ಭಾರತೀಯ ಕ್ರಿಕೆಟ್ ತಂಡ ಮತ್ತೊಂದು ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.. 19 ವರ್ಷದೊಳಗಿನ ಪುರುಷರ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿಯಾಗಿ ಆಟವಾಡಿದ ಭಾರತೀಯ ಪಡೆ ಅಂಡರ್ 19 ವಿಶ್ವಕಪ್ ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ.. 14 ವರ್ಷದ ಬಾಲಕ ಎಲ್ಲರ ಕಣ್ಮಣಿ ವೈಭವ್ ಸೂರ್ಯವಂಶಿ ವಿಧ್ವಂಸಕ ಆಟದ ನೆರವಿನಿಂದ ಇಂಗ್ಲೆಂಡ್ ಬೌಲರ್‌ಗಳನ್ನು ಪುಡಿಪುಡಿ ಮಾಡಿದ್ದಾರೆ. ಈ ಮೂಲಕ ಭಾರತಕ್ಕೆ ಅಂಡರ್ 19 ಕ್ರಿಕೆಟ್ ವಿಶ್ವಕಪ್ 6ನೇ ಸಲ ಒಲಿದಿದೆ. ಹರಾರೆಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮೊದಲು ಬ್ಯಾಟಿಂಗ್‌ಗೆ ಇಳಿದ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತ ಎದುರಾಯ್ತು. ಓಪನರ್ ಬ್ಯಾಟ್ಸ್‌ಮನ್ ಅರೋನ್ ಜಾರ್ಜ್ ಕೇವಲ 9 ರನ್‌ಗೆ ವಿಕೆಟ್ ಒಪ್ಪಿಸಿದ್ರು. ಆಗ ಕ್ರೀಸ್‌ನಲ್ಲಿದ್ದ ವೈಭವ್ ಸೂರ್ಯವಂಶಿಗೆ ಸಾಥ್ ಕೊಟ್ಟಿದ್ದು ಕ್ಯಾಪ್ಟನ್ ಆಯುಷ್. ಆಯುಷ್ ಜೊತೆ ಗಟ್ಟಿಯಾಗಿ ನಿಂತ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ ಬರೋಬ್ಬರಿ 175 ರನ್ ಬಾರಿಸಿ, ಭಾರತ ಮೊತ್ತ 400ರ ಗಡಿ ದಾಟಲು ಕಾರಣಕರ್ತ ಆದರು.


ವೈಭವ್ ಸೂರ್ಯವಂಶಿ 80 ಎಸೆತಗಳನ್ನ ಎದುರಿಸಿ 175 ರನ್‌ಗಳನ್ನ ಕಲೆಹಾಕಿದ್ರು. ಈ ಆಟದಲ್ಲಿ 15 ಸಿಕ್ಸರ್‌ಗಳು, 15 ಬೌಂಡರಿಗಳು ಸೇರಿಕೊಂಡಿದ್ದವು.. ವೈಭವ್ ಸೂರ್ಯವಂಶಿಯ ಬ್ಯಾಟಿಂಗ್ ಸರಾಸರಿ 219ಕ್ಕೆ ಹೋಗಿತ್ತು. ವೈಭವ್ ಸೂರ್ಯವಂಶಿ ಸಿಡಿಸಿದ ಒಂದೊಂದು ಬೌಂಡರಿ, ಸಿಕ್ಸರ್‌ಗೂ ಜಿಂಬಾಂಬ್ವೆಯ ಹರಾರೆ ಮೈದಾನದಲ್ಲಿದ್ದ ಪ್ರೇಕ್ಷಕರು ಮೂಕ ವಿಸ್ಮಿತರಾದರು. 