ಬಾಯ್​ ಮುಚ್ಕೊಂಡು ಕೆಲಸ ಮಾಡಿ ಎಂದಿದ್ದ ಡಿಕೆಶಿಗೆ ಜಮೀರ್​ ಕೌಂಟರ್​ ಅಟ್ಯಾಕ್​​..!

ಸಿದ್ದರಾಮಯ್ಯ ಮುಂದಿನ ಸಿಎಂ ಎನ್ನುವ ಹೇಳಿಕೆ ಸಿದ್ದು ಆಪ್ತ ನಾಯಕರ ಬಾಯಲ್ಲಿ ಸುರಿಯಲಾರಂಭಿಸಿದೆ. ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ಹೈಕಮಾಂಡ್​ ಎದುರು ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ, ಒಪ್ಪಿಗೆ ಪಡೆಯುವಲ್ಲಿ ವಿಫಲರಾಗಿದ್ದರು. ಸಾಮೂಹಿಕ ನಾಯಕತ್ವಕ್ಕೆ ಜೋತು ಬಿದ್ದ ಕಾಂಗ್ರೆಸ್​ ಹೈಕಮಾಂಡ್​ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ ಎನ್ನುವ ನಿರ್ಣಯವನ್ನು ಕಡ್ಡಿ ಮುರಿದಂತೆ ಸೂಚಿಸಿತ್ತು. ಆ ಬಳಿಕ ಕೆಲ ಕಾಲ ಮೌನವಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ಆಪ್ತರ ಬಳಗವನ್ನು ಮಾಧ್ಯಮಗಳ ಎದುರು ಛೂ ಬಿಟ್ಟಿದ್ದಾರೆ. ದಿನಬೆಳಗಾದರೆ ಆಪ್ತ ನಾಯಕರು ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ. ಅವರನ್ನು ಬಿಟ್ಟರೆ ಬೇರೆ ಯಾರಿಗೂ ಅರ್ಹತೆ ಇಲ್ಲ ಎನ್ನುವ ಹಾಗೆ ಮಾತನಾಡುತ್ತಿದ್ದಾರೆ. ಅದರಲ್ಲಿ ಪ್ರಮುಖರು ಅಂದ್ರೆ ಜಮೀರ್​ ಅಹ್ಮದ್​ ಖಾನ್​. ಈ ಹೇಳಿಕೆಗೆ ಡಿಕೆ ಶಿವಕುಮಾರ್​ ಕೂಡ ಕಾರಣ ಎನ್ನುವುದು ಕಾಂಗ್ರೆಸ್​ ನಾಯಕರ ಆರೋಪ.

ಒಕ್ಕಲಿಗರ ಸಭೆಯಲ್ಲಿ ಡಿ.ಕೆ ಶಿವಕುಮಾರ್​ ಪರೋಕ್ಷ ಮಾತು..!

