ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಬಗ್ಗೆ ಕರ್ನಾಟಕ ಹೈಕೋರ್ಟ್ ಗರಂ ಆಗಿದೆ. ಸರ್ಕಾರಿ ನೌಕರರ ವರ್ಗಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ಹಸ್ತಕ್ಷೇಪವನ್ನು ಹೈಕೋರ್ಟ್ನ ವಿಭಾಗೀಯ ಪೀಠ ಆಕ್ಷೇಪಿಸಿದೆ. ಬೆಸ್ಕಾಂನ AE ಆಗಿರುವ ಚೇತನ್ S ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ, ಡಿ.ಕೆ ಸಿಂಗ್ ಹಾಗೂ ನ್ಯಾಯಮೂರ್ತಿ ಟಿ.ಎಂ ನದಾಫ್ ಅವರ ಪೀಠ, ಮುಖ್ಯಮಂತ್ರಿಗೆ ಇದಕ್ಕಿಂತಲೂ ಉತ್ತಮ ಕೆಲಸ ಕಾರ್ಯಗಳಿವೆ ಎಂದು ಸೂಕ್ಷ್ಮವಾಗಿ ಚಾಟಿ ಬೀಸಿದ್ದಾರೆ.

ಮುಖ್ಯಮಂತ್ರಿಗಳ ಶಿಫಾರಸ್ಸು ಪತ್ರದ ಆಧಾರದಲ್ಲಿ ವರ್ಗಾವಣೆ ಆಗಿದ್ದನ್ನು ಪ್ರಶ್ನಿಸಿ, AE ಚೇತನ್ S ಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಸರ್ಕಾರಿ ನೌಕರರ ವರ್ಗಾವಣೆ ಆ ಇಲಾಖೆಗಳಿಗೆ ಬಿಟ್ಟು ಬಿಡಬೇಕು. ಮುಖ್ಯಮಂತ್ರಿ ಕಚೇರಿ ವರ್ಗಾವಣೆ ಕೋರಿ ಸಲ್ಲಿಕೆ ಆಗುವ ಮನವಿಗಳನ್ನೇ ಸ್ವೀಕಾರ ಮಾಡಬಾರದು ಎಂದು ಕಟು ಶಬ್ಧಗಳಿಂದ ಹೇಳಿದೆ. ಈ ವಿಚಾರಗಳಿಗೆ ಮುಖ್ಯಮಂತ್ರಿ ಸಮಯ ನೀಡಬಾರದು ಎಂದಿದ್ದಾರೆ.
ಈ ಆದೇಶಕ್ಕೂ ಮುನ್ನ ಮುಖ್ಯಮಂತ್ರಿಗಳ ಕಚೇರಿಯಿಂದ ವರ್ಗಾವಣೆ ಮಾಡುವಂತೆ ಶಿಫಾರಸು ಪತ್ರಗಳನ್ನು ನೀಡುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ಅಭಿಪ್ರಾಯ ಮತ್ತು ನಿಲುವು ತಿಳಿಸುವಂತೆ ಕೇಳಲಾಗಿತ್ತು. ಆಗ ಮುಖ್ಯಮಂತ್ರಿ ಕಚೇರಿಯಿಂದ ನೀಡುವ ಟಿಪ್ಪಣಿಗಳು, ಕೇವಲ ಶಿಫಾರಸುಗಳು ಮಾತ್ರ. ವರ್ಗಾವಣೆಯನ್ನು ಸಂಬಂಧಪಟ್ಟ ಇಲಾಖೆಯೇ ನಿರ್ವಹಿಸುತ್ತದೆ ಎಂದು ಉತ್ತರಿಸಿದ್ದರು. ಅಂದರೆ ಸಿಎಂ ಆದವರು ಅರ್ಜಿ ಕೇವಲ ಶಿಫಾರಸು, ವರ್ಗಾವಣೆಗೆ ಅದೇ ಮುಖ್ಯವಲ್ಲ ಎನ್ನುವಂತೆ ಉತ್ತರಿಸಿದ್ದರು. ಇದೀಗ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿದ್ದು, ಆದೇಶ ಪ್ರತಿಯನ್ನು ಮುಖ್ಯಮಂತ್ರಿಗೆ ಕಳುಹಿಸಿಕೊಡುವಂತೆ ಸೂಚನೆ ನೀಡಿದೆ.

ಇನ್ಮುಂದೆ ಮುಖ್ಯಮಂತ್ರಿ ವರ್ಗಾವಣೆಗಾಗಿ ಶಿಫಾರಸು ಪತ್ರಗಳನ್ನು ಕೊಡುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ವರ್ಗಾವಣೆ ಮಾಡಬೇಕಿದ್ದರೆ ಮೌಕಿಕವಾಗಿ ಸಂದೇಶ ಕಳುಹಿಸಬಹುದು. ಅಧಿಕೃತವಾಗಿ ಸಿಎಂ ಕಚೇರಿಯಿಂದಲೇ ಶಿಫಾರಸು ಪತ್ರ ಕಳುಹಿಸಿದರೆ ಈ ಆದೇಶದನ್ವಯ ಹೈಕೋರ್ಟ್ ವರ್ಗಾವಣೆಯನ್ನು ರದ್ದು ಮಾಡುವ ಸಾಧ್ಯತೆ ಇರುತ್ತದೆ. ಇಲಾಖೆ ಮಟ್ಟದಲ್ಲಿ ನಡೆಯುವ ವರ್ಗಾವಣೆ ಮಾತ್ರ ಸರಿ ಎಂದಿದೆ. ಇದು ಮುಖ್ಯಮಂತ್ರಿ ಕಚೇರಿ ಮಾತ್ರವಲ್ಲ, ಸಚಿವರು, ಶಾಸಕರ ಶಿಫಾರಸ್ಸು ಪತ್ರಗಳಿಗೂ ಇದೇ ಉತ್ತರ ಆಗಲಿದೆ. ಮುಖ್ಯಮಂತ್ರಿ ಇದನ್ನು ಹೇಗೆ ನಿರ್ವಹಣೆ ಮಾಡ್ತಾರೆ ಅನ್ನೋದನ್ನು ಕಾದು ನೋಡ್ಬೇಕು.


