ಸುಳ್ಳುಗಳಲ್ಲಿ ಸತ್ತುಹೋದ ಟಿಪ್ಪು ಸುಲ್ತಾನ್ ಮತ್ತು ಸ್ವಾತಂತ್ರ್ಯೋತ್ಸವ..

ಕರ್ನಾಟಕ ಸ್ವಾತಂತ್ರ್ಯೋತ್ಸವದಲ್ಲಿ ಸಾಕಷ್ಟು ಕೊಡುಗೆ ನೀಡಿದೆ ಅನ್ನೋದು ಸರ್ಕಾರದ ಜಾಹಿರಾತುವಿನಲ್ಲಿ ಇರುವ ಹೆಸರುಗಳ ಪಟ್ಟಿಯನ್ನು ನೋಡಿದಾಗ ಗೊತ್ತಾಗುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಕಮಲಾ ದೇವಿ ಚಟ್ಟೋಪಾಧ್ಯಾಯ, ಕಾರ್ನಾಡ್ ಸದಾಶಿವರಾವ್, ನಿಟ್ಟೂರು ಶ್ರೀನಿವಾಸ ರಾವ್, ಸುಬೇದಾರ್​ ಗುಡ್ಡೆಮನೆ ಅಪ್ಪಯ್ಯ ಗೌಡ, ಮೈಲಾರ ಮಹಾದೇವಪ್ಪ, ಉಮಾಬಾಯಿ ಕುಂದಾಪರ, ಕೆ.ಜಿ ಗೋಖಲೆ, ಗಂಗಾಧರ ರಾವ್ ದೇಶಪಾಂಡೆ, ಎನ್​.ಎಸ್ ಹರ್ಡಿಕರ್, ಆರ್​.ಎಸ್​ ಹುಕ್ಕೇರಿಕರ್​, ಬನವಾಸಿ ಹರ್ಡೆಕರ್ ಮಂಜಪ್ಪ, ಚಂದ್ರಶೇಖರಯ್ಯ, ಮಲೆಯೂರು ಚಿಕ್ಕಲಿಂಗಪ್ಪ, ಹೆಚ್.ಎಸ್​ ದೊರೆಸ್ವಾಮಿ, ಯಶೋಧರಾ ದಾಸಪ್ಪ ಎಂದು ಎಲ್ಲಾ ಪತ್ರಿಕೆಗಳಲ್ಲೂ ಜಾಹಿರಾತು ನೀಡಲಾಗಿದೆ. ಇವರೆಲ್ಲರೂ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಟಿಪ್ಪು ಸುಲ್ತಾನ್​ ಹೆಸರು ಬಿಟ್ಟು ಹೋಗಿರುವುದಕ್ಕ ಕಾಂಗ್ರೆಸ್​ ಹಾಗು ಜೆಡಿಎಸ್​ ಕೆಂಡಾಮಂಡಲ ಆಗಿವೆ.

ಟಿಪ್ಪು ಸುಲ್ತಾನ್​ ಸ್ವತಂತ್ರ ಹೋರಾಟಗಾರ ಅಲ್ಲ ಬಿಜೆಪಿ ವಾದ..!

ಟಿಪ್ಪು ಸುಲ್ತಾನ್​ ಮುಸ್ಲಿಂ ಧರ್ಮಕ್ಕೆ ಸೇರಿದವನು ಹಾಗು ಜವಾಹರಲಾಲ್​ ನೆಹರು ಕಾಂಗ್ರೆಸ್​​ ಪಕ್ಷಕ್ಕೆ ಸೇರಿದವರು ಎನ್ನುವ ಏಕೈಕ ಕಾರಣಕ್ಕೆ ಬಿಜೆಪಿ ಕೆಂಡಕಾರುತ್ತಿದೆ ಎನ್ನುವುದು ಕಾಂಗ್ರೆಸ್​ ಹಾಗು ಜೆಡಿಎಸ್ ಆರೋಪ. ಆರ್​ಎಸ್​ಎಸ್​ನ ಕೊಳಕು ಮನಸ್ಥಿತಿ ಅನಾವರಣ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಇನ್ನು ಕುಮಾರಸ್ವಾಮಿ ಒಂದು ಹೆಜ್ಜೆ ಮುಂದೆ ಹೋಗಿ ಜಾಹಿರಾತು ನೀಡುವಾಗ ಬಿಜೆಪಿ ಸಣ್ಣತನ ಪ್ರದರ್ಶನ ಮಾಡಿದೆ ಎಂದಿದ್ದಾರೆ. ಆದರೆ ಬಿಜೆಪಿ ಟಿಪ್ಪು ಸುಲ್ತಾನ್​ ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲ, ಆತನೊಬ್ಬ ಧರ್ಮಾಂದನಾಗಿದ್ದ, ಕೇವಲ ಸಾಮ್ರಾಜ್ಯ ವಿಸ್ತರಣೆ ದಾಹ ಆತನಲ್ಲಿತ್ತು. ಭಾರತಕ್ಕಾಗಿ ಆತನ ಸೇವೆ ಕಿಂಚಿತ್ತು ಇಲ್ಲ ಎನ್ನುವ ರೀತಿಯಲ್ಲಿ ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಟಿಪ್ಪು ಸುಲ್ತಾನ್ ನಿಜವಾಗಿಯೂ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಯೇ ಇಲ್ಲವೇ..? ಸುಳ್ಳು ಇತಿಹಾಸವನ್ನು ಸೃಷ್ಠಿಸುತ್ತಿರೋದು ಯಾರು..? ನಾವು ಓದಿದ್ದು ಸುಳ್ಳಿನ ಕಂತೆಯೇ..? ಎನ್ನುವ ಅನುಮಾನ ಜನರಲ್ಲಿ ಮೂಡಿದೆ. ಆದರೆ ಟಿಪ್ಪು ಸುಲ್ತಾನನಿಲ್ಲದ ಸ್ವಾತಂತ್ರ ಹೋರಾಟದ ಇತಿಹಾಸ ಅಪೂರ್ಣ ಎಂದರೂ ಸುಳ್ಳಲ್ಲ.

