ಮದುವೆಯಾದ ಬಳಿಕ ಸಂಗಾತಿ ಇಷ್ಟ ಆಗದಿದ್ರೆ ಕೊಲ್ಲುವುದ್ಯಾಕೆ..!? ಇಲ್ಲಿದೆ ಪರಿಹಾರ..

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗಂಡನಿಂದ ಹೆಂಡತಿ ಕೊಲೆ ಅಥವಾ ಹೆಂಡತಿಯಿಂದ ಗಂಡನ ಕೊಲೆ ಎನ್ನುವ ಸುದ್ದಿಗಳು ಪ್ರತಿದಿನ ಮಾಧ್ಯಮಗಳಲ್ಲಿ ಬರುವುದನ್ನು ನೋಡಿರ್ತೀರಿ. ಸಾಕಷ್ಟು ವರ್ಷಗಳ ಕಾಲ ಪ್ರೀತಿ ಮಾಡಿ ಮದುವೆಯಾದ ಜೋಡಿಗಳ ಮನಸ್ಸು ಮದುವೆಯಾದ ಬಳಿಕ ಒಡೆದು ಹೋಗಿರುವ ಸಂಗತಿಗಳೂ ಕಾಣಸಿಗುತ್ತವೆ. ಮದುವೆಯಾದ ಬಳಿಕ ದೈಹಿಕ ಸುಖಕ್ಕಾಗಿ ಬೇರೊಬ್ಬರ ಜೊತೆಗೆ ಸಂಬಂಧ ಬೆಳೆಸಿ ಮದುವೆಯಾಗಿದ್ದ ಸಂಗಾತಿಯನ್ನು ಕೊಲ್ಲುವ ಘಟನೆಗಳು ನಡೆಯುತ್ತಿವೆ. ಆದರೆ ಕೊಲ್ಲುವ ಮುನ್ನ ಮುಂದೆ ಎದುರಾಗುವ ಕಾನೂನು ಸಂಘರ್ಷ ಹಾಗೂ ಜೈಲು ಶಿಕ್ಷೆಯ ಬಗ್ಗೆ ಆಲೋಚನೆ ಮಾಡುವುದು ಒಳಿತು. ಈ ಮಾರ್ಗಕ್ಕಿಂತಲೂ ಸಂಗಾತಿಯನ್ನು ಸುಲಭವಾಗಿ ಬೇರೆಯಾಗುವ ಕಾನೂನು ಬಳಸುವುದು ಸೂಕ್ತ ಎನ್ನುತ್ತಾರೆ ಕಾನೂನು ತಜ್ಞರು.

ಮದುವೆಯಾದ ಒಂದೇ ವರ್ಷಕ್ಕೆ ಪತ್ನಿ ಕೊಂದ ಗಂಡ..!!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಘಟನೆ ನಡೆದಿದೆ. ದಾಬಸ್‌ಪೇಟೆಯ ಅನ್ನಪೂರ್ಣೇಶ್ವರಿ ಬಡಾವಣೆಯ ರಾಮು ಅಲಿಯಾಸ್ ಶಶಿಧರ್ ತನ್ನ ಪತ್ನಿ ವನಿತಾಳನ್ನು ಕೊಲೆ ಮಾಡಿ ತಾನೇ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ನಡೆದಿದೆ. ನಿವೃತ್ತ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಪುಟ್ಟರುದ್ರಪ್ಪ ಮಗನಾಗಿರುವ ರಾಮು ಪತ್ನಿಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಆದರೆ ಕಾರಣ ಮಾತ್ರ ನಿಗೂಢವಾಗಿದೆ. ಮೇ 1, 2021 ರಂದು ತುಮಕೂರಿನ ವನಿತಾಳನ್ನು ಮದುವೆಯಾಗಿದ್ದ ರಾಮು ಸಂಸಾರದಲ್ಲಿ ಸುಖಿ ಆಗಿರಲಿಲ್ಲ ಎನ್ನಲಾಗಿದೆ. ಪದೇ ಪದೇ ಜಗಳ ನಡೆಯುತ್ತಿತ್ತು. ಒಮ್ಮೆ ಜಗಳವಾಡಿ ತವರು ಸೇರಿದ್ದ ವನಿತಾ, 6 ತಿಂಗಳ ಕಾಲ ಗಂಡನಿಂದ ದೂರ ಇದ್ದಳು. ಆ ಬಳಿಕ ಮತ್ತೆ ಮೂರು ತಿಂಗಳ ಕಾಲ‌ಗಂಡನಿಂದ ದೂರವಾಗಿ‌ ತವರು ಸೇರಿದ್ದಳು ಎನ್ನಲಾಗಿದೆ. ಆದರೂ ಕಾಡಿ‌ಬೇಡಿ‌ ತವರಿನಿಂದ ಹೆಂಡತಿಯನ್ನು ಕರೆತಂದ ರಾಮು, ವಿವಾಹ ವಾರ್ಷಿಕೋತ್ಸವದ ಬದಲು ಆಕೆಯ ಅಂತ್ಯಸಂಸ್ಕಾರ ಮಾಡುವಂತೆ ಮಾಡಿ, ತಾನೂ ಜೈಲು ಸೇರಿದ್ದಾನೆ.

