ರಂಗಭೂಮಿಯಲ್ಲಿ ರಂಗಿನಾಟ.. ಸರಸ ಸಂಘರ್ಷದ ನಡುವೆ ಆಸಿಡ್ ದಾಳಿ..!!

ಬೆಂಗಳೂರಿನಲ್ಲಿ ಮಹಿಳೆ ಮೇಲೆ ಆ್ಯಸಿಡ್ ದಾಳಿ ಮಾಡಲಾಗಿದೆ. ನಂದಿನಿ ಲೇಔಟ್​​ನ ಗಣೇಶ ಬ್ಲಾಕ್​​ನಲ್ಲಿ ಮೂರು ದಿನಗಳ ಹಿಂದೆ ಅಂದರೆ ಶುಕ್ರವಾರ ಆ್ಯಸಿಡ್ ದಾಳಿ ಮಾಡಲಾಗಿದೆ. ಆಸಿಡ್ ದಾಳಿಗೆ ಒಳಗಾದ ಮಹಿಳೆ ಹೆಸರು ದೇವಿ. ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ದೇವಿಗೆ ರಮೇಶ್ ಎಂಬಾತನ ಜೊತೆಗೆ ಸ್ನೇಹವಾಗಿತ್ತು. ರಂಗಭೂಮಿಯಲ್ಲಿ ಸ್ನೇಹಿತರಾದವರು ಕೆಲವು ದಿನಗಳ ಕಾಲ ಅನ್ಯೋನ್ಯ ಜೀವನಕ್ಕೆ ತೆರೆದುಕೊಂಡಿದ್ದರು. ಅನ್ಯೋನ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಇಬ್ಬರ ನಡುವಿನ ಪ್ರೀತಿ ವಿಶ್ವಾಸಕ್ಕೆ ಧಕ್ಕೆಯಾಗಿತ್ತು. ಆ ಬಿರುಕು ಆ್ಯಸಿಡ್ ದಾಳಿ ಮಾಡುವ ನೀಚ ಮನಸ್ಥಿತಿಗೆ ಬಂದು ನಿಂತಿತ್ತು. ಸ್ನೇಹಿತರು ತಮ್ಮೊಳಗಿನ ಸಂಬಂಧ ಹಳಸಿದಾಗ ತಮ್ಮ ಪಾಡಿಗೆ ತಾವಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಸೇಡು‌ ತೀರಿಸಿಕೊಳ್ಳಲು ಮುಂದಾಗಿದ್ದು ಆ್ಯಸಿಡ್ ದಾಳಿಗೆ ಕಾರಣ ಆಗಿದೆ.

ರಮೇಶ್‌

ಇಬ್ಬರಿಗೂ ಮದುವೆ ಆಗಿತ್ತು.. ಆದರೂ ಅನ್ಯೋನ್ಯ ಸ್ನೇಹ..!!

ರಮೇಶ್ ಹಾಗೂ ದೇವಿ ಇಬ್ಬರಿಗೂ ಮದುವೆ ಆಗಿತ್ತು. ಆದರೂ ರಂಗಭೂಮಿಯಲ್ಲಿ ಇಬ್ಬರೂ ತುಂಬಾ ಹತ್ತಿರವಾಗಿದ್ದರು. ಗೆಳಯ – ಗೆಳತಿ ಸಂಬಂಧ ತುಂಬಾ ದಿನಗಳ ಕಾಲ ತುಂಬಾ ಸೊಗಸಾಗಿತ್ತು. ಇವರಿಬ್ಬರ ನಡುವೆ ಯಾವುದೋ ಸಣ್ಣ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದರಿಂದ ಕೆರಳಿದ್ದ ಸಂತ್ರಸ್ತ ಮಹಿಳೆ ದೇವಿ, ರಮೇಶ್​ ಮನೆಗೆ ಆಗಮಿಸಿ ರಮೇಶ್ ಪತ್ನಿ ಜೊತೆಗೆ‌ ಮಾತನಾಡಿದ್ದಳು. ನಿನ್ನ ಗಂಡ ರಮೇಶ್ ಸರಿ ಇಲ್ಲ, ನನ್ನ ಜೊತೆಗೂ ಸಂಬಂಧ ಇರಿಸಿಕೊಂಡಿದ್ದಾನೆ. ಇದೀಗ ನನ್ನನ್ನು ದೂರ ಮಾಡುತ್ತಿದ್ದಾನೆ ಎಂದಿದ್ದಳಂತೆ. ಇದರಿಂದಾಗಿ ರಮೇಶ್ ದಾಂಪತ್ಯದಲ್ಲಿ‌ ಕಲಹ ಏರ್ಪಟ್ಟಿತ್ತು. ಇದರಿಂದ ಕುಪಿತನಾದ ರಮೇಶ್, ತನ್ಮ ಸಂಸಾರನ್ನು ಹಾಳು ಮಾಡಿದ ದೇವಿ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ. ಆಗ ನೆರವಿಗೆ ಬಂದಿದ್ದು, ಮತ್ತೋರ್ವ ಸ್ನೇಹಿತೆ.

