ಬೆಂಗಳೂರಲ್ಲಿ ಯಾಕಿಷ್ಟು ಮಳೆ ಅವಾಂತರ..!? ದಾಖಲೆಯ ಮಳೆ ಕಾರಣವೋ..!?

ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ವರುಣನ ಆರ್ಭಟ ಜೋರಾಗಿದೆ. ಬೆಂಗಳೂರಿನ ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿವೆ. ಕಾರುಗಳು ಸಂಪೂರ್ಣವಾಗಿ ಮುಳುಗಿರುವ ಅನೇಕ ಪ್ರಕರಣಗಳು ಇಂದು ವರದಿಯಾಗಿವೆ. ಇದಕ್ಕೆ ಮಂಗಳವಾರ ರಾತ್ರಿ ಸುರಿದ ಅತಿ ಹೆಚ್ಚು ಮಳೆಯೂ ಒಂದು ಕಾರಣ. ಆದರೆ ಮಳೆ ಬಿದ್ದರೆ ಬೆಂಗಳೂರು ಮುಳುಗುವ ಅವಶ್ಯಕತೆ ಇಲ್ಲ. ಯಾಕೆಂದರೆ ಮಳೆ ಸುರಿದ ಕೆಲವೇ ಗಂಟೆಗಳಲ್ಲಿ ನೀರು ಸರಾಗವಾಗಿ ಹರಿದು ನದಿಯನ್ನು ಸೇರುವಂತಹ ವ್ಯವಸ್ಥೆ ಇರಬೇಕು. ಆದರೆ ನಮ್ಮಲ್ಲಿ ಸಮನ್ವಯತೆ ಕೊರತೆ ಇರುವುದರಿಂದ ನೀರು ನಗರ ಬಿಟ್ಟು ಹರಿದು ಹೋಗುವಂತಹ ವ್ಯವಸ್ಥೆ ಸರಿಯಿಲ್ಲ. ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ನೀರನ್ನು ಕಳುಹಿಸಿದರೆ ಸಾಕು ಎನ್ನುವ ಮನಸ್ಥಿತಿಯೇ ಹೆಚ್ಚು. ಇದು ನೀರು ಸಂಗ್ರಹ ಆಗುವುದಕ್ಕೆ ಪ್ರಮುಖ ಕಾರಣ.

ಬೆಂಗಳೂರು ಕಟ್ಟಿರುವುದೇ ನೂರಾರು ಕೆರೆಗಳ ಮೇಲೆ..!

ಬೆಂಗಳೂರು ಯಾವ ಪರಿ ಬೆಳೆದುಕೊಂಡು ಹೋಗಿದೆ ಎಂದರೆ ಇಡೀ ನಗರ ನಿರ್ಮಾಣ ಆಗಿರುವುದು ಕೆರೆಗಳ ಮೇಲೆ ಎನ್ನುವುದು ಅಚ್ಚರಿಯಾದರೂ ಸತ್ಯವಾದ ಮಾತು. ಬೆಂಗಳೂರಿನ ಪ್ರಮುಖ ಕೆಂಪೇಗೌಡ ಬಸ್​ ನಿಲ್ದಾಣ (Mejestic) ನಿರ್ಮಾಣ ಆಗಿರುವುದೇ ಕೆರೆ ಮೇಲೆ. ಅದೇ ರೀತಿ ಬೆಂಗಳೂರಿನಲ್ಲಿ ಬಿನ್ನಿಮಿಲ್​ ಕೆರೆ, ಸಂಪಂಗಿ ಕರೆ, ಹಲಸೂರು ಕೆರೆ, ಎಡೆಯೂರು ಕರೆ, ಲಾಲ್​ಭಾಗ್ ಕೆರೆ ಸ್ಯಾಂಕಿ ಕೆರೆ, ಕೆಂಪಾಬುದಿ ಕೆರೆ, ಧರ್ಮಾಂಬುದಿ ಕೆರೆ, ಸಿದ್ದಕಟ್ಟೆ, ಕೋರಮಂಗಲ ಕೆರೆ, ತುರಕರ ಕೆರೆ, ಜೋಗನಹಳ್ಳಿ ಕೆರೆ, ಚೆನ್ನಮ್ಮನಕೆರೆ, ಅಕ್ಕಿ ತಿಮ್ಮನಹಳ್ಳಿ ಕೆರೆ, ಚಲ್ಲಘಟ್ಟ ಕೆರೆ, ಕಾರಂಜಿ ಕೆರೆ, ಶಿವಣಹಳ್ಳಿ ಕೆರೆ, ಮಾರೇನಹಳ್ಳಿ ಕೆರೆ, ಜಕ್ಕರಾಯನಕೆರೆ, ಕಾಡುಗೊಂಡನಹಳ್ಳಿ ಕೆರೆ, ಕರುಬರಹಳ್ಳಿ ಕೆರೆ, ದೊಮ್ಮಲೂರು ಕೆರೆ, ಮಿಲ್ಲರ್ಸ್​ ಕೆರೆ, ಪುಟ್ಟೇನಹಳ್ಳಿ ಕೆರೆ, ಹೆಸರಘಟ್ಟ ಕೆರೆ ಹೀಗೆ ಅನೇಕ ಕೆರೆಗಳನ್ನು ರಾಜಧಾನಿ ಬೆಂಗಳೂರು ಹೊಂದಿತ್ತು. ಬಹುತೇಕ ಕೆರೆಗಳನ್ನು ಮುಚ್ಚಿ ಅದೇ ಕೆರೆಯ ಹೆಸರಲ್ಲೇ ಏರಿಯಾಗಳನ್ನು ಮಾಡಿಕೊಳ್ಳಲಾಗಿದೆ. ಇನ್ನೂ ಅನೇಕ ಕೆರೆಗಳು ಇದ್ದರೂ ಕೆರೆಗಳಾಗಿ ಉಳಿಸಿಕೊಂಡಿಲ್ಲ. ಮಳೆ ನೀರು ಹರಿದು ಕೆರೆ ಸೇರುವ ವ್ಯವಸ್ಥೆಯೇ ಇಲ್ಲ. ಮಳೆ ನೀರು ಚರಂಡಿ ನೀರು ಪ್ರತ್ಯೇಕ ಹರಿವಿಗೆ ಮಾರ್ಗ ಇಲ್ಲದಿರುವುದು ಮಳೆ ನೀರು ಕೆರೆ ಸೇರುವಂತೆ ಮಾಡಲು ಸಾಧ್ಯವಾಗದಿರುವುದಕ್ಕೆ ಮತ್ತೊಂದು ಕಾರಣ.

