ಜಮೀರ್​ ಅಹ್ಮದ್​ ಮೇಲಿನ ದಾಳಿಗೆ ಕಾರಣ ಬಿಜೆಪಿಯೋ..? ಜೆಡಿಎಸ್​ ಪಕ್ಷವೋ..?

ಜಮೀರ್​ ಅಹ್ಮದ್​ ಖಾನ್​ ಬೆಂಬಳೂರಿನ ಬಂಬೂಬಜಾರ್​ನ 2 ಎಕರೆ ಪ್ರದೇಶದಲ್ಲಿ ಅರೇಬಿಕ್​ ಶೈಲಿನ ಮನೆ ನಿರ್ಮಾಣ ಮಾಡಿದ್ದಾರೆ. ಇದರ ಬೆನ್ನು ಬಿದ್ದಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮನೆ ಮೇಲೆ ದಾಳಿ ಮಾಡಿದ್ದರು. ಅಂದಾಜು 90 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಭವ್ಯ ಮನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದರೆ ಈ ದಾಳಿಯನ್ನು ಜಾರಿ ನಿರ್ದೇಶನಾಲಯ ಮಾಡಿದ್ದು ಯಾಕೆ..? ಇದರ ಹಿಂದೆ ಇರುವ ಕಾರಣ ಕೈ ಯಾವುದು..? ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಕಾಂಗ್ರೆಸ್​ ನಾಯಕರನ್ನೇ ಭಿನ್ನ ಅಭಿಪ್ರಾಯ ಹೊರಬಿದ್ದಿರುವುದು ಅಚ್ಚರಿಗೂ ಕಾರಣವಾಗಿದೆ.

ಬಿಜೆಪಿ ವಿರುದ್ಧ ಕಾಂಗ್ರೆಸ್​ ನಾಯಕರ ಆರೋಪ..!

ಮಾಜಿ ಸಿಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದರು. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಕಟ್ಟಿಹಾಕುವ ವ್ಯರ್ಥ ಪ್ರಯತ್ನ ಎಂದೆಲ್ಲಾ ವಾಗ್ದಾಳಿ ಮಾಡಿದ್ದರು. ಸಂಸದ ಡಿ,ಕೆ ಸುರೇಶ್​ ಕೂಡ ಬಿಜೆಪಿ ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ತಿದೆ ಎಂದು ದೂರಿದ್ದರು. ಇನ್ನೂ ಅಶೋಕ್​ ಎಂ ಪಟ್ಟಣ್​ ಮಾತನಾಡಿ, ಜಮೀರ್​ ಅಹ್ಮದ್​ ಖಾನ್​ ಕಾಂಗ್ರೆಸ್​ ಪಕ್ಷದ ಪ್ರಭಾವಿ ನಾಯಕ. ಅವರ ಮೇಲೆ ದಾಳಿ ನಡೆದ್ರೆ ಕಾಂಗ್ರೆಸ್​ ಆತ್ಮಸ್ಥೈರ್ಯ ಕುಗ್ಗಿಸಬಹುದು ಎನ್ನುವ ಭಾವನೆ ಬಿಜೆಪಿಯದ್ದು ಎಂದು ಟೀಕಿಸಿದ್ರು. ಆದ್ರೆ ಜಮೀರ್​ ಅಹ್ಮದ್​ ಖಾನ್​ ಕುಮಾರಸ್ವಾಮಿ ಕಡೆಗೆ ಬೆಟ್ಟು ತೋರಿಸಿದ್ದಾರೆ.

ದೊಡ್ಡ ದೊಡ್ಡ ನಾಯಕರ ಕೈವಾಡ ಇರುವ ಶಂಕೆ..!

ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ ಬಳಿಕ ರಾಜಸ್ಥಾನದ ಅಜ್ಮೇರ್​ ದರ್ಗಾಗೆ ಭೇಟಿ ಕೊಟ್ಟು ವಾಪಸ್​ ಆಗಿದ್ದ ಜಮೀರ್​, ನಾನು ಮನೆಯನ್ನೂ ಕಟ್ಟಬಾರದಾ..? ಯಾರದ್ದಾದ್ರೂ ತಲೆ ಹೊಡೆದು ಮನೆ ಕಟ್ಟಿದ್ದೀನಾ..? ಮನೆ ಕಟ್ಟುವಾಗ ಏನಾದ್ರೂ ಸುಳ್ಳು ಹೇಳಿದ್ದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬರಬೇಕಿತ್ತು. ಈ ಬಗ್ಗೆ ನಾನು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಬಳಿಯೇ ಕೇಳಿದೆ. ನಿಮ್ಮ ಮೇಲೆ ದೂರು ಬಂದಿದೆ ಎಂದರು. ನಾನು ಈ ಮೊದಲು ಇದ್ದ ಪಕ್ಷದ ನಾಯಕರೇ ದೂರು ನೀಡಿರುವ ಅನುಮಾನ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಡೆಗೆ ಬೆರಳು ತೋರಿಸಿದ್ದರು. ನಾನು ಇಲ್ಲೀವರೆಗೂ ಯಾವ ಲಾಯರ್​ ಕೂಡ ಭೇಟಿ ಮಾಡಿಲ್ಲ. ಎರಡು ದಾಖಲೆಗಳನ್ನು ಕೇಳಿದ್ದಾರೆ ಅದನ್ನು  ಅವರಿಗೆ ನೀಡ್ತೇನೆ ಎಂದಿದ್ದಾರೆ.

ಡಿಕೆ ಶಿವಕುಮಾರ್​ ಮೇಲೆ ಬಂದಿತ್ತು ಆರೋಪ..!

ಬಿಜೆಪಿ ದಾಳಿ ಮಾಡಿಸುತ್ತಿದೆ ಎನ್ನುವ ಹೇಳಿಕೆಗೆ ಮೈಸೂರಿನಲ್ಲಿ ತಿರುಗೇಟು ನೀಡಿದ್ದ ಸಚಿವ ಎಸ್​.ಟಿ ಸೋಮಶೇಖರ್, ಜಮೀರ್​ ಅಹ್ಮದ್​ ಖಾನ್​ ಯಾವಾಗಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರೆ ಎನ್ನುವ ಮೂಲಕ ಕಾಂಗ್ರೆಸ್​ ರಾಜ್ಯಾಧ್ಯಕ್ಷರಿಗೆ ಕಿರಕಿರಿ ಉಂಟು ಮಾಡ್ತಾರೆ. ಹೇಗಿದ್ದರೂ ಡಿ.ಕೆ ಶಿವಕುಮಾರ್​ ಅವರಿಗೆ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯದಲ್ಲಿ ಸಾಕಷ್ಟು ಅಧಿಕಾರಿಗಳು ಪರಿಚಿತರು ಇರುತ್ತಾರೆ. ಅವರೇ ಜಮೀರ್​ ಮಟ್ಟ ಹಾಕುವ ಉದ್ದೇಶದಿಂದ ದಾಳಿ ಮಾಡಿಸಿರಬಹುದು ಎನ್ನುವ ಮೂಲಕ ಕಾಂಗ್ರೆಸ್​​ಗೆ ಟಾಂಗ್​ ಕೊಟ್ಟಿದ್ದರು. ಎಸ್​ಟಿ ಸೋಮಶೇಖರ್​ ಹೇಳಿಕೆಗೆ ಉತ್ತರಿಸಿದ್ದ ಡಿ.ಕೆ ಶಿವಕುಮಾರ್​ , ಬಹಳ ಸಂತೋಷ, ಜಾರಿ ನಿರ್ದೇಶನಾಲಯ ನನ್ನ ಕೈಯ್ಯಲಿದೆ ಎಂದು ಹೇಳಿದ್ದಾರೆ. ಈಗ ಅವರು ಸಚಿವರಾಗಿದ್ದಾರೆ. ಹಿಂದೆ ನನಗೆ ಹಳೆಯ ಸ್ನೇಹಿತರು. ಅವರಿಗೆ ಒಳ್ಳೆಯದಾಗಲಿ ಎಂದಿದ್ದರು. ಈಗ ಕುಮಾರಸ್ವಾಮಿ ಕೂಡ ಹಾಗೆಯೇ ಹೇಳಿದ್ದಾರೆ.