14 ವರ್ಷದ ಹುಡುಗನ ಅಮೋಘ ಪ್ರದರ್ಶನ ನೋಡಿದ ಕ್ರೀಡಾ ಪ್ರೇಮಿಗಳು ತಲೆದೂಗುವಂತಿತ್ತು. ಸೂರ್ಯವಂಶಿ ಬ್ಯಾಟಿಂಗ್ ನೆರವಿನಿಂದ ಭಾರತ 21.4 ಓವರ್‌ಗಳಲ್ಲೇ 200ರ ಗಡಿ ದಾಟಿತ್ತು. 25 ಓವರ್ ಆಗುವಷ್ಟರಲ್ಲಿ ಬರೋಬ್ಬರಿ 250 ರನ್ ಸೇರಿಕೊಂಡಿತ್ತು. ವೈಭವ್ ಸೂರ್ಯವಂಶಿಯ ಹೊಡೆತಕ್ಕೆ 2 ಸಲ ಬಾಲ್‌ಗಳೇ ಕಳೆದು ಹೋದವು. ಅದ್ಭುತ ಲಯದಲ್ಲಿದ್ದ ವೈಭವ್, ಇನ್ನೇನು ದ್ವಿಶತಕ ಬಾರಿಸ್ತಾರೆ ಎನ್ನುತ್ತಿರುವಾಗ 26ನೇ ಓವರ್‌ನ 3ನೇ ಎಸೆತದಲ್ಲಿ ಇಂಗ್ಲೆಂಡ್ ಬೌಲರ್ ಲಮ್ಸ್ ಡನ್ ಎಸೆತದಲ್ಲಿ ರಿಟರ್ನ್ ಕ್ಯಾಚ್ ನೀಡಿ ಔಟಾದ್ರು. ಆದರೂ ವೈಭವ್ ಸೂರ್ಯವಂಶಿ ಹೊಸ ವಿಶ್ವ ದಾಖಲೆಗಳನ್ನ ನಿರ್ಮಿಸಿಬಿಟ್ರು.

ವೈಭವ್ ಸೂರ್ಯವಂಶಿಯ ದಾಖಲೆಗಳೇ ದಾಖಲೆ ಆಗಿದ್ದು, ಅಂಡರ್ 19 ವಿಶ್ವಕಪ್ ಫೈನಲ್‌ನಲ್ಲಿ 175 ರನ್ ಬಾರಿಸಿದ ಏಕೈಕ ಆಟಗಾರ ಅನ್ನೋ ಖ್ಯಾತಿ ಪಡೆದ್ರು. ವಿಶ್ವಕಪ್‌ನಲ್ಲಿ 30 ಸಿಕ್ಸರ್ 41 ಬೌಂಡರಿ ಸಿಡಿಸಿದ ಮೊದಲ ಆಟಗಾರ ಅನ್ನೋ ಖ್ಯಾತಿಯೂ ವೈಭವ್ ಹೆಸರಿಗೆ ಸೇರಿಕೊಂಡಿತು. ಅಂಡರ್ 19 ವಿಶ್ವಕಪ್‌ನಲ್ಲಿ 55 ಬಾಲ್‌ಗೆ ಶತಕ ಸಿಡಿಸಿದ 2ನೇ ಆಟಗಾರ ಅನ್ನೋ ಖ್ಯಾತಿಯೂ ಸಿಕ್ತು. ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗದ ಶತಕ ಸಿಡಿಸಿದ 5ನೇ ಆಟಗಾರ ಅನ್ನೋ ಪದವಿಯೂ ವೈಭವ್ ಸೂರ್ಯವಂಶಿ ಪಾಲಾಯ್ತು. ಭಾರತ ತಂಡ ನಿಗದಿತ 50 ಓವರ್‌ಗಲ್ಲಿ ಬರೋಬ್ಬರಿ 411 ರನ್ ಕಲೆ ಹಾಕಿದಾಗಲೇ ಎದೆ ಝಲ್ ಎನಿಸಿಕೊಂಡಿದ್ದ ಇಂಗ್ಲೆಂಡ್ ಆಟಗಾರರು ಆರಂಭದಿಂದಲೇ ರನ್ ಹೊಳೆ ಹರಿಸಲು ಮುಂದಾದ್ರು. 412ರನ್‌ಗಳ ಬೃಹತ್ ಮೊತ್ತದ ಗುರಿ ಪಡೆದಿದ್ದ ಆಂಗ್ಲರ ಪಡೆ, ಟೀಂ ಇಂಡಿಯಾ ಬೌಲರ್‌ಗಳನ್ನು ಧ್ವಂಸ ಮಾಡುವ ಸಾಧನೆ ಮಾಡಲು ಆಗಲಿಲ್ಲ. ಅಂತಿಮವಾಗಿ 100 ರನ್‌ಗಳು ಬಾಕಿ ಇರುವಾಗಲೇ ಇಂಗ್ಲೆಂಡ್ ಸೋಲು ಒಪ್ಪಿಕೊಳ್ತು. ಈ ಮೂಲಕಮ 6ನೇ ಬಾರಿಗೆ ಅಂಡರ್ 19 ವಿಶ್ವಕಪ್ ತನ್ನದಾಗಿಸಿಕೊಳ್ತು ಭಾರತ.

