಿವ ಉಮೇಶ್​​ ಕತ್ತಿ ಕೂಡ ಇದೇ ರೀತಿಯ ಹೇಳಿಕೆ ನೀಡಿ ಕೊನೆಗೆ ವಿಷಾದ ವ್ಯಕ್ತಪಡಿಸಿದ್ದರು. ಆಹಾರ ಸಚಿವ ಉಮೇಶ್​ ಕತ್ತಿ ಅವರಿಗೆ ಈಶ್ವರ್​ ಎಂಬಾತ ಕರೆ ಮಾಡಿ ಅಕ್ಕಿ ಕಡಿತದ ಬಗ್ಗೆ ಪ್ರಶ್ನೆ ಮಾಡಿದ್ದರು. ಎರಡು ಕೆಜಿ ಅಕ್ಕಿ ತಿಂಗಳಿಗೆ ಸಾಕಾಗುತ್ತಾ ಎನ್ನುವ ಪ್ರಶ್ನೆ ಅವರದ್ದಾಗಿತ್ತು. ಮುಂದಿನ ತಿಂಗಳು ಕೇಂದ್ರ ಸರ್ಕಾಸದ ಕೋಟದಲ್ಲಿ ಇನ್ನಷ್ಟು ಕೊಡ್ತೇವೆ ಎಂದು ಸಚಿವರು ಉತ್ತರಿಸಿದರು. ಕೆಲಸವೂ ಇಲ್ಲ, ಕೊರೊನಾ ಲಾಕ್​ಡೌನ್​, ಕೇವಲ 2 ಕೆಜಿ ಅಕ್ಕಿ ಕೊಟ್ಟರೆ ನಾವೇನು ಬದುಕಬೇಕಾ ಸಾಯಬೇಕ ಸರ್ ಎಂದಿದ್ದಕ್ಕೆ ಸಚಿದವರ ಉತ್ತರ ನೀನು ಸಾಯುವುದು ಒಳ್ಳೇದು ಎಂದಿದ್ದರು. ಈ ಮಾತನ್ನು ಮಾಧ್ಯಮಗಳ ಸಮರ್ಥನೆ ಕೂಡ ಮಾಡಿಕೊಂಡಿದ್ದರು. ಬಳಿಕ ಸಿಎಂ ಹೇಳಿದ ಬಳಿಕ ವಿಷಾದ ವ್ಯಕ್ತಪಡಿಸಿದ್ದರು.

https://kannada.asianetnews.com/politics/minister-umesh-katti-remarks-statement-about-rations-rbj-qs9r3z

ನಮ್ಮ ಮನೆಯಲ್ಲಿ ಈರುಳ್ಳಿ ಹೆಚ್ಚು ತಿನ್ನಲ್ಲ..!

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕೇಂದ್ರದಲ್ಲಿ ಹಣಕಾಸು ಸಚಿವೆ ಆಗಿರುವ ನಿರ್ಮಲಾ ಸೀತಾರಾಮನ್​, ಈರುಳ್ಳಿ ವಿಚಾರವಾಗಿ ಟೀಕೆಗೆ ಗುರಿಯಾಗಿದ್ದರು. ಕೊಲ್ಕತ್ತಾದಲ್ಲಿ ಈರುಳ್ಳಿ ಬೆಲೆ 150 ಆಗಿದೆ ಎಂದು ವಿರೋಧ ಪಕ್ಷದ ಸಂಸದರು ತರಾಟೆಗೆ ತೆಗೆದುಕೊಂಡಿದ್ದರು. ಹಣಕಾಸು ಸಚಿವರು ಮಧ್ಯಪ್ರವೇಶ ಮಾಡಿ ನಮ್ಮ ಮನೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಬಳಸುವುದಿಲ್ಲ ಎಂದು ಹೇಳಿದ್ದು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆ ಬಳಿಕ ನಾನು ಹೇಳಿದ್ದು ಕೆಟ್ಟ ರೀತಿಯಲ್ಲಿ ಅಲ್ಲ ಎಂದು ಸಚಿವರು ಸ್ಪಷ್ಟನೆಯನ್ನೂ ನೀಡಿದ್ದರು.

https://www.ndtv.com/india-news/nirmala-sitharaman-during-parliament-debate-i-dont-eat-lot-of-onions-2143519

ಬಿಜೆಪಿ ನಾಯಕರ ಮಾತು ಏಕೆ ಹಿಡಿತದಲ್ಲಿ ಇರಲ್ಲ..!?

ಬಿಜೆಪಿ ನಾಯಕರು ವ್ಯಂಗ್ಯವಾಗಿ ಮಾತನಾಡುವುದು, ಸಾರ್ವಜನಿಕರನ್ನೇ ಹೀಗಳೆಯುವುದು ಸರ್ವೇಸಾಮಾನ್ಯ ಎನ್ನುವಂತಾಗಿದೆ. ಅಧಿಕಾರದಲ್ಲಿ ಇದ್ದಾಗ ಸಾಮಾನ್ಯ ಜನರು ಏನನ್ನಾದರು ಕೇಳಿದಾಗ ಆಗುವುದಾದರೆ ಆಗುತ್ತೆ ಎನ್ನಬೇಕು. ಉತ್ತರ ಕೊಡಲು ಬರದಿದ್ದರೆ ಸುಮ್ಮನಾಗಬೇಕು. ಅದನ್ನು ಬಿಟ್ಟು ಸೈಕಲ್​ನಲ್ಲಿ ಓಡಾಡಿ, ಸಾಯುವುದಾದರೆ ಸಾಯಿ ಎಂದು ಹೇಳುವುದು ದುರಭ್ಯಾಸ. ಈ ರೀತಿಯ ವರ್ತನೆಗೆ ಎರಡು ಕಾರಣಗಳು. ಒಂದು ಚುನಾವಣೆ ಬಂದಾಗ ಜನರಿಗೆ ಹಣ ಹೆಂಡ ಕೊಟ್ಟರೆ ಮತ ಹಾಕಿ ಗೆಲ್ಲಿಸುತ್ತಾರೆ ಎನ್ನುವ ದುರಹಂಕಾರ. ಮತ್ತೊಂದು ನಾನು ಗೆದ್ದಿರುವುದು ಮೋದಿ ಮುಖ ನೋಡಿಕೊಂಡು ಜನರು ಮತ ಹಾಕಿದ್ದಾರೆ. ಮತ್ತೆ ಮೋದಿಯನ್ನು ಕರೆತಂದು ಮತಯಾಚನೆ ಮಾಡುವುದು ಎನ್ನುವ ಬೇಜವಾಬ್ದಾರಿತನ ಎನ್ನಬಹುದು. ಜನರು ಬದಲಾದರೆ ಜನಪ್ರತಿನಿಧಿಗಳನ್ನು ಬದಲು ಮಾಡ್ತಾರೆ ಎನ್ನುವುದು ನೆನಪಿನಲ್ಲಿ ಇಡಬೇಕಾದ ಅಂಶ.

Related Posts

Don't Miss it !