ಮಾಜಿ ಸಿಎಂ ಎಸ್​.ಎಂ ಕೃಷ್ಣ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಕಾಂಗ್ರೆಸ್​ ಅಧ್ಯಕ್ಷರಾದ ಬಳಿಕ ಮುಖ್ಯಮಂತ್ರಿ ಆಗಿದ್ದರು. ಈಗ ನಾನು ಕಾಂಗ್ರೆಸ್​ ಅಧ್ಯಕ್ಷನಾಗಿದ್ದೇನೆ. ಮುಂದೆ ನನಗೂ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಒಕ್ಕಲಿಗ ಸಮುದಾಯ ನನ್ನ ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದರು. ಸಿಎಂ ಆಗುವಿರಾ..? ಎಂಬ ಪ್ರಶ್ನೆಗೆ ನಾನೇನು ಸನ್ಯಾಸಿಯಲ್ಲ, ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಪಕ್ಷದ ಹೈಕಮಾಂಡ್​ ತೀರ್ಮಾನ ಮಾಡಲಿದೆ ಎನ್ನುವ ಮಾತನ್ನು ಹೇಳುತ್ತಿದ್ದ ಹಾಗೆ ಜಮೀರ್​ ಅಹ್ಮದ್​ ಖಾನ್​ ಸೇರಿದಂತೆ ಹಲವಾರು ಇತರೆ ನಾಯಕರು ಸಿದ್ದರಾಮಯ್ಯ ಪರ ದಾಳ ಉರುಳಿಸಿದರು. ಆ ಬಳಿಕ ಕನಕಪುರದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್​, ಬಾಯ್​ ಮುಚ್ಕೊಂಡು ಕೆಲಸ ಮಾಡಿ, ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಹೈಕಮಾಂಡ್​ ತೀರ್ಮಾನ ಮಾಡುತ್ತೆ, ತಮ್ಮ ತಮ್ಮ ಸಮುದಾಯವನ್ನು ಸೆಳೆಯುವ ಕೆಲಸ ಮಾಡಿ ಎಂದು ಪರೋಕ್ಷವಾಗಿ ಜಮೀರ್​ಗೆ ಸೂಚಿಸಿದ್ದರು. ಆದರೂ ಮತ್ತೆ ಅದೇ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ತಾರೆ ಎನ್ನುವ ಜಮೀರ್​ ಹೇಳಿಕೆ ಬಳಿಕ ಶಿಸ್ತುಸಮಿತಿ ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದರು. ಇದೀಗ ಜಮೀರ್​ ಮತ್ತೆ ರೀ ಕೌಂಟರ್​ ಕೊಟ್ಟಿದ್ದಾರೆ.

ನಾನು ಸತ್ತಾಗ ಬಾಯ್​ ಮುಚ್ಚೋದು..! ಚಲುವರಾಯಸ್ವಾಮಿ ಏನೂ ಹೇಳಿಲ್ಲ..!

ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿರುವ ಜಮೀರ್​ ಅಹ್ಮದ್​ ಖಾನ್​, ನನ್ನ ಬಾಯಿ ಮುಚ್ಚೋದು ನಾನು ಸತ್ತ ಮೇಲೆ ಮಾತ್ರ ಎನ್ನುವ ಮೂಲಕ ಡಿ.ಕೆ ಶಿವಕುಮಾರ್ ಮಾತಿಗೆ ಮತ್ತೆ ಟಾಂಗ್ ಕೊಟ್ಟಿದ್ದಾರೆ. ಸಿದ್ದರಾಮೋತ್ಸವ ಪೂರ್ವಭಾವಿ ಸಭೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿರುವ ಜಮೀರ್, ಡಿ.ಕೆ ಶಿವಕುಮಾರ್​ ನಮ್ಮ ಅಧ್ಯಕ್ಷರು, ಅವರ ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಒಕ್ಕಲಿಗರ ಬಗ್ಗೆ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ. ನನಗೂ ನಮ್ಮ ಜಾತಿಯವರಿಗಿಂತ ಒಕ್ಕಲಿಗರಲ್ಲಿ ಬಹಳ ಆತ್ಮೀಯರಿದ್ದಾರೆ. ಸ್ವಾಮೀಜಿಯವರು ಅಸಮಧಾನ ಮಾಡಿಕೊಂಡಿದ್ದು ನನಗೆ ಗೊತ್ತಿಲ್ಲ. ಅವರೇನಾದ್ರು ಹೇಳಿದ್ರೆ ನಾನು ಮಾತನಾಡಬಹುದಿತ್ತು. ಎನ್​. ಚಲುರಾಯಸ್ವಾಮಿ ನನಗೂ ಏನನ್ನೂ ಹೇಳಿಲ್ಲ. ಎಐಸಿಸಿಯಿಂದಲೂ ನನಗೆ ಸೂಚನೆ ಬಂದಿಲ್ಲ ಎನ್ನುವ ಮೂಲಕ ಡಿ.ಕೆ ಶಿವಕುಮಾರ್​ಗೆ ತಿವಿದಿದ್ದಾರೆ. ನನ್ನ ಬಾಯಿ ಮುಚ್ಚೋಕೆ ಸಾಧ್ಯ ಇಲ್ಲ ಎಂದಿರುವ ಜಮೀರ್​, ನಾನು ಪಕ್ಷ ಪೂಜೆನೂ ಮಾಡ್ತಿನಿ, ಅದರ ಜೊತೆಗೆ ವ್ಯಕ್ತಿ ಪೂಜೇನೂ ಮಾಡ್ತೀನಿ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ..? ಜನರ ಅಭಿಪ್ರಾಯ ಹೇಳಿದ್ದೇನೆ ಎಂದಿದ್ದಾರೆ. ಜೊತೆಗೆ ಚಲುವರಾಯಸ್ವಾಮಿ ಅವರ ಹೇಳಿಕೆ ಶುದ್ಧಸುಳ್ಳು ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ.

