ರಾಜಕೀಯದಲ್ಲಿ ಇಂತಹ ನಾಯಕರನ್ನು ನೀವು ಎಲ್ಲಾದರೂ ಕಂಡಿರಾ..?

ಸಚಿವ ಸಂಪುಟ ವಿಸ್ತರಣೆ ವಿಚಾರ ರಾಜ್ಯದಲ್ಲಿ ಭಾರೀ ಚರ್ಚೆ ಎಬ್ಬಿಸಿದೆ. ಬಿಜೆಪಿಯ ಬಹುತೇಕ ಶಾಸಕರು ಬೆಂಗಳೂರು, ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಆದರೆಇದ್ಯಾವುದರ ಹಂಗೂ ಇಲ್ಲದೆ ತಾನಾಯ್ತು ತನ್ನ ಕ್ಷೇತ್ರದ ಜನರಾಯ್ತು ಎಂದು ಸುಮ್ಮನೆ ಕುಂದಾಪುರದ ನಿವಾಸದಲ್ಲಿ ಕುಳಿತಿದ್ದಾರೆ ಹಾಲಾಡಿ ಶ್ರೀನಿವಾಸ ಶೆಟ್ಟರು. ಸಚಿವ ಸ್ಥಾನ ಸಿಗುವ ಅರ್ಹತೆ ಇಲ್ಲ ಎನ್ನುವಂತಿಲ್ಲ, ಸತತ 5 ಬಾರಿ ಜನರಿಂದ ಆಯ್ಕೆಯಾಗಿ ಸೋಲಿಲ್ಲದ ಸರದಾರನಾಗಿ ಕ್ಷೇತ್ರದ ಜನರ ಕೆಲಸ ಮಾಡುತ್ತಿದ್ದಾರೆ. ಕಳೆದ ವಾರ ಹಾಲಾಡಿ ಶ್ರೀನಿವಾಸ ಶೆಟ್ಟರ ಆಡಿಯೋ ಒಂದು ವೈರಲ್​ ಆಗಿತ್ತು. ಸಚಿವ ಸ್ಥಾನಕ್ಕಾಗಿ ನಾನು ಯಾರ ಕಾಲನ್ನೂ ಹಿಡಿಯುವುದಿಲ್ಲ, ಜಾತಿ ಲಾಬಿ ಮಾಡಲ್ಲ, ಸಚಿವ ಸ್ಥಾನದಿಂದ ನನಗೇನು ಆಗಬೇಕಿಲ್ಲ. ಒಂದು ವೇಳೆ ಸಚಿವ ಸ್ಥಾನ ಕೊಟ್ಟರೆ ಕಾರು, ಎಸ್ಕಾರ್ಟ್​, ಮನೆ ಯಾವುದನ್ನೂ ಪಡೆಯದೆ ಜನರಿಗಾಗಿ ಕೆಲಸ ಮಾಡ್ತೇನೆ ಎಂದಿದ್ದರು. ಈ ಮಾತು ರಾಜ್ಯಾದ್ಯಂತ ಜನ ಮೆಚ್ಚುಗೆಗೂ ಪಾತ್ರವಾಗಿತ್ತು. The Public Spot . com ತಂಡ ಹಾಲಾಡಿ ಶ್ರೀನಿವಾಸ ಶೆಟ್ಟರ ಮಾಹಿತಿ ಕಲೆ ಹಾಕಲು ಮುಂದಾದಾಗ ಸಾಕಷ್ಟು ಅಚ್ಚರಿಯ ವಿಚಾರಗಳು ಬೆಳಕಿಗೆ ಬಂದಿವೆ.

ಶಂಕುಸ್ಥಾಪನೆ – ಉದ್ಘಾಟನೆ ಮಾಡೋದಿಲ್ಲ..!


