ಸಿದ್ದು ಧಮಾಕ​..! ಕಾಂಗ್ರೆಸ್​ ಅಧ್ಯಕ್ಷ ಡಿಕೆಶಿಗೆ ಮುಖಭಂಗ..!

ಕಾಂಗ್ರೆಸ್​ ಯುವ ಅಧ್ಯಕ್ಷರ ನೇಮಕ ವಿಚಾರದಲ್ಲಿ ಹಾಲಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್​ಗೆ ಮುಖಭಂಗ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಯೂತ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರದಲ್ಲಿ ಉಂಟಾಗಿದ್ದ ಗೊಂದಲಕ್ಕೆ ಇತಿಶ್ರೀ ಹಾಡಲು ಮಂಗಳವಾರ ಸರಣಿ ಸಭೆಗಳನ್ನು ನಡೆಸಲಾಗಿತ್ತು. ಆ ಬಳಿಕ ಯುವ ಅಧ್ಯಕ್ಷರ ಅವಧಿಯನ್ನು ಮಹಮದ್​ ನಲಪಾಡ್​ ಹಾಗೂ ರಕ್ಷ ರಾಮಯ್ಯ ನಡುವೆ ಹಂಚಿಕೆ ಮಾಡುವ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗಿತ್ತು. ರಾಷ್ಟ್ರೀಯ ಕಾಂಗ್ರೆಸ್​ ಯುವ ಅಧ್ಯಕ್ಷ ಬಿ.ವಿ ಶ್ರೀನಿವಾಸ್​ ಕೂಡ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದರು. ಆ ಬಳಿಕ ಒಂದೂವರೆ ವರ್ಷಕ್ಕೆ ಅಧಿಕಾರ ಹಸ್ತಾಂತರ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿತ್ತು. ಆದರೆ ಇಂದು ಕಾಂಗ್ರೆಸ್​​ ಸ್ಪಷ್ಟನೆ ನೀಡಿದ್ದು, ಅಧಿಕಾರ ಹಂಚಿಕೆ ವಿಚಾರವಾಗಿ ಯಾವುದೇ ಚರ್ಚೆ ಇಲ್ಲ, ವರದಿಗಳು ಸುಳ್ಳು ಅಧಿಕಾರ ಹಸ್ತಾಂತರ ಇಲ್ಲ ಎಂದು INDIAN YOUTH CONGRESS ವೆಬ್ ಸೈಟ್ ಮೂಲಕ ಹೇಳಲಾಗಿದೆ.

ದೆಹಲಿ ಮಟ್ಟದ ಲಾಬಿಗೆ ಹಿನ್ನಡೆ..!

ಶಾಸಕ ಎನ್​.ಎ ಹ್ಯಾರಿಸ್ ಪುತ್ರ ಮಹಮದ್​ ನಲಪಾಡ್

ಶಾಂತಿನಗರ ಶಾಸಕ ಎನ್​.ಎ ಹ್ಯಾರಿಸ್ ಪುತ್ರ ಮಹಮದ್​ ನಲಪಾಡ್​ ರಾಜ್ಯ ಕಾಂಗ್ರೆಸ್​ ಯುವ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಿ ಅತಿ ಹೆಚ್ಚು ಮತಗಳನ್ನೂ ಗಳಿಸಿದ್ದರು. ಆದರೆ ಮಹಮದ್​ ನಲಪಾಡ್​ ಮೇಲೆ ಕೇಸ್​ಗಳು ಇವೆ ಎನ್ನುವ ಕಾರಣಕ್ಕೆ ನಲಪಾಡ್​ ಸ್ಪರ್ಧೆಯನ್ನು ಚುನಾವಣೆ ಬಳಿಕ ರದ್ದು ಮಾಡಿ ಎರಡನೇ ಸ್ಥಾನದಲ್ಲಿದ್ದ ರಕ್ಷ ರಾಮಯ್ಯ ಅವರನ್ನು ಅಧ್ಯಕ್ಷ ಎಂದು ಘೋಷಣೆ ಮಾಡಲಾಗಿತ್ತು. ಅಂದಿನಿಂದಲೂ ಅಧ್ಯಕ್ಷಗಿರಿಗಾಗಿ ಮಹಮದ್​ ನಲಪಾಡ್​ ಹಾಗೂ ಶಾಸಕ ಎನ್​.ಎ ಹ್ಯಾರಿಸ್​ ಲಾಬಿ ಮಾಡುತ್ತಲೇ ಇದ್ದರು. ಡಿ.ಕೆ ಶಿವಕುಮಾರ್​​ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್​ ಅಧ್ಯಕ್ಷ ಶ್ರೀನಿವಾಸ್​ ನಲಪಾಡ್​ ಪರವಾಗಿದ್ದರು ಎನ್ನಲಾಗಿತ್ತು. ಮಂಗಳವಾರ ತಡರಾತ್ರಿ ತನಕ ಸರಣಿ ಸಭೆ ಮಾಡಲಾಯ್ತು. ಮೊದಲು ಸಿದ್ದರಾಮಯ್ಯ ನಂತರ ಡಿ.ಕೆ ಶಿವಕುಮಾರ್​ ನಿವಾಸದಲ್ಲಿ ಸಭೆ ನಡೆಸಲಾಯ್ತು. 50:50 ಸೂತ್ರದಂತೆ ಇಬ್ಬರಿಗೂ ಅಧಿಕಾರ ಹಂಚಿಕೆಯಾಗುತ್ತೆ ಎನ್ನುವ ಮಾಹಿತಿಯೂ ಹೊರಬಿತ್ತು. ಆದರೆ ಅಂತಿಮವಾಗಿ ರಕ್ಷ ರಾಮಯ್ಯ ಅವರನ್ನೇ ಮುಂದುವರಿಸುವ ನಿಲುವು ಪ್ರಕಟಿಸಲಾಗಿದೆ.