ಒಕ್ಕಲಿಗರು ಬೆಂಬಲಿಸಿದೆ ಸಿಎಂ ಆಗಲು ಸಾಧ್ಯವಿಲ್ಲ ಎಂದು ಲೇವಡಿ..!

ಒಕ್ಕಲಿಗರು ನನ್ನ ಬೆನ್ನಿಗೆ ನಿಲ್ಲಬೇಕು ಎಂದಿದ್ದ ಡಿ.ಕೆ ಶಿವಕುಮಾರ್​ ಅವರನ್ನು ಪರೋಕ್ಷವಾಗಿ ಲೇವಡಿ ಮಾಡಿದ್ದ ಜಮೀರ್​ ಅಹ್ಮದ್​ ಖಾನ್​, ಒಕ್ಕಲಿಗರು ಬೆಂಬಲಿಸಿದ ಮಾತ್ರಕ್ಕೆ ಸಿಎಂ ಆಗಲು ಸಾಧ್ಯವಿಲ್ಲ ಎಂದು ಕಿಚಾಯಿಸಿದ್ದರು. ಆ ಬಳಿಕ ಡಿ,ಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿದ್ದ ನಾಗಮಂಗಲ ಮಾಜಿ ಶಾಸಕ, ಕಾಂಗ್ರೆಸ್​ ನಾಯಕ ಎನ್​ ಚಲುವರಾಯಸ್ವಾಮಿ, ಜಮೀರ್ ಒಕ್ಕಲಿಗ ಸಮುದಾಯವನ್ನು ಉಲ್ಲೇಖಿಸಿ​ ಹೇಳಿಕೆ ನೀಡಿದ್ದು ತಪ್ಪು. ನಾನು ಹಲವಾರು ಬಾರಿ ಹೇಳಿದ್ದೇನೆ, ಈಗಲೂ ಅವರಿಗೆ ಫೋನ್​ ಮೂಲಕ ಒಕ್ಕಲಿಗ ಸಮುದಾಯವನ್ನು ಎಳೆದು ತರುವುದು ತಪ್ಪು ಎಂದು ಹೇಳಿದ್ದೇನೆ ಎಂದು ಮಾಧ್ಯಮಗಳ ಎದುರು ಹೇಳಿದ್ದರು. ಆದರೆ ಚಲುವರಾಯಸ್ವಾಮಿ ನನ್ನ ಜೊತೆಗೆ ಮಾತನಾಡಿಯೇ ಇಲ್ಲ ಎಂದು ಜಮೀರ್​ ಹೇಳಿದ್ದಾರೆ. ಹಾಗಿದ್ದರೆ ಸುಳ್ಳು ಹೇಳಿದ್ದು ಯಾರು ಎನ್ನುವ ಅನುಮಾನ ಮೂಡಿಸಿದೆ. ಇನ್ನೂ ಜಮೀರ್​ ಕಾಂಗ್ರೆಸ್​ನ ಬಾಹುಬಲಿ ಎನ್ನುವ ಮೂಲಕ ಸಾಕಷ್ಟು ನಾಯಕರು ಬೆಂಬಲವಾಗಿ ನಿಲ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಅಧ್ಯಕ್ಷರ ಕುರ್ಚಿಗೆ ಕಂಟಕ ಎದುರಾಗುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಿದೆ ಹಸ್ತ ಆಪ್ತ ವಲಯ.

Related Posts

Don't Miss it !