ಯಾವುದೇ ಪಕ್ಷದ ರಾಜಕಾರಣಿಗಳು ಇರಬಹುದು, ತಾವು ಮಾಡುವ ಕೆಲಸವನ್ನು ಜನರ ಮುಂದೆ ಎತ್ತಿ ತೋರಿಸುವುದು ಸಾಮಾನ್ಯ. ಇದೇ ಕಾರಣಕ್ಕೆ ಯಾವುದೇ ಯೋಜನೆ ಜಾರಿ ಆದರೂ ಕಾಮಗಾರಿ ಆರಂಭಕ್ಕೂ ಮುನ್ನ ಶಂಕುಸ್ಥಾಪನೆ ಮಾಡುತ್ತಾರೆ. ಹಲವಾರು ವರ್ಷಗಳ ಬಳಿಕ ಕಾಮಗಾರಿ ಪೂರ್ಣಗೊಂಡಾಗ ಮತ್ತೆ ಉದ್ಘಾಟನೆ ಮಾಡುತ್ತಾರೆ. ಆದರೆ ಹಾಲಾಡಿ ಶ್ರೀನಿವಾಸ ಶೆಟ್ಟರು ಯಾವುದೇ ಕಾರ್ಯಕ್ರಮವನ್ನೂ ಇಲ್ಲೀವರೆಗೂ ಶಂಕು ಸ್ಥಾಪನೆ ಮಾಡಿಲ್ಲ, ಉದ್ಘಾಟನೆಯನ್ನೂ ಮಾಡೋದಿಲ್ಲ. ಕಾಮಗಾರಿ ಮುಗಿದ ಬಳಿಕ ಸಾರ್ವಜನಿಕರಿಗೆ ಬಿಟ್ಟು ಕೊಡುವುದು ಅವರ ವಾಡಿಕೆ. ಯಾವುದೇ ಕಾರ್ಯಕ್ರಮದ ಶಂಕುಸ್ಥಾಪನೆಗೆ ಅಥವಾ ಉದ್ಘಾಟನೆಗೆ ಕನಿಷ್ಟ 1 ಲಕ್ಷ ರೂಪಾಯಿ ಆದರೂ ಖರ್ಚಾಗುತ್ತದೆ. ಆ ಹಣದಲ್ಲಿ ಮತ್ತೊಂದು ಸಣ್ಣ ಕಾಮಗಾರಿ ಆದರೂ ಮಾಡುವ ಮೂಲಕ ಜನರಿಗೆ ಸಹಾಯ ಮಾಡೋಣ ಎನ್ನುವುದು ಹಾಲಾಡಿ ಅವರ ಆಶಯ.

ಪಕ್ಷ ನೋಡಿ ಜನರ ಕೆಲಸ ಮಾಡೋದಿಲ್ಲ..!

ಬೆಳಗ್ಗೆ 7.30ಕ್ಕೆ ತಮ್ಮ ನಿವಾಸದಲ್ಲೇ ಸಜ್ಜಾಗಿ ಕುಳಿತುಕೊಳ್ಳುವ ಹಾಲಾಡಿ ಶ್ರೀನಿವಾಸ ಶೆಟ್ಟರು, ಮಧ್ಯಾಹ್ನ 3 ಗಂಟೆ ತನಕವೂ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಾರೆ. ಇದರಲ್ಲಿ ಯಾವುದೇ ಪಕ್ಷ, ಜನಾಂಗ, ಯಾವುದನ್ನೂ ಪರಿಗಣಿಸುವುದಿಲ್ಲ. ಇನ್ನೂ ಯಾವುದೇ ಕಾರ್ಯಕರ್ತನ ಪರವಾಗಿಯೂ ಹಾಲಾಡಿ ಶ್ರೀನಿವಾಸ ಶೆಟ್ಟರು ಅಧಿಕಾರಿಗಳಿಗೂ ಕರೆ ಮಾಡಿ ಒತ್ತಡ ಹೇರುವುದಿಲ್ಲ. ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾದರೂ ಶ್ರೀನಿವಾಸ ಶೆಟ್ಟರು ಪೊಲೀಸ್​ ಅಧಿಕಾರಿಗಳ ಮೇಲೆ ಒತ್ತಡ ಹೇರಿಕೆ ಮಾಡುವ ಕೆಲಸ ಮಾಡುವುದಿಲ್ಲ. ಒಂದು ವೇಳೆ ನೀನು ತಪ್ಪು ಮಾಡದಿದ್ದರೆ ಪೊಲೀಸ್​ ಅಧಿಕಾರಿ ಏನೂ ಮಾಡಲು ಬರುವುದಿಲ್ಲ. ನೀನು ತಪ್ಪು ಮಾಡಿದ್ದರೆ ನಾನು ಬೆಂಬಲಿಸಿ ಒತ್ತಡ ಹೇರುವುದಿಲ್ಲ ಎಂದು ನಿರ್ದಾಕ್ಷಣ್ಯವಾಗಿ ಹೇಳುತ್ತಾರೆ.

ಹುಟ್ಟು ಬ್ರಹ್ಮಚಾರಿ ಹಾಲಾಡಿ ಶ್ರೀನಿವಾಸ ಶೆಟ್ಟರು..!

