The Public Spot
ಕ್ರೀಡೆ

RCBಗೆ 2ನೇ ಬಾರಿ WPL ಕಿರೀಟ.. ಸ್ಮೃತಿ ಮಂದಾನ ಪಡೆ ಕಮಾಲ್​..!

ಪುರುಷರ IPL ಒಂದು ಬಾರಿ ಕಪ್​ ಗೆಲ್ಲುವುದು ಕನಸು ಎನ್ನುವಂತಾಗಿತ್ತು. ಕಳೆದ ಬಾರಿ 18 ವರ್ಷಗಳ ಬಳಿಕ ಕಪ್​ ಸಿಕ್ಕಿದ್ದು, ಅಭಿಮಾನಿಗಳ ಆನಂದಕ್ಕೆ ಪಾರವೇ ಇಲ್ಲದಂತಾಗಿತ್ತು. ಆ ಬಳಿಕ ಸಂಭ್ರಮಾಚರಣೆಯಲ್ಲಿ ನಡೆದ ದುರಂತ 11 ಜನ ಅಭಿಮಾನಿಗಳ ಪ್ರಾಣವನ್ನೇ ಬಲಿ ಪಡೆದುಕೊಂಡಿತ್ತು. ಆದರೆ ಮಹಿಳಾ ಪ್ರೀಮಿಯರ್​ ಲೀಗ್​ ( WPL ) ಶುರುವಾಗಿ 4ನೇ ಆವೃತಿ ಆಗುವುದರೊಳಗಾಗಿ ರಾಯಲ್ ಚಾಲೆಂಜರ್ಸ್​​ ಬೆಂಗಳೂರು 2ನೇ ಬಾರಿಗೆ ಕಪ್​ ಮುಡಿಗೇರಿಸಿಕೊಂಡಿದೆ. ಗುಜರಾತ್​ನ ವಡೋಧರದಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ವಿರುದ್ಧ ಅಬ್ಬರದ ವಿಜಯ ದಾಖಲಿಸಿ ಸ್ಮೃತಿ ಮಂದಾನ ಪಡೆ ಕಪ್​ಗೆ ಮುತ್ತಿಟ್ಟಿದೆ.

ಟಾಸ್​ ಗೆದ್ದ RCB ಮೊದಲಿಗೆ ಫೀಲ್ಡಿಂಗ್​ ಮಾಡುವ ಆಯ್ಕೆ ಮಾಡಿಕೊಂಡಿತು. ದೆಹಲಿಯ ಅಬ್ಬರದ ಬ್ಯಾಟಿಂಗ್​ ನೋಡಿದಾಗ ಸ್ಮೃತಿ ಮಂದಾನ ನಿರ್ಧಾರ ದುಬಾರಿ ಎನ್ನುವಂತಾಗಿತ್ತು. ಜೆಮಿಮಾ ರೋಡ್ರಿಗ್ರಸ್​ 57, ಲೋರಾ ವಾಲ್​​ವಾರ್ಡ್ಟ್​​ 44, ಲೀ 37 ರನ್​ ಬಾರಿಸಿ ದೆಹಲಿ ತಂಡದ ಮೊತ್ತ 203 ಆದಾಗ ಅದೆಷ್ಟೋ RCB ಅಭಿಮಾನಿಗಳ ಮನಸ್ಸು ಪೆಚ್ಚುಮೋರೆ ಹಾಕಿಕೊಂಡಿತ್ತು. ಕೇವಲ 2 ಓವರ್​ಗೆ 32 ರನ್​ ಕೊಟ್ಟು ದುಬಾರಿಯಾದ ಕನ್ನಡತಿ ಶ್ರೇಯಾಂಕಾ ಪಾಟೀಲ್​ ಕಡೆಗೂ ಕೋಪ ಉಮ್ಮಳಿಸಿತ್ತು. ಆ ಬಳಿಕ ಬ್ಯಾಟಿಂಗ್​ಗೆ ಬಂದಾಗ ಗ್ರೇಸ್​ ಹ್ಯಾರಿಸ್​ ಆರಂಭದಲ್ಲಿಯೇ ವಿಕೆಟ್​ ಒಪ್ಪಿಸಿದಾಗ RCB ಸೋಲು ನಿರ್ಧಾರ ಆಯ್ತು ಎಂದುಕೊಂಡಿದ್ದು ಅದೆಷ್ಟೋ ಮಂದಿ. ಆದರೆ ಜಾರ್ಜಿಯಾ ವಾಲ್​ (79 ರನ್​) ಹಾಗೂ ಸ್ಮೃತಿ ಮಂದಾನ (87 ರನ್​) ಜೊತೆಯಾಟ ನಿಟ್ಟುಸಿರು ಬಿಡುವಂತೆ ಮಾಡಿತ್ತು.