ಯುವ ಕಾಂಗ್ರೆಸ್​ನಲ್ಲಿ ಬಿರುಕು ಸಾಧ್ಯತೆ..!?

ರಕ್ಷ ರಾಮಯ್ಯ

ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಧಿಕ ಮತಗಳಿಸಿದ ನಲಪಾಡ್ ಆಯ್ಕೆಯನ್ನು ಅಸಿಂಧು ಮಾಡಿ ರಕ್ಷ ರಾಮಯ್ಯ ಅವರನ್ನು ಅಧ್ಯಕ್ಷ ಎಂದು ಆಯ್ಕೆ ಮಾಡಲಾಗಿದೆ. ಚುನಾವಣೆ ಫಲಿತಾಂಶ ಬಂದ ಬಳಿಕ ಕೇಸ್ ದಾಖಲಾಗಿರುವ ಹಿನ್ನಲೆಯಲ್ಲಿ ಚುನಾವಣೆಯಿಂದಲೇ ಯುವ ಕಾಂಗ್ರೆಸ್ ಚುನಾವಣಾ‌ ಸಮಿತಿ ಅನರ್ಹಗೊಳಿಸಿದ್ದಕ್ಕೆ ನಲಪಾಡ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಪಾದನೆ ವಿಚಾರವನ್ನು ನಾಮಪತ್ರ ಸಲ್ಲಿಕೆ ವೇಳೆ ಪರಿಗಣಿಸದೆ ಫಲಿತಾಂಶ ಬಂದ ಬಳಿಕ ಪರಿಗಣಿಸಿದ್ದು ಏಕೆ..? ಎಂದು ಪ್ರಶ್ನಿಸಿದ್ದರು. ಆದರೂ ರಕ್ಷ ರಾಮಯ್ಯ ಪರವಾಗಿಯೇ ಕಾಂಗ್ರೆಸ್​ ನಿಂತಿದೆ. ಆದರೆ ಪ್ರತಿ ಜಿಲ್ಲೆಯಲ್ಲೂ ಮಹಮದ್​ ನಲಪಾಡ್ ಪರವಾದ ಅಭ್ಯರ್ಥಿಗಳೇ ಹೆಚ್ಚು ಮಂದಿ ಗೆಲುವು ಸಾಧಿಸಿದ್ದಾರೆ. ಯುವ ಕಾಂಗ್ರೆಸ್ ಪದಾಧಿಕಾರಿಗಳಲ್ಲಿ ಮಹಮದ್​ ನಲಪಾಡ್ ಬೆಂಬಲಿಗರೇ ಹೆಚ್ಚಾಗಿದ್ದು ರಕ್ಷ ರಾಮಯ್ಯ ಯುವ ಕಾಂಗ್ರೆಸ್​ ಮುನ್ನಡೆಸುವುದು ಕಷ್ಟ ಸಾಧ್ಯ ಎನ್ನುವ ಮಾತುಗಳು ಕೇಳಿ ಬಂದಿವೆ.

ದೋಸ್ತಿ ಮಾಡಿಸಲು ಕಾಂಗ್ರೆಸ್​ ಕಸರತ್ತು..!