ಆಂಗ್ಲೋ – ಮೈಸೂರು ಯುದ್ಧಗಳು ಹೇಳುವುದೇನು..?

ಟಿಪ್ಪು ಸುಲ್ತಾನ್​ಗೆ ಭಾರತ ಎನ್ನುವ ಪರಿಕಲ್ಪನೆ ಇರಲಿಲ್ಲ ಎನ್ನುವ ಬಿಜೆಪಿಗರ ವಾದ ನೂರಕ್ಕೆ ನೂರರಷ್ಟು ಸತ್ಯ. ಯಾಕೆಂದ್ರೆ ಆತನಿಗೆ ದೇಶದ ಕಲ್ಪನೆ ಇರಲಿಲ್ಲ ಆದರೆ ಆತ ಮೈಸೂರು ರಾಜ್ಯವನ್ನು ಬ್ರಿಟೀಷರಿಗೆ ಒಪ್ಪಿಸುವುದಿಲ್ಲ. ನಮ್ಮದು ಸ್ವಾತಂತ್ರ್ಯ ರಾಜ್ಯ ಎಂದು ಬ್ರಿಟೀಷರ ವಿರುದ್ಧ ಸೆಟೆದು ನಿಂತಿದ್ದ. ಇದೇ ಕಾರಣಕ್ಕಾಗಿಯೇ ನಡೆದಿದ್ದು ಒಂದಲ್ಲ ಎರಡಲ್ಲ ನಾಲ್ಕು ಆಂಗ್ಲೋ ಮೈಸೂರು ಯುದ್ಧಗಳು ಅನ್ನೋದನ್ನು ನಾನು ಮುಚ್ಚಿಡಬಹುದು. ಆದರೆ ಇತಿಹಾಸವನ್ನು ಮರೆ ಮಾಚುವುದು ಅಷ್ಟು ಸುಲಭದ ಮಾತಲ್ಲ ಎನ್ನಬಹುದು. ಆತ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಎನ್ನುವುದೇ ಸತ್ಯವಾಗಿದ್ದರೆ ಆತನ ಆಳ್ವಿಕೆಯಲ್ಲಿ ತನ್ನ ಮೈಸೂರು ರಾಜ್ಯದಲ್ಲಿ ಸಂಪೂರ್ಣವಾಗಿ ಎಲ್ಲರನ್ನು ಇಸ್ಲಾಂ ಧರ್ಮಕ್ಕೆ ಯಾಕೆ ಮತಾಂತರ ಮಾಡಲಿಲ್ಲ..? ಎನ್ನುವುದಕ್ಕೆ ಟಿಪ್ಪು ವಿರೋಧಿಗಳ ಬಳಿ ಉತ್ತರವಿರಲು ಸಾಧ್ಯವಿಲ್ಲ. ಶೃಂಗೇರಿಯನ್ನು ಶಿವಾಜಿ ಸೇನೆ ನಾಶ ಮಾಡಿದಾಗ ಶೃಂಗೇರಿಯನ್ನು ಮರುಸ್ಥಾಪನೆ ಮಾಡಿದ್ದು ಟಿಪ್ಪು ಎನ್ನುತ್ತದೆ ಇತಿಹಾಸ. ಇನ್ನು ಟಿಪ್ಪು ಸುಲ್ತಾನ್ ಮಡಿಕೇರಿಯಲ್ಲಿ ಹಿಂದೂಗಳ ನರಮೇದ ನಡೆಸಿದ ಜನರು ಒಂದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಕೊಡಗು ಮೈಸೂರು ರಾಜ್ಯ ಆಗಿರಲಿಲ್ಲ. ಪಕ್ಕದ ರಾಜ್ಯವನ್ನು ಗೆಲ್ಲುವ ಉದ್ದೇಶದಿಂದ ಯುದ್ಧಕ್ಕೆ ಹೋದಾಗ ಶತ್ರುಗಳೇ ವಿನಃ ಯಾರೂ ಸಂಬಂಧಿಗಳಲ್ಲ ಅಲ್ಲವೇ..?