ಕೊನೆಯ ಮೂರು ಓವರ್​ಗಳು ಇದ್ದಾಗ RCB ಗೆ ಎದುರಾದ ಸರಣಿ ಆಘಾತ ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಜಾರ್ಜಿಯಾ ವಾಲ್​ ಕ್ಯಾಚ್​ ಕೊಟ್ಟು ನಿರ್ಗಮಿಸಿದರೆ, ರಿಚಾ ಘೋಷ್​ ಕೂಡ 6 ರನ್​ ಗಳಿಸಿ ಕ್ಯಾಚ್​ ಕೊಟ್ಟರು. ತದನಂತರ ಶತಕದತ್ತ ದಾಪುಗಾಲು ಇಡುತ್ತಿದ್ದ ಸ್ಮೃತಿ ಮಂದಾನ ಕೂಡ ಹೆನ್ರಿ ಬೌಲಿಂಗ್​ನಲ್ಲಿ ಕ್ಲೀನ್​ ಬೋಲ್ಡ್​ ಆದರು. ಕೊನೆಯಲ್ಲಿ ಜೊತೆಯಾದ ರಾಧಾ ಯಾದವ್​ (12) ಹಾಗೂ ಡಿ ಕ್ಲಾರ್ಕ್​ (07) ಆಟ RCB ತಂಡವನ್ನು ಗೆಲುವಿನ ಮೆಟ್ಟಿಲು ಮುಟ್ಟಿಸಿತು. ಈ ಸಲನೂ ಕಪ್​ ನಮ್ದೇ ಎನ್ನುವ ಮೂಲಕ ಕ್ಯಾಪ್ಟನ್​ ಸ್ಮೃತಿ ಮಂದಾನ ಕನ್ನಡಿಗರ ಪಾಲಿನ ವಿರಾಟ್​ ಕೊಹ್ಲಿ ಆಗಿಬಿಟ್ಟರು. 2023ರಲ್ಲಿ ಆರಂಭವಾದ WPL ನ 2ನೇ ಆವೃತ್ತಿಯಲ್ಲಿ ಗೆಲುವಿನ ನಗೆ ಬೀರಿದ್ದ ಮಹಿಳಾ ತಂಡ, ಇದೀಗ 4ನೇ ಆವೃತ್ತಿಯಲ್ಲೂ 2ನೇ ಬಾರಿಗೆ ಗೆದ್ದು ಕಮಾಲ್​ ಮಾಡಿದೆ.

ಸ್ಮೃತಿ ಮಂದಾನ ಪಡೆಗೆ 6 ವಿಕೆಟ್​ಗಳ ಭರ್ಜರಿ ಜಯ ಸಿಗ್ತಿದ್ದ ಹಾಗೆ ಆರ್​​ಸಿಬಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಆದರೆ ಸತತ 4 ಆವೃತ್ತಿಗಳಲ್ಲೂ ಫೈನಲ್‌ ಪ್ರವೇಶ ಪಡೆದ ದೆಹಲಿ ತಂಡ ಒಮ್ಮೆಯೂ ಕಪ್​ ಗೆಲ್ಲಲು ಸಾಧ್ಯವಾಗದೆ ಚೋಕರ್ಸ್ ಆಗಿ ಉಳಿದುಕೊಂಡಿತು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕ್ರಿಕೆಟ್​ ಅಭಿಮಾನಿಗಳು ಸಂಭ್ರಮಿಸಿದ್ದು, RCB ತಂಡಕ್ಕೆ 6 ಕೋಟಿ ನಗದು ಬಹುಮಾನ ಸಿಕ್ಕಿದೆ. ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್​, ಕೇಂದ್ರ ಸಚಿವ ಹೆಚ್​.ಡಿ ಕುಮಾರಸ್ವಾಮಿ RCB ತಂಡಕ್ಕೆ ಶುಭಾಶಯ ಕೋರಿದ್ದಾರೆ. 2ನೇ ಬಾರಿಗೆ WPL ಕಪ್​ ಗೆದ್ದ ನಮ್ಮ ಹುಡ್ಗೀರು, ಹೆಣ್ಮಕ್ಳೇ ಸ್ಟ್ರಾಂಗು ಗುರು ಅನ್ನೋದನ್ನು ಸಾಬೀತು ಮಾಡಿದಂತಾಗಿದೆ.

Related posts

ಚಿನ್ನಸ್ವಾಮಿ ಸ್ಟೇಡಿಯಂ ವಿಚಾರದಲ್ಲೂ ರಾಜಕೀಯ ನಡೀತಿದ್ಯಾ..? ನಾಳಿನ ಪಂದ್ಯ ಕ್ಯಾನ್ಸಲ್​..!!

Publicspot

India Wins Women’s WorldCup: ಚೊಚ್ಚಲ ವಿಶ್ವಕಪ್​ಗೆ ಮುತ್ತಿಟ್ಟ “ಭಾರತಾಂಬೆ” ಮಕ್ಕಳು

Publicspot

RCB – CSK ಪಂದ್ಯಕ್ಕೆ ಸಜ್ಜಾಗಿದೆ ಚಿನ್ನಸ್ವಾಮಿ.. ಶಾಸಕರ ಟಿಕೆಟ್‌ಗಾಗಿ ಕ್ಯೂ ಕ್ಯೂ..

Publicspot

IPL ಕ್ರಿಕೆಟ್‌ ಪಂದ್ಯ ನಡೆಸಲು ಸರ್ಕಾರದ ಸಮ್ಮತಿ..! 11 ಜನರ ಬಲಿ ಬಳಿಕ ಮತ್ತೆ ಪಂದ್ಯ..

Publicspot

19 ವರ್ಷದ ಒಳಗಿನ ಹುಡುಗರಲ್ಲೂ ಭಾರತವೇ ಲೀಡರ್‌.. 6ನೇ ವಿಶ್ವಕಪ್‌..

Publicspot

India Win; ಅಂಗಳದಲ್ಲಿ ಆಪರೇಷನ್​ ಸಿಂದೂರ್​.. ಪಾಕಿಸ್ತಾನಕ್ಕೆ ಮೋದಿ ಗುದ್ದು..

Publicspot