ಹೆಂಡತಿ ತಂಗಿ ಬಂದಿದ್ದಳು.. ಚಿಕನ್​ ಫ್ರೈ ಟೇಸ್ಟ್​ ಇಲ್ಲ ಎಂದು ಪತ್ನಿಯನ್ನೇ ಕೊಂದ..!?

ಊಟ ಚೆನ್ನಾಗಿಲ್ಲ ಅಂದ್ರೆ ಒಂದು ಮಾತು ರೇಗಬಹುದು. ಆದರೆ ಕೊಲೆ ಮಾಡುವುದು ಅಂದ್ರೆ ಸುಮ್ಮನೆ ಅಲ್ಲ. ಆದರೆ ಇಲ್ಲೊಬ್ಬ ವಿಕೃತ ಪ್ರೇಮಿ ತನ್ನ ಹೆಂಡತಿಯನ್ನು ಕೊಲೆ ಮಾಡಿ ಹಾಸಿಗೆಯಲ್ಲಿ ಸುತ್ತಿ ಕೆರೆಗೆ ಎಸೆದಿದ್ದಾನೆ. ಕೊನೆಗೆ ತಾನೇ ಪೊಲೀಸ್​ ಠಾಣೆಗೆ ಬಂದು ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಚಿಕನ್​ ಫ್ರೈ ಚೆನ್ನಾಗಿರಲಿಲ್ಲ ಎಂದು ಕೊಲೆ ಮಾಡಿದೆ ಎಂದು ಹೇಳುತ್ತಿರುವ ಮಾತು ಪೊಲೀಸರನ್ನೇ ತಬ್ಬಿಬ್ಬು ಮಾಡಿದೆ. ಇದು ಕೊಲೆಗೆ ನಿಖರ ಕಾರಣವಾ..? ಅಥವಾ ಬೇರೊಂದು ವಿಚಾರವನ್ನು ಮುಚ್ಚಿಟ್ಟು ಈ ರೀತಿ ಕಾರಣ ಕೊಡುತ್ತಿದ್ದಾನಾ..? ಎನ್ನುವ ಬಗ್ಗೆ ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ಕೊಲೆ ನಡೆದು ಸುಮಾರು 20 ದಿನಗಳಾಗಿವೆ..

ಪತ್ನಿ ಕೊಂದು ಮುಚ್ಚಿಟ್ಟಿದ್ಯಾಕೆ ಮುಬಾರಕ್​..!?

ಬೆಂಗಳೂರಿನ ಹೆಸರಘಟ್ಟ ರಸ್ತೆಯಲ್ಲಿ ಸಿಗುವ ತರಬನಹಳ್ಳಿ ಗ್ರಾಮದ ಮುಭಾರಕ್​ ಹಾಸಿಗೆ ವ್ಯಾಪಾರ ಮಾಡಿಕೊಂಡಿದ್ದನು. ಕಳೆದ 20 ದಿನಗಳ ಹಿಂದೆ ಚಿಕನ್​ ಫ್ರೈ ಮಾಡಿದ ವೇಳೆ ಟೇಸ್ಟ್​ ಚೆನ್ನಾಗಿಲ್ಲ ಎನ್ನುವ ಕಾರಣಕ್ಕೆ ಹೆಂಡತಿಯನ್ನು ಕೊಂದವನು, ಮನೆಯಲ್ಲಿದ್ದ ಹಳೆಯ ಸಾಸಿಗೆ ಜೊತೆಗೆ ಸುತ್ತಿಕೊಂಡು ಬೈಕ್‌ ಮೇಲೆ ಕಟ್ಟಿಕೊಂಡು ಚಿಕ್ಕಬಾಣಾವಾರ ಕೆರೆ ಬಳಿಗೆ ಬಂದು ಎಸೆದಿದ್ದ. ಹೆಂಡತಿಯ ಪೋಷಕರು ಮಗಳ ಬಗ್ಗೆ ವಿಚಾರಿಸಿದಾಗ ನಾನು ಹೊರಗಡೆ ಇದ್ದೇನೆ ಎಂದು ಸಬೂಬು ಹೇಳುತ್ತಿದ್ದ ಮುಭಾರಕ್​, ಅಂತಿಮವಾಗಿ ಒತ್ತಡ ತಡೆಕೊಳ್ಳಲು ಸಾಧ್ಯವಾಗದೆ ವಕೀಲರ ಜೊತೆಗೆ ಬಂದು ಕೊಲೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಶಿರಿನ್​ಳನ್ನು ಮುಭಾರಕ್​ ಪ್ರೀತಿಸಿ ಮದ್ವೆಯಾಗಿದ್ದ ಎನ್ನುವುದು ವಿಶೇಷ.

ಇದನ್ನೂ ಓದಿ;

ಪ್ರೀತಿಸಿ ಮದ್ವೆಯಾದ ಜೋಡಿ ಅಂತ್ಯ..!