ನನ್ನ ಕೈಯ್ಯಲ್ಲಿ ಕೇಂದ್ರ ಸರ್ಕಾರ ಇಲ್ವಲ್ಲ..!!

ರಾಮನಗರ ಜಿಲ್ಲೆ ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಯಾರೋ ಮಾತನಾಡುವುದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ, ಅದೆಲ್ಲವೂ ಅನಾವಶ್ಯಕ. ಅಧಿಕಾರ ಇದ್ದರೂ, ಇಲ್ಲದಿದ್ದರೂ ನನ್ನ ಮೇಲೆ ಕಣ್ಣು ಇದೆ ಎಂದಿದ್ದಾರೆ. ಇನ್ನೂ ಸೆಂಟ್ರಲ್ ಗವರ್ನಮೆಂಟ್ ನನ್ನ ಕೈಯಲ್ಲಿದ್ದೆಯಾ..? ಪ್ರತಿದಿನ ಕಾರ್ಯಕರ್ತರು ಬರ್ತಾರೆ, ನಾನು ಕೃಷಿ ಕೆಲಸ ಮಾಡಿಕೊಂಡು ಇಲ್ಲಿದ್ದೇನೆ. ಜಾರಿ ನಿರ್ದೇಶನಾಲಯ , ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನನ್ನ ಕೈಯಲ್ಲಿ ಇಲ್ಲ. ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ, ಅದಕ್ಕೆ ನನ್ನ ಮೇಲೆ ಆರೋಪ ಮಾಡ್ತಾರೆ ಎಂದಿದ್ದಾರೆ. ಈ ಬಗ್ಗೆ ನೂತನ ಇಂಧನ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ, ಜಮೀರ್ ಬಹಿರಂಗವಾಗಿ ಯಾರದ್ದೋ ಮೇಲೆ ಆರೋಪ ಮಾಡುತ್ತಾರೆ. ಆಂತರಿಕವಾಗಿ ನಮ್ಮ ಕಾಂಗ್ರೆಸ್​ ಪಾರ್ಟಿಯವರೇ ಮಾಡಿದ್ರೂ ಅಂತಾರೆ ಎಂದಿದ್ದಾರೆ.

ಇದ್ದ ಮೂವರಲ್ಲಿ ಕದ್ದವರು ಯಾರು..?

ಕಾಂಗ್ರೆಸ್​ನ ಹಿರಿಯ ನಾಯಕರು ಬಿಜೆಪಿ ಸರ್ಕಾರ ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷಗಳ ಹುಟ್ಟು ಅಡಗಿಸುವ ಕೆಲಸ ಮಾಡ್ತಿದೆ ಎನ್ನುತ್ತಾ ಆರೋಪ ಮಾಡ್ತಾರೆ. ಆದ್ರೆ ಜಮೀರ್​ ಅಹ್ಮದ್​ ಖಾನ್​ ಮಾತ್ರ ನಾನು ಬಿಟ್ಟು ಬಂದಿರುವ ಪಕ್ಷದ ನಾಯಕರು ಎನ್ನುವ ಮೂಲಕ ದೇವೇಗೌಡರ ಕುಟುಂಬದ ಕಡೆಗೆ ತಿರುಗಿಸಿದ್ದಾರೆ. ಇನ್ನೂ ಬಿಜೆಪಿ ನಾಯಕರ ಪ್ರಕಾರ ಕಾಂಗ್ರೆಸ್​ ಪಕ್ಷದ ನಾಯಕರೇ ದೂರು ನೀಡಿದ್ದಾರೆ ಎನ್ನುವುದು ಜಮೀರ್​ ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ ಎಂದಿದ್ದಾರೆ. ಒಟ್ಟಾರೆ ಮೂರು ಪಕ್ಷಗಳ ಮೇಲೂ ಆರೋಪ ಬಂದಿದೆ. ಜಮೀರ್​ ವಿರುದ್ಧ ದೂರು ಯಾರು ಕೊಟ್ಟಿದ್ದಾರೆ ಎನ್ನುವುದಕ್ಕಿಂತ ತನಿಖೆ ಆಗಿ ಸತ್ಯಾಂಶ ಹೊರಬರಲಿ. ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಅಂಜುವುದು ಯಾಕೆ ಅಲ್ಲವೇ..?

Related Posts

Don't Miss it !