ಡಿ.ಕೆ.ಶಿವಕುಮಾರ್

ರಕ್ಷ ರಾಮಯ್ಯ ಹಾಗೂ ಮಹಮದ್​ ನಲಪಾಡ್ ನಡುವೆ ದೋಸ್ತಿ ಮಾಡಿಸಲು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸಂಧಾನ ಸಭೆ ನಡೆಸಿದ್ದರು. ಕೆಪಿಸಿಸಿ ಕಚೇರಿಯಲ್ಲಿ ಇಬ್ಬರನ್ನು ಕೂರಿಸಿಕೊಂಡು ಸಂಧಾನ ಸಭೆ ಮಾಡಲಾಯ್ತು. ಡಿ.ಕೆ.ಶಿವಕುಮಾರ್ ಕೂಡ ಸಂಧಾನದಲ್ಲಿ ಭಾಗಿಯಾಗಿದ್ದರು. ಆದರೆ ಸಂಧಾನ ಸಭೆ ಸಕ್ಸಸ್​ ಆಗಿಲ್ಲ. ನಲಪಾಡ್​ ಒತ್ತಡಕ್ಕೆ ಕಾಂಗ್ರೆಸ್​ನಲ್ಲಿ ಮಣೆ ಹಾಕದಂತೆ ಸಿದ್ದರಾಮಯ್ಯ ಹೈಕಮಾಂಡ್​ ಮಟ್ಟದಲ್ಲಿ ನೋಡಿಕೊಂಡಿದ್ದಾರೆ ಎನ್ನಲಾಗಿದೆ. ಮೊದಲಿನಿಂದಲೂ ರಕ್ಷ ರಾಮಯ್ಯ ಪರವಾಗಿ ಸಿದ್ದರಾಮಯ್ಯ ಹಾಗೂ ಮಹಮದ್​ ನಲಪಾಡ್​ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಲಾಬಿ ಮಾಡಿದ್ದರು. ಅಂತಿಮವಾಗಿ ರಕ್ಷ ರಾಮಯ್ಯ ಅವರೇ ಯುವ ಕಾಂಗ್ರೆಸ್​ ಅಧ್ಯಕ್ಷ ಎನ್ನುವ ತೀರ್ಮಾನ ಮಾಡಿದ್ದು ಡಿ.ಕೆ ಶಿವಕುಮಾರ್​ ಅವರಿಗೆ ಮುಖಭಂಗ ಎಂದೇ ಹೇಳಲಾಗ್ತಿದೆ.

ಗುಟ್ಟು ಬಿಟ್ಟು ಕೊಡದ ಸಿದ್ದರಾಮಯ್ಯ..!

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿವಾದ ವಿಚಾರವಾಗಿ ನಾನು ಕೊಟ್ಟಿರೋ ಸಲಹೆಗಳನ್ನು ಮಾಧ್ಯಮದ ಮುಂದೆ ಹೇಳಲಾಗಲ್ಲ, ಅವರಿಗೆ ಹೇಳಿರೋದು ನಿಮಗೆ ಹೇಗೆ ಹೇಳಲಿ? ಎಂದು ಪ್ರಶ್ನಿಸಿದ್ದರು. ಏನೋ ಒಂದು ಕಾಂಪ್ರಮೈಸ್ ಮಾಡ್ತೀವಿ ಅಂತ ಹೇಳಿದ್ದಾರೆ. ಇಬ್ಬರನ್ನೂ ಕೂರಿಸಿಕೊಂಡು ಕಾಂಪ್ರಮೈಸ್ ಮಾಡಿ ಅಂತ ಹೇಳಿದೀನಿ ಎಂದಷ್ಟೇ ಹೇಳಿದ್ದರು. ಇದೀಗ ಅಂತಿಮವಾಗಿ ಡಿ.ಕೆ ಶಿವಕುಮಾರ್​ ಲಾಬಿಗೆ ಕಾಂಗ್ರೆಸ್​ ಹೈಕಮಾಂಡ್​ ಸೊಪ್ಪು ಹಾಕಿಲ್ಲ. ಸಿದ್ದರಾಮಯ್ಯ ಆಗ್ರಹಕ್ಕೆ ಕಾಂಗ್ರೆಸ್​ ಮಣೆ ಹಾಕಿರೋದು ಡಿಕೆಶಿಗೆ ಮುಖಭಂಗ ಆದಂತೆಯೇ ಸರಿ ಎನ್ನುವುದು ರಾಜಕೀಯ ವಿಶ್ಲೇಷಕರ ಮಾತು. ಮುಂದೆ ಯುವ ಕಾಂಗ್ರೆಸ್​ ನಡೆ ಏನಾಗಿರುತ್ತೆ ಎನ್ನುವುದೇ ಕೌತುಕ.

Related Posts

Don't Miss it !