ದಾವಣಗೆರೆ ಮೂಲದ ಮುಭಾರಕ್​ 5 ವರ್ಷಗಳ ಹಿಂದೆ ಶಿರಿನ್​ಳನ್ನು ಪ್ರೀತಿಸಿ​, ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ದ. ಪ್ರೀತಿಯ ಕುರುಹು ಎನ್ನುವಂತೆ ಮುದ್ದಾದ ಹೆಣ್ಣು ಮಗುವೊಂದು ಜನಿಸಿತ್ತು. 32 ವರ್ಷದ ಮುಭಾರಕ್, 25 ವರ್ಷದ ಶಿರಿನ್ ಭಾನು ಜೊತೆಗೆ ಸುಖ ಸಂಸಾರ ನಡೆಸುತ್ತಿದ್ದನು. ಆಗಸ್ಟ್​ 5ರಂದು ಶಿರಿನ್​ ಭಾನು ತಂಗಿ ಅಕ್ಕನ ಮನೆಗೆ ಬಂದಿದ್ದಳು. ಈ ವೇಳೆ ಚಿಕನ್ ತಂದಿದ್ದ ಮುಭಾರಕ್​ ಚಿಕನ್​​ ಫ್ರೈ ಮಾಡುವಂತೆ ಸೂಚಿಸಿದ್ದನು. ಆದರೆ ಚಿಕನ್​ ಚೆನ್ನಾಗಿಲ್ಲ ಎಂದು ಪತ್ನಿಯ ತಂಗಿ ಮನೆಯಿಂದ ಹೋದ ಬಳಿಕ ದೊಣ್ಣೆಯಿಂದ ಹೊಡೆದು ಕೊಂದೆ ಎಂದಿದ್ದಾನೆ ಮುಭಾರಕ್​. ಸೋಲದೇವನಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ಆದರೆ ಕೊಲೆಗೆ ಚಿಕನ್​ ಫ್ರೈ ಕಾರಣವೋ..? ಮುಚ್ಚಿಟ್ಟ ಬೇರೊಂದು ಸತ್ಯ ಇದೆಯಾ ಎನ್ನುವುದನ್ನು ಪೊಲೀಸರು ಪತ್ತೆ ಮಾಡಬೇಕಿದೆ.

ಇದನ್ನೂ ಓದಿ;

ಪತ್ನಿ ತಂಗಿ ಹೋದ ಬಳಿಕ ಕೊಂದಿದ್ಯಾಕೆ..?


ಹೆಂಡತಿಯ ತಂಗಿ ಬಂದಿದ್ದಾಗ ಚಿಕನ್​ ಊಟ ಕೆಟ್ಟು ಹೋಗಿದ್ದರೆ ಆಗ ಒಂದೆರಡು ಮಾತು ಬೈಯ್ದಿರಬಹುದು. ಆದರೆ ಪತ್ನಿಯ ತಂಗಿ ಮನೆಯಿಂದ ಹೋದ ಬಳಿಕ ಪತ್ನಿಗೆ ದೊಣ್ಣೆಯಿಂದ ಹೊಡೆಯುವಷ್ಟು ಕೋಪ ಇರಲಾರದು. ಯಾಕಂದ್ರೆ ಕೋಪ ಕ್ಷಣಿಕ. ಪತ್ನಿಯ ತಂಗಿ ಇದ್ದಾಗಲೇ ಗಲಾಟೆ ನಡೆದಿದ್ದರೂ ನಡೆದಿರಬೇಕು. ಆದರೆ ಊಟವೆಲ್ಲಾ ಆದ ನಂತರ ಗಲಾಟೆ ನಡೆದಿದೆ ಎಂದರೆ ನಂಬಲು ಅಸಾಧ್ಯ. ಇನ್ನೂ ಮಗುವೊಂದು ಇದ್ದು, ಕೊಲೆ ಬಗ್ಗೆ ಸತ್ಯ ನುಡಿಯಬೇಕಿದೆ. ಇನ್ನೂ ಪತ್ನಿಯ ತಂಗಿ ಊಟ ಮಾಡುವಾಗ ಗಲಾಟೆ ನಡೆದಿತ್ತಾ..? ಇಲ್ಲವೇ ಎನ್ನುವುದನ್ನು ಪೊಲೀಸರ ಎದುರು ಹೇಳಬೇಕಿದೆ. ಒಂದು ವೇಳೆ ಕೋಪದಲ್ಲಿ ಹೊಡೆದ ಏಟಿಗೆ ಪತ್ನಿ ಸತ್ತೇ ಹೋದಳು ಎನ್ನುವುದಾದರೆ ಶವವನ್ನು ಹಾಸಿಗೆಯಲ್ಲಿ ಸುತ್ತಿ ಕೆರೆಗೆ ಎಸೆದಿದ್ದು ಯಾಕೆ..? ನೇರವಾಗಿ ಪೊಲೀಸರ ಎದುರು ಹೋಗಿ ತನ್ನ ತಪ್ಪನ್ನು ಒಪ್ಪಿಕೊಳ್ಳಬಹುದಿತ್ತಲ್ಲಾ..? ಎನ್ನುವ ಅನುಮಾನವೂ ಕಾಡುತ್ತದೆ. ಆದರೆ ಕೊಲೆ ಮಾಡಿ ಮುಚ್ಚಿಡಲು ಯತ್ನಿಸಿದ ಮುಭಾರಕ್​, ಕೊಲೆ ಕೇಸ್​ನಲ್ಲಿ ಆಗುವ ಶಿಕ್ಷೆಯಿಂದ ಪಾರಾಗಲು ಈ ರೀತಿಯ ಹೇಳಿಕೆ ಕೊಡುತ್ತಿದ್ದಾನಾ..? ಎನ್ನುವುದನ್ನು ಪೊಲೀಸ್ರು ಪತ್ತೆ ಮಾಡಬೇಕಿದೆ.

Related Posts

Don't Miss it !