ತಮ್ಮ ರಾಜಕೀಯ ಜಿದ್ದಾಜಿದ್ದಿಗೆ ಟಿಪ್ಪು ಬಲಿಯಾದ..!

ಟಿಪ್ಪು ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಮಾಡಿದ್ದ ಯುದ್ಧದಲ್ಲಿ ಸೋತ ಬಳಿಕ ಯುದ್ಧದ ನಷ್ಟವಾಗಿ ತನ್ನಿಬ್ಬರು ಮಕ್ಕಳನ್ನು ಬ್ರಿಟೀಷರ ಬಳಿ ಒತ್ತೆಯಾಳು ಆಗಿ ಇರಿಸಿದ್ದನ್ನು. ಟಿಪ್ಪು ಮೊದಲ ಬಾರಿಗೆ ಫಿರಂಗಿ ಬಳಸಿ ಯುದ್ಧ ಮಾಡಿದ್ದನ್ನು ಇತಿಹಾಸ ಸಾಕ್ಷಿ ಸಮೇತ ಸಾರುತ್ತದೆ. ಬ್ರಿಟೀಷರನ್ನು ಭಾರತದಿಂದ ಓಡಿಸಲು ನೆರವಾಗುವಂತೆ ಫ್ರೆಂಚರಲ್ಲಿ ಮನವಿ ಮಾಡಿಕೊಂಡಿದ್ದು, ಆಂಗ್ಲರ ವಿರೋಧಿಗಳಾಗಿದ್ದ ಸಾಕಷ್ಟು ರಾಜರುಗಳಲ್ಲಿ ಪತ್ರವ್ಯವಹಾರ ಮಾಡಿ ಬೆಂಬಲ ಕೋರಿದ್ದರ ಬಗ್ಗೆ ಪತ್ರ ಸಾಕ್ಷಿಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇನ್ನು ತನ್ನ ಧರ್ಮವನ್ನು ಉಳಿಸುವುದಕ್ಕಾಗಿ ಹೋರಾಡಿದ ಎನ್ನುವುದಾದರೆ ತನ್ನ ಕುಟುಂಬವನ್ನು ಬಲಿ ಕೊಟ್ಟಿದ್ದು ಯಾಕೆ..? ಟಿಪ್ಪು ತನ್ನ ಕುಟುಂಬದ ಹೆಸರಲ್ಲಿ ಎಷ್ಟು ಕೋಟಿ ಆಸ್ತಿಯನ್ನು ಮಾಡಿಕೊಂಡಿದ್ದಾನೆ..? ರಾಜ್ಯದ ಎಲ್ಲೆಲ್ಲಿ ಟಿಪ್ಪು ಕುಟುಂಬದ ಆಸ್ತಿ ಇದೆ ಎಂಬುದನ್ನು ಸರ್ಕಾರವೇ ಬಹಿರಂಗ ಮಾಡಿದರೆ ಒಳಿತು. ಇನ್ನು ಸಿದ್ದರಾಮಯ್ಯ ಮುಸ್ಲಿಮರನ್ನು ಓಲೈಸಲು ಮಾಡಿದ ಟಿಪ್ಪು ಜಯಂತಿ ಬಿಜೆಪಿಯ ವಿರೋಧಕ್ಕೆ ಮುನ್ನುಡಿ ಬರೆಯಿತು ಎನ್ನಬಹುದು. ಅದರ ಜೊತೆಗೆ ಮರಾಠಿಗರ ಸಾಮ್ರಾಟ್​ ಶಿವಾಜಿ ಮಹಾರಾಜ್​ ಇಂದಿನ ಕರ್ನಾಟಕದ ಭೂಪ್ರದೇಶಗಳ ಮೇಲೆ ಮಾಡಿರುವ ದಾಳಿಗಳನ್ನು ಅಪ್ಪಿಕೊಳ್ಳುವ ಬಿಜೆಪಿ ಹಳೇ ಮೈಸೂರು ಭಾಗದ ವೀರ ಟಿಪ್ಪುವನ್ನು ವಿರೋಧಿಸುತ್ತದೆ. ಶಿವಾಜಿ ಮಹಾರಾಜ್​ ಯುದ್ಧ ಮಾಡುವಾಗ ಹಿಂದೂಗಳನ್ನು ಕೊಲ್ಲದೆ ಎಲ್ಲರನ್ನು ರಕ್ಷಣೆ ಮಾಡಿದ್ರಾ..? ಎನ್ನುವುದನ್ನು ಯೋಚಿಸಿದರೆ ರಾಜಕೀಯ ಷಡ್ಯಂತ್ರ ಅರ್ಥವಾಗಲಿದೆ ಎನ್ನಬಹುದು.

Related Posts

Don't Miss it !