ಶಿವಮೊಗ್ಗದಲ್ಲಿ ಹಿಂದೂ ಯುವಕನ ಭೀಕರ ಹತ್ಯೆ..! ಶಾಲಾ – ಕಾಲೇಜಿಗೆ ರಜೆ ಘೋಷಣೆ..!

ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಗೆ ಸೇರಿದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಭಾರತಿ ಕಾಲೋನಿಯ ಕಾಮತ್ ಪೆಟ್ರೋಲ್ ಬಂಕ್ ಬಳಿ ರಾತ್ರಿ 9.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಶೀಗೇಹಟ್ಟಿ ನಿವಾಸಿ 26 ವರ್ಷದ ಹರ್ಷ ಎಂಬಾತನನ್ನು ಇರಿದು ಕೊಲೆ ಮಾಡಲಾಗಿದೆ. ಸ್ಥಳೀಯರು ಕೂಡಲೇ ಮೆಗ್ಗಾನ್​ ಆಸ್ಪತ್ರೆಗೆ ಹರ್ಷನನ್ನು ರವಾನೆ ಮಾಡಿದರೂ ಹರ್ಷ ಬದುಕಿ ಉಳಿಯಲಿಲ್ಲ. ದೊಡ್ಡ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ಶಿವಮೊಗ್ಗದಲ್ಲಿ 144 ಸೆಕ್ಷನ್​​ ಜಾರಿ ಮಾಡಲಾಗಿದೆ. ಮೆಗ್ಗಾನ್​ ಆಸ್ಪತ್ರೆ ಬಳಿ ನೂರಾರು ಜನರು ಜಮಾಯಿಸಿದ್ದು, ಆಸ್ಪತ್ರೆಗೆ ಒಳಕ್ಕೆ ತೆರಳದಂತೆ ತಡೆಯಲಾಗಿದೆ. ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಖಾಕಿ ಹೈ ಅಲರ್ಟ್​ ಘೋಷಣೆ ಮಾಡಿದೆ.

ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ..!

ಮೃತ ಯುವಕ ಹರ್ಷ ಭಜರಂಗ ದಳದ ಸಕ್ರೀಯ ಕಾರ್ಯಕರ್ತ ಎನ್ನಲಾಗಿದೆ. ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ಹರ್ಷ ಹಿಂದೂ ಎಂಬ ಅಕೌಂಟ್​ ಹೊಂದಿದ್ದು, ಪ್ರಕರ ಹಿಂದುತ್ವವಾದಿಯಾಗಿದ್ದನು. ಸ್ಥಳೀಯರ ಮಾಹಿತಿ ಪ್ರಕಾರ ಹರ್ಷ ಹಲವು ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಕೆಲಸ ಮಾಡುತ್ತಿದ್ದು ಸಾಕಷ್ಟು ಜನ ವಿರೋಧಿಗಳು ಸೃಷ್ಟಿಯಾಗಿದ್ದರು. ಯಾವುದೋ ಹಳೇ ದ್ವೇಷದಿಂದ ಕೊಲೆ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಸೀಗೆಹಟ್ಟಿ ಕಡೆಯಿಂದ ಸ್ವಿಫ್ಟ್​ ಕಾರಿನಲ್ಲಿ ಬಂದ ತಂಡವೊಂದು ಕೊಲೆ ಮಾಡಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ಈಗಾಗಲೇ ಆರೋಪಿಗಳನ್ನು ಬಂಧಿಸಲು ಜಾಲ ಬೀಸಿದ್ದು ಶೀಘ್ರದಲ್ಲೇ ಆರೋಪಿಗಳ ಕೈಗೆ ಕೋಳ ಬೀಳಲಿದೆ.

ಇದನ್ನೂ ಓದಿ: ಇವತ್ತು ಪರೀಕ್ಷೆ ಮಿಸ್​ ಮಾಡಿಕೊಂಡ್ರೆ ಭವಿಷ್ಯವೇ ಭಸ್ಮ..! ಬೀ ಕೇರ್​ ಫುಲ್​

ಖಾಕಿ ಕಣ್ಗಾವಲು, ಕಲ್ಲು ತೂರಾಟ, ಲಾಠಿ ಚಾರ್ಜ್​..!