ಸ್ವಾತಿ

ಸ್ನೇಹಿತೆ ಮಾಡಿದ ದೋಖಾ ಬಗ್ಗೆ ಮತ್ತೋರ್ವ ಸ್ನೇಹಿತೆಗೆ ದೂರು..!!

ಯೋಗೇಶ್

ಗೆಳತಿ ದೇವಿ ತನ್ನ ಪತ್ನಿ ಜೊತೆಗೆ ಎನೆಲ್ಲಾ ಹೇಳಿದ್ದಾಳೆ. ಈಗ ಸಂಸಾರ ಒಡೆದು ಚೂರಾಗಿದೆ. ಇದಕ್ಕೆ ಕಾರಣ ದೇವಿ ಎಂದು ಅವಲತ್ತುಕೊಂಡಿದ್ದ. ದೇವಿ ನನ್ನ ಸಂಸಾರ ಹಾಳು ಮಾಡಿದಳು ಎಂದು ಸ್ವಾತಿ‌ ಎಂಬಾಕೆ ಎದುರು ರಮೇಶ್ ಕಣ್ಣೀರು ಹಾಕಿದ್ದನು. ರಮೇಶ್ ಸಂಕಷ್ಟದಿಂದ ಹೊರಕ್ಕೆ ಕರೆತರುವ ಪ್ರಯತ್ನದ ಬದಲು ದೇವಿ ವಿರುದ್ಧ ಸೇಡು ತೀರಿಸಿಕೊಳ್ಳಲು ಐಡಿಯಾ ಕೊಟ್ಟಿದ್ದಳು. ಅಷ್ಟು ಮಾತ್ರವಲ್ಲದೆ ತನಗೆ ಪರಿಚಯವಿದ್ದ ಯೋಗೇಶ್ ಎಂಬಾತನನ್ನು ಪರಿಚಯ ಮಾಡಿಕೊಟ್ಟಿದ್ದಳು. 10 ಸಾವಿರ ಕೊಟ್ಟು ಆ್ಯಸಿಡ್ ಹಾಕುವ ಬಗ್ಗೆ ಸುಪಾರಿ ಕೊಡಿಸಿದ್ದಳು. ರಾಜಗೋಪಾಲ್ ನಗರದಿಂದ ಆ್ಯಸಿಡ್ ತರಿಸಿ ದಾಳಿಗೆ ಎಲ್ಲಾ ತಯಾರಿ‌ ಮಾಡಿದಳು. ದೇವಿಯ ಮನೆಯನ್ನೂ ತೋರಿಸಿದಳು.‌

ನಿರ್ವಾಹಕಿ ದೇವಿ ಮಲಗಿದ್ದಾಗ ಆ್ಯಸಿಡ್ ಹಾಕಿದ ಯೋಗೇಶ್..!

ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ (BMTC) ಬಸ್ ನಿರ್ವಾಹಕಿ ಆಗಿದ್ದ ದೇವಿ, ಇತ್ತೀಚೆಗೆ ಅನಾರೋಗ್ಯದ ಕಾರಣಕ್ಕೆ ಕೆಲಸ ಬಿಟ್ಟಿದ್ದಳು. ಮಾರ್ಚ್ 18 ರಂದು ಮನೆ ಮುಂದಿನ ಜಗುಲಿ ಮೇಲೆ ಮಲಗಿದ್ದಾಗ ಆಗಮಿಸಿದ ಸುಪಾರಿ ಆಗಂತುಕ ಯೋಗೇಶ್ ಆ್ಯಸಿಡ್ ಎರಚಿ ಅಲ್ಲಿಂದ ಪರಾರಿ ಆಗಿದ್ದರು. ಮನೆ ಸುತ್ತಮುತ್ತಲ ರಸ್ತೆಗಳ ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿ ಕೈಗೆ ಕೋಳ ಹಾಕಿದ್ದರು. ಆ ಬಳಿಕ ಆರೋಪಿ ಕೊಟ್ಟ ಮಾಹಿತಿಯ ಪ್ರಕಾರ, ರಮೇಶ್ ಹಾಗೂ ಆತನ ಸ್ನೇಹಿತೆ ಸ್ವಾತಿಯನ್ನೂ ಬಂಧಿಸಿದ್ದಾರೆ. ಸಿವಿಲ್ ಎಂಜಿನಿಯರ್ ಆಗಿದ್ದ ರಮೇಶ್‌ನನ್ನೂ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಗಾಯಾಳು ದೇವಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.‌

Related Posts

Don't Miss it !