2000ನೇ ಇಸವಿಯಲ್ಲಿ ಶ್ರೀಲಂಕಾ ವಿರುದ್ಧ ಅಂಡರ್ 19 ವಿಶ್ವಕಪ್ ಪಡೆದಿದ್ದ ಭಾರತದ ಬಾಲಕರು ಆ ಬಳಿಕ 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿಜಯ ಸಾಧಿಸಿ ವಿಶ್ವಕಪ್ ಪಡೆದ್ರು. ತದ ನಂತರ 2012 ಆಸ್ಟ್ರೇಲಿಯಾ ವಿರುದ್ಧ ಗೆದ್ದು ಕಪ್ ಮುಡಿಗೇರಿಸಿಕೊಂಡ್ರೆ, 2018ರಲ್ಲಿ ಮತ್ತೆ ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಬಾರಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. 2022ರಲ್ಲಿ ಇಂಗ್ಲೆಂಡ್ ವಿರುದ್ಧ ಅಂಡರ್ 19 ವಿಶ್ವಕಪ್, ಈಗ ಮತ್ತೆ 2026 ಇಂಗ್ಲೆಂಡ್ ವಿರುದ್ಧವೇ ಗೆದ್ದು ಅಮಢೃರ್ರ್ 19 ವಿಶ್ವಕಪ್‌ನಲ್ಲಿ ನಮಗೆ ಸರಿಸಾಟಿ ಯಾರು..? ವಿಶ್ವಕ್ಕೆ ಪ್ರಶ್ನೆ ಮಾಡಿದಂತಿತ್ತು. ಭಾರತದ ಪರವಾಗಿ ಆಯುಷ್ ಮಾತ್ರೆ 53 ರನ್ ಅಭಿಘ್ನ ಕುಂಡು 40, ಕನ್‌ಷಿಕ್ ಚೌಹಾಣ್ 37, ವಿಹಾನ್ ಮಲ್ಹೋತ್ರಾ 32 ರನ್ ಪೇರಿಸಿದ್ರು. ಬೌಲಿಂಗ್‌ನಲ್ಲಿ R.S ಅಂಬ್ರಿಷ್ 3 ವಿಕೆಟ್ ಪಡೆದು ನಿಖರ ದಾಳಿ ಮಾಡಿದ್ರು. ಉಳಿದಂತೆ ದೀಪೇಶ್ ದೇವೇಂದ್ರನ್ ಹಾಗೂ ಕನ್‌ಷಿಕ್ ಚೌಹಾಣ್‌ಗೆ ತಲಾ ವಿಕೆಟ್ ಲಭಿಸಿದ್ವು. ಒಟ್ಟಾರೆ ಟೀಂ ಇಂಡಿಯಾ ಆಟಗಾರರ ಅದ್ಬುತ ಆಟ ವಿಶ್ವಕಪ್ ನಮ್ಮದಾಗಿಸಿತು.