ಹಿಂದೂಪರ ಸಂಘಟನೆಯಲ್ಲಿ ಮಂಚೂಣಿಯಲ್ಲಿದ್ದ ಯುವಕನ ಕೊಲೆಯಾಗಿರುವ ಕಾರಣ ಶಿವಮೊಗ್ಗದಲ್ಲಿ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಜನರು ಕೊಲೆ ವಿಷಯ ತಿಳಿಯುತ್ತಿದ್ದ ಹಾಗೆ ಗುಂಪು ಸೇರುತ್ತಿದ್ದ ಕಾರಣಕ್ಕೆ ಪೊಲೀಸರು 144 ಸೆಕ್ಷನ್​ ಜಾರಿ ಬಗ್ಗೆ ಮೈಕ್​ನಲ್ಲಿ ಅನೌನ್ಸ್​ ಮಾಡಿದ್ದು, ಆ ಬಳಿಕ ಕೆಲವು ಕಡೆ ಲಾಠಿ ಚಾರ್ಜ್​ ಕೂಡ ಮಾಡಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಸೆಲ್ವಮಣಿ ಹಾಗೂ ಎಸ್​ಪಿ ಲಕ್ಷ್ಮಿಪ್ರಸಾದ್ ಸಿಟಿ ರೌಂಡ್ಸ್ ಮಾಡುತ್ತಿದ್ದಾರೆ. ಎಲ್ಲಾ ಕಡೆ ಪೊಲೀಸರನ್ನು ಅಲರ್ಟ್ ಮಾಡುತ್ತಿದ್ದು, ಇಡೀ ನಗರ ಬಿಗುವಿನ ವಾತಾವರಣದಿಂದ ಕೂಡಿದೆ. ರವಿವರ್ಮ ಬೀದಿ, ಅಜಾದ್ ನಗರದಲ್ಲಿ ಕಲ್ಲು ತೂರಾಟ ನಡೆಯುತ್ತಿದ್ದು, ಪೊಲೀಸರು ಲಾಠಿಚಾರ್ಜ್​ ಮಾಡಿ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಎಚ್ಚರ ವಹಿಸಲಾಗಿದೆ.

ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ..!!

ಭಾರತಿ ಕಾಲೋನಿಯ ಪೆಟ್ರೋಲ್​ ಬಂಕ್​ ಬಳಿ ಹರ್ಷನನ್ನು ಅಟ್ಟಾಡಿಸಿಕೊಂಡು ಭರ್ಜಿಯಲ್ಲಿ ತಿವಿದು ಸಾಯಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದ್ದು, ಸುತ್ತಮುತ್ತಲ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಸಂಗ್ರಹ ಮಾಡುತ್ತಿದ್ದಾರೆ. ಜೊತೆಗೆ ಕೊಲೆ ಮಾಡುವುದಕ್ಕೆ ನಿಖರ ಕಾರಣವೇನು..? ಇತ್ತೀಚಿನ ದಿನಗಳಲ್ಲಿ ಯಾರೊಂದಿಗಾದರೂ ವ್ಯವಹಾರ ನಡೆದಿತ್ತಾ..? ಜಗಳಗಳು ನಡೆದಿದ್ದವಾ..? ಎನ್ನುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಪ್ರಕ್ಷುಬ್ದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಎಲ್ಲಾ ಶಾಲಾ – ಕಾಲೇಜುಗಳಿಗೂ ಜಿಲ್ಲಾಧಿಕಾರಿ ರಜೆ ಘೋಷಣೆ ಮಾಡಿದ್ದಾರೆ. ಶಿವಮೊಗ್ಗಕ್ಕೆ ಪೂರ್ವ ವಲಯ ಡಿಐಜಿ ತ್ಯಾಗರಾಜನ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಹೆಚ್ಚಿ‌ನ ಪೊಲೀಸ್ ತುಕಡಿ ನಿಯೋಜನೆ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: ಅಪ್ಪು ನಿಧನದ ಬೆನ್ನಲ್ಲೇ ಅಶ್ವಿನಿ ಪುನೀತ್​ ರಾಜ್​​ಕುಮಾರ್​ಗೆ ಮತ್ತೊಂದು ಆಘಾತ..!

ಸಾರ್ವಜನಿಕರಲ್ಲಿ The Public Spot ಕಳಕಳಿ..!

ಈ ರೀತಿಯ ಕೊಲೆಗಳು ನಡೆದಾಗ ಕೆಲವು ದುಷ್ಟ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮುಂದಾಗುವುದು ಸರ್ವೇ ಸಾಮಾನ್ಯ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳನ್ನು ನಂಬಿ, ಯಾವುದೇ ನಿರ್ಧಾರಕ್ಕೂ ಬರುವುದು ಕಾನೂನು ಬಾಹಿರ. ಕೊಲೆ ನಡೆದಿರುವುದಕ್ಕೆ ನಿಖರ ಕಾರಣ ಇನ್ನೂ ಕೂಡ ಪತ್ತೆ ಆಗಬೇಕಿದೆ. ಊಹಾತ್ಮಕ ವರದಿಗಳ ಕಡೆಗೆ ಗಮನ ಕೊಡಬೇಡಿ, ಕೊಲೆ ಮಾಡಿರುವುದು ಸತ್ಯ, ಹರ್ಷ ಸಾವನ್ನಪ್ಪಿರುವುದೂ ಸತ್ಯ. ಆದರೆ ಕಾರಣ ಮಾತ್ರ ಇನ್ನಷ್ಟೇ ಪತ್ತೆಯಾಗಬೇಕಿದೆ. ಶಾಂತ ರೀತಿಯಲ್ಲಿ ಪೊಲೀಸರಿಗೆ ಸಹಕಾರ ನೀಡಿದರೆ ಆರೋಪಿಗಳನ್ನು ಪತ್ತೆ ಮಾಡಿ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತಾರೆ. ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇಟ್ಟು ಶಾಂತಿ ಕಾಪಾಡುವುದು ಸೂಕ್ತ.

ಭೀಕರವಾಗಿ ಕೊಲೆಯಾದ ಯುವಕ ಹರ್ಷ

Related Posts

Don't Miss it !