ಮಂಗಳೂರು ಯೂನಿವರ್ಸಿಟಿಯಲ್ಲಿ ಬಿಎಸ್​ಸಿ ಓದುವಾಗಲೇ ಸಮಾಜವಾದಿ ನಾಯಕರ ಆಕರ್ಷಣೆಗೆ ಒಳಗಾದ ಹಾಲಾಡಿ ಶ್ರೀನಿವಾಸ ಶೆಟ್ಟರು, ಅಂದಿನಿಂದಲೇ ನಾಯಕತ್ವದ ಗುಣ ಬೆಳೆಸಿಕೊಂಡಿದ್ದರು. ಆ ಬಳಿಕ ಕುಂದಾಪುರ ಕ್ಷೇತ್ರದಲ್ಲಿ ಜನಸೇವೆಗೆ ಮುಂದಾದ ಹಾಲಾಡಿ ಅವರು ತಮ್ಮ ವೈಯಕ್ತಿಕ ಜೀವನವನ್ನೇ ಮರೆತುಬಿಟ್ಟರು ಎನ್ನುವುದು ಕ್ಷೇತ್ರದ ಜನರ ಮಾತು. ಬ್ರಹ್ಮಚಾರಿಯಾಗಿಯೇ ಇರುವ ಹಾಲಾಡಿ ಅವರು ತಮ್ಮ ಕುಟುಂಬದ ಯಾರೊಬ್ಬರನ್ನೂ ತನ್ನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡಿಲ್ಲ. ರಾಜಕೀಯದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿಲ್ಲ. ಹಿಂದೊಮ್ಮೆ ಯಡಿಯೂರಪ್ಪ ಮಂತ್ರಿ ಮಾಡುವುದಾಗಿ ಭರವಸೆ ಕೊಟ್ಟು ರಾಜಭವನಕ್ಕೆ ಬಂದಾಗ ಹೆಸರು ಮಿಸ್​ ಆಗಿತ್ತು. ಲಾಬಿ ಮಾಡದೆ ಇದ್ದರೂ ಸಚಿವ ಸ್ಥಾನ ಕೊಡುವ ಮನಸ್ಸು ಮಾಡಿದ್ದರು, ಆದರೆ ಕೊನೆ ಗಳಿಗೆಯಲ್ಲಿ ಲಾಬಿಗೆ ಮಣೆ ಹಾಕಿದ್ದರು. ಆ ಕೋಪದಲ್ಲಿ ಬಿಜೆಪಿ ಪಕ್ಷವನ್ನೇ ತ್ಯಜಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಪಕ್ಷೇತರ ಅಭ್ಯರ್ಥಿಯಾಗಿ ಸೆಣಸಿ 40 ಸಾವಿರ ಅಂತರದಲ್ಲಿ ಗೆಲುವು ಸಾಧಿಸಿದ್ದರು.

ಚುನಾವಣೆ ವೆಚ್ಚವನ್ನೂ ಕೊಡ್ತಾರೆ ಹಾಲಾಡಿ..!

ಹಾಲಾಡಿ ಶ್ರೀನಿವಾಸ ಶೆಟ್ಟರ ವಿರುದ್ಧ ಕಾಂಗ್ರೆಸ್​ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಹಾಲಾಡಿ ಶ್ರೀನಿವಾಸ ಶೆಟ್ಟರು ಕೋಟಿ ಕೋಟಿ ವೆಚ್ಚ ಮಾಡಿ, ಜನರಿಗೆ ಆಮೀಷ ತೋರಿಸಿ ಗೆಲುವು ಸಾಧಿಸುವ ವ್ಯಕ್ತಿತ್ವ ಬೆಳೆಸಿಕೊಂಡಿಲ್ಲ. ಆದರೂ ಎದುರಾಳಿ ಪಾರ್ಟಿ ಅಬ್ಬರದ ಎದುರು ನಾವು ಕುಗ್ಗಬಾರದು ಎನ್ನುವ ಕಾರಣಕ್ಕೆ ಬೆಂಬಲಿಗರು ಅಲ್ಪಸ್ವಲ್ಪ ಹಣ ಖರ್ಚು ಮಾಡಿರುತ್ತಾರೆ. ಚುನಾವಣೆ ಮುಗಿದ ಬಳಿಕ ಎಲ್ಲಾ ಬೆಂಬಲಿಗರನ್ನು ಕೂರಿಸಿಕೊಂಡು ಯಾರೆಲ್ಲಾ ಎಷ್ಟು ಹಣ ವೆಚ್ಚ ಮಾಡಿದ್ದೀರಿ ಎಂದು ಲೆಕ್ಕ ಪಡೆದುಕೊಳ್ಳುವ ಹಾಲಾಡಿ ಶ್ರೀನಿವಾಸ ಶೆಟ್ಟರು, ನಿಧಾನವಾಗಿ ಸಾಲವನ್ನು ವಾಪಸ್​ ಮಾಡ್ತಾರೆ ಎನ್ನುವುದು ಹಾಲಾಡಿ ಅವರನ್ನು ಹತ್ತಿರದಿಂದ ಬಲ್ಲವರ ಮಾತು. ಇನ್ನೂ ಕೆಲವೊಮ್ಮೆ ಸಮಸ್ಯೆ ಹೇಳಿಕೊಂಡು ಮನೆಗೆ ಬರುವ ಕ್ಷೇತ್ರದ ಜನರ ಆಟೋ ಬಾಡಿಗೆಯನ್ನೂ ಕೊಟ್ಟಿರುವ ಉದಾಹರಣೆ ಸಾಕಷ್ಟಿದೆ ಎನ್ನುತ್ತಾರೆ ಸ್ಥಳೀಯರು.