ಹಿರಿಯರು ಸಮ್ಮುಖದಲ್ಲಿ ನಡೆದಿತ್ತು ನ್ಯಾಯ ಪಂಚಾಯ್ತಿ..!!

ಗಂಡನ ಮನೆಯಲ್ಲಿ ಜಗಳ ಮಾಡಿಕೊಂಡು ತವರು ಸೇರಿದ್ದ ವನಿತಾಳನ್ನು ಹಿರಿಯರ ನ್ಯಾಯ ಪಂಚಾಯ್ತಿ ಮಾಡಿಸಿ ವಾಪಸ್ ಕರೆದುಕೊಂಡು ಬಂದಿದ್ದನು. ಆದರೂ‌ ಸಂಸಾರ ಸರಿ ದಾರಿಗೆ ಬಂದಿರಲಿಲ್ಲ. ಇದೀಗ ಆಕೆಯ ಕುತ್ತಿಗೆ ಹಿಸುಕಿ ಸ್ವತಃ ಗಂಡನೆ ಕೊಲೆ ಮಾಡಿದ್ದಾನೆ. ವನಿತಾಳ ಪೋಷಕರು ಆರೋಪಿ ಮನೆಯ ಮುಂದೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ರಾಮು ಕುಟುಂಬಸ್ಥರಿಗೆ ತಕ್ಕ ಶಿಕ್ಷೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ‌ಕೊಂದ ಬಳಿಕ ಆರೋಪಿ ಕಾನೂನಿಗೆ ಶರಣಾಗಿರುವ ವಿಚಾರ ನೋಡಿದಾಗ ಹೆಚ್ಚು ತಪ್ಪಿನ ಪ್ರಮಾಣ ಹುಡುಗಿ ಕಡೆ ಇದೆಯಾ..? ಎನ್ನುವ ಅನುಮಾನ ಮೂಡುವಂತೆ ಮಾಡುತ್ತದೆ. ಒಂದು ವೇಳೆ‌ ಹೆಂಡತಿ ಮೇಲೆ ಪ್ರೀತಿ ಇಲ್ಲದಿದ್ದರೆ ವನಿತಾಳ ತವರಿನಲ್ಲಿ ಹಿರಿಯರನ್ನು ಕೂರಿಸಿ ನ್ಯಾಯ ಪಂಚಾಯ್ತಿಯನ್ನೇ ಮಾಡಿಸುವ ಅವಶ್ಯಕತೆ ಇರಲಿಲ್ಲ ಎನ್ನುತ್ತಾರೆ ರಾಮು ಕುಟುಂಬದ ಆಪ್ತರು.

ರಾಮು ಅಥವಾ ವನಿತಾ ಮಾಡಬೇಕಿದ್ದ ಕೆಲಸವೇನು..?

ರಾಮು ಜೊತೆ ಸಂಸಾರ ಮಾಡುವುದಕ್ಕೆ ಇಷ್ಟವಿಲ್ಲ ಎಂದು ತವರು ಮನೆಗೆ ಸೇರಿದ ವನಿತಾ, ನೇರವಾಗಿ ಕೌಟುಂಬಿಕ ನ್ಯಾಯಾಲಯದ ಬಾಗಿಲು ತಟ್ಟಬೇಕಿತ್ತು. ನಾನು ಈತನೊಂದಿಗೆ ಮದುವೆಯಾಗಿದ್ದೇನೆ. ಆದರೆ ಆತನ ಜೊತೆಗೆ ಹೊಂದಾಣಿಕೆ ಆಗದ ಕಾರಣ ವಿಚ್ಚೇದನ ನೀಡಬೇಕು ಎಂದು ಮನವಿ ಮಾಡಬಹುದಿತ್ತು. ಅದೇ ರೀತಿ ಕೊಲೆ ಆರೋಪಿಯಾಗಿರುವ ರಾಮು ಸಮಾಜದ ಎದುರು ಗೌರವ ಹಾಳಾಯಿತು ಎನ್ನುವ ಕಾರಣಕ್ಕೆ ಇಷ್ಟವಿಲ್ಲದ ಹೆಂಡತಿಯನ್ನು ಪದೇ ಪದೇ ಕರೆದುಕೊಂಡು ಬರುವ ಬದಲು, ತಾನೇ ಸಮ್ಮತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರೆ, ಶೀಘ್ರದಲ್ಲಿಯೇ ಬೇರೆ ಬೇರೆ ಆಗಲು ಕೋರ್ಟ್ ಒಪ್ಪಿಗೆ ಸಿಗುತ್ತಿತ್ತು. ವನಿತಾ ಸಾವು ಹಾಗೂ ರಾಮು ಜೈಲು ಸೇರುವುದು ತಪ್ಪುತ್ತಿತ್ತು. ಕಾನೂನು ಸಾಕಷ್ಟು ಅವಕಾಶಗಳನ್ನು ಕೊಟ್ಟಾಗಲೂ ಈ ರೀತಿ ಕೊಲೆಯಾಗುವುದು ಹಾಗೂ ಕೊಲೆ ಮಾಡುವುದು ಮೂರ್ಖತನ ಎನ್ನಬಹುದು.

Related Posts

Don't Miss it !