ಕಾಂಕ್ರಿಟ್​ ನಾಡು, ಮಳೆ ನೀರು ಕೊಯ್ಲು ವಿಫಲ..!

ಯಾವುದೇ ಸರ್ಕಾರ ಬಂದರೂ ಬೆಂಗಳೂರು ಅಭಿವೃದ್ಧಿ ಹೆಸರಲ್ಲಿ ಕೋಟಿ ಕೋಟಿ ಹಣ ಬಿಡುಗಡೆ ಮಾಡುವುದು. ಒಂದೊಂದು ರಸ್ತೆಯನ್ನು ಕೀಳುವುದು, ಮತ್ತೆ ಹಾಕುವುದು ಇದು ನಡೆದುಕೊಂಡು ಬಂದಿರುವ ಪದ್ದತಿ. ಆದರೆ ಅಭಿವೃದ್ಧಿ ಕಾಮಗಾರಿ ಮಾಡುವುದು ಅನಾಹುತಕ್ಕೆ ಕಾರಣವಲ್ಲ, ಆದರೆ ಕಾಮಗಾರಿ ಮಾಡುವ ವೇಳೆ ಕೊಳಚೆ ನೀರಿನ ಮಾರ್ಗಗಳನ್ನು ಏರುಪೇರು ಮಾಡುವುದು ಇಂದಿನ ಸಮಸ್ಯೆಗೆ ಬಹುಮುಖ್ಯ ಕಾರಣ. ಇನ್ನೂ ಬಹುತೆಕ ಕೆರೆಗಳನ್ನು ಮುಚ್ಚಿ ಅಪಾರ್ಟ್​ಮೆಂಟ್​ (Apartments) ನಿರ್ಮಾಣ ಮಾಡಲಾಗಿದೆ. ಪರಿಸ್ಥಿತಿ ಹೀಗಿರುವಾಗ ಮಳೆ ನೀರು ಬಿದ್ದಾಗ ಚರಂಡಿ ಮೂಲಕ ಕೆರೆಗೆ ಸೇರುವುದು ಹೇಗೆ..? ಆದರೆ ಮಳೆ ನೀರು ಮಾತ್ರ ನೇರವಾಗಿ ಈ ಮೊದಲು ಕೆರೆಗಳು ಇದ್ದ ಜಾಗಕ್ಕೆ ಹೋಗುತ್ತಿದೆ. ಈಗ ಕೆರೆಗಳು ಇದ್ದ ಜಾಗದಲ್ಲಿ ಮನೆಗಳು ನಿರ್ಮಾಣ ಆಗಿವೆ. ಇದರ ಜೊತೆಗೆ ಸರ್ಕಾರ ದಾಖಲೆಗಳಲ್ಲಿ ಮಾತ್ರ ಮಳೆ ನೀರು ಕೊಯ್ಲು ಯೋಜನೆ ಜಾರಿ ಮಾಡಿದೆ. ಇನ್ನೆಲ್ಲೂ ಮಳೆ ನೀರು ಕೊಯ್ಲು ಕಟ್ಟು ನಿಟ್ಟಾಗಿ ಜಾರಿಯಾಗಿಲ್ಲ. ಮಾನವ ಮಾಡಿಕೊಂಡಿರುವ ಸ್ವಯಂಕೃತ ಅಪರಾಧವೇ ಮಳೆ ನೀರು ಮನೆಗೆ ನುಗ್ಗುವುದಕ್ಕೆ ಪ್ರಮುಖ ಕಾರಣ ಎನ್ನಬಹುದು.