ಕುಂದಾಪುರ ಕ್ಷೇತ್ರದ ಜನರನ್ನೂ ಮೆಚ್ಚಬೇಕು..!

ಕುಂದಾಪುರ ಅಚ್ಚ ಕನ್ನಡದ ನಾಡು. ಪಕ್ಕದ ತುಳುನಾಡು ಇದ್ದರೂ ಕುಂದಾ ಕನ್ನಡಿಗರು ತುಳು ಭಾಷೆಯನ್ನ ಮೈಮೇಲೆ ಎಳೆದುಕೊಂಡಿಲ್ಲ. ಕನ್ನಡ ಭಾಷೆಯನ್ನು ಸೊಗಸಾಗಿ ಮಾತನಾಡುವ ಕುಂದಾಪುರದ ಜನರು ಮೃದು ಸ್ವಭಾವಿಗಳು. ಒಳ್ಳೆಯದನ್ನು ಸದಾ ಪ್ರೋತ್ಸಾಹ ನೀಡುವ ಕುಂದಾಪುರದ ಜನ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಪದೇ ಪದೇ ಗೆಲ್ಲಿಸುತ್ತಿದ್ದಾರೆ. ನೇರನುಡಿಯಿಂದ ಪಕ್ಷ ಹಾಗೂ ಸಂಘದಲ್ಲಿ ಸಾಕಷ್ಟು ಜನರನ್ನು ದೂರ ಮಾಡಿಕೊಂಡಿದ್ದರೂ ಕುಂದಾಪುರ ಕ್ಷೇತ್ರದ ಜನರು ಮಾತ್ರ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಪಕ್ಷದ ನಾಯಕನನ್ನಾಗಿ ನೋಡುವುದೇ ಇಲ್ಲ. ಸರ್ವಧರ್ಮ ನಾಯಕನ ಹಾಗೆ ಹಾಲಾಡಿ ಅವರಿಗೆ ಬೆಂಬಲ ಸಿಗುತ್ತಲೇ ಇದೆ. ಮತ್ತೆ ಮತ್ತೆ ಗೆಲ್ಲುತ್ತಲೇ ಇದ್ದಾರೆ. ಮುಂದೆಯೂ ಗೆಲ್ತಾರೆ. ಆದ್ರೆ ಸಚಿವ ಸ್ಥಾನ ಕೊಟ್ಟು ಕರ್ನಾಟಕ ಜನರ ಸೇವೆ ಮಾಡುವ ಅವಕಾಶವನ್ನು ಬಿಜೆಪಿ ಪಕ್ಷ ಕೊಡಬೇಕಿದೆ. ಸಚಿವ ಸ್ಥಾನದ ಅವಕಾಶ ಕೊಡದಿದ್ದರೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರಿಗೆ ಯಾವುದೇ ಸಮಸ್ಯೆ ಇಲ್ಲ. ಯಾಕಂದ್ರೆ ಅವರು ಯಾವುದರಲ್ಲೂ ಕಮಿಷನ್​ ಪಡೆಯಬೇಕಿಲ್ಲ, ಶಂಕುಸ್ಥಾಪನೆ, ಉದ್ಘಾಟನೆ ಮಾಡಿ ಪೋಸು ಕೊಡಬೇಕಿಲ್ಲ. ತನ್ನ ಕ್ಷೇತ್ರದ ಜನರ ಸೇವೆಗಾಗಿ ಬ್ರಹ್ಮಚಾರಿ ಆದ ನಾಯಕ ಹಾಲಾಡಿ ಶ್ರೀನಿವಾಸ ಶೆಟ್ಟಿ.

Related Posts

Don't Miss it !