ಅತಿ ಹೆಚ್ಚು ಮಳೆಯಾಗಿದೆ ಎನ್ನುವುದು ಸತ್ಯವಲ್ಲವೇ..?

ಬೆಂಗಳೂರಲ್ಲಿ ಒಟ್ಟಾರೆ ಮಂಗಳವಾರ ರಾತ್ರಿ ಭಾರೀ ಮಳೆ ಸುರಿದಿದೆ ಎನ್ನುವುದು ಸತ್ಯವಾದ ಮಾತು. ಯಾಕೆಂದರೆ ಅಂಕಿ ಅಂಶಗಳೇ ಮಳೆಯ ಪ್ರಮಾಣವನ್ನು ಹೇಳುತ್ತಿವೆ. ವಿದ್ಯಾಪೀಠ ಸರ್ಕಲ್​ನಲ್ಲಿ 113 ಮಿ. ಮೀಟರ್, ಸಂಪಂಗಿರಾಮನಗರ 100.3 ಮಿ. ಮೀಟರ್, ನಾಗಪುರ 100 ಮಿ. ಮೀಟರ್, ಅಗ್ರಹಾರ ದಾಸರಹಳ್ಳಿ 97.5 ಮಿ. ಮೀಟರ್, ಹಂಪಿ ನಗರ 93.5 ಮಿ. ಮೀಟರ್, ರಾಜಮಹಲ್ ಗುಟ್ಟಹಳ್ಳಿ 95 ಮಿ. ಮೀಟರ್, ದಯಾನಂದ ನಗರ 82 ಮಿಲ. ಮೀಟರ್ ಮಳೆ ಆಗಿದೆ. ಆದರೆ ಎಷ್ಟೇ ಮಳೆ ಬಿದ್ದರೂ ಭೂಮಿಯಲ್ಲಿ ಇಂಗುವ ಅವಕಾಶ ಇರುತ್ತದೆ. ಆದರೆ ಬೆಂಗಳೂರಿನಲ್ಲಿ ಕಾಂಕ್ರಿಟ್​ ಕಟ್ಟಡ, ಕಾಂಕ್ರಿಟ್​ ರಸ್ತೆ, ನೀರು ಭೂಮಿಯನ್ನು ಸೇರುವುದು ಸಾಧ್ಯವೇ ಇಲ್ಲ. ಇನ್ನೂ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ರಾಜಕಾಲುವೆ ಆದರೂ ಸರಿಯಿದೆಯೇ..? ಎಂದರೆ ಅದೂ ಇಲ್ಲ. ಕಬ್ಬನ್​ ಪಾರ್ಕ್​, ಲಾಲ್​ ಭಾಗ್​ ಸೇರಿದಂತೆ ಬಹುತೇಕ ದೊಡ್ಡ ದೊಡ್ಡ ಪಾಕ್​ಗಳಲ್ಲಿ ನೀರು ಇಂಗುವ ವ್ಯವಸ್ಥೆಯನ್ನು ಸರ್ಕಾರವೇ ಮಾಡಿ ಮಳೆ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿದರೆ ಬೆಂಗಳೂರಿನ ಭೂಮಿ ತಂಪಾಗಲಿ. ಮಳೆ ನೀರಿನ ಸಮಸ್ಯೆಯೂ ತಪ್ಪಲಿದೆ. ಇಲ್ಲದಿದ್ದರೆ ಪ್ರತಿ ವರ್ಷ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಹಿಡಿಶಾಪ ತಪ್ಪದು.

Related Posts

Don't Miss it !